ಕೆಂಡದ ಗಿರಿಯ ಮೇಲೊಂದು ಅರಗಿನ ಕಂಭವಿದ್ದಿತ್ತು.
ನೋಡಾ ಅಯ್ಯಾ
ಅರಗಿನ ಕಂಭದ ಮೇಲೊಂದು ಹಂಸೆ ಇದ್ದಿತ್ತು
ಕಂಭ ಬೆಂದಿತ್ತು ಹಂಸೆ ಹಾರಿತ್ತು
ಗುಹೇಶ್ವರಾ
ಅಲ್ಲಮನ ವಚನ. ಈ ವಚನ ಅನೇಕ ವರ್ಷಗಳ ಹಿಂದೆಯೇ, ಅದು ಅರ್ಥವಾಗುವುದಕ್ಕೆ ಮೊದಲೇ, ಮನಸ್ಸಿನಲ್ಲಿ ಮನೆಮಾಡಿಕೊಂಡ ವಚನ, ಅರ್ಥ ಏನೇ ಇರಲಿ, ಸ್ಪಟಿಕ ಸ್ಪಷ್ಟವಾದ ಚಿತ್ರವೊಂದನ್ನು ಇದು ಕಟ್ಟಿಕೊಡುತ್ತದೆ.
ಒಂದು ಕೆಂಡದ ಬೆಟ್ಟ. ಕೆಂಡದ ಬೆಟ್ಟದ ಮೇಲೆ ಅರಗಿನ ಕಂಭ, ಅರಗಿನ ಕಂಭದ ಮೇಲೆ ಒಂದು ಹಂಸ. ಅರಗಿನ ಕಂಭ ಬೆಂದು ಹೋಯಿತು. ಅದರ ಮೇಲೆ ಕೂತಿದ್ದ ಹಂಸ ಹಾರಿಹೋಯಿತು.
ಈ ವಚನಕ್ಕೆ ಸಾಂಪ್ರದಾಯಿಕವಾಗಿ ಕೆಂಡದ ಗಿರಿ ಎಂದರೆ ಶಿವನೇ ನಾನು ಎಂಬ ಭಾವ, ಅರಗಿನ ಕಂಭ ಎಂದರೆ ಶರಣನ ಭಾವ, ಹಂಸೆ ಎಂದರೆ ಪರಮಹಂಸ ತತ್ವ ಇತ್ಯಾದಿಯಾಗಿ ವಿವರಿಸುವುದುಂಟು.
ಅದನ್ನೆಲ್ಲ ಬಿಟ್ಟರೂ ಈ ವಚನ ಸಾವನ್ನು ಕುರಿತು ಹೇಳುತ್ತಿದೆಯೋ ಅಥವಾ ಸಾವನ್ನು ವಿವರಿಸುವ ನೆಪದಲ್ಲಿ ಬದುಕಿನ ಚಿತ್ರಕೊಡುತ್ತಿದೆಯೋ ನೋಡಿ.
ಹಂಸವನ್ನು ಜೀವವೆಂದೋ ಆತ್ಮವೆಂದೋ ಒಪ್ಪಿಕೊಳ್ಳೋಣ, ದೇಹವೇ ಅರಗಿನ ಕಂಭ, ಇಡೀ ಬದುಕೇ ಕೆಂಡದ ಬೆಟ್ಟ, ಕೆಂಡದ ಬೆಟ್ಟವಾದ್ದರಿಂದ ಪಕ್ವವಾದರೂ, ಆಗದಿದ್ದರೂ; ಜ್ಞಾನಿಯಾದರೂ ಆಗದಿದ್ದರೂ, ಕಂಭ ಕರಗಿಹೋಗುವುದೇ ನಿಶ್ಚಯ. ಹಾಗೆ ದೇಹ ಕರಗಿದಮೇಲೆ ಜೀವ ಎಲ್ಲಿದ್ದೀತು, ಹಾರಿ ಹೋಯಿತು.
ಬದುಕಿನ ಸ್ಥಿತಿಯ, ದೇಹ ಇಲ್ಲವಾಗುವ ಅನಿವಾರ್ಯತೆಯ, ಸಾವಿನ ಅಪರಿಹಾರ್ಯ ಸ್ಥಿತಿಯ ಮಂಡನೆ ಇದು. ಮಾತಿನಲ್ಲಿ ನಾವು ಹೇಳುವಂತೆ `ಸಾವು ಬರುವುದು’ ಅಲ್ಲ, ಜೀವ `ಹೋಗುವುದು’ ಇಲ್ಲಿನ ಚಿತ್ರ. ಅದು ಉರಿದ ಕಂಬದ ಮೇಲಿನಿಂದ ಹಂಸೆ ಹಾರಿದಷ್ಟೇ ಸಹಜ, ಅನಿವಾರ್ಯ!
*****