ಸಣ್ಣ ಖಂಡಿಽಕ್ಹಿಡಿದು ಕನ್ನಿ ತಾ ಬರತಾಳಽಽ|
ಚೆನ್ನಮಲ್ಲೈನ ನೆನಽವೂತ ||
ಚೆನ್ನಮಲ್ಲೈನ ನೆನವೂತೀ ಕಳಸಕಽಽ|
ಛೆಂದಾಗಿ ನೂಲಾ ತೊಡಽಽಸವ್ವಾ ||೧||
ಹಸರ ಖಂಡಿಽಕ್ಹಿಡಿದು ಕುಸುಮಲ್ಲಿ ತಾ ಬರತಾಳಽಽ|
ಬಸವೇಸುರನಿಂಗನ ನೆನವೂತ||
ಬಸವೇಸುರನಿಂಗನ ನೆನವೂತೀ ಕಳೆಸಾಕಽಽ|
ಹಸನಾಗಿ ನೂಲಾ ತೊಡಽಽಸವ್ವಾ ||೨||
ಆ ನಾಡದ ಬಡಗ್ಯಾ ಮಾಡಽಬಲ್ಲದ ಮಣಿಯಽಽ|
ಮಾಡುತ ಮಾಣಿಽಕ ಜಡಽದಾರ ||
ಮಾಡುತ ಮಾಣಿಽಕ ಜಡಿಸಿ ತಂದಾ ಮಣಿಯಽಽ|
ಯಾವಲ್ಲಿ ಇಡವೂನ ಹಡದವ್ವಾ ||೩||
ಆ ನಾಡದ ಬಡಗ್ಯಾ ಮಾಡಽಬಲ್ಲದ ಮಣಿಯಽಽ|
ಕೆತ್ತೂತ ಮುತ್ತಾ ಜಡಽದಾರ||
ಕೆತ್ತೂತ ಮುತ್ತಾ ಜಡೆಸಿ ತಂದಾ ಮಣಿಯಽಽ|
ಯಾವಲ್ಲಿ ಇಡವೂನ ಹಡೆದವ್ವಾ ||೪||
ಅಲ್ಲಂಬ್ಹರಿವ್ಯಾಗ ಗಿಲ್ಲಂಬು ಮಗಿನ್ಹಾಕಿ|
ನಿಲ್ಲದಲೆ ನೀರ ಬೆರಽಸ್ಯಾರ ||
ನಿಲ್ಲದಲೆ ನೀರ ಬೆರಸ್ಯಾರ ತಂಗೆವನಽಽ|
ಫಿಲ್ಲ್ಯಾದ ಕಾಲ ಕೆಸರಾಗೆ ||೫||
*****
ಲಗ್ನದಲ್ಲಿ ವಿಧಿಪೂರ್ವಕವಾಗಿ ಸ್ನಾನಮಾಡಿಸುವ ಪ್ರಸಂಗಗಳು ಎರಡು ಸಾರೆ ಬರುತ್ತವೆ. ಒಮ್ಮೆ ಅರಿಸಿಣ ಹಚ್ಚುವಾಗ; ಇನ್ನೊಮ್ಮೆ ಅಕ್ಷತೆಯ ಕಾಲಕ್ಕೆ. ಆಗ ನಾಲ್ಕು ಮೂಲೆಗೆ ನಾಲ್ಕು ತಂಬಿಗೆಗಳನ್ನಿಟ್ಟು, ಅವುಗಳ ಸುತ್ತು ಮುತ್ತು ಮೇರೆಯಂತೆ ನೂಲು ಸುತ್ತಿ, ನಟ್ಟ ನಡುವೆ ಮಣೆಗಳನ್ನಿಟ್ಟು ಮದುಮಕ್ಕಳಿಗೆ ಎರೆಯುತ್ತಾರೆ. ಆಗಿನ ಕಾಲಕ್ಕೆ ನೂಲು ಸುತ್ತುವ ಹಾಡಿದು.
ಛಂದಸ್ಸು:— ತ್ರಿಪದಿ.
ಶಬ್ದ ಪ್ರಯೋಗಗಳು:- ಖಂಡಿಕಿ=ನೂಲಿನ ಕುಕ್ಕುಡಿ, ಹಸನ=ಸ್ವಚ್ಛ. ಅಲ್ಲ್ ಮತ್ತು ಗಿಲ್ಣ್=ನೀರಿನ ಸಪ್ಪಳ.