ಉತ್ತಿದ ಮಣ್ಣು
ಮೈ ತುಂಬಾ ಕೆಂಗಣ್ಣಾಗಿ
ಎದೆ ತುಂಬ ಬಿಸಿ ಉಸಿರು
ಹೆಜ್ಜೆ ಇಟ್ಟಲ್ಲೆಲ್ಲ ಧೂಳು
ಮತ್ತೆ ಮತ್ತೆ ಮುಖಕೆ ರಾಚಿ
ಮಳೆಗಾಗಿ ಹಪಹಪಿಸಿ ಅಳುವ ದೈನ್ಯತೆ.
ಕಾಲಿಟ್ಟಲ್ಲೆಲ್ಲ ಒಣಗರಿಕೆ
ಬೆಟ್ಟದೊಳಗಿನ ಬೋಳು ಗಿಡಮರ
ನದಿಯ ತಳದ ಬಿರುಕು
ಬಸವಳಿದು ಬೋರಲಾದ ಮನ,
ನಕ್ಷತ್ರಗಳು ಫಳಫಳ ಹೊಳೆದದ್ದು
ನಾಡು ಧಗಧಗಿಸಿ ನೀರ್‍ಗುದುರೆಯಾದದ್ದು
ಹಿಡಿತಕ್ಕೆ ಸಿಗದ ನೋವು ನರಳಾಟ
ಕಣ್ಣೀರಿಲ್ಲದ ಅಳು.
ಗಂಟಲುಬ್ಬಿನ ಎದೆಯಾಳದ ಆರ್‍ತಧ್ವನಿ
ಏರಿ ಏರಿ ಮೇಲೇರಿ ಹಬ್ಬಿಹರವಿನೊಳಗೆ
ಗೂಡುಕಟ್ಟುತ ಮೋಡಕಾರ್‍ಮೋಡ
ಬಿಸಿಲು ನೂಕಿ ನೆರಳು ನುಗ್ಗಿ
ತುಂತುರ ಹನಿಗಳ ಚಿತ್ತ
ಕ್ಷಣಾರ್ಧದಲ್ಲಿ ನೂರಿಪ್ಪತ್ತು ವೇಷಗಳ
ಗುಡುಗು ಸಿಡಿಲು ಮಳೆಯ
ನಿಸರ್‍ಗತಂಡದ ನಾಟಕರಂಗ
ಜಾಣಹುಡುಗರ ಕಿಲಾಡಿ ಪಾತ್ರಗಳ
ಓಡಾಟ ಮೆರೆದಾಟ
ಬಿಸಿಯುಸಿರಿಗೆ ಸಂತಸದ ಕಣ್ಣೀರು
ಎಲ್ಲೆಲ್ಲೂ ನಿರಾಳ.
*****