“ಕಂದ, ಕೇಳುತ್ತಮದ ರಾಜ್ಯ ಒಂದಿಹುದು:
ಮಂದಿ ಎಲ್ಲವು ಸುಖದಿ ಬಾಳುತ್ತಲಿಹುದು;”
ಎಂದು ನೀನಾಡುವಾ ರಾಜ್ಯವೆಲ್ಲಿಹುದು?
ಕಂದನಲಿ ಕರುಣಿಸುತ ಇಂದು ತಿಳಿಸಮ್ಮಾ!
“ಕಿತ್ತಳೆಯ ಮರಗಳಲಿ ಹೂಗಳರಳುತ್ತ
ಎತ್ತಲೂ ಮಿಂಚುಹುಳು ಚಿಮ್ಮಿ ಕುಣಿಯುತ್ತ,
ಮುತ್ತಿಕೊಂಡಿಹ ದೇಶದೊಳಗಿಹುದೆ ತಾಯೆ!”
“ಅತ್ತಲಿಲ್ಲಾ ರಾಜ್ಯ, ಅತ್ತಲಿಲ್ಲಣುಗಾ!”
“ತಾಳೆಗಳು ಬೆಳೆದು, ಖರ್‍ಜೂರದಲಿ ಹಣ್ಣು
ಜೋಲುತಿಹ ಬಿಸಿಲ ಸೀಮೆಯಲಿ ನೆಲಸಿಹುದೇ?
ಆಲಿಗಳಿಗಚ್ಚ ಹಸುರಾಗಿ ಸೊಗಸುತ್ತಾ
ಸಾಲು ಸಾಲಾಗೆಸೆದು ಸಾಗರದ ನಡುವೆ?-
“ಹಳುವಗಳ ಪರಿಮಳವ ಗಾಳಿಗೊಪ್ಪಿಸುತ್ತಾ,
ಹಲವು ಬಣ್ಣದ ಗರಿಯ ಪಕ್ಷಿ ಸಂಕುಲದಿ
ತೊಳಗುವಾ ದ್ವೀಪಂಗಳಲ್ಲಿಹುದೆ? ತಾಯೆ!”
“ಎಲೆ ಮಗುವೆ! ಕೇಳ್, ಅತ್ತಲಿಲ್ಲತ್ತಲಿಲ್ಲ.”
“ಹೊಳೆವ ಹೊನ್ನಿನ ಮರಳ ಮೇಲೆ ಹೊಳೆ ಹರಿವ,
ತೊಳಗುತಿಹ ಕೆಂಪುಗಳ ಕೆಂಬೆಳಗನುಗುಳ್ವ,
ತಳಿತಳಿಪ ವಜ್ರಗಳ ಗಣಿಗಳಿಂದೆಸೆವ
ತಿಳಿಮುತ್ತುಗಳ ನಗೆಯ ಬೆಳಕಿಂದ ಹೊಳೆವ-
“ಜಲದೊಳಗೆ ನೆಲೆಗೊಂಡ ಹವಳಗಳ ಕೆಳಗೆ
ತಳಿರ ಬಣ್ಣವ ತಳೆದ ಸಾಗರದ ನಡುವೆ
ಹೊಳೆವ ದ್ವೀಪಂಗಳಲಿ ನೆಲಸಿಹುದೆ? ತಾಯೆ!”
“ಎಲೆ ಮಗುವೆ! ಕೇಳತ್ತಲಿಲ್ಲತ್ತಲಿಲ್ಲ.
“ಅದರ ಸೊಗಸಿನ ಸಿರಿಯ ಕಣ್ಣು ಕಂಡಿಲ್ಲ.
ಅದರ ಗಾನದ ಸವಿಯ ಕಿವಿಯು ಕೇಳಿಲ್ಲ.
ಅದರಂದವನು ಕನಸು ಕಂಡರಿದುದಿಲ್ಲ.
ಅದರ ನೆಲೆಯನು ಸಾವು ನೋವರಿದುದಿಲ್ಲ.
“ಎಂದೆಂದುಮಾ ಪರಮರಾಜ್ಯ ವಿಭವಗಳು.
ಕುಂದುಕೊರತೆಗೆ ಸಿಲುಕದೊಂದೆ ತೆರವಿಹವು.
ಕಂದ! ಕೇಳದು ಸಾವಿನಿಂದತ್ತಲತ್ತ
ನಿಂದು ತಾನನಿಗಾಲ ಎಸೆದೊಪ್ಪುತ್ತಿಹುದು.”
*****
(ಕವಿಶಿಷ್ಯ)