ಇತಿಹಾಸ ನಮ್ಮನ್ನು ಒಗೆಯುತ್ತದೆ
ಅದರ ಕಸದ ತೊಟ್ಟಿಗೆ
ಕೊಳೆತ ಹಣ್ಣು ಹರಿದ ಚಪ್ಪಲಿಗಳ
ಕಸದ ತೊಟ್ಟಿಗೆ
ಬೀದಿ ನಾಯಿಗಳು ಬಾಯಿಡುವ
ಕಸದ ತೊಟ್ಟಿಗೆ
ಆ ಕಸದ ತೊಟ್ಟಿಯನ್ನು
ಸಿಮೆಂಟಿನಿ೦ದ ಮಾಡಲಾಗಿದೆ
ಕಸದ ತೊಟ್ಟಿ ಎ೦ದು
ಕೆಂಪಕ್ಷರಗಳಲ್ಲಿ ಬರೆಯಲಾಗಿದೆ
‘ಯೂಸ್ ಮೀ’ ಎಂದೂ ಸಹ
ಬರಯಲಾಗಿದೆ
ಇತಿಹಾಸ ಈ ಕಸದ ತೊಟ್ಟಿಯನ್ನು
ಉಪಯೋಗಿಸುತ್ತದೆ
ಕಸ ಕಡ್ಡಿಗಳನ್ನು ನಿರ್ದಾಕ್ಷಿಣ್ಯವಾಗಿ
ಎಸೆಯುತ್ತದೆ
ಇಲ್ಲಿ ನಮ್ಮಂಥ ಎಷ್ಟೋ ಕಸ ಕಡ್ಡಿಗಳಿವೆ
ಈ ನಗರದಲ್ಲಿ ಇಂಥ
ಎಷ್ಟೋ ಕಸದ ತೊಟ್ಟಿಗಳಿವೆ
ಕಸದ ತೊಟ್ಟಿಗಳಿರುವುದರಿಂದ
ರಸ್ತೆಗಳು ಸ್ವಚ್ಛವಾಗಿವೆ
ಇತಿಹಾಸ
ಮಹಾಪುರುಷರುಗಳನ್ನು
ಸ್ವಚ್ಚ ಕೆಂಪು ಬಟ್ಟೆಗಳಲ್ಲಿಟ್ಟು
ರಾಜ ಮಾರ್ಗಗಳಲ್ಲಿ ನಡೆಸುತ್ತದೆ
ನಮ್ಮನ್ನು ಮಾತ್ರ ಅದು ತಳ್ಳುತ್ತದೆ
ಕಸದ ತೊಟ್ಟಿಗೆ
ಕೊಳೆತ ಹಣ್ಣು, ಹರಿದ ಚಪ್ಪಲಿಗಳ
ಕಸದ ತೊಟ್ಟಗೆ –
*****