ಮತ್ತೆ ಮಳೆ ಹೊಯ್ಯುವದೆ ? ಬಾಯಾರಿ ಬಿದ್ದ
ಬಾವಿಗಳು ತುಂಬುವವೆ ? ಬಾಡಿ ಬಸವಳಿದ
ನನ್ನ ಹಿತ್ತಲ ಗಿಡದ ಎಲೆಗಳು ಚಿಗುರುವವೆ ?
ಬರಲಿದೆಯೆ ಮೋಡಗಳ ಸಾಲು ? ಕಣ್ತುಂಬಲಿದೆಯೆ
ಮಿಂಚುಗಳ ಆಟ ? ಮೊದಲ ಮಳೆ ಬಿದ್ದು
ಮಣ್ಣು ಘಮ್ಮೆಂದ ಸಂಭ್ರಮ ? ಹರಕು ಕೊಡೆಗಳ
ಹೊಲಿಗೆ ? ತಟ್ಟಿ ಕಟ್ಟುವುದು ? ನೀರು ಸೋರುವಲ್ಲೆಲ್ಲ
ತಕ್ಕ ವ್ಯವಸ್ಥೆ ? ನಿಜ ಇವೆಲ್ಲ ಕಳೆದಿದ್ದೇ ದಾರಿ
ಈ ದಾರಿ ದಾಟಿದ್ದು ಅದೆಷ್ಟೋ ಬಾರಿ ಆದರೂ
ಕಳೆದಿದ್ದು ಕಟ್ಟುವುದು ಮತ್ತೆ ಮತ್ತೆ ಕಟ್ಟುವುದು
ಇದು ನಮ್ಮ- ನಿಮ್ಮ- ಭಾಗ್ಯ ಅದೆಲ್ಲಾ ಸರಿ ಗೆಳೆಯ
ಈಗ ಹೇಗಿದೆ ನಿನ್ನ ಆರೋಗ್ಯ ?
ಮನುಷ್ಯರ ಮಿತಿಗಳ ದಾಟಿ ನನ್ನ ಜ್ವರ ಇನ್ನು ಕೈ
ಬಿಟ್ಟೆವೋ ಎಂಬಂತೆ ಕ್ಷೀಣ ಸ್ವರ ಹೋದ ಹೋದ
ಕಣ್ಣುಗಳು ತುಂಬಿ ಬಂದವು ಜೀವದ ಕನಸುಗಳೆಲ್ಲ
ಕುತ್ತಿಗೆಗೆ ಬಂದವು ಉಕ್ಕಿ ಹರಿಯಿತು ಅಘನಾಶಿನಿ
ಈಸುತ್ತ ಬಂದವು ನೆನಪುಗಳು ಆ ನೆನಪುಗಳಿಗೆ
ನಾನಾ ಸ್ವರೂಪ ಕಲಸಿ ಕಲಸಿ
ಕಣ್ಣೊತ್ತಿ ನಿಂತಿದ್ದು ಮಂಗಳದ ಕುಂಕುಮ ಹೇಳು
ಆ ತಾಯಿ ಯಾರು ? ಅನಿಸುವುದು ನಾನು ಬದುಕುಳಿದಿದ್ದು
ಸಂಕಲ್ಪ ಮಾತ್ರದಿಂದ
ಮತ್ತೆ ಮಳೆ ಹೊಯ್ಯುವುದೆ ? ನನ್ನೂರು ಹಿರೇಗುತ್ತಿ
ಸ್ನಾನದ ಪುಳಕಕ್ಕೆ ಅರಳಿ ಹೂವಾಗುವುದೆ ? ಈಶ್ವರ ಕೆರೆ
ತುಂಬಿ ಎಬ್ಬಿಸುವುದೆ ರೋಮಾಂಚನ ? ಇದೇ ರೀತಿ
ಚೌತಿಯ ತನಕ ಇದ್ದು ಬಿಟ್ಟರೆ ಬಹಳ ಆರಾಮು
ಅನಂತರವೇನೂ ಬೇಡ ಎಂದಲ್ಲ …………….
ಮೃತ್ಯು ಲೋಕ ಬಾ ಎಂದಾಗ ಬದುಕು ಸಿಹಿ ಅನಿಸಿತು
ಇಲ್ಲಿ ಬದುಕುವೆ ಮಾನವನಾಗಿ ಈ ಬದುಕು ನನ್ನದು
ಇದರ ಸೋಲೂ ಗೆಲುವೂ ಸಂಪೂರ್ಣ ನನ್ನದು ಒಮ್ಮೆ
ಕೊಟ್ಟು ನೋಡು ಅವಕಾಶ- ಆಗ
ಎತ್ತರಿಸುವೆ ಆಕಾಶ
ಸ್ವಲ್ಪ ಸಾವಕಾಶ ಬಿದ್ದ ಮಳೆ ಪೂರಾ ನೋಡಿದ್ದೇ ಕೀರ್ತಿ
ಅಲ್ಲ. ನಮ್ಮೂರ ಕೆರೆಗಳ ಪಾಲೂ ಉಂಟಲ್ಲ ? ಬಾ ಎಂದು ಕರೆಯುವ
ಬೆಟ್ಟಗಳು ನವಿಲುಗಳು ಕಪ್ಪೆಗಳು ಇವುಗಳಿಗೆ ಅಭಾರ
ಸಲ್ಲಲೇಬೇಕಲ್ಲ ? ಮುಖ್ಯವಾಗಿ ಇವೆಲ್ಲ ಪ್ರಕೃತಿ ನಿಯಮ
ಇದು ಸತ್ಯ. ಇದು ಸತ್ಯ ನಂಬು
ನಾನಾಗ ಚಿಕ್ಕವನು ಆಗ ಇದ್ದಿದ್ದು ಈ ಮನೆಯಲ್ಲಲ್ಲ ಇದೇ
ಕೇರಿಯಲ್ಲಿ ಕೆಳಗೆ ಎಂಥ ಮಳೇ ಹೇಗೆ ಹರಿಯುತ್ತಿತ್ತು, ನೀರು !
ಆ ನೀರಿನ ಎದುರು ಎದ್ದ ಗುಳ್ಳೆಗಳ ಎದುರು ದಂಗು ದುಗುಡದ ನಾ
ಮನೆ ಅಂಗಳದ ಎರಡನೇ ಮೆಟ್ಟಿಲ ಮೇಲೆ ಆ ಗುಳ್ಳೆಗಳಿಗೆ
ಕೈ ಬೀಸುತ್ತಿದ್ದೆ. ಆ ಗುಳ್ಳೆಗಳದು ಅನಿಯಂತ್ರಿತ ಪ್ರವಾಹ
ಇಂದಿಗೂ ನಾನು ಅದೇ ಹುಡುಗ ಗಡ್ಡ ಮೀಸೆ ಬಂದಿದ್ದು
ನನಗಲ್ಲ ನನ್ನ ದೇಹಕ್ಕೆ
ಮತ್ತೆ ಮಳೆ ಹೊಯ್ಯಲಿದೆ. ಕಲ್ಪನೆಯ ಕಡಲುಗಳು
ತುಂಬಿ ತುಳುಕಲಿವೆ ಹಡಗುಗಳು ಬರಲಿವೆ ದೋಣಿಗಳು
ಬರಲಿವೆ ಆಚೆ ದಡದಿಂದ ಬರುವರು ಹೊಸ ಅತಿಥಿಗಳು
ಬಾ – ಅವರನ್ನು ಸ್ವಾಗತಿಸು ಕುಡಿಯಲು ಬಿಸಿಯೋ ತಣ್ಣಗೋ
ಬನ್ನಿ ಬಟ್ಟೆ ಬದಲಿಸಿ ನಮ್ಮದೂ ನಿಮ್ಮದೂ ಒಂದೇ ಬದುಕು
ಇರುವಷ್ಟು ದಿವಸ ಇದ್ದೇ ಬಿಡುವ ಬಿಡದೇ ಬಿರುಕು
ಇಲ್ಲದಿದ್ದಾಗಲೂ ಇದ್ದಿದ್ದ ಎಂದು ಎದೆ ತುಂಬಿ ಹೇಳಿದರೆ ಸಾಕು
ಅಷ್ಟೇ ಸಾಕು ; ಈ ಮಣ್ಣಿನ ಜೀವಕ್ಕೆ ಇನ್ನೇನು ಬೇಕು ?
*****