ನನ್ನವೀ ನುಡಿಗಳಿರ! ಕಾಲದಲೆಗಳಲಿ
ನಿಮ್ಮನುರಿಹಣತೆಯಂತಿದೊ ತೇಲಬಿಡುವೆ,
ಅನುಗೊಳಲಿ ಜಗದುಸಿರು ನಿಮಗೆದುರುಗೊಳಲಿ,
ಆಳ್ವಿನಂ ಬಾಳ್ವುದೆಂಬುದೆ ನಿಮ್ಮ ಗೊಡವೆ.
ತನ್ನ ಮರಿಗಳೊಳೊಮ್ಮೆ ಕಟ್ಟೆರಕೆ ಮೂಡಿ
ದನಿತುಮಂ ಪೊರಮಡಿಸಿದುಲಿನಕ್ಕಿಯಮ್ಮ
ಸಂಜೆಯೊಳವಂ ಗೂಡುಗೊಳಿಪಂತೆ ಕೂಡಿ
ಸಿಡುವೆನಾನೀ ಹೊತ್ತಗೆಯೊಳೆನ್ನ ನಿಮ್ಮ.
ನನ್ನವೆಂದೆನೆ ನಿಮ್ಮನೆಲ್ಲಿಂದಲೆಲ್ಲಿ
ಗಯ್ದ ಲಂದಂದು ಹೊರಟಾ ನಡುವೆ ನಿಂತು
ನನ್ನೆದೆಯೊಳರೆಗಳಿಗೆ ಉಲಿದುಲಿಸಿದಲ್ಲಿ
ನನ್ನವಾದಿರೆ? ನಿಮ್ಮನೆನ್ನವೆನಲೆಂತು?
ತೋಟವಾವುದನೊ ತಮ್ಮನುಪಥದಿ ಕಂಡು
ಕ್ಷಣಮೆರಗಲಾ ತೋಟದಹುದೆ ಗಿಳಿವಿಂಡು?
*****