ಮೇಜಿನ ಮೇಲೊಂದು ರೋಜದ ಹೂವು,
ಹಿಂದೆಂದು ಕಾಣದ ಸೊಗಸಿನ ಹೂವು,
ಅಂದೆ ಅರಳಿದ ಹೂವು,
ಸಂಜೆಗೆಂಪಿನ ಹೂವು,
ಕಂಗಳು ತಂಗುವ ಸೊಗಸಿನ ರೇವು.
ಬಾಲಸೂರ್‍ಯನ ಕಿರಣ ರಂಧ್ರದಿ ತೂರಿ,
ಮಲರನ್ನು ಮುತ್ತಿಡಲು ಹೊಸ ಚೆಲುವ ತೋರಿ,
ಜೀವಗೂಡಿರುವಂತೆ
ಒಲವೆರೆದು ನಗುವಂತೆ
ಕಳಕಳಿಸಿ ಮೆರೆದುದು ಸೋಜಿಗವ ಬೀರಿ.
ಕಣ್ಮುಚ್ಚಿ ಮೆಲ್ಲನೆ ಹೂವ ತುಟಿಗೆತ್ತಿ
“ನನ್ನೊಲವೆ” ಎನ್ನುತ್ತ ಮುತ್ತಿಟ್ಟಿನೊತ್ತಿ;
ಅದರ ಸೊಂಪಿನ ಕಂಪು,
ಸ್ಪರ್‍ಶದ ಸುಖ, ತಂಪು,
ಮುದದ ಮೋರೆಯ ತೋರೆ ಸ್ವರ್‍ಗಕೆ ಎತ್ತಿ,
ಬಾನಿನ ನೆತ್ತಿಯನೇರಿತು ಹೊತ್ತು;
ಚೆಂದದ ಹೂವನ್ನು ತುಟಿಮೇಲೆ ಇತ್ತು.
ರೋಜದ ರೂಪು,
ಪ್ರಾಯದ ಹುರುಪು,
ಆಸೆಯಾವೇಶಕ್ಕೆ ಕಂದಿಹೋಗಿತ್ತು,
ತುಟಿಯಿಂದ ತೆಗೆದೆನು ಸೊರಗಿದ ಹೂವ,
ದುಂಡನೆ ದಳವೆಲ್ಲ ಸುರುಟಿಕೊಂಡಿರುವ,
ಪ್ರೇಮಕೆ ಬಿಂಕವ-
ನೀಯಲು ಸುಂಕವ,
ಹೆಚ್ಚಿದ ಕಂಪಿಗೆ ಸೋತುದು ಜೀವ.
“ಒಲುಮೆಯ ಸಲುವಾಗಿ ಎಲ್ಲವ ತೆತ್ತೆ,
ಚೆಂದವ, ಪ್ರಾಯವ, ಜೀವವ ತೆತ್ತೆ;
ಒಲಿಯಲು ತೆತ್ತೆ,
ಒಲಿದುದಕೇ ತೆತ್ತೆ;
ಸಾಯುವೆ; ತುಸಹೊತ್ತು ಮುತ್ತಿಡು ಮತ್ತೆ.”
ಎನ್ನಲು ಹೂವಿನ ದಳಗಳು ಅಲುಗಿ,
ಎನ್ನಯ ಕ್ರೂರತೆಗೆ ದೈನ್ಯದಿ ಕೊರಗಿ,
ನುಡಿಯೆನ್ನ ಚುಚ್ಚಿತು,
ಹೃದಯವ ಕೊಚ್ಚಿತು,
ತುಟಿಗೆತ್ತಿ ಮುತ್ತಿಟ್ಟೆ ರೋಜವ ತಿರುಗಿ.
ಹೂವಂದು ಸತ್ತಿತು ಮುತ್ತನು ಕೊಟ್ಟು,
ಮುತ್ತಿನ ನೆನಪಿಗೆ ಕಂಪನು ಬಿಟ್ಟು;
“ತ್ಯಾಗವೆ ಒಲುಮೆ
ಬಾಳ್ವೆಯ ಕುಲುಮೆ”
ಎನ್ನುವ ನುಡಿಯನ್ನು ಎದೆಯೊಳಗೆ ನೆಟ್ಟು,
*****