ನಿನ್ನ ಶಬ್ದ ಜಾಲದಲ್ಲಿ ಸಿಲುಕಿರುವೆ
ನಾ, ಧೋ ಎಂಬ ಸುರಿವ ಮಳೆಗೆ
ಮುಖ ಒಡ್ಡಿ ಈ ಬಯಲಲಿ ಹಾಗೆ ಸುಮ್ಮನೆ
ಅಲೆಯುತ್ತಿರುವೆ.
ಚಳಿ ನನ್ನ ನರನಾಡಿಗಳಲಿ ಇಳಿದು
ರಕ್ತ ಹೆಪ್ಪುಗಟ್ಟಿದ ಈ ಅಲೆದಾಟ ಮತ್ತು
ನಭದಲ್ಲಿ ಹಾರುತ್ತಿದೆ ತಲೆಯತ್ತಿ ಒಂಟಿ ಹಕ್ಕಿ,
ನಡು ನೀರಿನ ಸೆಳೆತ ಕಾಲುಗಳ ಹಿಡಿದು
ಅಲ್ಲಾಡಿಸಿವೆ ಮತ್ತೆ ಜೋಲಿ ತಪ್ಪಿದ ಹೆಜ್ಜೆಗಳು
ವಿಲವಿಲ ಒದ್ದಾಡುತ್ತ ಹನಿಯುವ ಕಣ್ಣೀರು.
ತಿಳಿಯುತ್ತಿಲ್ಲ ಯಾವ ಪ್ರೀತಿಯೂ ಈ
ಎದೆಯಾಳಕ್ಕೆ ಇಳಿದು ತಂಪು ಹಾಯಿಸಿದ ಪರಿ
ಹರಿಯುತ್ತಿದೆ ಕಿರುತೊರೆ ಎದೆ ಬಿರಿಯುವ ಹಾಡು.
ಎಂದಿಗೂ ಅರಿವಿಗೆ ಬರದು ನೀ ನನ್ನ
ಮನೆಯ ಕದ ತಟ್ಟಿದ ಮಂಜಾವು ಮತ್ತೆ
ಸರಳುಗಳಾಚೆಯ ನಿನ್ನ ಬೆಳಕಿನ ಕಿರಣಗಳು.
ನಾನೇನು ಹಾಡುತ್ತಿಲ್ಲ ಪ್ರಲಾಪದ ರಾಗಗಳ,
ನಿನ್ನ ಹಚ್ಚಿಕೊಂಡಿರುವ ಪ್ರೀತಿ ಮತ್ತೆ ಎಂದೂ
ನಿನ್ನ ಅರಿವಿಗೆ ಬಾರದ ಅರಿವು ನಾನೀಗ ಮೌನಿ.
*****