ಬ್ರಮ್ಮ! ನಿಂಗೆ ಜೋಡಿಸ್ತೀನಿ
ಯೆಂಡ ಮುಟ್ಟಿದ್ ಕೈನ!
ಬೂಮೀ ಉದ್ಕು ಬೊಗ್ಗಿಸ್ತೀನಿ
ಯೆಂಡ ತುಂಬ್ಕೊಂಡ್ ಮೈನ! ೧

ಬುರ್ ಬುರ್ ನೊರೆ ಬಸಿಯೋವಂತ
ಒಳ್ಳೆ ವುಳಿ ಯೆಂಡ
ಕೊಡ್ತೀನ್ ನನ್ದು ಪ್ರಾರ್‍ತ್ನೆ ಕೇಳು
ಸರಸೋತಮ್ಮನ್ ಗಂಡ! ೨

ಸರಸೋತಮ್ಮ ಮನಸ್ಕೊಂಡೌಳೆ
ನೀನಾರ್ ಒಸ್ಸಿ ಯೋಳು;
ಕುಡದ್ಬುಟ್ ಆಡ್ದ್ರೆ ತೋಲ್ತಾದಣ್ಣ
ನಾಲ್ಗೆ – ಬಾಳ ಗೋಳು! ೩

ಅಕ್ಸ್ರಾನೆಲ್ಲಾ ಸರಸೋತಮ್ಮ
ಪಟ್ಟಾಗ್ ಇಡಕೊಂಬುಟ್ಟಿ
ಮುನಿಯ ಯೆಂಡ ಬುಡೊವಂಗೇನೆ
ಬುಡತಾಳ್-ಔಟ್ ಕೈ ಗಟ್ಟಿ! ೪

ಮುನಿಯಂಗಾರ ಕಾಸ್ ಓಗ್ತೈತೆ
ಯೆಚ್ಗೆ ಯೆಂಡ ಬುಟ್ರೆ;
ಸರಸೋತಮ್ಮಂಗ್ ಏನೋಗ್ತೈತೆ
ಮಾತ್ ಸಲೀಸಾಗ್ ಕೊಟ್ರೆ? ೫

ನಂಗೆ ನೀನು ಲಾಯ್ರಿಯಾಗಿ
ನನ್ ಕೇಸ್ ಗೆದ್‌ಗಿದ್ ಕೊಟ್ರೆ
ಮಾಡ್ತೀನಣ್ಣ ನಿನ್ ವೊಟ್ಟೇನ
ವುಳಿ ಯೆಂಡಕ್ ಪೊಟ್ರೆ! ೬

ಕಮಲದ್ ಊವಿನ್ ಕುರ್ಚಿ ಮೇಗೆ
ಜೋಕಾಗ್ ಕುಂತೊ ನೀನು!
ನಾಕೂ ಬಾಯ್ಗೂ ನಾಕು ಬುಂಡೆ
ಯೆಂಡ ತತ್ತೀನ್ ನಾನು! ೭

ಸರಸೋತಮ್ಮಂಗ್ ಯೋಳಾಕಿಲ್ಲ-
ನೀನೇನ್ ಎದರ್‍ಕೊಬೇಡ;
ಕೇಳಿದ್ ವರಾನ್ ವೊಂದೀಸ್ಕೊಟ್ರೆ-
ತಕ್ಕೊ! ಯೆಂಡದ್ ಫೇಡ! ೮
*****