ಹಸಿ ಹಸೀ ಇಪ್ಪತ್ತರಲ್ಲಿ
ಸಾವು ಬಲು ದೂರ
ಬದುಕು ಹಗಲಿನ ಬೆಳಕು
ಜೀವ ಜೇನಿನ ಹಾಗೆ
ಹರಿದಷ್ಟೂ ಬತ್ತದ ನದಿಯ
ಓಟ ಜೀವನೋಲ್ಲಾಸ
ಗರಿಗಟ್ಟಿ ಕುಣಿಯುವ ಆಸೆ
ಸೀಮೆ ಆಚೆ ಆಕಾಶ
ನಡುನೆತ್ತಿ ಮೇಲೆ ಕೈ ಕತ್ತಿ
ಝಳಪಿಸುವ ಮಧ್ಯಾಹ್ನ ಸೂರ್ಯ
ಶತ್ರು ಕೋಟಿಯ ಕೋಟೆ ಒಡೆದ ಅಭಿಮನ್ಯು
ಕರಗದು ಕರಿ ಕರಿ ಕೊರಗದು
ಬಾನೊಡಲ ಮೀರುವ ಕಾರ್ಯ
ಧಿಕ್ಕರಿಸಿ ಬದುಕುವ ಹೇಸಿ
ಹೇಡಿಯಾಗದು ಧೈರ್ಯ
ಬಿಸಿ ಬಿಸೀ ಇಪ್ಪತ್ತರಲ್ಲಿ
ಸಾವು ಬಲು ಕ್ರೂರ
ಸಾವು ನಾಳೆಯ ತಾವು
ಸತ್ತರೂ ಬದುಕುವ ಎಂಬ
ಚಿರಂಜೀವಿ ಚೈತನ್ಯ
ಇಂದು ಬದುಕಿಗಾಧಾರ
*****