ಗಿಳಿಯೋದಿ ಫಲವೇನು
ಬೆಕ್ಕು ಬಹುದ ಹೇಳಲರಿಯದು
ಜಗವೆಲ್ಲವ ಕಾಬ ಕಣ್ಣು
ತನ್ನ ಕೊಂಬ ಕೊಲ್ಲೆಯ ಕಾಣಲರಿಯದು
ಇದಿರ ಗುಣ ಬಲ್ಲೆವೆಂಬರು
ತಮ್ಮ ಗುಣವತಾವರಿಯರು
ಕೂಡಲಸಂಗಮದೇವಾ
ಗಿಳಿ ಹೇಳಿಕೊಟ್ಟದ್ದನ್ನು ಹೇಳುತ್ತದೆ, ಆಡುತ್ತದೆ. ಗಿಳಿಯ ಶಾಸ್ತ್ರವೆನ್ನುವುದು ಗಿಳಿಯು `ಓದಿ’ ಹೇಳುವ ಭವಿಷ್ಯವಾಣಿ. ಆದರೂ ಅದು ವಿವೇಕಿಯಲ್ಲ. ತನ್ನನ್ನು ಕೊಲ್ಲುವ ಬೆಕ್ಕು ಯಾವಾಗ ಬರುವುದೆಂದು ಅದಕ್ಕೆ ತಿಳಿಯುವುದೇ ಇಲ್ಲ. ಕಣ್ಣು ಎಲ್ಲವನ್ನೂ ನೋಡುತ್ತದೆ. ಆದರೆ ನೋಟದೊಳಗೇ ಇರುವ ವಕ್ರತೆಯನ್ನು (ಕೊಲ್ಲೆ), ದೋಷವನ್ನು ಕಾಣಲರಿಯದು. ಜನರೂ ಅಷ್ಟೇ, ಬೇರೆಯವರ ಗುಣ ದೋಷಗಳು ತಮಗೆ ತಿಳಿಯುತ್ತವೆ ಎನ್ನುತ್ತಾರೆ, ತಮ್ಮ ಗುಣವೇ ತಮಗೆ ಗೊತ್ತಿರುವುದಿಲ್ಲ. ಗಿಳಿಗಿಂತಲೂ ಅತ್ತತ್ತ ಅಲ್ಲವೇ ಎಂದು ಬಸವಣ್ಣ ಕೇಳುತ್ತಿದ್ದಾನೆ.
*****