“One’s real life is often the life that one does not lead” ಹೀಗೆ ಹೇಳಿದವರು ಆಸ್ಕರ ವೈಲ್ಡ್. ಈ ಮಾತು ಬಹುಮಟ್ಟಿಗೆ ಸ್ತ್ರೀ ಬದುಕಿನ ಅದರಲ್ಲೂ ಉದ್ಯೋಗಸ್ಥ ಸ್ತ್ರೀ ಜೀವನಕ್ಕೆ ಸಮೀಕರಿಸಿ ನೋಡಿದರೆ ಆ ಮಾತಿನ ಸತ್ಯದ ಅರಿವಾಗುತ್ತದೆ. ಸಾಮಾಜಿಕ ಬದುಕಿನಲ್ಲಿ ಉನ್ನತ ಹುದ್ದೆಯಲ್ಲಿರುವ ಮಹಿಳೆಯೂ ಸೇರಿದಂತೆ ಉದ್ಯೋಗಸ್ಥ ಮಹಿಳೆಯ ಬದುಕಿಗೂ, ನಡೆಸುತ್ತಿರುವ ಬದುಕಿಗೂ ವ್ಯತ್ಯಾಸವಿದೆ. ಒಂದರ್ಥದಲ್ಲಿ ಆಕೆ ತನ್ನ ಬದುಕನ್ನು ಬದುಕುತ್ತಿರುವುದಿಲ್ಲ. ಇದೇ ಮಾತನ್ನು ೧೯ ನೇ ಶತಮಾನದಲ್ಲಿಯೇ ರೂಥ್ ಕಂಫರ್ಟ ಮಿಚಲ್ ಎಂಬ ಅಮೇರಿಕನ್ ಕವಯತ್ರಿ ತನ್ನ ದಿ ಟ್ರಾವೆಲ್ ಬ್ಯೂರೋ ಎಂಬ ಕವನದಲ್ಲಿ ಹೇಳಿದ್ದಾಳೆ. ಅದು ಆ ಕಾದ ಅಮೇರಿಕಾದ ಪರಿಸ್ಥಿತಿಯಾಗಿತ್ತು. ಹೊರ ಪ್ರಪಂಚದಲ್ಲಿ ಅತ್ಯಂತ ಸಮರ್ಥವಾಗಿ ಪುರುಷನಿಗೆ ಸಮಾನವಾಗಿ ಒಬ್ಬ ಟ್ರಾವೆಲ್ ಗೈಡ್ ಆಗಿ ಕಾರ್ಯನಿರ್ವಹಿಸುವ ಹೆಣ್ಣು ಆ ಬದುಕನ್ನು ಸವಾಲಾಗಿ ಸ್ವೀಕರಿಸಿ ಸಂತೋಷದಿಂದ ಎದುರಿಸುತ್ತಾಳೆ. ಉದ್ಯೋಗದ ಸಮಯ ಅಲ್ಲಿಯ ಜೀವನ ಬಣ್ಣಬಣ್ಣಗಳಿಂದ ಕೂಡಿದ್ದು, ಆಕೆ ಅದ್ಭುತವೆನ್ನಿಸುವಷ್ಟು ಜಾಣ್ಮೆ, ಜ್ಞಾನ ಕೌಶಲ್ಯಗಳ ಪ್ರದರ್ಶಿಸುತ್ತಾಳೆ. ಅಲ್ಲಿ ಆಕೆ ಸರ್ವ ಸ್ವತಂತ್ರೆ.. ಆದರೆ ಸಂಜೆ ಐದಾಗುತ್ತಲೇ ಆಕೆಯ ನಡೆನುಡಿಗಳು ತಮ್ಮ ಬಣ್ಣ ಕಳೆದುಕೊಳ್ಳುತ್ತವೆ. ವರ್ಣರಹಿತ ಆಕೆಯ ಹಳೆಯ ಮನೆ ಮಸುಕಾದ ಬೀದಿ ಎಲ್ಲವೂ ಖಾಸಗಿ ಬದುಕಿನ ನಿಸ್ಸಾರವನ್ನು ತೆರೆದು ಇಡುತ್ತವೆ. ಕೌಟಂಬಿಕ ಜೀವನದ ಯಾವುದೋ ಅಸಹನೀಯತೆ, ಖುಷಿಯಿಲ್ಲದ ಬರಡು ಯಾಂತ್ರಿಕ ಜೀವನ ಆಕೆಯ ಆತ್ಮವಿಶ್ವಾಸವನ್ನು ಕುಂಠಿತಗೊಳಿಸುತ್ತವೆ. ಬೆದರಿದ ಕಂಗಳ ಆಕೆ ವೈಯಕ್ತಿಕ ಜೀವನವನ್ನು ಭಯದಿಂದಲೇ ನಡೆಸುತ್ತಾಳೆ.
ಸಶಕ್ತವಾಗಿ ಹೊರಗೆ ದುಡಿಯುವ ಹೆಣ್ಣು ತನ್ನ ಸ್ವಂತ ಜೀವನದಲ್ಲಿ ಕಂಗೆಡುವುದು ಯಾವ ಕಾರಣಕ್ಕೆ? ಬಹುಶಃ ಆಕೆಯ ಮೇಲಿನ ಕೌಟಂಬಿಕ ದಬ್ಬಾಳಿಕೆ ಇರಬಹುದು. ಸಾರರಹಿತವಾದ ಜೀವನದ ಯಾನ ಇರಬಹುದು. ಆಕೆಯ ಮನಸ್ಸನ್ನು ಅರ್ಥೈಸಿಕೊಳ್ಳದ ಸಾಮಾಜಿಕ ಸಂದರ್ಭಗಳಾಗಿರಬಹುದು. ಒಟ್ಟಾರೆ ಆಕೆ ಅತಂತ್ರೆ.
ಇನ್ನೊಂದು ರೀತಿಯಿಂದ ಯೋಚಿಸುವುದಾದರೆ ಹೊರಗೆ ದುಡಿದು ಬರುವ ಬಹುತೇಕ ಹೆಂಗಳೆಯರು ಗಂಡಂದಿರ ಆರ್ಥಿಕ ಭಾರವನ್ನು ಕಡಿಮೆಗೊಳಿಸುವುದು. ಪತಿರಾಯ ಅದನ್ನು ಆನಂದದಿಂದ ಸ್ವಾಗತಿಸುವುದು ಸಹಜವೇ. ಹಣ ಎಲ್ಲರ ಆಯ್ಕೆ. ಆದರೆ ಮನೆಯ ಕೆಲಸದಲ್ಲಿ ಆತ ರಾಜಿಯಾಗುವ ಉದಾಹರಣೆಗಳು ಕಡಿಮೆ. ಮನೆವಾಳ್ತೆ ಹೆಣ್ಣಿನ ಜನ್ಮತಃ ಜವಾಬ್ದಾರಿ ಎಂಬ ಪೂರ್ವಾಗೃಹಭಾವ ನಮ್ಮಲ್ಲಿರುವುದು. ಹೀಗಾಗಿ ಮನೆಯ ಒಳಗೆ ದುಡಿದು ನೌಕರಿಯ ಸ್ಥಳದಲ್ಲಿಯೂ ಪುರುಷನಿಗೆ ಸಮಾನವಾಗಿ ಕಾರ್ಯ ನಿರ್ವಹಿಸಬೇಕಾದ ಅನಿವಾರ್ಯತೆ ಆಕೆಗಿದೆ. ಅಲ್ಲದೇ ಸಹಜವಾಗಿ ಒಂದು ನಿರ್ದಿಷ್ಟ ವಯೋಮಾನದಲ್ಲಿ ಕಾರ್ಯ ಬಾಹುಳ್ಯದಿಂದ ನಿಶ್ಯಕ್ತಿ ಅನಾಸಕ್ತಿ ಒತ್ತಡ ಹೀಗೆ ಹತ್ತು ಹಲವು ತೊಂದರೆಗಳಿಂದ ಕುಸಿದು ಹೋಗುತ್ತಾಳೆ. ಅದೇ ಪುರುಷ ಹೊರಗೆ ದುಡಿದು ಬಂದರೆ ಮನೆಯಲ್ಲಿ ಆತನ ಶ್ರಮವನ್ನು ಲಕ್ಷಿಸುವ ಉಪಚರಿಸುವ ವ್ಯವಸ್ಥೆಗಳಿದ್ದಂತೆ ಸ್ತ್ರೀ ದುಡಿದು ಬಂದರೆ ಈ ಉಪಚಾರ ಸಿಗಲಾರದು. ಕಾರಣವಿಷ್ಟೇ ಆಕೆ ಭಾರತೀಯ ಮಹಿಳೆ. ಹೊರಗೆ ದುಡಿದರೂ ಒಳ ಅಡಿಗೆ ಕೋಣೆ ಆಕೆಗಾಗಿಯೇ ಕಾಯುತ್ತಿರುತ್ತದೆ. ಹಾಗಾಗಿ ವಿದ್ಯಾವಂತ ಹೆಣ್ಣು ತನ್ನ ಓದು ಮನೆಯಲ್ಲಿಯೇ ಕೊಳೆತು ಹೋಗಬಾರದೆನ್ನುವ ಕಾರಣದಿಂದ ಹೊರ ದುಡಿಮೆ ಆರಿಸಿಕೊಂಡರೆ ಎರಡು ಕೆಲಸಗಳ ನಿಭಾಯಿಸಬೇಕಾದ ಸಂದರ್ಭಗಳೇ ಹೆಚ್ಚು. ಒಟ್ಟಾರೆ ಸ್ತ್ರೀ ಒಂದಲ್ಲಾ ಒಂದು ರೀತಿಯಿಂದ ಕೌಟಂಬಿಕ ಹಾಗೂ ಸಾಮಾಜಿಕ ಬದ್ಧತೆಗಳಿಗೆ ತನ್ನ ಸ್ವ ಹಿತಾಸಕ್ತಿಗಳನ್ನು ಕಡೆಗಣಿಸಬೇಕಾಗುತ್ತದೆ. ಆಕೆಯ ಜೀವನ ಕುಟುಂಬದ ಜೀವನವನ್ನು ಹಸನುಗೊಳಿಸುವುದರಲ್ಲಿಯೇ ಕಳೆದುಹೋಗುತ್ತಿರುತ್ತದೆ. ಆಕೆ ಮುಖದಲ್ಲಿ ನಗುವನ್ನು ತುಳುಕಿಸುತ್ತ ಆಂತರ್ಯದಲ್ಲಿ ಅತೃಪ್ತಿಯ ಸೆಲೆಯಲ್ಲಿಯೇ ಸೊರಗುತ್ತಾ ಬಡಿದಾಡುತ್ತಿರುತ್ತಾಳೆ. ಹಾಗಾಗಿ ಶಿಕ್ಷಣ ಪಡೆದ ಹೆಣ್ಣು ಕೂಡಾ ಗೃಹಿಣಿಯಾಗಿ ಮನೆಗೆಲಸಕ್ಕೆ ತನ್ನ ಕೌಶಲ್ಯವನ್ನು ಸೀಮಿತಗೊಳಿಸಿಕೊಳ್ಳುತ್ತಾಳೆ.
ಸ್ತ್ರೀ , ಸ್ತ್ರೀತ್ವ, ಸ್ತ್ರೀವಾದ ಆಧುನಿಕ ಶಿಕ್ಷಿತ ಸ್ತ್ರೀ ಸಮುದಾಯ ಅಸ್ತಿತ್ವದ ಹೋರಾಟದಲ್ಲಿ ಪ್ರಮುಖ ಸಂಗತಿಗಳು. ತನ್ನ ಕೊಡುಗೆ ನೀಡುವ,ತನ್ನತನ ತೋರ್ಪಡಿಸುವ ಆಕಾಂಕ್ಷೆ, ಗುರುತಿಸಿಕೊಳ್ಳುವಿಕೆ ಇವೆಲ್ಲ ಪುರುಷ ಭಾವಗಳಷ್ಟೇ ಆಗಿಲ್ಲದೇ ಸ್ತ್ರೀ ತುಡಿತವೂ ಹೌದು. ಆದರೆ ಅದಕ್ಕೆ ಪೂರ್ಣಪ್ರಮಾಣದಲ್ಲಿ ಪುರುಷ ಸಹಕಾರ ಸಿಗುವುದು ಅಸಂಭವ. ಅದಕ್ಕಾಗಿ ಶಿಕ್ಷಿತ ಸ್ತ್ರೀ ಸಮುದಾಯವೂ ಎದುರಿಸುತ್ತಿರುವ ಸವಾಲುಗಳು, ಸಂಕಷ್ಟಗಳು, ಅವಮಾನಗಳು, ನಿರಾಶೆಗಳು ಹಲವಾರು. ಆಕೆಯ ಆಶೋತ್ತರಗಳಿಗೆ ಬೆಂಬಲಿಸಿ ಪ್ರೋತ್ಸಾಹಿಸುವ, ಬೆಂಬಲಿಸುವ ಕೈಗಳು ಕಡಿಮೆ. ಭಾರತೀಯ ಸಮಾಜ ಆಕೆಯ ಮೇಲೆ ಹೇರಿದ ಕಟ್ಟುಪಾಡುಗಳೋ, ನಡತೆಯ ಮಾನದಂಡಗಳೋ, ಶೀಲದ ಪಾವಿತ್ರ್ಯದ ವಿಚಾರಗಳೋ, ಏನೋ? ಎಂತೋ ? ಈ ಎಲ್ಲ ಕಾರಣಗಳಿಂದ ಬಹುತೇಕ ಭಾರತೀಯ ಸ್ತ್ರೀ ಸಂಕುಲ ತನ್ನನ್ನು ಪೂರ್ಣವಾಗಿ ಜಗತ್ತಿಗೆ ತೋರ್ಪಡಿಸಿಕೊಳ್ಳಲಾಗದೇ, ತನ್ನೊಳಗಿನ ಸಾಮರ್ಥ್ಯವನ್ನು ಪ್ರದರ್ಶಿಸಲಾಗದೇ, ತನ್ನ ಯಾವ ಗುರುತನ್ನು ಬಿಟ್ಟು ಹೋಗಲಾಗದ ನೋವಲ್ಲಿಯೇ ಒಂದು ದಿನ ಜಗತ್ತಿನ ಹೊರೆ ಕಳಚಿಕೊಂಡು ನಡೆದುಬಿಡುತ್ತಾಳೆ.
ಸಮಾಜ ಜೀವನದಲ್ಲಿ ಹೆಣ್ಣಿನ ಹೊರದುಡಿಮೆಯ ಬಗ್ಗೆ ಇರುವ ಇನ್ನೊಂದು ವಿಚಾರವೆಂದರೆ ಮಹಿಳೆ ಹೊರ ಜಗತ್ತಿನ ಗಂಡಿಗೆ ಸಮಾನವಾಗಿ ದುಡಿವ ವಿಚಾರವನ್ನು ನಮ್ಮ ಸಂಪ್ರದಾಯಸ್ಥ ಭಾರತದಲ್ಲಿ ಇಂದಿಗೂ ಹಳ್ಳಿಗಳಲ್ಲಿ ಕೆಂಪು ಕಣ್ಣುಗಳಲ್ಲೇ ನೋಡುತ್ತಿರುವುದು.ಗಂಡು ಕೂತು ಕೆಟ್ಟ, ಹೆಣ್ಣು ತಿರುಗಿ ಕೆಟ್ಟಳು ಎಂಬ ಹಳೆಯ ಗಾದೆ ಮಾತು ಉಲ್ಲೇಖಿಸಲೇಬೇಕು. ಹೆಣ್ಣು ಮನೆಯೊಳಗೆ ನಾಲ್ಕು ಗೋಡೆಗಳ ನಡುವೆ ಇದ್ದರೆ ಒಳಿತು ಎಂಬ ವಿಚಾರವನ್ನು ಪ್ರತಿಪಾದಿಸುವ ನಮ್ಮ ಸಂಸ್ಕೃತಿ ಉದ್ಯೋಗಂ ಪುರುಷ ಲಕ್ಷಣಂ ಎನ್ನುತ್ತದೆ. ವಿದ್ಯಾವಂತ ಸಮಾಜದಲ್ಲಿಯೂ ಹೆಣ್ಣು ಗಂಡಿನ ಗಳಿಕೆಯ ಆಧಾರದ ಮೇಲೇಯೇ ಹೊರ ದುಡಿಯುವ ಇಲ್ಲವೇ ಮನೆವಾಳ್ತೆಯ ವಹಿಸಿಕೊಳ್ಳುವ ಉದಾಹರಣೆಗಳಿವೆ. ಇದರರ್ಥ ಹೆಣ್ಣು ಸದಾಕಾಲ ಪುರುಷನ ಆಧೀನದಲ್ಲಿಯೇ ಇರಬೇಕೆಂಬ ಅಲಿಖಿತ ಕಾಯಿದೆ. ಅದನ್ನು ಸುವ್ಯವಸ್ಥಿತ ಸಂಪ್ರದಾಯ ಕಟ್ಟಳೆಗಳ ಹೆಣೆದು, ಅದಕ್ಕೊಂದು ತಾರ್ಕಿಕ ರೂಪು ಕೊಟ್ಟು ಸ್ತ್ರೀ ಮನೆಯ ಒಳಗೋಡೆಯಲ್ಲಿದ್ದರೆ ಗೌರವ ನೆಮ್ಮದಿ ಹೀಗೆಲ್ಲ ವಾದಿಸುವ ಪುರುಷ ಸಮುದಾಯ ಇಂದಿಗೂ ಇದೆ. ಭಾರತದಲ್ಲಿ ರಾಜಕೀಯದಲ್ಲಿ ತೊಡಗಿಸಿಕೊಳ್ಳುವ ಸ್ತ್ರೀಯರ ಸಂಖ್ಯೆ ಕಡಿಮೆ ಇರಲು ಕಾರಣ ಈ ಮನೋಭಾವವೇ.
ಇದೆಲ್ಲ ಉಲ್ಲೇಖದ ಹಿನ್ನೆಲೆ ಎಂದರೆ ವಿಶ್ವ ಆರ್ಥಿಕ ವೇದಿಕೆ [ಡಬ್ಲೂ.ಇ ಎಫ್] ಪ್ರಕಟಿಸಿದ ಲಿಂಗತ್ವ ಅಸಮಾನತೆಯಲ್ಲಿ [ಗ್ಲೋಬಲ್ ಜೆಂಡರಗ್ಯಾಪ್] ಭಾರತ ೨೧ನೇ ಸ್ಥಾನಕ್ಕೆ ಕುಸಿದಿದ್ದು. ಆರೋಗ್ಯ, ಶಿಕ್ಷಣ, ಉದ್ಯೋಗ, ರಾಜಕೀಯ ಪ್ರಾತಿನಿಧ್ಯ ಈ ನಾಲ್ಕು ಕ್ಷೇತ್ರಗಳಲ್ಲಿ ಸ್ತ್ರೀ ಪ್ರಾತಿನಿಧ್ಯವನ್ನು ಕುರಿತು ನಡೆಸಿದ ಸಮೀಕ್ಷೆಯಲ್ಲಿ ಭಾರತಕ್ಕೆ ೧೦೮ ನೇ ಸ್ಥಾನ ದೊರಕಿರುವುದು. ಮಹಿಳಾ ಶ್ರಮಕ್ಕೆ ಭಾರತದಲ್ಲಿ ಅಂತಹ ಬೆಲೆಯಿಲ್ಲ. ಮಹಿಳಾ ಶಿಕ್ಷಣ ಪ್ರಾಮುಖ್ಯತೆ ಪಡೆದುಕೊಳ್ಳುತ್ತಿದ್ದರೂ ಉದ್ಯೋಗದಲ್ಲಿ ಆಕೆಯ ಭಾಗವಹಿಸುವಿಕೆ ಕಡಿಮೆ.ನೆರೆಯ ರಾಜ್ಯಗಳಾದ ಬಾಂಗ್ಲಾ, ಚೀನಾ ದೇಶಗಳು ನಮಗಿಂತ ಮುಂದಿರುವುದು ಅತಿದೊಡ್ಡ ಪ್ರಜಾಪ್ರಭುತ್ವ ದೇಶವಾದ ಭಾರತದ ನ್ಯೂನ್ಯತೆ ಎಂದೇ ಹೇಳಬೇಕು,
*****