ಗ್ರೀಕನ ಥೀಬ್ಸ [Thebes]ದಂತಕಥೆಗಳಲ್ಲಿ ಬರುವ Oedipus[ಇಡಿಪಸ್] ರಾಜ ದುರಾದೃಷ್ಟದ ವ್ಯಕ್ತಿ. ಥೀಬ್ಸನ Laius, ಮತ್ತು Jocasta ಎಂಬ ರಾಜ ದಂಪತಿಗಳ ಮಗ. ಆದರೆ ಹುಟ್ಟುತ್ತಲೇ ಶಾಪಗ್ರಸ್ತನಾದ ಆತ ತನ್ನ ತಂದೆಯನ್ನು ಕೊಂದು ತಾಯಿಯನ್ನೆ ವಿವಾಹವಾಗುತ್ತಾನೆ ಎಂಬ ಭವಿಷ್ಯವಾಣಿಯ ಕೇಳಿ ರಾಜ ರಾಣಿ ಮಗುವನ್ನು Cithaeron ಪರ್ವತದ ತುದಿಯಲ್ಲಿ ಬಿಟ್ಟು ಬರುವಂತೆ ಸೇವಕನಿಗೆ ಹೇಳುತ್ತಾರೆ. ಆದರೆ ಮಗುವನ್ನು ನೋಡಿ ಮರುಕಗೊಂಡ ಆ ಸೇವಕ ಮಗುವಿನ ವಿವರಗಳನ್ನು ನೀಡದೆ Corinthನ ದನಗಾಹಿಯೊಬ್ಬನಿಗೆ ಮಗುವನ್ನು ಕೊಟ್ಟು ಥೀಬ್ಸನಿಂದ ದೂರ ಹೋಗುವಂತೆ ಹೇಳುತ್ತಾನೆ. ಆ ದನಗಾಹಿ ಮಗುವನ್ನು Corinthನ ರಾಜ Polybus ಮತ್ತು ರಾಣಿ Meropeಗೆ ನೀಡುತ್ತಾನೆ. ಮಕ್ಕಳಿಲ್ಲದ ಅವರು ಮಗುವನ್ನು ಸ್ವಂತಕ್ಕಿಂತ ಹೆಚ್ಚಾಗಿ ಬೆಳೆಸುತ್ತಾರೆ. ಪ್ರಾಯಸ್ಥನಾದ ಇಡಿಪಸ್ ತನ್ನ ತಂದೆಯನ್ನು ಕೊಂದು ತಾಯಿಯನ್ನು ತಾನು ವಿವಾಹವಾಗುವ ವಿಚಾರ ತಿಳಿದು ಚಿಂತಿತನಾಗುತ್ತಾನೆ. Polybus ಮತ್ತು Merope ರನ್ನೆ ತನ್ನ ಸ್ವಂತ ತಂದೆ ತಾಯಿ ಎಂದು ತಿಳಿದು, ಮುಂದಿನ ಅನಾಹುತಗಳಿಗೆ ಅವಕಾಶನೀಡದಂತೆ Corinth ರಾಜ್ಯ ಬಿಟ್ಟು ಹೊರಟು ಹೋಗುತ್ತಾನೆ. ಆತ ಶಾಪದಿಂದ ಪಾರಾಗಲು ಪ್ರಯತ್ನಿಸಿದಷ್ಟು ತನಗೆ ಗೊತ್ತಿಲ್ಲದೆ ಪಾಪಕ್ಕೆ ಸಮೀಪನಾಗುತ್ತ ಹೋಗುವುದು ಕಥೆಯ ಸ್ವಾರಸ್ಯ.
ದಾರಿಯಲ್ಲಿ ಯಾತ್ರಗೆ ಹೊರಟ ತನ್ನ ಸ್ವಂತ ತಂದೆ Laiusನನ್ನು ಅರಿಯದೇ ಕೋಪಕ್ಕೆ ಬಲಿಯಾಗಿ ಕೊಂದುಹಾಕುತ್ತಾನೆ ಇಡಿಪಸ್. ಮುಂದೆ ತಿರುಗಾಡುತ್ತ ಬಂದು ಥೀಬ್ಸ ನಗರದ ದ್ವಾರದಲ್ಲಿ ಎದುರಾಗುವ ನರಸಿಂಹಿಣಿ ರೂಪದ ರಾಕ್ಷಸಿ [Sphinx] ಒಡ್ಡಿದ ಎಲ್ಲ ಒಗಟುಗಳಿಗೆ ಉತ್ತರಿಸಿ ಅದರ ಕರಾಳ ಮುಷ್ಟಿಯಿಂದ ನಗರವನ್ನು ಕಾಪಾಡುತ್ತಾನೆ. ಹಾಗಾಗಿ ಥೀಬ್ಸನ ರಾಜನಾಗಿ ರಾಣಿ Jocastaಳ ಪತಿಯಾಗಿ ಜವಾಬ್ದಾರಿಯನ್ನು ನಿಭಾಯಿಸುತ್ತ ನಾಲ್ಕು ಮಕ್ಕಳನ್ನು ಪಡೆದು ಸಂತೃಪ್ತನಾಗಿರುವಾಗಲೇ ಮಾರಕ ಪ್ಲೇಗ್ ನಗರವನ್ನು ನುಂಗಲಾರಂಭಿಸುತ್ತದೆ.
ಇಡಿಪಸ್ ಕರುಣಾಮಯಿ, ತನ್ನ ಪ್ರಜೆಗಳ ಹಿತವನ್ನೆ ಮೂಲ ದ್ಯೇಯವಾಗಿ ಕಂಡವ, ಬುದ್ದಿವಂತ. ಹಾಗಾಗಿ ಜನರಿಗೆ ಇಡಿಪಸ್ ಮೇಲೆ ಅಪಾರ ನಂಬಿಕೆ. ಈ ಸಲ ಮಾರಕ ರೋಗ ಪ್ಲೇಗ್ ನಗರವನ್ನು ಮರಣಶ್ಯಯೆಯಾಗಿಸಿದೆ. ಜನ ರಾಜನ ಮೊರೆಹೋಗಿದ್ದಾರೆ. ಇಡಿಪಸ್ ಪತ್ನಿ Jocastaಳ ಸಹೋದರ Creonನ್ನು ಅಪೋಲೊ ದೇಗುಲ ಇರುವ ಡೆಲ್ಫಿಗೆ ಸಲಹೆಗಾಗಿ ಕಳಿಸುತ್ತಾನೆ. ಅದರಿಂದ ತಿಳಿದ ಸಂಗತಿ ಆ ನಗರದಲ್ಲಿ ವಾಸವಾಗಿರುವ ಕೊಲೆಗಾರನಿಂದ ಆ ವಿಷಮ ಸ್ಥಿತಿಯೆಂದು ತಿಳಿಯುತ್ತದೆ.
ಈಗ ಕೊಲೆಗಾರನ ಪತ್ತೆಗೆ ಕುರುಡ ಆದರೆ ಅದ್ಭುತ ಮನಃಶಕ್ತಿಯ ಪ್ರವಾದಿ Tiresiasಗೆ ನಿಜವನ್ನು ತಿಳಿದು ನುಡಿಯಲು ರಾಜ ಕೋರಲಾಗಿ ಆತ ಸತ್ಯವನ್ನು ಅರುಹಲು ನಿರಾಕರಿಸುತ್ತಾನೆ. ಕೋಪಗೊಂಡ ಇಡಿಪಸ್ ಆತನನ್ನು ಅಣುಕಿಸಲು ಅವಮಾನಿತನಾದ ಸಭ್ಯ ಸಂತ Tiresias ಕೋಪಗೊಂಡು ಕೊಲೆಗಾರ ಬೇರಾರೂ ಅಲ್ಲ ಅದು ಇಡಿಪಸ್‌ನೇ ಎಂದು ನುಡಿಯುತ್ತಾನೆ. ಇದನ್ನು ಒಪ್ಪಿಕೊಳ್ಳದ ಇಡಿಪಸ್ ಕೋಪೋಗ್ರನಾಗಿ ತನ್ನ ವಿರುದ್ಧ Tiresias ಹಾಗೂ Creon ಪಿತೂರಿ ಮಾಡುತ್ತಿರುವರೆಂದು ಜರೆದು, ದ್ರೋಹಿಗಳೆಂದು ಆರೋಪಿಸಿ ತನ್ನ ಹುಟ್ಟಿನ ಶೋಧನೆಯನ್ನು ಮುಂದುವರೆಸಿ, ಕೊನೆಯಲ್ಲಿ ತಾನೇ ತನ್ನ ತಂದೆ ರಾಜನ ಕೊಲೆಗಾರ ಹಾಗೂ ತನ್ನ ಪತ್ನಿ ತನ್ನ ತಾಯಿಯೆಂಬ ಸತ್ಯದ ಅರಿವಾಗುತ್ತಲೇ ಅಸಹ್ಯವಾಗಿ ತನ್ನ ಕಣ್ಣುಗಳನ್ನು ತಾನೇ ಇರಿದುಕೊಳ್ಳುತ್ತಾನೆ. ವಿಷಯ ತಿಳಿದ Jocasta ತನ್ನನ್ನು ಕೊಂದುಕೊಳ್ಳುತ್ತಾಳೆ. ಇಡಿಪಸ್ ತನ್ನ ಮಗಳಾದ Antigoneಳೊಂದಿಗೆ ಗ್ರೀಸನ ಉದ್ದಕ್ಕೂ ಅಲೆದಾಡಬೇಕಾಗುತ್ತದೆ. ಆತನ ವಿಚಾರ ತಿಳಿದ ಯಾರೊಬ್ಬರೂ ಸ್ಥಳಾವಕಾಶ ನೀಡದೆ ಅತಂತ್ರನಾಗುತ್ತಾನೆ ಇಡಿಪಸ್. ಕೊನೆಗೊಮ್ಮೆ Athensನ ರಾಜ Theseus ಆತನಿಗೆ Colonus ಪವಿತ್ರ ಸ್ಥಳವೊಂದರಲ್ಲಿ ತಂಗಲು ಆವಕಾಶ ನೀಡಲು ಇಡಿಪಸ್ ಶಾಂತಿಯಿಂದ ಅಲ್ಲಿಯೇ ಕೊನೆಯನ್ನು ಕಾಣುತ್ತಾನೆ. ಮಕ್ಕಳಾದ Eteocles and Polynices ಸಿಂಹಾಸನಕ್ಕೆ ಕಾದಾಡಿ ಮಡಿಯಲು ಮುಂದೆ Creon ರಾಜನಾಗುತ್ತಾನೆ ಆದರೆ ತನ್ನ ಕುಟುಂಬದ ವಿರುದ್ದ ಅನ್ಯಾಯ ಮಾಡಿದನೆಂದು ತಿಳಿದು Creon ವಿರುದ್ಧ Antigone ಸೇಡು ತೀರಿಸಿಕೊಳ್ಳುತ್ತಾಳೆ. ಆತನ ಮಗ Haemon ತನ್ನ ಜೊತೆಯಲ್ಲಿ ಸಾವನ್ನು ಸ್ವೀಕರಿಸುವಂತೆ ಮಾಡುತ್ತಾಳೆ ಅಕೆಯ ಸಾವಿನೊಂದಿಗೆ ಇಡಿಪಸ್ ಚರಿತ್ರೆ ಕೊನೆಯಾಗುತ್ತದೆ.
ಒಂದಾನೊಂದು ಕಾಲದ ಬಲಶಾಲಿ ಬುದ್ಧಿವಂತ ದೊರೆ ಇಡಿಪಸ್. ಆದರೆ ಕಾಲದ ಕೈಯಲ್ಲಿ ಅಸಹಾಯಕನಾಗಿ ಪರಿತಪಿಸುತ್ತಾನೆ. ಕುರುಡ ಅಷ್ಟೇ ಅಲ್ಲ ತಪ್ಪಿತಸ್ಥ ಕೂಡ. ಇಡಿಪಸ್ ಅಪರಾಧ ಮಾಡುತ್ತಾನೆ. ಆದರೆ ಅದರ ಸತ್ಯವನ್ನು ಅರಿಯಲು ಮಾಡುವ ಆತನ ಪ್ರಯತ್ನವೂ ಅಷ್ಟೇ ಪ್ರಾಮಾಣಿಕ. ತನ್ನ ಬಗೆಗಿನ ಸತ್ಯವನ್ನು ತಿಳಿದುಕೊಳ್ಳುವ ಸಂಗತಿಯೇ ನಾಟಕದ ಮುಖ್ಯ ಸಂಗತಿ. ತನಗೆ ತಿಳಿಯದೇ ಮಾಡಿದ ಪಾಪಕ್ಕಾಗಿ ಪಶ್ಚಾತ್ತಾಪದ ಬೆಂಕಿಯಲ್ಲಿ ಧಹಿಸಿಕೊಳ್ಳುತ್ತಾನೆ. ಇಲ್ಲಿ ಮಾನವನ ಬದುಕಿನ ಅನಿಶ್ಚಿತತೆ ಅತ್ಯಂತ ಪರಿಣಾಮಕಾರಿಯಾಗಿ ಕಣ್ಮುಂದೆ ಸುಳಿಯುತ್ತದೆ. ನಾಟಕದ ಮೊದಲ ಭಾಗ ಇಡಿಪಸ್‌ನ ಉದಾತ್ತ ಚಿತ್ರಣ ನೀಡಿದರೆ, ಎರಡನೆಯ ಭಾಗದಲ್ಲಿ ತದ್ವಿರುದ್ಧವಾಗಿ ವಿಧಿಯ ಅಟ್ಟಹಾಸದ ಕೈಗೊಂಬೆಯಾದ ಇಡಿಪಸ್ ಅಧಃಪತನದ ಹಾದಿಯಲ್ಲಿ ಹೇಗೆ ಬಸವಳಿಯುತ್ತಾನೆ ಎಂಬುದು ಪ್ರದರ್ಶಿಸಲ್ಪಡುತ್ತದೆ. ಆದಾಗ್ಯೂ ಎಲ್ಲವನ್ನೂ ಕಳೆದುಕೊಂಡಾಗಲೂ ಇಡಿಪಸ್ ಮಾನವತೆಯ ಪ್ರತಿಬಿಂಬದಂತೆ ಗೋಚರಿಸುತ್ತಾನೆ. ತಿಳಿಯದೇ ಆದ ಪ್ರಮಾದಕ್ಕೆ ತನ್ನನ್ನೇ ಹೊಣೆಯಾಗಿಸಿಕೊಳ್ಳುತ್ತಾನೆ. ತನ್ನ ಕಣ್ಣುಗಳ ಕಿತ್ತುಕೊಳ್ಳುತ್ತಾನೆ.
ಇಡಿಪಸ್‌ನ ಪಾತ್ರ ಮನುಷ್ಯ ಮಾತ್ರದವನ ಎರಡು ಭಿನ್ನ ಸ್ವಭಾವವನ್ನು ಸ್ಪುಟಗೊಳಿಸುತ್ತದೆ. ಶ್ರೇಷ್ಟತೆಯ ಉತ್ತುಂಗದಲ್ಲಿಯ ವ್ಯಕ್ತಿತ್ವ ಹಾಗೂ ಸಂಕಷ್ಟಗಳ ಪಾತಾಳದಲ್ಲಿ ಬಳಲುವ ನಿಕೃಷ್ಟತೆ. ತನ್ನೆಲ್ಲ ನೋವುಗಳ ದಾಟಿ ಕೊನೆಯಲ್ಲಿ ಇಡಿಪಸ್ ಆಡ್ಯನಾಗುತ್ತಾನೆ. ರಾಣಿ Jocasta ಕೂಡ ತನ್ನ ಪ್ರತಿಯೊಂದು ವರ್ತನೆಯಲ್ಲೂ ಘನತೆಯ ಪ್ರತಿರೂಪದಂತೆ ತೋರುತ್ತಾಳೆ. ಅಲ್ಲಗಳೆಯಲಾಗದ ಸತ್ಯದ ಎದುರು ಅಸಹಾಯಕಳಾಗುತ್ತಾಳೆ. ಹಾಗಾಗೆ ಬದುಕಿಗೆ ವಿಮುಖಳಾಗದೇ ಬೇರೆ ವಿಧಿಯಿಲ್ಲ. ಬದುಕಿನಂತೆ ಸಾವಿನಲ್ಲೂ ತನ್ನ ಗೌರವ ಕಾಯ್ದುಕೊಳ್ಳುತ್ತಾಳೆ ಆಕೆ. ಇನ್ನು ಕುರುಡನಾದರೂ ಕಾಲಜ್ಞಾನಿ ಸಂತ Tiresias ತನ್ನ ಜಾಣ್ಮೆ ಹಾಗೂ ಶಕ್ತಿಯಲ್ಲಿ ಇಡಿಪಸ್ ಗೆ ಸಂವಾದಿಯಾಗಿ ಚಿತ್ರಿಸಲ್ಪಡುತ್ತಾನೆ. ಸಾಮರ್ಥ್ಯವಿದ್ದರೆ ತನ್ನ ಭವಿಷ್ಯ ವಾಣಿ ಸುಳ್ಳೆಂದು ಸಾಬೀತು ಪಡಿಸುವಂತೆ ಆಹ್ವಾನಿಸುತ್ತಾನೆ.
ಗ್ರೀಕ ದುರಂತ ನಾಟಕಗಳ ಮೂಲ ಪ್ರಾಚೀನ ಪುರಾಣಕಥೆಗಳೇ ಆಗಿವೆ. ನಮ್ಮಲ್ಲಿಯ ಪೌರಾಣಿಕ ನಾಟಕಗಳಂತೆ. ಕಥಾ ಹೂರಣ ಹಾಗೂ ಪಾತ್ರಗಳು ಹೆಚ್ಚಾಗಿ ಪ್ರೇಕ್ಷಕರಿಗೆ ತಿಳಿದಿರುವಂತಹುದೇ ಆಗಿರುತ್ತವೆ. ಹೀಗಾಗಿ ನಾಟಕಕಾರನಿಗೆ ತನ್ನ ಕಲ್ಪನಾ ಸಾಮರ್ಥ್ಯವನ್ನು ವಿಸ್ತರಿಸುವಲ್ಲಿ ಅವಕಾಶಗಳು ಕಡಿಮೆ. ಅಲ್ಲದೇ ಆತ ಕೆಲವು ಮಿತಿಗಳಿಂದ ನಿರ್ಬಂಧಿಸಲ್ಪಟ್ಟಿರುತ್ತಾನೆ. ಇಂತಹ ಮಿತಿಯಲ್ಲಿಯೇ ಅಭೂತ ಪೂರ್ವ ಯಶಸ್ಸನ್ನು ಕಂಡ ನಾಟಕಕಾರರಲ್ಲಿ ಸೊಫೊಕ್ಲೀಸ್ ಕೂಡ ಒಬ್ಬ. ಆತ ಬರೆದ ಇಡಿಪಸ್ ರೆಕ್ಸ. ಇಲ್ಲಾತ ತೊಡಗಿಸಿಕೊಂಡ ತಂತ್ರವೆಂದರೆ ನಾಟಕೀಯ ವ್ಯಂಗ್ಯ. ನಾಟಕಕ್ಕೆ ಸಂಕೀರ್ಣ ರೂಪವನ್ನು ನೀಡಿ ನಿಗೂಢವಾಗಿಸಿ, ಆ ಮೂಲಕ ತನಗೆ ತಿಳಿದ ಕಥೆಯೇ ಆದರೂ ಓದುಗ ಹೊಸ ಪರಿಕಲ್ಪನೆಯ ಜೊತೆಗೆ ಕಥೆಯ ಅನೇಕ ಆಯಾಮಗಳ ಗ್ರಹಿಸಬಲ್ಲ. ಸೋಪೋಕ್ಲಿಸ್ ನ ನಾಟಕಗಳ ಯಶಸ್ಸು ಅಡಗಿದ್ದು ಇದರ ಮೇಲೆ. ಕ್ರೀಸ್ತಪೂರ್ವ ೪೯೬ರಲ್ಲಿ ಜನಿಸಿದ ಸೋಫೋಕ್ಲೀಸ್ ಬದುಕಿದ್ದಾಗಲೂ ಸತ್ತ ಮೇಲೆಯೂ ಜನರ ಅಪಾರ ಪ್ರೀತಿಗೆ ಭಾಜನನಾಗಿದ್ದ. ಆತ ದೇವರಂತೆ ಜನರಿಂದ ಆರಾಧಿಸಲ್ಪಡುತ್ತಿದ್ದನಂತೆ. ಇಡಿಪಸ್‌ನ ಈ ವ್ಯಕ್ತಿತ್ವದಿಂದ ತಾಯಿಯ ಬಗ್ಗೆ ಇರುವ ಅತೀವ ಮೋಹ ಇಂದು ಇಡಿಪಸ್ ಕಾಂಪ್ಲೆಕ್ಸ ಎಂದು ೨೦ನೇ ಶತಮಾನದಲ್ಲಿ ಖ್ಯಾತ ಮನಶಾಸ್ತ್ರಜ್ಞ ಸಿಗ್ಮಂಡ ಪ್ರಾಯ್ಡನಿಂದ ಬಣ್ಣಿಸಲ್ಪಟ್ಟಿದೆ.
*****
I will approviateBrief explenation