ಹೊಲೆಯನಾರೂರ ಹೊರಗಿರುವವನೆ ಗೆಳೆಯ?
ಜಾತಿಯಿಂದಲ್ಲ ಗುಣದಿಂದಹನು ಹೊಲೆಯ ||ಪಲ್ಲ||
ಇಬ್ಬರಾಡುವ ಗುಟ್ಟು ಕದ್ದು ಕೇಳುವ ಹೊಲೆಯ,
ಗಂಡಹೆಂಡಿರ ಬೇರೆ ಮಾಡುವವ ಹೊಲೆಯ|
ಚಾಡಿ ಮಾತಾಡಿ ಭೇದವ ಕಲ್ಪಿಪನೆ ಹೊಲೆಯ,
ಒಣಹರಟೆಯಿಂ ಕಾಲ ಕಳೆಯುನವ ಹೊಲೆಯ ||೧||
ಬಾಯಿಬಾರದ ಜಂತುಗಳ ಕಾಡುವವ ಹೊಲೆಯ,
ಪಾಲ ಕುಡಿದಾಕಳನು ಸದೆವಾತ ಹೊಲೆಯ|
ಮನೆಯ ಬತ್ತಿದ ಪಶುವಿಗುಣಿಸು ಕೊಡದವ ಹೊಲೆಯ,
ಜೀವಿಗಳ ಕೊಂದು ಜೀವಿಸುವವನೆ ಹೊಲೆಯ ||೨||
ಹೆಂಡ ಕುಡಿದರಸುಬೀದಿಯಲಿ ತಿರಿವವ ಹೊಲೆಯ,
ಹಣವಿಟ್ಟು ಜೂಜಾಟವಾಡುವವ ಹೊಲೆಯ|
ತನ್ನೊಡನೆ ಮಡದಿಯಲಿ ತೃಪ್ತಿ ಪಡದವ ಹೊಲೆಯ,
ಪರರ ಧನವನಿತೆಯರ ಬಯಸುವವ ಹೊಲೆಯ ||೩||
ಎಳೆಮಕ್ಕಳಿಗೆ ವಿದ್ಯೆ ಕಲಿಸಿಕೊಡದವ ಹೊಲೆಯ,
ಯುವಕರಿಗೆ ದುರ್‍ಬುದ್ಧಿ ಕಲಿಸುವವ ಹೊಲೆಯ|
ತಾನರಿತ ಜ್ಞಾನ ಪರರಿಗೆ ಪೇಳದವ ಹೊಲೆಯ,
ತನ್ನಿಂದ ಹಿರಿಯರನು ಮನ್ನಿಸದ ಹೊಲೆಯ ||೪||
ಪರರ ಬೇನೆಯಲಿ ಮನಹಿಗ್ಗುವಾತನೆ ಹೊಲೆಯ,
ಪೀಡಿತರನಿನಿಸು ಕನಿಕರಿಸದವ ಹೊಲೆಯ|
ಪರರ ಹೊಗೆಯನು ನೋಡೆ ಕಾದಿರುವವನೆ ಹೊಲೆಯ,
ಪಸಿದವರಿಗೊಂದು ತುತ್ತೆರಚದವ ಹೊಲೆಯ ||೫||
ಹಣವ ಪಡೆದೊತ್ತೆಯನು ಹಿಂದೆ ಕೊಡದವ ಹೊಲೆಯ,
ಹಣವಿದ್ದು ಸಾಲವನು ತೀರಿಸದ ಹೊಲೆಯ|
‘ಆಶೆಮಾತನು ಕೊಟ್ಟು ಭಾಷೆ ತಪ್ಪುವ ಹೊಲೆಯ,’
ಬಗೆಬಗೆದು ಮೋಸವನು ಮಾಡುವವ ಹೊಲೆಯ ||೬||
ಶುದ್ಧ ತಾನೆಂದು ಪರರನು ಮುಟ್ಟದವ ಹೊಲೆಯ,
ಹೊಲೆಯರೆಂದನ್ಯರನು ಕರೆವವನೆ ಹೊಲೆಯ|
ತಾನು ಮೇಲೆಂದುಬ್ಬಿ ಹೀನೈಸುವನ ಹೊಲೆಯ,
ಕೀಳುದಸೆಯವರನುದ್ಧರಿಸದವ ಹೊಲೆಯ ||೭||
ತಾ ಬೋಧಿಸುವ ಧರ್‍ಮವಾಚರಿಸದವ ಹೊಲೆಯ,
ತಾನು ತಾನೆಂದು ಶ್ಲಾಘಿಸುವವನು ಹೊಲೆಯ|
ಪರರ ಹೊಲ್ಲೆಹದ ಕಾವ್ಯವ ಬಿತ್ತರಿಪ ಹೊಲೆಯ,
ಪರರ ಗುಣಗಳಿಗೆ ಕುರುಡಾಗಿಹನೆ ಹೊಲೆಯ ||೮||
ರಾಷ್ಟ್ರದುನ್ನತಿಯ ಸಾಧಿಸೆ ಶ್ರಮಿಸದವ ಹೊಲೆಯ,
ತನ್ನ ರಾಷ್ಟ್ರಕೆ ದ್ರೋಹ ಚಿಂತಿಪನೆ ಹೊಲೆಯ |
ಸ್ಫಾರ್ಥದಿಂ ರಾಷ್ಟ್ರಹಿತವನು ಮರೆವವನು ಹೊಲೆಯ,
ರಾಷ್ಟ್ರಭಕ್ತಿಯ ಲೇಶವಿಲ್ಲದವ ಹೊಲೆಯ ||೯||
ಎಲ್ಲವುಗಳಲ್ಲಿ ಹರಿಯನು ಕಾಣದನ ಹೊಲೆಯ,
ಶ್ರೀಹರಿಯೊಳೆಲ್ಲವನು ಕಾಣದವ ಹೊಲೆಯ|
ಮುಂಗೆಯ್ದ ಪಾಪಕನುತಾಪ ಪಡದವ ಹೊಲೆಯ,
ದೇವಕೀನಂದನನ ನೆನೆಯದವ ಹೊಲೆಯ ||೧೦||
*****