ದ್ರೌಪದಿ ಸ್ವಯಂವರ

-ಬ್ರಾಹ್ಮಣ ವೇಷಧಾರಿಗಳಾಗಿ ಭಿಕ್ಷೆ ಬೇಡುತ್ತ ಏಕಚಕ್ರನಗರದಲ್ಲಿ ಕೆಲವು ದಿನಗಳಿದ್ದಂತಹ ಪಾಂಡವರು, ಅಲ್ಲಿ ಪ್ರಜಾಪೀಡಕನಾಗಿದ್ದ ಬಕಾಸುರನನ್ನು ಕೊಂದು ಪ್ರಜೆಗಳ ಕಷ್ಟ ನಿವಾರಣೆ ಮಾಡಿದ ಬಳಿಕ, ಇನ್ನು ಅಲ್ಲಿರುವುದು ಒಳಿತಲ್ಲವೆಂದು ಭಾವಿಸಿ, ಅಗ್ನಿಪೂಜಕನೂ ಪಾಂಚಾಲದರಸನೂ ಆದಂತಹ ದ್ರುಪದನು ತನ್ನ ಮಗಳಾದ ಕೃಷ್ಣಗೆ ಸ್ವಯಂವರ ಏರ್ಪಡಿಸಿರುವುದನ್ನು ತಿಳಿದು ನಸುಕಿನ ವೇಳೆಗೆ ಬ್ರಾಹ್ಮಣವೇಷಗಳಲ್ಲಿಯೇ ಅವರೆಲ್ಲರೂ ಪಾಂಚಾಲದೇಶದ ಕಡೆ ಪ್ರಯಾಣ ಬೆಳೆಸಿದರು. ದ್ರೌಪದಿಯ ಸ್ವಯಂವರಕ್ಕೆ ಅನೇಕ ರಾಜರುಗಳು ಆಗಮಿಸಿದ್ದರು. ಅವರಲ್ಲಿ ಹಸ್ತಿನಾಪುರದ ದುರ್ಯೋಧನ, ಕರ್ಣ ಮುಂತಾದವರೂ ಸೇರಿದ್ದರು-

ಮಾರುವೇಷದಲ್ಲಿದ್ದ ಪಾಂಡವರು ಏಕಚಕ್ರಪುರದಲ್ಲಿ ನೆಲೆಸಿ
ಊರಿಗೆ ಮಾರಿಯಾಗಿದ್ದ ರಕ್ಕಸನ ಬೆಟ್ಟದಲ್ಲಿಯೇ ಸಂಹರಿಸಿ
ಬಕಾಸುರನ ಸಂಹಾರದ ನಂತರ ಏಕಚಕ್ರಪುರ ತೊರೆದವರು
ಊರಿನ ಋಣವನ್ನು ತೀರಿಸಿದಂತಹ ತೃಪ್ತಿಯಿಂದ ಮುನ್ನಡೆದವರು
ಪಂಚಪಾಂಡವರು ಕುಂತಿಯ ಸಮೇತ ಪಾಂಚಾಲದೇಶವ ತಲುಪಿದರು
ಅಲ್ಲಿನ ಕುಂಬಾರನ ಮನೆಯೊಂದರ ಆಶ್ರಯ ಹೊಂದುತ ನೆಲೆಸಿದರು
ಬ್ರಾಹ್ಮಣ ವೇಷವ ಕಳಚದೆ ಅಲ್ಲಿಯೂ ಭಿಕ್ಷಾಟನೆಯನ್ನು ಮಾಡಿದರು
ತಾವಾರೆಂಬುವ ಸುಳಿವನು ನೀಡದೆ ಹಾಗೆಯೆ ದಿನವನು ದೂಡಿದರು!

ಪಾಂಚಾಲದ ದೊರೆ ದ್ರುಪದನು ತನ್ನಯ ಮಗಳ ಸ್ವಯಂವರ ಏರ್ಪಡಿಸಿ
ದೇಶ ವಿದೇಶದ ಎಲ್ಲ ರಾಜರಿಗೆ ಆಮಂತ್ರಣಪತ್ರವ ಕಳಿಸಿ
ಧನುರ್ವಿದ್ಯೆಯಲಿ ವೀರನಾದವನು ಮಗಳನು ವರಿಸಲಿ ತಾನೆಂದು
ಮತ್ಸಯಂತ್ರವನ್ನು ಭೇದಿಸುವಂತಹ ಪಣವನ್ನು ಇಟ್ಟನು ತಾನಂದು!
ಕೃಷ್ಣಸುಂದರಿಯು ದ್ರೌಪದಿ ರೂಪವು ನಾಡಿನಲ್ಲಿ ಹೆಸರಾಗಿತ್ತು
ಅಗ್ನಿಪೂಜಕಳು ಸೌಂದರ್ಯದ ಗಣಿ ಎಂಬ ಖ್ಯಾತಿ ಪಡೆದಾಗಿತ್ತು
ದ್ರುಪದಕುಮಾರಿಯ ವರಿಸುವ ಆಸೆಗೆ ಬಂದಿತು ರಾಜರ ಪಡೆ ಅಲ್ಲಿ
ಹಲವು ರಾಜ್ಯಗಳ ಅರಸರಾಗಮಿಸಿ ಆಸೀನರು ಆಸನಗಳಲಿ!

ಕುರು-ಪಾಂಚಾಲರ ನಡುವೆ ವೈರತ್ವ ಇದ್ದಿತು ತುಂಬಾ ದಿನದಿಂದ
ಕುರುಗಳು ಆರ್ಯರು ತಾವು ಮೇಲೆಂಬ ಭಾವನೆಯಿದ್ದಿತು ಮೊದಲಿಂದ
ಆದರೆ ದ್ರೌಪದಿ ಅಂದಚೆಂದಗಳ ತಿಳಿದ ಹಸ್ತಿನಾಪುರದವರು
ಪಾಂಚಾಲಿಯ ಗೆಲ್ಲುವ ಛಲದಲ್ಲಿಯೆ ಸ್ಪರ್ಧೆಗೆ ಅವರಾಗಮಿಸಿದರು
ದುರ್ಯೋಧನ ಕರ್ಣನ ಸಂಗಡದಲ್ಲಿ ಬಂದ ಸ್ವಯಂವರ ಮಂಟಪಕೆ
ಕರ್ಣನು ಖಂಡಿತ ಗೆಲುವನು ಎಂಬುವ ನಂಬಿಕೆ ಬಂದಿದ್ದಿತು ಮನಕೆ
ಯದುಕುಲ ಕೃಷ್ಣನು ತಾನೂ ಬಂದನು ಕೃಷ್ಣೆ ಸ್ವಯಂವರ ವೀಕ್ಷಿಸಲು
ಸಾತ್ಯಕಿಯೂ ಸಹ ಸಂಗಡವಿದ್ದನು ರಕ್ಷಣೆಯನ್ನು ಪರಿವೀಕ್ಷಿಸಲು
ಪಾಂಡವರೂ ತಾವೆಲ್ಲರು ಬಂದರು ಅಲ್ಲಿಗೆ ಬ್ರಾಹ್ಮಣ ವೇಷದಲಿ
ಕುಳಿತರು ತಾವೂ ಸ್ಪರ್ಧೆಯ ನೋಡುತ ಅಲ್ಲಿನ ವಿಪ್ರರ ಗುಂಪಿನಲಿ!

ಸ್ಪರ್ಧಾಗೃಹದಲಿ ಮಧ್ಯದೊಳಿದ್ದಿತು ಎಣ್ಣೆಯ ತುಂಬಿದ ಕೊಪ್ಪರಿಗೆ
ತಿರುಗುವ ಚಕ್ರವು ಎಣ್ಣೆಯ ಮಧ್ಯದಿ ನಿಂತಿಹ ಕಂಬದ ಆ ತುದಿಗೆ
ಚಕ್ರದ ತುದಿಯಲಿ ತಿರುಗುತಲಿದ್ದಿತು ಮತ್ಸ್ಯವು ನಿಲ್ಲದೆ ಸರಸರನೆ
ಚಕ್ರದ ಬುಡದಲಿ ಪಂಚಬಾಣಗಳು ಹೊಳೆಯುತ್ತಿದ್ದವು ಫಳಫಳನೆ
ಪಕ್ಕದಲ್ಲಿಯೇ ಮಹಾಧನುಸೊಂದಿದ್ದಿತು ಸವಾಲು ಎಸೆಯುತ್
ಸೊಕ್ಕಿದ ಮನದಲಿ ನೋಡುತಲಿದ್ದಿತು ಬನ್ನಿರಿ ನೋಡುವ ಎನ್ನುತ್ತ!
ಮತ್ಸ್ಯದ ಬಿಂಬವು ಕಾಣುತಲಿದ್ದಿತು ಪ್ರತಿಫಲಿಸುತ ಕೊಪ್ಪರಿಗೆಯಲಿ
ಪಾರದರ್ಶಕತೆ ತೋರ್ಪಡಿಸುತ್ತಲಿ, ತುಂಬಿದ್ದಂತಹ ಎಣ್ಣೆಯಲಿ
ಮೀನಿನ ಬಿಂಬವು ತಿರುಗುತಲಿದ್ದಿತು ಮೂಲವನೇ ತಾ ನೋಡುತಲಿ
ಸಾಹಸ ತೋರುವ ವೀರರಿಗೇನೆ ಸವಾಲು ಎಸೆಯುವ ತೆರದಲ್ಲಿ
ವೀರನು ಮತ್ಸ್ಯದ ಬಿಂಬವ ನೋಡುತ ಭೇದಿಸಬೇಕಿದೆ ಮೂಲವನು
ಸಾಧಿಸಿ ತೋರಿಸಬೇಕಿದೆ ಧೀರನು ಎದುರಿಸಿ ಆ ಪ್ರತಿಕೂಲವನು!

ಭುವನಸುಂದರಿಯ ಬಯಸುವ ಮಂದಿಯ ಎದುರಿಗೆ ಬಂತು ಸವಾಲೊಂದು
ಅವಳನು ಪಡೆಯಲು ಅವಲೀಲೆಯಲಿ ಸವಾಲು ಗೆಲ್ಲಲೇಬೇಕಿಂದು
ಧನವನು ದೊರಕಿಕೊಳ್ಳಲು ಬೇಕಿದೆ ಮಹಾಪ್ರಯತ್ನವು ಮನಸಿನಲಿ
ಅನುಪಮ ಸಾಹಸ ಮೆರೆಯದೆ ಹೋದರೆ ಉಳಿವುದು ಎಂದೂ ಕನಸಿನಲಿ

“ಮತ್ಸ್ಯಯಂತ್ರವನ್ನು ಭೇದಿಸಿದವನಿಗೆ ಕೊಡುವೆನು ನನ್ನಯ ಮಗಳನ್ನು
ಕೃಷ್ಣಯೆಂಬ ಅಭಿಧಾನವ ಹೊಂದಿದ ಕೃಷ್ಣಸುಂದರಿಯು ಇವಳನ್ನು”
ಎನ್ನುತ ದ್ರುಪದನು ಸಾರಿದನಲ್ಲಿಯ ಎಲ್ಲಾ ರಾಜರ ಎದುರಲ್ಲಿ
ತಾನೇ ಗೆಲ್ಲುವೆ ಎನ್ನುವ ಭಾವವು ಮೂಡಿತು ರಾಜರ ಮನದಲ್ಲಿ
ಕೃಷ್ಣಯು ಹೂವಿನ ಮಾಲೆಯ ಸಮೇತ ನಿಂತಳು ಯಂತ್ರದ ಸನಿಹದಲಿ
ಗೆಲ್ಲುವ ವೀರನ ಕೊರಳಿಗೆ ಹಾಕಲು ಮುಗುಳುನಗುತ್ತಲಿ ವಿನಯದಲಿ!
ರಾಜಕುಮಾರರು ಕೃಷ್ಣಯ ಚೆಲುವನು ತುಂಬಿಕೊಂಡು ಕಣ್ಣುಗಳಲ್ಲಿ
ಅವಳನು ಪಡೆಯುವ ಆಸೆಯು ತುಂಬಲು ದೇಹದ ನರನಾಡಿಗಳಲ್ಲಿ
ಮತ್ಸ್ಯಯಂತ್ರವನ್ನು ಭೇದಿಸಲೆನ್ನುತ ಕಾತರದಿಂದಲಿ ನೋಡಿದರು
ತಮ್ಮ ಸರದಿ ಬರಲೆನ್ನುತ ಕಾದರು ಅಚ್ಚರಿ ನೋಟವ ಬೀರಿದರು.

ಯಂತ್ರದ ಬಳಿಯಲಿ ಯಾರು ಹೋದರೂ ಸೋಲಲಿ ಎನ್ನುತ ಕೋರಿದರು
ಸೋತರೆ ತಾನೇ ಗೆಲ್ಲಬಹುದೆಂದು ಆಸೆಯ ಮನದಲ್ಲಿ ತಾಳಿದರು
ಒಬ್ಬರ ನಂತರ ಒಬ್ಬರು ಬಂದರು ಮತ್ಸ್ಯಯಂತ್ರವನ್ನು ಭೇದಿಸಲು
ಗುರಿಯನು ತಪ್ಪುತ ಹಿಂದಿರುಗಿದ್ದರು ಕೈಲಾಗದೆ ಗುರಿ ಸಾಧಿಸಲು!

ಸೋತ ಕುಮಾರರು ಜೋಲುಮೋರೆಯನ್ನು ಹಾಕಿ ಹಿಂದಕ್ಕೆ ಮರಳಿರಲು
ಮುಂದಿನ ಸ್ಪರ್ಧಿಯು ಅವನೂ ಸೋಲಲಿ ಎಂದೇ ಹಾರೈಸುತ್ತಿರಲು
ಗೆಲ್ಲದ ತೆರದಲಿ ಮಾಡಿಹರೇನೋ ಮಂತ್ರ-ತಂತ್ರ ಕುತಂತ್ರವನು
ಎಂಬ ಮಾತುಗಳು ಉರುಳಾಡಿದ್ದವು ಭೇದಿಸಲಾಗದೆ ಯಂತ್ರವನು
ಕಡೆಯಲಿ ಕರ್ಣನು ಮುಂದಕೆ ಬಂದನು ಗುರಿಯನು ಸಾಧಿಸಬೇಕೆಂದು
ಕೃಷ್ಣೆಯು ಕರ್ಣನ ನೋಡುತ ಮನದಲಿ ಬಯಸಿದಳವನೇ ಗೆಲಲೆಂದು
ಆದರೆ ಎಂದೂ ಗುರಿಯನ್ನು ತಪ್ಪದ ಅವನಂದೇಕೋ ತಪ್ಪಿದನು
ಅರಸರ ಎದುರಲಿ ತಲೆಯನು ತಗ್ಗಿಸಿ ತನ್ನಯ ಸೋಲನು ಒಪ್ಪಿದನು!
ರಾಜಕುಮಾರರು ಯಾರೂ ಯಂತ್ರವ ಭೇದಿಸಲಾಗದೆ ಸೋತಿರಲು
ಕೃಷ್ಣೆಯು ಚಿಂತೆಯ ಮೊಗವನು ತಗ್ಗಿಸಿ ಯಂತ್ರದ ಬಳಿಯಲಿ ನಿಂತಿರಲು
ದ್ರುಪದನು ಹೇಳಿದ- “ಸ್ಪರ್ಧೆಗೆ ಬಂದವರಾರೂ ಗುರಿಯನು ತಲುಪಿಲ್ಲ
ಧನುರ್ವಿದ್ಯೆಯಲಿ ಯಶವನು ಗಳಿಸುವ ಸ್ಪರ್ಧೆಯು ಇನ್ನೂ ಮುಗಿದಿಲ್ಲ
ಸಾರ್ವಜನಿಕರಲಿ ಯಾರೇ ಆಗಲಿ ಗುರಿಯನ್ನು ಸಾಧಿಸಬಹುದಿಲ್ಲಿ
ಯಂತ್ರದ ಮತ್ಸ್ಯವ ಭೇದಿಸಿ ಕೃಷ್ಣೆಯ ಗೆಲ್ಲಬಹುದು ಈ ಸ್ಪರ್ಧೆಯಲಿ”

ದ್ರುಪದನ ಈ ಬಗ್ಗೆ ಪ್ರಕಟಣೆಯಾಲಿಸಿ ಬೆಕ್ಕಸ ಬೆರಗಾಯಿತು ಸಭೆಯು
ಕದ್ದಿಂಗಳ ನಡುರಾತ್ರಿಯ ಸಮಯದಿ ಸಾಧ್ಯವೆ ಬೆಳದಿಂಗಳ ಸುಧೆಯು
ರಾಜರು ಸಾಧಿಸಲಾಗದ ಗುರಿಯನ್ನು ಸಾಧಿಸಬಲ್ಲನೆ ಸಾಮಾನ್ಯ?
ಸಭೆಯಲಿ ಗುಜುಗುಜು ಶುರುವಾಗಿದ್ದಿತು ‘ಬರುವನೆ ಇಲ್ಲಿ ಅಸಾಮಾನ್ಯ!?’
ವಿಪ್ರರ ಗುಂಪಿನ ಬ್ರಾಹ್ಮಣನೊಬ್ಬನು ಬಂದನು ಸ್ಪರ್ಧೆಯ ವೇದಿಕೆಗೆ
ಘನಗಂಭೀರದಿ ಸಾಗಿದ ಮೆಲ್ಲಗೆ ಮತ್ಸಯಂತ್ರ ಧನುವಿನ ಬಳಿಗೆ
ಎಡಗೈಯಲಿ ಆ ಬಿಲ್ಲನು ಎತ್ತುತ ಹೊಳೆಯುವ ಬಾಣವ ಗುರಿ ಹಿಡಿದ
ಮೀನಿನ ಬಿಂಬವ ನೋಡುತ ನೋಡುತ ಮೂಲದ ಕಡೆ ಬಾಣವನುಗಿದ

ಬಾಣವು ಮತ್ಸ್ಯದ ಕಣ್ಣಿಗೆ ನಾಟಿತು ಜಯಜಯಕಾರವು ಸಭೆಯಲ್ಲಿ
‘ಬ್ರಾಹ್ಮಣನೊಬ್ಬನು ರಾಜಕುಮಾರಿಯ ಗೆದ್ದನು’ ಎಂದರು ಖುಷಿಯಲ್ಲಿ
ಯಾರೂ ಊಹಿಸದಂತಹ ಘಟನೆಯು ಸ್ಪರ್ಧೆಗೆ ತಿರುವನು ನೀಡಿತ್ತು
ರಾಜಸಮೂಹವು ಪ್ರತಿಭಟಿಸುತ್ತಲಿ ಗೆಲುವನು ಖಂಡಿಸತೊಡಗಿತ್ತು!
ದ್ರೌಪದಿ ಹೂವಿನ ಮಾಲೆಯ ಸಂಗಡ ನಡೆದಳು ಬ್ರಾಹ್ಮಣ ವೀರನೆಡೆ
ರಾಜರೆಲ್ಲರೂ ಒಟ್ಟಿಗೆ ಎದ್ದರು, ನಡೆದರು ತಡೆಯಲು ಕೃಷ್ಣಯೆಡೆ
ರಾಜರಿಗಲ್ಲದೆ ವಿಪ್ರನಿಗೇತಕೆ ರಾಜಕುಮಾರಿಯು ಎನ್ನುತ್ತ
ಗಲಭೆಯ ಎಬ್ಬಿಸಿ ಅರಾಜಕತೆಯನು ಸೃಷ್ಟಿಸಿ ಶಾಂತಿಯ ಕದಡುತ್ತ
ಕೂಡಲೆ ಬ್ರಾಹ್ಮಣ ಗುಂಪಿನೊಳಿಂದಲಿ ನಾಲ್ವರು ಯುವಕರು ಧಾವಿಸುತ
ಎದುರಿಸಿ ನಿಂತರು ವಿರೋಧಿಸಿದವರ ಅಲ್ಲಿಂದಲ್ಲಿ ನಿವಾರಿಸುತ್ತ!
ಸಿಕ್ಕಸಿಕ್ಕವರ ಚಚ್ಚತೊಡಗಿದರು ತಮ್ಮ ಪರಾಕ್ರಮವನು ತೋರಿ
ಒಬ್ಬೊಬ್ಬರೂ ಹತ್ತು ಮಂದಿಯ ಬಡಿದರು ತೋರಿಸಿ ಅವರಿಗೆ ಸರಿದಾರಿ
ಪೆಟ್ಟನು ತಾಳದೆ ತತ್ತರಿಸಿದ್ದರು ಶಾಂತಿಯ ಕದಡಲು ಬಂದವರು
ಹೊಟ್ಟೆಯಕಿಚ್ಚಲಿ ಸಿಟ್ಟುಗೊಂಡಿದ್ದ ಸೋತು ನಿರಾಶೆಗೊಂಡವರು
ದ್ರುಪದಕುಮಾರನು ದೃಷ್ಟದ್ಯುಮ್ನನು ಅಲ್ಲಿಗೆ ಬಂದನು ತಡೆಯುತ್ತ
ಐವರು ವೀರರ ಜೊತೆಯಲಿ ತಾನೂ ಕಾದಲು ತೊಡಗಿದ ಬಡಿಯುತ್ತ
ಕೂಡಲೆ ದ್ರುಪದನ ಸೈನ್ಯವು ಬಂದಿತು ತಂದಿತು ಎಲ್ಲವ ತಹಬದಿಗೆ
ಐವರು ಬ್ರಾಹ್ಮಣ ವೀರರು ನಿಂತರು ದೌಪದಿ ಬಳಿಯಲಿ ರಕ್ಷಣೆಗೆ!

ಭಲಾ! ಭಲಾ! ಬಲಶಾಲಿಗಳೆದುರಲಿ ನಿಲ್ಲಲಾಗುವುದೆ ಬಲುಹೊತ್ತು?
ಭಲೇ! ಎಂದು ಬಲು ಮೆರೆದವರೆಲ್ಲರು ಆಗಬೇಕು ಸುಲಭದ ತುತ್ತು!
ಸುಲಭವಾಗಿ ಜಯವೆಂದೂ ಲಭಿಸದು ಸದಾ ಜಾಗ್ರತೆಯು ಇರಬೇಕು
ಛಲದಲಿ ಗೆಲುವಿನ ಗುರಿಯನು ತಲುಪಲು ಏಕಾಗ್ರತೆ ಮನವಿರಬೇಕು

ಅವರಲಿ ಹಿರಿಯನು ಸಾರಿದ ಸಭೆಯಲಿ- “ಸಭಿಕರೆ, ನಾವೇ ಪಾಂಡವರು
ದ್ರುಪದಕುಮಾರಿಯ ಗೆದ್ದವ ಅರ್ಜುನ ನಾವುಗಳೆಲ್ಲರು ಉಳಿದವರು
ಅರಗಿನಮನೆ ಅವಘಡವನು ಭೇದಿಸಿ ತಪ್ಪಿಸಿಕೊಂಡೆವು ಆ ದಿನವು
ಹಲವು ಕ್ಲೇಶಗಳ ದಾಟುತ ಬರುತಲಿ ನಿಮ್ಮೆದುರಿರುವೆವು ಈ ದಿನವು”

ಧರ್ಮನ ಮಾತನು ಕೇಳಿದ ಸಭಿಕರು ಹರ್ಷೋದ್ಗಾರವ ಮಾಡಿದರು
ದ್ರುಪದನು, ಕೃಷ್ಣೆಯು ಪುಳಕಿತರಾದರು ಆನಂದದಿ ತುಳುಕಾಡಿದರು
ದುರ್ಯೋಧನನಿಗೆ ಆಘಾತವಾಯಿತು ಪಾಂಡವರನು ನೋಡಿದ ಘಳಿಗೆ
ಉರಿಯುವ ಮತ್ಸರದಲ್ಲಿಯೆ ಹೊರಟನು ಹಸ್ತಿನಪುರದೆಡೆ ಮರುಘಳಿಗೆ
ಪಾರ್ಥನ ಕೊರಳಿಗೆ ದ್ರೌಪದಿ ಕೂಡಲೆ ಹಾಕಲು ಹರುಷದಿ ಜಯಮಾಲೆ
ಜಯಜಯಕಾರವು ಮುಗಿಲನು ಮುಟ್ಟಿತು, ಎಲ್ಲ ಇಲ್ಲಿ ದೇವರ ಲೀಲೆ
ಪಾಂಡವರೆಲ್ಲರು ನಡೆದರು ಒಟ್ಟಿಗೆ ತಾಯಿಯು ಕುಂತಿಯ ಬಳಿಯಲ್ಲಿ
ದ್ರುಪದಕುಮಾರಿಯು ಹಿಂದೆಯೆ ನಡೆದಳು ಐವರು ವೀರರ ಜೊತೆಯಲ್ಲಿ!

ಕೃಷ್ಣೆಯೆಂಬ ಆ ಕೃಷ್ಣಸುಂದರಿಯ ನೋಡಿದ ಕುಂತಿಗೆ ಹಿತವಾಗಿ
ರಾಜಕುಮಾರಿಯ ಅಂದಚೆಂದಗಳು ಮನವನು ಸೆಳೆದವು ಬಹುವಾಗಿ
ಅರ್ಜುನ ಬೀಗುತ ನುಡಿದನು- “ಅಮ್ಮಾ, ಮತ್ಸ್ಯಯಂತ್ರವನ್ನು ಭೇದಿಸಿದೆ
ಯಾರೂ ಸಾಧಿಸಲಾಗದ ಗುರಿಯನು ನಾನಿಂದಿನ ದಿನ ಸಾಧಿಸಿದೆ”
ಕುಂತಿಯು ನುಡಿದಳು- “ವೀರ ಕುಮಾರನೆ, ಬಲ್ಲೆನು ನಿನ್ನಯ ಪ್ರತಿಭೆಯನು
ನಾಳೆಯೆ ಸುಂದರಿ ದ್ರೌಪದಿಯೊಂದಿಗೆ ನಿನ್ನಯ ಮದುವೆಯ ಮಾಡುವೆನು”
ಭೀಮನು ಹೇಳಿದ- “ಸ್ವಯಂವರದಲ್ಲಿ ಆಯಿತು ಗಲಭೆಯು ಜೋರಾಗಿ
ಎಲ್ಲರು ಅವಳೆಡೆ ನುಗ್ಗುತಲಿದ್ದರು ಹೊತ್ತೊಯ್ಯಲು ಅವರೊಂದಾಗಿ
ನಾನವರೆಲ್ಲರ ತಡೆದಿರದಿದ್ದರೆ ದಕ್ಕುತಲಿದ್ದಳೆ ಪಾರ್ಥನಿಗೆ?
ಆದುದರಿಂದಲಿ ಸುಂದರಿ ಅವಳನು ವರಿಸುವ ಹಕ್ಕಿದೆ ಇಂದೆನಗೆ!”

ಭೀಮನ ಮಾತನು ಕೇಳಿದ ಅರ್ಜುನ ಕುದಿದನು ಕನಲುತ ಕೋಪದಲಿ
ಕುಂತಿಯು ಚಿಂತೆಯ ಮಡುವಲಿ ಮುಳುಗುತ ನೊಂದಳು ಮನಸಿನ ತಾಪದಲಿ
ಕೂಡಲೆ ಧರ್ಮನ ಕೇಳಿದಳಲ್ಲಿಯೆ ಸತ್ಯವ ನುಡಿವನು ಅವನೆಂದು
ಧರ್ಮನು ಹೇಳಿದ ಐವರು ಒಟ್ಟಿಗೆ ಕಾಪಾಡಿದ್ದುದು ನಿಜವೆಂದು!
‘ತನಗೂ ಕೃಷ್ಣೆಯ ವರಿಸುವ ಹಕ್ಕಿದೆ’ ಎಂದನು ಅವನೂ ನಸುನಗುತ
ಮನದಲಿ ಧರ್ಮನು ಬಯಸುತಲಿದ್ದನು ಕೃಷ್ಣಸುಂದರಿಯು ತನಗೆನುತ
ನಕುಲನು ನಗುತಲಿ ಹಾಗೆಯೆ ಹೇಳಿದ ಸಹದೇವನು ಸಹ ಹೌದೆಂದ
ಪಾಂಡವರೈವರ ಹೃದಯಗಳನ್ನೂ ಸೆರೆಹಿಡಿದಿರೆ ಕೃಷ್ಣೆಯ ಅಂದ!!

ಹೆಣ್ಣನು ಮಾಯೆಯು ಎನ್ನುವರಲ್ಲವೆ ಬಣ್ಣಿಸಿ ಲೋಕದಿ ತಿಳಿದವರು
ಹೆಣ್ಣಿನ ಮಾಯೆಯ ಬಲೆಯಲಿ ಸಿಲುಕುತ ಎಷ್ಟೋ ಮಂದಿಯು ಅಳಿದವರು
ತನ್ನವರನ್ನೇ ದೂರಮಾಡುವರು ಹೆಣ್ಣು-ಮಣ್ಣುಗಳ ಮೋಹದಲಿ
ಹೆಣ್ಣು-ಮಣ್ಣುಗಳ ಮೋಹಕ್ಕೆ ಸಿಲುಕದ ಅಣ್ಣಗಳಿರುವರೆ ಲೋಕದಲಿ?

ಸೋದರರೆಲ್ಲರ ವಾದವ ಕೇಳಿದ ಕುಂತಿಯ ಮನದಲಿ ಕಳವಳವು
ಸೋದರರೈವರ ಒಗ್ಗಟ್ಟಲ್ಲಿಯೆ ಬಿರುಕಾಗುವುದೆನ್ನುವ ಭಯವು
ಎಂಥ ಸಂದಿಗ್ಧ ಬಂದಿತು ಎನ್ನುತ ಮನದಾಳದಿ ಚಿಂತೆಯು ಮೂಡಿ
ಇಂಥ ಸಂದರ್ಭ ಎಂತು ನಡೆವುದೋ ಎಂದು ಮನದಿ ಮಂಥನ ಮಾಡಿ
ಮುದ್ದಿನ ಸೊಸೆಯನ್ನು ಹತ್ತಿರ ಕರೆಯುತ ಹೇಳಿದಳವಳಿಗೆ ಹಿತವನ್ನು
ಗೆದ್ದು ತಂದಿರುವ ಕಾರಣದಿಂದಲಿ ಮನದಲಿ ಮೂಡಿದ ಭಯವನ್ನು
“ಅಮ್ಮಾ ಕುಲಸತಿ, ಐವರು ವೀರರ ಆಳುವ ಭಾಗ್ಯವು ನಿನಗಿಹುದು
ಪಾಂಡವರೈವರ ವರಿಸಿದೆಯಾದರೆ ಎಲ್ಲ ಸಮಸ್ಯೆಯು ನೀಗುವುದು”
ದ್ರೌಪದಿ ನುಡಿದಳು- “ಅಮ್ಮಾ ಏನಿದು ಒಬ್ಬಳು ಐವರ ವರಿಸುವುದೆ?
ಹೆಣ್ಣಿಗೆ ಇರುವುದೆ ಇಂಥ ಸೌಲಭ್ಯ? ಲೋಕದಲ್ಲಿ ಇದು ಸರಿಯಹುದೆ?”
ಕುಂತಿಯು ನುಡಿದಳು- “ದ್ರುಪದಕುಮಾರಿಯೆ, ತಪ್ಪೇನಿರುವುದು ಇದರಲ್ಲಿ?
ಪುರುಷರು ಹಲವರ ವರಿಸುವುದಿಲ್ಲವೆ? ನಮಗೇತಕೆ ಭೇದವು ಇಲ್ಲಿ?
ನಮಗೂ ಪುರುಷರ ಸರಿಸಮ ನಿಲ್ಲುವ ಹಕ್ಕಿದೆ ಎಂಬುದು ತಿಳಿಸಿಕೊಡು
ಸೋದರರೈವರ ಒಗ್ಗಟ್ಟಿನಲ್ಲಿ ಬಿರುಕು ಮೂಡಿಸದೆ ಉಳಿಸಿಕೊಡು”
ಅತ್ತೆಯ ಮಾತಿಗೆ ಬೆಲೆಯನು ನೀಡಲು ದ್ರೌಪದಿದೇವಿಯು ನಿರ್ಧರಿಸಿ
ಐದು ಮಂದಿಗೂ ಸರದಿಯ ಪ್ರಕಾರ ಹೆಂಡತಿಯಾಗಲು ಸಮ್ಮತಿಸಿ
ಒಪ್ಪಿಗೆಯಿತ್ತಳು ತುಂಬು ಮನಸಿನಲಿ ಉಳಿಸಲು ಅವರಲಿ ಒಗ್ಗಟ್ಟು
ಕ್ರಾಂತಿಯ ಮಾತನ್ನಾಡಿದ ಕುಂತಿಯ ಮಾತಿನಲ್ಲಿ ನಂಬಿಕೆಯಿಟ್ಟು!

ದ್ರೌಪದಿ ಅತ್ತೆಯ ಮಾತಿಗೆ ಒಪ್ಪುತ ಪಾಂಡವರೈವರ ವರಿಸಿದಳು
ಹೊಸ ಬದಲಾವಣೆಯೊಂದಕೆ ತಾನೇ ನಾಂದಿಯಾಗಿ ಸಹಕರಿಸಿದಳು
ಸೋದರರೆಲ್ಲರ ವರಿಸುವ ಪದ್ಧತಿ ಪಾಂಚಾಲರ ಆ ನಾಡಿನಲಿ
ಜಾರಿಯಲಿದ್ದಿತು ಬಹುದಿನದಿಂದಲಿ ಉತ್ತರಭಾಗದ ನೆಲದಲ್ಲಿ

ಪಾಂಚಾಲರ ದೊರೆ ಆ ಪದ್ಧತಿಯನ್ನು ಒಪ್ಪಿದ್ದನು ಆ ಭಾಗದಲಿ
ಆದುದರಿಂದಲೆ ಒಪ್ಪಿದ ತನ್ನಯ ಮಗಳ ವಿವಾಹ ನಿಧಾನದಲಿ!
ಪಾಂಚಾಲದವರದನಾರ್ಯ ಸಂಸ್ಕೃತಿ ಎಂಬ ವಾದ ಕುರುವಂಶದ್ದು
ಸುಧಾರಣೆಯನ್ನು ಒಪ್ಪಲು ಹಿಂದಡಿಯಿಡುವ ಉತ್ತರದ ದೇಶವದು
ತಾವು ಮಾಡಿದ್ದು ಸರಿಯೆಂದೆನ್ನುವ ವಿತಂಡವಾದವು ಅವರದ್ದು
ಇಂತಹ ವಿತಂಡವಾದಕೆ ನಾಡಿನ ಮನಸಿಗೆ ದೊರಕುವುದೇ ಮದ್ದು?
ಅಪ್ಪನು ಹಾಕಿದ ಆಲದ ಮರವನ್ನು ಬಿಟ್ಟು ಬದುಕುವುದು ಗೊತ್ತಿಲ್ಲ
ಆಲದ ಕೊಂಬೆಗೆ ಹಗ್ಗವ ಸುತ್ತಿ ನೇಣು ಬಿಗಿಯುವರು, ಗೊತ್ತಲ್ಲ!

ಆರ್ಯತನವು ಬಲು ಶ್ರೇಷ್ಠವಾದದ್ದು ಎಂಬ ಭಾವನೆಯು ಅವರಲ್ಲಿ
ಆರ್ಯತನ ತೊರೆದು ಬದುಕುವುದೇತಕೆ ಎಂಬ ಮನವು ಇರುವವರಲ್ಲಿ
ಕುಲದ ಶೋಷಣೆಯು ಹೆಣ್ಣಿನ ಶೋಷಣೆ ಎಲ್ಲೆಡೆಯಲ್ಲೂ ಇರುತಿತ್ತು
ಬುದ್ಧಿವಂತಿಕೆಯ ಸೋಗನು ಹಾಕುತ ಅಡ್ಡದಾರಿ ತುಳಿಯುತ್ತಿತ್ತು
ಮಾನವಕುಲದಲಿ ಎರಡೇ ಕುಲಗಳು ಗಂಡು-ಹೆಣ್ಣು ಎನ್ನುವ ಹೆಸರು
ಮಾನವತೆ ತೊರೆದು ದಾನವವತೆ ಮೆರೆದು ತೆಗೆಯುವುದೇತಕೆ ಅವರುಸಿರು?
ಅರ್ಯತನದ ಹೆಸರಲ್ಲಿ ಶೋಷಣೆಗೆ ನಾವು ಮನ್ನಣೆಯ ಕೊಡಬೇಕೆ?
ಮಾನವರೆಲ್ಲರು ಒಂದೇ ಎನ್ನುವ ಭಾವನೆ ಬರಬಾರದು ಏಕೆ?
ಕುರುವಂಶಕ್ಕೂ ಪಾಂಚಾಲರಿಗೂ ಮೊದಲಿನಿಂದಲೂ ಸೆಣಸಿತ್ತು
ಎರಡೂ ನಾಡಿನ ಜನರಲಿ ವೈರವು ಬಹುದಿನದಿಂದಲಿ ಹೆಣೆದಿತ್ತು
ಕುರುಗಳು ಆರ್ಯರು ತಾವೇ ಶ್ರೇಷ್ಠರು ಎನ್ನುವಂಥ ಭ್ರಮೆ ಹಿಡಿದಿತ್ತು
ಪಾಂಚಾಲರು ಅನಾರ್ಯರು ಎಂಬುವ ಭಾವನೆ ಅವರಲಿ ಉಳಿದಿತ್ತು
ಭೀಷ್ಮನು ಕೌರವ ಪಕ್ಷವ ಬೆಳೆಸಿದ ಪಾಂಚಾಲರ ಬಲ ಕುಸಿದಿತ್ತು
ಪಾಂಡವ ವೀರರು ದೊರಕಿದ ನಂತರ ಪಾಂಚಾಲರ ಬಲ ಬೆಳೆದಿತ್ತು
ಲೆಕ್ಕಾಚಾರವ ಹಾಕಿದ ಕುಂತಿಯು ಪಾಂಚಾಲರ ಬಲ ಗಳಿಸಿದಳು
ಪಾಂಚಾಲಿಯನ್ನು ಸೊಸೆಯಾಗಿಸುತಲಿ ಪಾಂಡವ ಬಲವನು ಬೆಳೆಸಿದಳು!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ದಾಹ
Next post ವಚನ ವಿಚಾರ – ಸಾವು?

ಸಣ್ಣ ಕತೆ

  • ಕಲಾವಿದ

    "ನನಗದು ಬೇಕಿಲ್ಲ. ಬೇಕಿಲ್ಲ! ಸುಮ್ಮನೆ ಯಾಕೆ ಗೋಳು ಹುಯ್ಯುತ್ತೀಯಮ್ಮಾ?" "ಹೀಗೇ ಎಷ್ಟು ದಿನ ಮನೆಯಲ್ಲೇ ಕುಳಿತಿರುವೆ, ಮಗು?" "ಇಷ್ಟು ದಿನವಿರಲಿಲ್ಲವೇನಮ್ಮ-ಇನ್ನು ಮೇಲೆಯೂ ಹಾಗೆಯೇ, ಹೊರಗಿನ ಪ್ರಪಂಚಕ್ಕಿಂತ ನನ್ನ… Read more…

  • ಅಮ್ಮ

    ‘ಅಮ್ಮನ್ಗೆ ಯಿಡೀ ರಾತ್ರೆಲ್ಲ ವಾಂತಿ ಭೇದಿ ವುಬ್ಸ ಆಯಾಸ... ಕುತ್ರೂಸಾ... ಬಾಳಾ ಯೆಚ್ಕುಡ್ಮೆಯಾಗಿ ರಾಮ್ಪಾರ್ದ ಡಾಕಿಟ್ರಾತ್ರ ತೋರ್ಸಿದ್ರು ಗುಣಾಗಿಲ್ಲ! ನೀ ಆದಷ್ಟು ಗಡಾನೇ ವೂರ್ಗೆ ಬಾಣ್ಣ...’ ಸೇಕ್ರಿ,… Read more…

  • ಕನಸುಗಳಿಗೆ ದಡಗಳಿರುದಿಲ್ಲ

    ಬೆಳಗ್ಗಿನ ಸ್ನಾನ ಮುಗಿಸಿದ ವೃಂದಾ ತನ್ನ ರೂಮಿಗೆ ಬಂದು ಬಾಗಿಲುಹಾಕಿಕೊಂಡು ಕನ್ನಡಿಯಲ್ಲಿ ತನ್ನ ದೇಹ ಸಿರಿಯನ್ನೊಮ್ಮೆ ನೋಡಿಕೊಂಡಳು. ಯಾಕೋ ಅವಳ ಮೈ - ಮನ ಒಮ್ಮೆ ಪುಲಕಿತವಾಯಿತು.… Read more…

  • ದೇವರ ನಾಡಿನಲಿ

    ೧೯೯೮ ಜೂನ್ ತಿಂಗಳ ಮೊದಲ ವಾರದಲ್ಲಿ ನಾ ದೇವರನಾಡಿನಲಿ, ವಿಭಾಗೀಯ ಸಾರಿಗೆ ಅಧಿಕಾರಿ ಎಂದು, ವಿಭಾಗೀಯ ಕಛೇರಿ ಮಂಗಳೂರು ವಿಭಾಗ ಅಂದರೆ.... ದಕ್ಷಿಣ ಕನ್ನಡ ಜಿಲ್ಲೆಯಲ್ಲಿ... ಹರ್ಷದಿ,… Read more…

  • ಜುಡಾಸ್

    "ಪೀಟರ್" "ಪ್ರಭು" "ಇನ್ನು ಮೂರುದಿನ ಮಾತ್ರ, ಪೀಟರ್. ಅನಂತರ...." ಮಾತು ಅರ್ಧಕ್ಕೆ ನಿಂತಿತು. ಯೇಸುಕ್ರಿಸ್ತ ತನ್ನ ಶಿಷ್ಯರೊಂದಿಗೆ ಕಾಲುನಡಿಗೆಯಲ್ಲಿ ಜೆರೂಸಲೆಂ ನಗರಕ್ಕೆ ನಡೆದು ಬರುತ್ತಿದ್ದ. ಹನ್ನೆರಡುಜನ ಶಿಷ್ಯರೂ… Read more…