ಕ್ರೀಡೆ : ಸಂಸ್ಕೃತಿ ಮತ್ತು ತಾತ್ವಿಕತೆಯ ಒಳಗೆ

ಕ್ರೀಡೆ : ಸಂಸ್ಕೃತಿ ಮತ್ತು ತಾತ್ವಿಕತೆಯ ಒಳಗೆ

ಕ್ರೀಡಾ ಭೂಮಿಕೆ ಮತ್ತು ಬಯಲು ಆಲಯಗಳೆರಡೂ ಒಂದೇ. ಎರಡೂ ಪವಿತ್ರವಾದುವೇ. ಕಾರಣ, ಇಲ್ಲಿ ದೈಹಿಕವಾಗಿ ಮತ್ತು ಮಾನಸಿಕವಾಗಿ ಕ್ರಿಯಾಶೀಲಗೊಳ್ಳುವ ಮನಸ್ಸು ಎಲ್ಲಾ ಜಾತಿ, ಮತ, ವರ್ಗ, ಪಂಗಡ, ಭಾಷೆ, ರಾಷ್ಟ್ರೀಯತೆ ಮೊದಲಾದ ಎಲ್ಲಾ ಗೋಡೆಗಳನ್ನು ಮೀರಿ ನಿಂತಿರುತ್ತದೆ. ಅಂತಹ ಸರ್ವ ಸಮಾನತೆಯ ತಾಣ ಭೂಮಿಯ ಮೇಲೆ ಅಪರೂಪ. ಭಾರತದ ಸ್ಮಶಾನಗಳೂ ಇದರ ವ್ಯಾಪ್ತಿಗೆ ಬರುವುದಿಲ್ಲ. ಅಂತಹ ವಿರಳ ತಾಣಗಳಲ್ಲಿ ಆಟದ ಮೈದಾನವೂ ಒಂದು.

ಸಾಮಾನ್ಯವಾಗಿ ಕ್ರೀಡೆ ಮತ್ತು ದುಶ್ಚಟಗಳೆರಡೂ ಪರಸ್ಪರ ವಿರುದ್ಧ ದಿಕ್ಕುಗಳಲ್ಲಿ ನಿಲ್ಲುವ ಸಾಂಸ್ಕೃತಿಕ ಘಟಕಗಳು. ದುಶ್ಚಟ ಎಂದಾಗ ಅದು ಮಾನಸಿಕವಾದದ್ದಾಗಿರಬಹುದು ಅಥವಾ ದೈಹಿಕವಾದದ್ದೂ ಆಗಿರಬಹುದು. ಒಟ್ಟಾರೆ ಅಂತಹ ಚಟಗಳಿಂದ ದೂರ ಇರಬೇಕೆಂಬ ಪ್ರಜ್ಞೆ ಕ್ರೀಡಾ ಪಟುವಿಗೆ ಅಪ್ರಜ್ಞೆಪೂರ್ವಕವಾಗಿಯೂ ಇರುತ್ತದೆ. ಆದ್ದರಿಂದಲೇ ಇಂತಹ ಕ್ರಿಯೆಗಳಲ್ಲಿ ತೊಡಗುವ ಪಟು ಮನಷ್ಯಪರವಾಗಿ ಕ್ರಿಯಾತ್ಮಕವಾಗಿ ಆಲೋಚಿಸುತ್ತಾನೆ. ಹೀಗೆ ಆಲೋಚಿಸುತ್ತಾ ತಾನೇ ಮನುಷ್ಯನಾಗುತ್ತಾನೆ. ಇತರರಿಗೂ ಮಾದರಿಯಾಗುತ್ತಾನೆ. ತೀರಾ ಆದರ್ಶ ವ್ಯಕ್ತಿಯಾಗಲು ಎಲ್ಲರಿಗೂ ಸಾಧ್ಯವಾಗದಿದ್ದರೂ ಕಡೆಯ ಪಕ್ಷ ಸಮಾಜ ಕಂಟಕರಂತೂ ಆಗಲಾರರು ಎಂಬುದು ಕ್ರೀಡೆಗಿರುವ ಒಂದು ಮುಖ್ಯ ಆಯಾಮ ಮತ್ತು ಮಹತ್ವ.

ಇಂತಹ ಕ್ರೀಡೆ ಮತ್ತು ಬೌದ್ಧಿಕತೆಗೆ ನಿಕಟ ಸಂಬಂಧವಿದೆ. ಇದಕ್ಕೆ ಹಿನ್ನೆಲೆಯಾಗಿ ದೇಹ ಮತ್ತು ಮನಸ್ಸುಗಳ ಅಂತರ್ ಸಂಬಂಧವನ್ನು ಗುರುತಿಸಿಕೊಳ್ಳಬೇಕಿದೆ. ಮನಸ್ಸಿನ ಸ್ಥಿತಿ ದೇಹದ ಮೇಲೂ ದೇಹದ ಅವಸ್ಥೆ ಮನಸ್ಸಿನ ಮೇಲೂ ಪರಸ್ಪರ ನಿಯತ ಪರಿಣಾಮವನ್ನು ಬೀರುತ್ತಿರುತ್ತದೆ. ಆದ್ದರಿಂದಲೇ ಹೆಚ್ಚು ಚಲನಶೀಲವಾಗಿ ಆಲೋಚಿಸುವ ಮನಸ್ಸಿಗೆ ಆರೋಗ್ಯಪೂರ್ಣ ಮತ್ತು ಕ್ರಿಯಾತ್ಮಕವಾದ ದೇಹದ ಅವಶ್ಯಕತೆ ಇರುತ್ತದೆ. ಹೀಗೆ ಅಂತರಂಗ ಮತ್ತು ಬಹಿರಂಗಗಳೊಂದಾದ ಸ್ಥಿತಿ ಯಾವುದೇ ಕ್ರಿಯೆಯ ವಿನ್ಯಾಸವನ್ನು ನಿರ್ಧರಿಸುತ್ತದೆ. ಆದ್ದರಿಂದ ವೈಯಕ್ತಿಕ ಹಾಗೂ ಸಾಮುದಾಯಿಕವಾದ ನೆಲೆಗೆ ಕೊಡುಗೆಯಾಗುವ ವ್ಯಕ್ತಿ ಈ ಎರಡನ್ನೂ ಕಾಪಾಡಿಕೊಂಡಿರಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಮನುಷ್ಯ ಮತ್ತು ಮನುಷ್ಯರಾದವರಿಗೆ ಕ್ರೀಡೆಯೆಂಬುದು ಬದುಕಿನ ಮೂಲಭೂತ ಅಗತ್ಯಗಳಲ್ಲಿ ಒಂದು ಎನ್ನಿಸುತ್ತದೆ.

ಹೀಗೆ ದೇಹ ಮತ್ತು ಮನಸ್ಸುಗಳ ಸ್ವಾಸ್ಥ್ಯವನ್ನು ವ್ಯಷ್ಟಿ ಮತ್ತು ಸಮಷ್ಟಿ: ಎರಡೂ ನೆಲೆಗಳಲ್ಲಿ ಗಳಿಸಿಕೊಡುವ ಕ್ರೀಡೆಗಳು ತಮ್ಮ ಪಟುಗಳ ಮೂಲಕ ಆರೋಗ್ಯಕರ ಸಮಾಜದ ನಿರ್ಮಾಣದಲ್ಲಿ ಮುಖ್ಯ ಪಾತ್ರವನ್ನು ವಹಿಸುತ್ತದೆ. ಇದು ಬಹುತೇಕ ಸತ್ಯ.

ಸೋಲು ಮತ್ತು ಗೆಲುವುಗಳು ಯಾವುದೇ ಕ್ರೀಡೆಯ ಎರಡು ಮುಖ್ಯ ಧಾತುಗಳು. ಇಂತಹ ಕ್ರೀಡೆಗಳು ನಿಯಮಗಳಿಂದ ಬಾಹಿರವಲ್ಲ. ಆದ್ದರಿಂದ ನಿಯಮಗಳನ್ನು ಅಳವಡಿಸಿಕೊಂಡ ವ್ಯಕ್ತಿ ಸದರಿ ಕ್ರೀಡಾ ಭೂಮಿಕೆಯಲ್ಲಿ ಅಭಿನಯಕಾರನೂ ಆಗುತ್ತಾನೆ. ಇಂತಹ ನಿಯಮಗಳ ತಿಳುವಳಿಕೆ ಆತನಿಗೆ ಪ್ರಜ್ಞೆಪೂರ್ವಕ ಅಥವಾ ಅಪ್ರಜ್ಞೆಪೂರ್ವಕವಾದ ನೆಲೆಯಲ್ಲಿ ಲಭಿಸಿದ್ದಿರಬಹುದು. ಅಂತೂ ಆ ನಿಯಮಗಳ ಬಗೆಗೆ ಆತನಿಗೆ ಸಾಮಾನ್ಯ ಜ್ಞೆನವಂತೂ ಇದ್ದೇ ಇರುತ್ತದೆ. ಇದರ ಚೌಕಟ್ಟಿನಲ್ಲಿ ಅಭಿನಯಕ್ಕೀಡಾಗುವ ಮನಸ್ಸುಗಳು ಸಾಮಾನ್ಯವಾಗಿ ಅಂತಹ ಭೂಮಿಕೆಗಳಿಂದ ಹೊರಗೆ ನಡೆಯುವ ಅಭಿನಯಗಳನ್ನು ಸಹ್ಯವಾಗಿ ಕಾಣುವುದಿಲ್ಲ. ಆದ್ದರಿಂದಲೇ ಯಾವುದೇ ಸಂಸ್ಕೃತಿಯಲ್ಲಿ ಕ್ರೀಡೆಗೆ ಮಹತ್ವದ ಸ್ಥಾನ ಇರುವುದು. ಇದು ಈ ಕಾಲದ ಮಾತು ಮಾತ್ರವಲ್ಲ; ಎಲ್ಲಾ ಕಾಲದ್ದೂ ಆಗಿದೆ. ಈ ತಾತ್ವಿಕ ನೆಲೆಯಲ್ಲಿ ಕ್ರೀಡಾ ಭೂಮಿಕೆಯಲ್ಲಿ ಒದಗಿದ ಸೋಲು ಸಹ ಆರೋಗ್ಯಕರ ಸಮಾಜದ ಸಂದರ್ಭದಲ್ಲಿ ಈ ವ್ಯಕ್ತಿಯ ಮೂಲಕ ಸಮಾಜಕ್ಕೆ ಒದಗಿದ ಗೆಲುವೇ ಆಗಿರುತ್ತದೆ.

ಇಂತಹ ಕ್ರೀಡೆಯ ಭಾಗವಾದ ಆಟಗಳ ಸಂಖ್ಯೆ ಅಸಂಖ್ಯ. ಇವು ಲಿಂಗಬೇಧ ಮತ್ತು ವಯೋಮಾನ ಬೇಧಗಳನ್ನು ಆಧರಿಸಿವೆ. ಆದರೂ ಹಲವು ಆಟಗಳು ಈ ಎಲ್ಲಕ್ಕೂ ಅತೀತವಾಗಿ ತಮ್ಮ ಅಸ್ತಿತ್ವವನ್ನು ಉಳಿಸಿಕೊಂಡಿವೆ. ಉದಾಹರಣೆಗೆ ಕುಂಟೋ ಬಿಲ್ಲೆಯನ್ನು ಹೆಣ್ಣುಮಕ್ಕಳು ಮಾತ್ರ ಆಡಿದರೆ, ಮರಕೋತಿ ಆಟವನ್ನು ಪುರುಷರು ಮಾತ್ರ ಆಡುತ್ತಾರೆ. ಅಂತೆಯೇ ಬುಗುರಿಯನ್ನು ತರುಣರು ಮಾತ್ರ ಆಡಿದರೆ, ಕ್ರಿಕೆಟ್ಟನ್ನು ಎಲ್ಲಾ ವಯೋಮಾನದವರು ಆಡುತ್ತಾರೆ. ಇಲ್ಲಿ ಮಧ್ಯೆ ವಯಸ್ಸನ್ನು ಮೀರಿದವರು ಬಹುತೇಕ ಎಲ್ಲಾ ಆಟಗಳನ್ನು ಬಿಟ್ಟಿರುತ್ತಾರೆ ಎಂಬುದು ಸಹ ಗಮನಾರ್ಹ. ಆದ್ದರಿಂದಲೇ ಅವರ ಕಾಳಜಿಗಳು ಗಂಭಿರ ಸ್ವರೂಪದ್ದಾಗಿದ್ದು, ಭಾರವೂ ಆಗಿರುತ್ತವೆ. ಅವುಗಳ ಕಾರಣದಿಂದ ತಾವೂ ಭಾರವಾಗಿ ಬಿಡುತ್ತಾರೆ. ಹೀಗೆ ದೇಹ ಮತ್ತು ಮನಸ್ಸು: ಎರಡೂ ಒಂದಾದ ಆರೋಗ್ಯ ಇವರಲ್ಲಿ ಬೇರೆಯದೇ ಆದ ವಿನ್ಯಾಸವನ್ನು ಪಡೆದುಬಿಡುತ್ತದೆ.

ಹೀಗೆ ಇಷ್ಟೊಂದು ಸಾಂಸ್ಕೃತಿಕ ಅಗತ್ಯವನ್ನು ಪಡೆದ ಕ್ರೀಡೆಗಳ ಅವಿಷ್ಕಾರ ಸಂಸ್ಕೃತಿ ಕಥನದಲ್ಲಿ ಯಾವಾಗ ಆಯಿತು ಎಂಬ ಕುತೂಹಲದಾಯಕ ಪ್ರಶ್ನೆಯು ಸಂಸ್ಕೃತಿತಜ್ಞರ ಚಿಂತನೆಗಳನ್ನು ಆಧರಿಸಿ ಉತ್ತರವಾಗಲು ಪ್ರಯತ್ನಿಸುತ್ತದೆ. ಅದಕ್ಕಾಗಿ ಮುಂದಿನ ಸಾಲುಗಳನ್ನು ಬರೆಸುತ್ತದೆ.

ಕ್ರೀಡೆಗಳ ಸೃಷ್ಟಿ ಮನುಷ್ಯನ ಆದಿಮ ಕಾಲದ್ದು. ಭೌತಿಕ ಮಾನವ ವಿಜ್ಞೆನಿಗಳು ಅಭಿಪ್ರಾಯಪಡುವಂತೆ ಐದು ಲಕ್ಷ ವರ್ಷಗಳಿಂದ ಮನುಷ್ಯನ ಅಸ್ತಿತ್ವ ಇದೆ. ಈ ಮೊದಲ ಕಾಲದಲ್ಲಿ ಪ್ರಾಣಿ ಸದೃಶವಾದ ಜೀವನವನ್ನು ನಡೆಸುತ್ತಿದ್ದ ಮಾನವನು ಆನಂತರದಲ್ಲಿ ಕ್ರಮೇಣ ತನ್ನ ದೇಹದ ಎಲ್ಲಾ ಅಂಗಗಳ ಸಾಧ್ಯತೆಗಳನ್ನು ಸೂರೆಗೊಳ್ಳತೊಡಗಿದ. ಅದರಲ್ಲಿ ತನ್ನ ಬಾಯಿಯ ಶಬ್ದ ಶಕ್ತಿಯಿಂದ ಭಾಷೆಯನ್ನು ಅವಿಷ್ಕಾರಗೊಳಿಸಿಕೊಂಡಂತೆ ಕಣ್ಣು, ಕಿವಿ, ಮೂಗು, ಕೈ, ಅದರ ಬೆರಳುಗಳು, ಕಾಲು, ಮೈ ಬಲ, ಸ್ಮರಣ ಶಕ್ತಿ ಮುಂತಾದ ದೇಹದ ಒಳ ಮತ್ತು ಹೊರ ಅಂಗಗಳಿಂದ ಪ್ರಾಣಿಗಳಿಗಿಂತ ಭಿನ್ನವಾದ ಜೀವನ ಶೈಲಿಯನ್ನು ರೂಪಿಸಿಕೊಳ್ಳತೊಡಗಿದ. ಇದನ್ನು ನಾವು ಸಂಸ್ಕೃತಿ ಎಂದು ಕರೆಯುತ್ತೇವೆ.

ಹೀಗೆ ಪ್ರಾಣಿಗಳಿಗೆ ದೂರವಾದ ಸಂಸ್ಕೃತಿಯ ಅವಿಷ್ಕಾರಿ ಮನುಷ್ಯ. ಈತ ಸಂಸ್ಕೃತಿಯ ಭಾಗವಾಗಿ ಕ್ರೀಡೆಗಳನ್ನು ಕಂಡು ಕೊಂಡಿದ್ದಾನೆ. ಇಂತಹ ಕಂಡುಕೊಳ್ಳುವ ಕ್ರಿಯೆ ಮತ್ತು ಅದರ ಬೆಳವಣಿಗೆಯು ಸಂಸ್ಕೃತಿ ವಿಕಾಸದಲ್ಲಿ ಮುಖ್ಯ ಘಟ್ಟ ಎನ್ನಿಸುತ್ತದೆ.

ಈ ಆದಿಮ ಕಾಲಘಟ್ಟದ ಮನುಷ್ಯ ತನ್ನ ಆಹಾರದ ಸಂಪಾದನೆಗಾಗಿ ಬೇಟೆಯನ್ನು ಆಶ್ರಯಿಸಿದ್ದನು. ಇದು ಪ್ರಾಣಿ ಸದೃಶವಾದ ವಿಧಾನವಾಗಿತ್ತು. ತರುವಾಯ ದೇಹದ ವಿವಿಧ ಅಂಗಗಳ ಸಾಧ್ಯತೆಗಳ ಮೂಲಕವಾಗಿ ಸುಧಾರಿತ ಬೇಟೆ ಆವಿಷ್ಕಾರಗೊಳ್ಳತೊಡಗಿತು. ಇಲ್ಲಿ ಶಿಲಾ ಮತ್ತು ಕಟ್ಟಿಗೆಯ ಆಯುಧಗಳು ಬಳಕೆಯಾಗಿವೆ. ಈ ಹಂತದಲ್ಲಿ ಮನುಷ್ಯನಿಗೆ ಆಹಾರದ ಸಂಪಾದನೆಯೇ ಜೀವನದ ಏಕೈಕ ಗುರಿಯಾಗಿ ಇದ್ದುದರಿಂದ ಅಲೆಮಾರಿತನವೇ ಜೀವನದ ಮುಖ್ಯ ಲಕ್ಷಣವೂ ಆಗಿತ್ತು. ಈ ಹಂತವನ್ನು ದಾಟಿದ ಮನುಷ್ಯ ತೋಟಗಾರಿಕೆಯನ್ನು ಕಂಡುಕೊಂಡನು. ಇದರ ನಂತರದಲ್ಲಿ ವ್ಯವಸಾಯವು ರೂಪುತಾಳಿತು. ಆಗ ಮನುಷ್ಯ ಒಂದೆಡೆ ನಿಲ್ಲಬೇಕಾದ್ದರಿಂದ ಅಲೆಮಾರಿ ಜೀವನವು ತಪ್ಪಿ ಹೋಯಿತು. ಇಂತಹ ಕಸುಬು ವ್ಯಷ್ಟಿಗಿಂತ ಸಮಷ್ಟಿ ರೂಪದ ಕೆಲಸವನ್ನು ಅಪೇಕ್ಷಿಸಿದ್ದರಿಂದ ಮನುಷ್ಯನ ಸಾಂಘಿಕ ಜೀವನವು ಮೊದಲಾಯಿತು. ಭೂಮಿಯೊಡನೆ ಶ್ರಮ ಸೇರಿದ್ದರಿಂದ ಅಲ್ಲಿ ಖಾಸಗಿತನದ ಪ್ರಶ್ನೆ ಉದ್ಭವಿಸಿತು. ಆಗ ಮನುಷ್ಯ ಸಂಬಂಧಗಳು ಐಡೆಂಟಿಟಿಗೆ ಈಡಾಗಿ ಸಂಸ್ಕೃತಿಯಲ್ಲಿ ಗಮನಾರ್ಹವಾದ ಪಲ್ಲಟಗಳು ತಲೆದೋರಿದವು. ಮನುಷ್ಯನಿಗೆ ಬಿಡುವು ಸಿಕ್ಕಿತು. ಕೃಷಿಯು ಪ್ರಾಣಿಬೇಟೆಗಿಂತ ಸುಲಭವೂ ಸರಳವೂ ಲಾಭದಾಯಕವೂ ಆದುದರಿಂದ ಮನುಷ್ಯ ಜೀವನದಲ್ಲಿ ನೆಮ್ಮದಿ ನೆಲೆಸಿತು. ಆಗ ಮನುಷ್ಯನಿಗೆ ತನ್ನ ಬಿಡುವಿನ ವೇಳೆಯನ್ನು ಕಳೆಯುವುದು ಕಷ್ಟಸಾಧ್ಯವಾಗಿ ಕಂಡಿದ್ದರಿಂದ ಅಲ್ಲಿ ಮನರಂಜನೆಯ ಪ್ರಶ್ನೆ ಉದ್ಭವಿಸಿತು. ಆಗ ಸಂಸ್ಕೃತಿ ಮೂಲವಾದ ಅನೇಕ ಕ್ರಿಯೆಗಳು ಕಲೆಗಳಾಗಿ ಪುನರ್ ಪ್ರತಿಷ್ಠಾಪನೆಗೀಡಾದವು. ಇದೇ ನಿಟ್ಟಿನಲ್ಲಿ ಅದುವರೆಗೂ ಬದುಕಿನಲ್ಲಿ ಅನಿವಾರ್ಯವಾಗಿ ಅಸ್ತಿತ್ವ ಪಡೆದಿದ್ದ ಓಟ, ಜಿಗಿತ, ಈಜು ಮೊದಲಾದವು ಮನರಂಜನೆಯ ಸಾಧನಗಳಾಗಿ ಪರಿವರ್ತನೆಗೊಂಡವು. ಸ್ಪರ್ಧೆಯ ರೂಪವನ್ನು ತಾಳಿದವು. ಬಿಡುವಿನ ವೇಳೆಯಲ್ಲಿ ಇವು ಮನಸ್ಸು ಮತ್ತು ದೇಹಗಳಿಗೆ ಉಲ್ಲಾಸವನ್ನು ಕೊಡುವ ಮುಖ್ಯ ಘಟಕಗಳಾಗಿ ರೂಪುಗೊಂಡವು.

ಹೀಗೆ ಸಂಸ್ಕೃತಿ ವಿಕಾಸದ ಆದಿಮ ಘಟ್ಟದಲ್ಲಿ ಈ ಬಗೆಯಾಗಿ ಕಾಣಿಸಿಕೊಂಡ ಕ್ರೀಡೆಗಳು ಜಗತ್ತಿನ ಯಾವ ಭಾಗದಲ್ಲಿ ಮೊದಲು ಕಾಣಿಸಿಕೊಂಡವು ಎಂಬುದು ದೊಡ್ಡ ಪ್ರಶ್ನೆ. ಇದಕ್ಕೆ ಅನೇಕ ಸಾಂಸ್ಕೃತಿಕ ಮಾನವಶಾಸ್ತ್ರಜ್ಞರು ಉತ್ತರಿಸಲು ಯತ್ನಿಸಿದ್ದಾರೆ. ಅವರಲ್ಲಿ ಬಹುಪಾಲು ಮಂದಿ ಅಭಿಪ್ರಾಯಪಡುವಂತೆ ಇಂತಹ ಕ್ರೀಡೆಗಳು ಯಾವುದೋ ಒಂದು ಕಾಲದಲ್ಲಿ ಯಾವುದೋ ಒಂದು ಭೂ ಭಾಗದಲ್ಲಿ ಮೊದಲು ಕಾಣಿಸಿಕೊಂಡು, ಆನಂತರದಲ್ಲಿ ಒಟ್ಟು ಪ್ರಪಂಚಕ್ಕೆ ವಿಸ್ತರಿಸಿದ್ದಲ್ಲ. ಅದರ ಬದಲಿಗೆ ಇವು ಪ್ರಪಂಚದ ಬೇರೆ ಬೇರೆ ಪ್ರದೇಶಗಳಲ್ಲಿ ಪ್ರತ್ಯೇಕವಾಗಿಯೇ ಅಸ್ತಿತ್ವಕ್ಕೆ ಬಂದು, ಆನಂತರದಲ್ಲಿ ಪ್ರಾದೇಶಿಕವಾಗಿ ಪ್ರಸರಣಗೊಂಡಿವೆ. ಆಧುನಿಕ ಸಂದರ್ಭದ ಹೊತ್ತಿಗೆ ಇವುಗಳಲ್ಲಿ ಕೆಲವು ಜಾಗತಿಕ ಮಟ್ಟದಲ್ಲಿ ಬೆಳೆದು ಸಮಾನ ನಿಯಮಗಳನ್ನು ಹೇರಿಕೊಂಡಿವೆ. ಉದಾಹರಣೆಗೆ ಓಟದ ಸ್ಪರ್ಧೆ. ಇದು ಯಾವುದೋ ಒಂದು ದೇಶದಲ್ಲಿ ಹುಟ್ಟಿ ಅನಂತರದಲ್ಲಿ ಇತರೆ ದೇಶಗಳಿಗೆ ಹಬ್ಬಿದ್ದಲ್ಲ. ಇದು ವಿವಿಧ ಪ್ರತ್ಯೇಕ ಭೂಭಾಗಗಳಲ್ಲಿ ಸ್ವತಂತ್ರವಾಗಿಯೇ ಮೈ ತಳೆದು ವಿಕಾಸಗೊಂಡಿದೆ ಎಂದು ಅಭಿಪ್ರಾಯ ಪಡುತ್ತಾರೆ.

ಹೀಗೆ ಕೆಲವು ಸಮಾನ ನಿಯಮಗಳನ್ನು ಇರಿಸಿಕೊಂಡ ಕ್ರೀಡೆಗಳು ಪ್ರಪಂಚದ ಬೇರೆ ಬೇರೆ ಪ್ರದೇಶಗಳಲ್ಲಿ ಪ್ರತ್ಯೇಕವಾಗಿ ಅಸ್ತಿತ್ವಕ್ಕೆ ಬಂದು ವಿಕಸನ ಮತ್ತು ಪ್ರಸರಣಗೊಂಡಿರುವುದಕ್ಕೆ ಕಾರಣಗಳೇನು? ಎಂಬ ಪ್ರಶ್ನೆ ಇಲ್ಲಿ ಮೂಡುತ್ತದೆ. ಅದಕ್ಕೆ ಸಾಂಸ್ಕೃತಿಕ ಮಾನವ ವಿಜ್ಞೆನಿ ಮಾರ್ಗ್‌ನ್ ಅವರು ಮಾನಸಿಕ ಏಕತೆಯ ತತ್ವ(theory of phsichical Units)ವನ್ನು ಉತ್ತರವನ್ನಾಗಿಸುತ್ತಾರೆ. ಅದರ ತಿರುಳೆಂದರೆ, ಮಾನವ ಯಾವುದೇ ಭೂ ಭಾಗದಲ್ಲಿದ್ದರೂ ತನ್ನ ಭೌತಿಕತೆಯ (ಸಮಾನ ದೈಹಿಕ ರಚನೆಯ) ಕಾರಣದಿಂದಾಗಿ ಸಮಾನ ಮನಸ್ಸನ್ನು ಹೊಂದಿರುತ್ತಾನೆ. ಆದ್ದರಿಂದ ಸಮಾನ ಸಮಸ್ಯೆಗಳನ್ನು ಎದುರಿಸುತ್ತಾನೆ. ಅದಕ್ಕಾಗಿ ಸಮಾನ ಪರಿಹಾರ ಶೋಧಗಳಲ್ಲಿ ತೊಡಗುತ್ತಾನೆ. ಅದಕ್ಕಾಗಿಯೇ ಜಾಗತಿಕಮಟ್ಟದಲ್ಲಿ ಹಲವು ಸಾಂಸ್ಕೃತಿಕ ಘಟಕಗಳು ಪ್ರತ್ಯೇಕ ಹಾಗೂ ಸಮಾನ ಲಕ್ಷಣಗಳನ್ನುಳ್ಳದ್ದಾಗಿ ಮನುಷ್ಯನಿಂದ ರೂಪುತಳೆದಿರುವುದು. ಉದಾಹರಣೆಗೆ ವ್ಯವಸಾಯ, ಧರ್ಮ, ಭಾಷೆ ಇತ್ಯಾದಿ. ಅದರಲ್ಲೊಂದು ಕ್ರೀಡೆ.

ಹೀಗೆ ಸಾರ್ವಕಾಲಿಕ ಹಾಗೂ ಸಾರ್ವತ್ರಿಕವಾದ ಸಂಸ್ಕೃತಿ ಸಂದರ್ಭದಲ್ಲಿ ವ್ಯಾಪಕವಾಗಿ ಕಾಣಿಸಿಕೊಳ್ಳುವ ಕ್ರೀಡೆಗಳನ್ನು ಸಂಸ್ಕೃತಿ ತಜ್ಞರು ಪ್ರಮುಖವಾಗಿ ಮೂರು ವಿಭಾಗಗಳಲ್ಲಿ ವರ್ಗೀಕರಿಸುತ್ತಾರೆ.
೧. ಪ್ರಾಚೀನ ಕ್ರೀಡೆಗಳು
೨. ಜಾನಪದ ಕ್ರೀಡೆಗಳು
೩. ಆಧುನಿಕ ಕ್ರೀಡೆಗಳು
ಇದು ಅತ್ಯಂತ ಸ್ಥೂಲವಾದ ವರ್ಗೀಕರಣ. ಕಾರಣ, ಪ್ರಾಚೀನ ಕಾಲದಲ್ಲಿ ಇದ್ದ ಕುಸ್ತಿ, ಓಟ, ಚೆಂಡಾಟ ಮೊದಲಾದ ಕೆಲವು ಸ್ಪರ್ಧೆಗಳು ಜಾನಪದ ಕ್ರೀಡೆಗಳೂ ಆಗಿವೆ. ಆಧುನಿಕ ಸಂದರ್ಭದಲ್ಲಿಯೂ ಉಳಿದ ಇವು ಅಂತರರಾಷ್ಟ್ರೀಯ ಮಟ್ಟಕ್ಕೂ ಏರಿ ಆಧುನಿಕ ಕ್ರೀಡೆಗಳು ಎನ್ನಿಸಿವೆ. ಆದರೂ ಇದರ ವರ್ಗೀಕರಣದ ಮೊದಲನೆಯದರಲ್ಲಿ ವೇದಗಳು, ಪುರಾಣಗಳು, ಪ್ರಾಚೀನ ಕಾವ್ಯಗಳನ್ನು ಆಧರಿಸಿ, ಅಲ್ಲಿ ಪ್ರಸ್ತಾಪಗೊಳ್ಳುವ ಮಲ್ಲಯುದ್ಧ, ಮುಷ್ಟಿಯುದ್ಧ, ಮೃಗಯಾ ವಿಹಾರ ಮೊದಲಾದವನ್ನು ಗುರುತಿಸಲಾಗುತ್ತದೆ. ಜಾನಪದ ಕ್ರೀಡೆಗಳಲ್ಲಿ ಚೌಕಾಬಾರ, ಹೊಡೆಚೆಂಡಿನ ಆಟ, ಕುಂಟೋಬಿಲ್ಲೆ ಮೊದಲಾದವನ್ನು ಗುರುತಿಸಲಾಗುತ್ತದೆ. ಇನ್ನು ಆಧುನಿಕ ಕ್ರೀಡೆಗಳ ಪಟ್ಟಿಯಲ್ಲಿ ಕ್ರಿಕೆಟ್, ಬಾಸ್ಕೆಟ್ ಬಾಲ್, ಚೆಸ್ ಮೊದಲಾದವನ್ನು ಗುರುತಿಸಲಾಗುತ್ತದೆ. ಇದು ಒಂದೊಂದು ದೇಶದ ಸಂದರ್ಭದಲ್ಲಿಯೂ ವೈವಿಧ್ಯಮಯವಾದ ಚರ್ಚೆಯನ್ನು ಎತ್ತಿಕೊಡುತ್ತವೆ. ಉದಾಹರಣೆಗೆ, ಕ್ರಿಕೆಟ್ಟು ಇಂಗ್ಲೆಂಡಿಗೆ ಪ್ರಾಚೀನ ಮತ್ತು ಆಧುನಿಕ ಕ್ರೀಡೆ ಎನ್ನಿಸಿದರೆ, ಅದು ಭಾರತಕ್ಕ ಆಧುನಿಕ ಕ್ರೀಡೆ ಮಾತ್ರವಾಗುತ್ತದೆ.

ಒಟ್ಟಾರೆ ಅಧ್ಯಯನದ ಅನುಕೂಲಕ್ಕೆ ಮಾತ್ರ ಸ್ಥೂಲವಾಗಿ ವರ್ಗೀಕರಣಕ್ಕೀಡಾಗುವ ಕ್ರೀಡೆಗಳು ಇಂದು ಹಿಂದೆಂದಿಗಿಂತಲೂ ಹೆಚ್ಚಿನ ಸಾಂಸ್ಕೃತಿಕ ಮಹತ್ವವನ್ನು ಪಡೆದುಕೊಂಡಿವೆ. ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದಲ್ಲಿ ಅನೇಕಾನೇಕ ಆತಂಕಗಳನ್ನು ಎದುರಿಸುತ್ತಿರುವ ಇಂದಿನ ಮಂದಿ ಅದರ ಪರಿಹಾರ ಶೋಧಗಳಲ್ಲಿ ತೊಡಗಿದೆ. ಎಲ್ಲೆಲ್ಲೂ ಅಣ್ವಸ್ತ್ರಗಳು ಚಳಿ ಕಾಯಿಸಿಕೊಳ್ಳುತ್ತಿವೆ. ಯಾವಾಗ ತಾಪ ಹೆಚ್ಚಾಗಿ ಅಲ್ಲಿಂದ ಎದ್ದು ಬರುತ್ತವೆಯೋ ಗೊತ್ತಿಲ್ಲ. ಇಂತಹ ಅಣುಗಾಲವು ವರ್ತಮಾನದ ಎಲ್ಲಾ ಋತುಗಳನ್ನು ಆಕ್ರಮಿಸಿವೆ. ಹಾಗಿರುವಾಗ ವ್ಯಷ್ಟಿ ಮತ್ತು ಸಮಷ್ಟಿಯ ಪುನರುದ್ಧಾರದ ಕೆಲಸ ಕ್ರೀಡೆಗಳಿಂದಲೂ ಆಗುತ್ತದೆ. ಇಂತಹ ಮಹತ್ವ ಎಲ್ಲರಿಗೂ ತಿಳಿದದ್ದೇ ಆಗಿರುವುದರಿಂದ ಪ್ರಾಚೀನ ಗ್ರೀಕ್ ನಾಗರೀಕತೆ ಅವನತಿಗೀಡಾಗುತ್ತಿದ್ದ ಸಂದರ್ಭದಲ್ಲಿ ಅದರ ಪುನರುಜ್ಜೀವನಕ್ಕಾಗಿ ಅಂದು ಗ್ರೀಕ್ ದೇವತೆ ತನ್ನ ದೇಶಿಗರನ್ನು ಸಂಭೋದಿಸಿ ನುಡಿದ ’ಕ್ರೀಡೆಗಳನ್ನು ಚುರುಕುಗೊಳಿಸಿ’ ಎಂಬ ಮಾತಿನೊಂದಿಗೆ ನನ್ನ ಮಾತನ್ನು ಮುಗಿಸುತ್ತೇನೆ.
*****
ದೈಹಿಕ ಶಿಕ್ಷಕ, ಸೆಪ್ಟೆಂಬರ್ ೨೦೦೦
ಜಾನಪದ ಜಗತ್ತು, ಸಂ.: ೨೩, ಸಂ.: ೨ ಮತ್ತು ೩, (ಸಂಯುಕ್ತ ಸಂಚಿಕೆ)-೨೦೦೨

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಗುಡುಗು-ಮಿಂಚು
Next post ಕುಡಕರ್ ಮಾತ್ವ

ಸಣ್ಣ ಕತೆ

  • ಎಪ್ರಿಲ್ ಒಂದು

    ಒಮ್ಮೆಲೇ ಅವನಿಗೆ ಮದುವೆಯಾಗಿಬಿಡಬೇಕೆಂಬ ವಿಚಾರ ಬಂತು. ಮದುವೆಯಾಗುವದೆಂದರೆ ಒಂದು ಸಹಜವಾದ ವಿಚಾರವೆಂದು ಕೆಲವರಿಗೆ ಅನಿಸಬಹುದು. ಆದರೆ ಅವನದು ಮಾತ್ರ ಹಾಗಿರಲಿಲ್ಲ. ಎಲ್ಲರೂ ಅವನಿಗೆ ‘ಆಜನ್ಮ ಬ್ರಹ್ಮಚಾರಿ’ ಎಂಬ… Read more…

  • ಆನುಗೋಲು

    ರೈಲು ನಿಲ್ದಾಣದಲ್ಲಿ ನಿಂತಿತು! "ಪೇಪರ! ಡೇಲಿ ಪೇಪರ!........ಟಾಯಿಮ್ಸ, ಫ್ರೀ ಪ್ರೆಸ್, ಸಕಾಳ! ಪ್ಲಾಟ ಫಾರ್ಮ ಮೇಲಿನ ಜನರ ನೂರೆಂಟು ಗದ್ದಲದಲ್ಲಿ ಈ ಧ್ವನಿಯು ಎದ್ದು ಕೇಳಿಸುತ್ತಿತ್ತು. ಹೋಗುವವರ… Read more…

  • ಕರೀಮನ ಪಿಟೀಲು

    ಕರೀಮನ ಹತ್ತಿರ ಒಂದು ಪಿಟೀಲು ಇದೆ. ಅದನ್ನು ಅವನು ಒಳ್ಳೆ ಮಧುರವಾಗಿ ಬಾರಿಸುತ್ತಾನೆ. ಬಾರಿಸುತ್ತ ಒಮ್ಮೊಮ್ಮೆ ಭಾವಾವೇಶದಲ್ಲಿ ತನ್ನನ್ನು ತಾನು ಮರೆತುಬಿಡುತ್ತಾನೆ. ಕರೀಮನ ಪಿಟೀಲುವಾದವೆಂದರೆ ಊರ ಜನರೆಲ್ಲರೂ… Read more…

  • ಕಳಕೊಂಡವನು

    ಸುಮಾರು ಒಂದು ಗಂಟೆಯ ಪಯಣದಿಂದ ಸುಸ್ತಾದ ಅವನು ಬಸ್ಸಿನಿಂದ ಇಳಿದು ರಸ್ತೆಯ ಬದಿಗೆ ಬಂದು ನಿಂತು ತನ್ನ ಕೈಗಡಿಯಾರ ದೃಷ್ಟಿಸಿದ. ಮಧ್ಯಾಹ್ನ ಒಂದು ಗಂಟೆ. ಒಮ್ಮೆ ಮುಖ… Read more…

  • ಅಪರೂಪದ ಬಾಂಧವ್ಯ

    ಹೆತ್ತ ತಾಯಿ ಬಿಟ್ಟುಹೋದ ಎರಡು ಮುಂಗಸಿ ಮರಿಗಳು ಅನಾಥವಾಗಿ ಚೀರಾಡುತ್ತಿದ್ದುದು, ಮನೆಯ ಮಕ್ಕಳ ಕಣ್ಣಿಗೆ ಬಿದ್ದಿತು. "ಅಪ್ಪಾ ಇಲ್ಲಿ ನೋಡು, ಮುಂಗುಸಿ ಮರಿ ಅಳುತ್ತಾ ಇವೆ. ಅದಕ್ಕೆ… Read more…