ಕಲ್ಲ ಪೂಜಿ ಮಾಡಲಕ ನನ್ನ್ಯಾರು ಕರಸ್ಯಾರ।
ಸಾಲಮ್ಯಾಳಿಗಿ ಮನಿಯವಳ|| ಸುವ್ವಿ ಸುವ್ವಿ ಸುವ್ವಾಲೆ ||೧||
ಸಾಲಮ್ಯಾಳಿಗಿ ಮನಿಯಽಳ ತಂಗೆವ್ವಾ|
ಕಲ್ಲ ಪೂಜಿಽಗಿ ಕರಸ್ಯಾಳ|| ಸು…. ||೨||
ಒಳ್ಳ ಪೂಜಿ ಮಾಡಲಿಕ್ಕ ನನ್ನ್ಯಾರು ಕರಸ್ಯಾರ|
ಸಾಲ ಮ್ಯಾಳಿಽಗಿ ಮನಿಯವಳ|| ಸು… ||೩||
ಸಾಲ ಮ್ಯಾಳಿಽಗಿ ಮನಿಯವಳು ತಂಗೆವ್ವಾ|
ಒಳ್ಳೆ ಪೂಜಿಽಗಿ ಕರಸ್ಯಾಳ || ಸು…. ||೪||
ಬಲ್ಲಬಲ್ಲವರಿಽಗಿ ಪಲ್ಲಕ್ಕಿ ಕಳವ್ಯಾಳ|
ಪಿಲ್ಲ್ಯಾದಗಾಲ ಮಗಳಿಽಗಿ || ಸು… ||೫||
ಪಿಲ್ಲ್ಯಾದಗಾಲ ಮಗಳೆ ಸಂಗಮ್ಮಗ|
ಪಲ್ಲಕ್ಕಿ ಕೊಟ್ಟು ಕರಸ್ಯಾರ || ಸು…. ||೬||
ನೆಂಟನೆಂಟಿರಿಽಗಿ ಮಂಟಪ್ಪ ಖಳವ್ಯಾರ|
ಮಂಟಿಗಿಗಾಲ ಮಗಳಿಗೆ|| ಸು… ||೭||
ಮಂಟಿಗಿಗಾಲ ಮಗಳ ಸಂಗಮ್ಮಗ|
ಒಂಟಿ ಸಿಂಗರಿಸಿ ಖಳವ್ಯಾರ|| ಸು… ||೮||
ಹಂದರ ಮ್ಯಾಲಿನ ಕಣಕಿ ನಂದಿ ಮೆಯ್ದಾನವೆಂದು|
ಬಿಚ್ಚಿ ಬಿಳಿ ಎಲಿ ಹೆರವ್ಯಾರ|| ಸು… ||೯||
ಬಿಚ್ಚಿ ಬಿಳಿ ಎಲಿಯ ಹೆರವ್ಯಾರ ತಮ್ಮಽಗ||
ಅಪ್ಪ ಮಾಡ್ಯಾನ ಮದುವಿಽಯ| ಸು… ||೧೦||
ಹಂದರ ಮ್ಯಾಲಿನ ಕಣಿಕಿ ನಂದಿ ಮೆಯ್ದಾವಂದ|
ಬಿಚ್ಚಿ ಬಿಳಿಯಽಲಿ ಹರವ್ಯಾರ|| ಸು… ||೧೧||
ಬಿಚ್ಚಿ ಬಿಳಿಯಽಲಿ ಹರವ್ಯಾರ ತಮ್ಮಽಗ|
ಅಣ್ಣ ಮಾಡ್ಯಾನ ಮದುವಿಽಯ|| ಸು… ||೧೨||
*****
ಲಗ್ನಕ್ಕೆ ಬೇಕಾಗುವ ಹಿಟ್ಟಕ್ಕಿಯ ಸಾಹಿತ್ಯವನ್ನು ಸಿದ್ಧಮಾಡುವ ಕಾಲದಲ್ಲಿ ಮೊದಲಿಗೆ ಒರಳು, ಬೀಸುವಕಲ್ಲು ಮುಂತಾದವುಗಳ ಪೂಜೆ ಮಾಡಿ ಕೆಲಸವನ್ನು ಪ್ರಾರಂಭಿಸುತ್ತಾರೆ. ಆ ಪ್ರಸಂಗದ ಹಾಡಿದು.
ಛಂದಸ್ಸು:- ತ್ರಿಪದಿಯಾಗಿದೆ.
ಶಬ್ದಪ್ರಯೋಗಗಳು:- ವಳ್ಳ=ಒರಳು. ಮಂಟಗಿ=ಕಾಲಲ್ಲಿ ಧರಿಸುವ ಒಂದು ಆಭರಣ.