ಸಮಯೋಪಾಯ ಸರಸ್ವತಿ
ಕೆಲವು ದಿನಗಳ ತರುವಾಯ ಸಾಹೇಬರಿಂದ ಉಗ್ರಪ್ಪನ ವಿಚಾರದಲ್ಲಿ ಹುಕುಮುಗಳು ಬಂದುವು. ಅವನಿಗಾದ ಶಿಕ್ಷೆಯನ್ನು ಖಾಯಂ ಪಡಿಸಿ, ಅವನನ್ನು ಅದೇ ಜಿಲ್ಲೆಯಲ್ಲಿಯೇ ಬೇರೆ ರೇಂಜಿಗೆ ವರ್ಗ ಮಾಡಿದ್ದರು. ರಂಗಣ್ಣನಿಗೆ ಆ ಹುಕುಮುಗಳನ್ನು ನೋಡಿ ಸಂತೋಷವೇನೂ ಆಗಲಿಲ್ಲ. ಉಗ್ರಪ್ಪ ಈಗ ಶಾಂತವೀರಸ್ವಾಮಿಯಾಗಿ ಪರಿವರ್ತನೆ ಹೊಂದಿ ಶಿಷ್ಯ ಸಮೂಹಕ್ಕೆ ಗುರುವಾಗಿ ಉಪದೇಶಮಾಡುತ್ತ ಆಧ್ಯಾತ್ಮಿಕ ವಿಚಾರಗಳಲ್ಲಿ ಮಗ್ನನಾಗಿರುವುದು ಒಂದು ದೊಡ್ಡ ಪವಾಡವಾಗಿ ಅವನಿಗೆ ಬೋಧೆಯಾಗುತ್ತಿತ್ತು. ಈ ಪರಿವರ್ತನೆಗೆ ತಾನು ಕಾರಣನಾದುದು ಎಂತಹ ದೈವ ಘಟನೆ ಎಂದು ವಿಷಾದವೂ ವಿಸ್ಮಯವೂ ಅವನ ಮನಸ್ಸಿನಲ್ಲಿ ತುಂಬಿದ್ದುವು. ಉಗ್ರಪ್ಪನು ತಾನು ಹಿಂದೆ ತಿಳಿಸಿದ್ದಂತೆ ಕೆಲಸಕ್ಕೆ ರಾಜೀನಾಮೆಯನ್ನು ಕೊಟ್ಟು ಹೊರಟು ಹೋಗಿದ್ದನು. ಅವನು ಮಠಾಧ್ಯಕ್ಷಸ್ಥಾನ ಸ್ವೀಕಾರ ಮಹೋತ್ಸವದ ಆಹ್ವಾನ ಪತ್ರಿಕೆಯನ್ನು ರಂಗಣ್ಣನಿಗೆ ಕಳಿಸಿದ್ದನು. ಆದರೆ ರಂಗಣ್ಣನು ಆ ಮಹೋತ್ಸವಕ್ಕೆ ಹೋಗಲಿಲ್ಲ.
ಕಾಲಕ್ರಮದಲ್ಲಿ ರಂಗಣ್ಣನಿಗೆ ವರ್ಗದ ಆರ್ಡರೂ ಬಂತು. ಅದನ್ನು ಅವನು ನಿತ್ಯವೂ ನಿರೀಕ್ಷಿಸುತ್ತಲೇ ಇದ್ದುದರಿಂದ ಅವನಿಗೆ ಹರ್ಷವಾಗಲಿ ವಿಷಾದವಾಗಲಿ ಉಂಟಾಗಲಿಲ್ಲ. ಆ ವರ್ಗದ ಆರ್ಡರಿನಿಂದ ತನ್ನ ಹೆಂಡತಿಗೆ ಸ್ವಲ್ಪ ಖೇದವಾಗಬಹುದೆಂದು ಮಾತ್ರ ಆಲೋಚಿಸಿದನು. ಆದ್ದರಿಂದ ಆರ್ಡರು ಬಂದ ದಿನ ಒಡನೆಯೇ ಮನೆಯಲ್ಲಿ ವರ್ತಮಾನ ಕೊಡದೆ ಸುಮುಹೂರ್ತದಲ್ಲಿ ಅದನ್ನು ತಿಳಿಸೋಣವೆಂದು ಸುಮ್ಮನಾದನು. ಆದರೆ ವರ್ಗವಾಗಿರುವ ಸಂಗತಿ ಒಂದೆರಡು ದಿನಗಳಲ್ಲಿಯೇ ಜನಾರ್ದನ ಪುರದಲ್ಲಿ ಹರಡಿತು.
ಭಾನುವಾರ ಸುಖಭೋಜನ ಮಾಡಿ ತಾಂಬೂಲಚರ್ವಣಮಾಡುತ್ತ ಕುಳಿತಿದ್ದಾಗ, ತನ್ನ ಮಕ್ಕಳು ನಾಗೇನಹಳ್ಳಿಯಲ್ಲಿ ಆದ ಮೆರೆವಣಿಗೆಯನ್ನು ಅನುಕರಣಮಾಡುತ್ತ ಊದುವ ಕೊಳವಿಯನ್ನು ಕೊಂಬನ್ನಾಗಿಯೂ, ಜಾಗಟೆಯನ್ನೇ ತಮಟೆಯನ್ನಾಗಿಯೂ ಮಾಡಿಕೊಂಡು ಹಾಲಿನಲ್ಲಿ ಗಲಾಟೆ ಮಾಡುತ್ತಿದ್ದಾಗ, ಆ ನೋಟವನ್ನು ತನ್ನ ಹೆಂಡತಿ ನೋಡಿ,
`ನಿಮ್ಮ ದೊಡ್ಡ ಮಗ ನಿಮ್ಮಂತೆಯೇ ಇನ್‌ಸ್ಪೆಕ್ಟಗಿರಿ ಮಾಡುತ್ತಾನೆಂದು ಕಾಣುತ್ತೆ! ನಿಮ್ಮ ರುಮಾಲು ಹಾಕಿಕೊಂಡು ನಿಮ್ಮಂತೆಯೇ ನಡೆಯುತ್ತಿದಾನೆ!’ ಎಂದು ಗಮನವನ್ನು ಸೆಳೆದಾಗ,
`ನನ್ನ ಇನ್‌ಸ್ಪೆಕ್ಟರ್ ಗಿರಿ ನನ್ನ ಮಗನಿಗೆ ಏನೂ ಬೇಡ. ಸದ್ಯ ; ನನಗೆ ತಪ್ಪಿದ್ದಕ್ಕೆ ನಾನು ಸಂತೋಷಪಡುತ್ತಿದೇನೆ’ ಎಂದು ರಂಗಣ್ಣ ಹೇಳಿದನು.
‘ನಿಮಗೆ ವರ್ಗದ ಆರ್ಡರು ಬಂತೇ? ನನಗೇತಕ್ಕೆ ಮೊದಲೇ ಹೇಳಲಿಲ್ಲ?’
`ವರ್ಗದ ಆರ್ಡರು ಬಂದು ಹೆಚ್ಚು ಕಾಲ ಏನೂ ಆಗಲಿಲ್ಲ. ದೊಡ್ಡ ಸಾಹೇಬರಿಗೆ ಕಾಗದ ಬರೆದಿದ್ದೆ. ಅವರಿಂದ ಈ ದಿನ ಜವಾಬು ಬಂತು. ವರ್ಗದ ಆರ್ಡರನ್ನು ರದ್ದು ಮಾಡಲಾಗುವುದಿಲ್ಲ ಎಂದು ತಿಳಿಸಿದ್ದಾರೆ. ಈಗ ನಿನಗೂ ತಿಳಿಸಿದ್ದೇನೆ.’
ನಿಮ್ಮನ್ನು ಎಲ್ಲಿಗೆ ವರ್ಗ ಮಾಡಿದ್ದಾರೆ? ಏನಾಗಿ ವರ್ಗ ಮಾಡಿದ್ದಾರೆ?
`ಏನೋ ಸ್ಪೆಷಲ್ ಆಫೀಸರ್ ಅಂತೆ! ಸದ್ಯಕ್ಕೆ ಬೆಂಗಳೂರಿಗೆ ಹೋಗಬೇಕು. ದೊಡ್ಡ ಸಾಹೇಬರನ್ನು ಕಂಡು ವಿವರಗಳನ್ನು ತಿಳಿದು ಕೊಳ್ಳಬೇಕು.’
`ನನಗೆ ಆ ದಿನವೇ ಮನಸ್ಸಿಗೆ ಹೊಳೆಯಿತು! ನೀವು ಜನರನ್ನೆಲ್ಲ ಎದುರು ಹಾಕಿಕೊಂಡು ಹೋಗುತ್ತಿದ್ದೀರಿ; ಆದ್ದರಿಂದ ಇಲ್ಲಿ ಹೆಚ್ಚು ಕಾಲ ನಿಮ್ಮನ್ನು ಇಟ್ಟಿರುವುದಿಲ್ಲ ಎಂದು ಮನಸ್ಸಿಗೆ ಹೊಳೆಯಿತು. ಹಾಗೆಯೇ ಆಯಿತು.’
`ನನ್ನನ್ನು ಆಕ್ಷೇಪಿಸುವುದಕ್ಕೆ ನೀನೂ ಒಬ್ಬಳು ಸೇರಿಕೊಂಡೆಯೋ? ನಾನೇನು ಜನರನ್ನು ಎದುರು ಹಾಕಿಕೊಂಡದ್ದು ? ನೀನೇ ನೋಡಿದೀಯೇ: ಆವಲಹಳ್ಳಿಯ ಗೌಡರು, ರಂಗನಾಥಪುರದ ಗೌಡರು, ಹಲವು ಗ್ರಾಮಪಂಚಾಯತಿ ಚೇರ್ಮನ್ನರುಗಳು – ಎಲ್ಲರೂ ಹೇಗೆ ವಿಶ್ವಾಸವಾಗಿದ್ದಾರೆ, ಎಲ್ಲರ ಸ್ನೇಹ ಮತ್ತು ಗೌರವಗಳನ್ನು ನಾನು ಹೇಗೆ ಸಂಪಾದಿಸಿ ಕೊಂಡಿದ್ದೇನೆ. ಆದರೂ ನನ್ನನ್ನು ಟೀಕಿಸುತ್ತೀಯೆ!’
`ನೀವು ಸಾವಿರ ಹೇಳಿ! ಏನು ಪ್ರಯೋಜನ? ನಿಮಗೆ ಸ್ವಲ್ಪ ಕೋಪ ಹೆಚ್ಚು; ನಿಮ್ಮ ಇಷ್ಟಕ್ಕೆ ವಿರೋಧವಾಯಿತೋ ತಾಳ್ಮೆ ಇರುವುದಿಲ್ಲ. ಬುಸ್ಸೆಂದು ಸಿಟ್ಟು ಬರುತ್ತದೆ! ಬುಸ್ಸೆಂದು ಹೆಡೆ ಬಿಚ್ಚುತ್ತೀರಿ! ಉಪಾಯ ಮಾಡಬೇಕಾದ ಕಡೆ ಅಧಿಕಾರ ಮತ್ತು ದರ್ಪ ತೋರಿಸುತ್ತೀರಿ.’
`ಎಲ್ಲಿ, ಯಾವಾಗ ಹಾಗೆ ತೋರಿಸಿದ್ದೇನೆ? ಹೇಳು. ನನಗೆ ವಿರೋಧಿಗಳಾದವರು ಎಲ್ಲಿಯೋ ಮೂರು ಜನ, ಅವರು ನೀಚರು. ಆ ಕರಿಯಪ್ಪ ತನ್ನ ಅಣ್ಣನ ಮಗನಿಗೆ ಸ್ಕಾಲರ್‌ಷಿಪ್ಪನ್ನು ಕೊಡಿಸಿದ್ದ. ಯಾರೋ ಅರ್ಜಿ ಹಾಕಿದರು. ವಿಚಾರಣೆ ಮಾಡಬೇಕಾಯಿತು; ಮೇಲಿನ ಸಾಹೇಬರಿಗೆ ಕಾಗದಗಳನ್ನು ಹೊತ್ತು ಹಾಕಿದೆ. ಅವರ ಆರ್ಡರಿನಂತೆ ನಡೆದುಕೊಂಡೆ. ನನ್ನದೇನು ತಪ್ಪು?’
‘ನೀವೇಕೆ ಅದನ್ನೆಲ್ಲ ಮೈ ಮೇಲೆ ಹಾಕಿಕೊಂಡು ಹೋಗಬೇಕಾಗಿತ್ತು? ಸಾಲದ್ದಕ್ಕೆ ಮುಖಂಡ ಅನ್ನಿಸಿಕೊಂಡ ಆ ಮನುಷ್ಯನಿಗೆ ಅಪಮಾನ ಮಾಡಿ ಬಯಲಿಗೆಳೆದಿರಿ. ಹಾಗೆ ಅವಮಾನ ಮಾಡಿದರೆ ಅವನಿಗೆ ನಿಮ್ಮ ಮೇಲೆ ದ್ವೇಷ ಹುಟ್ಟುವುದಿಲ್ಲವ? ಆರ್ಜಿ ಬಂದಾಗ ನೀವು ಆತನನ್ನು ಕಂಡು- ಹೀಗೆ ಅರ್ಜಿ ಬಂದಿದೆ. ಇದರ ವಿಚಾರ ಏನು? ಆ ಹುಡುಗ ನಿಮ್ಮ ಅಣ್ಣನ ಮಗನೇ ಏನು? ಫೈಲಾದ ಹುಡುಗನಿಗೆ ಹೀಗೆ ಸ್ಕಾಲರ್ ಷಿಪ್ಪು ಕೊಡುವುದು ಸರಿಯಲ್ಲವಲ್ಲ. ಗಲಭೆಗೆ ಕಾರಣವಾಗುತ್ತದೆ; ನಿಮ್ಮ ಹೆಸರು ಕೆಡುತ್ತದೆ-ಎಂದು ಉಪಾಯದಿಂದ ತಿಳಿಸಿದ್ದಿದ್ದರೆ, ಆತನ ಸ್ನೇಹವನ್ನು ಸಂಪಾದಿಸುತ್ತಿದ್ದಿರಿ, ಮತ್ತು ಆತನೇ ಸ್ಕಾಲರ್ ಶಿಪ್ಪನ್ನು ಬಡಹುಡುಗನಿಗೆ ಕೊಟ್ಟುಬಿಡೋಣ, ನಾವೇ ಸರಿಪಡಿಸಿ ಬಿಡೋಣ ಎಂದು ಹೇಳುತ್ತಿದ್ದ ; ನ್ಯಾಯವೂ ದೊರೆಯುತ್ತಿತ್ತು. ಅದಕ್ಕೆ ಬದಲು ಅಮಲ್ದಾರರಿಗೆ ಬರೆದಿರಿ, ಸ್ಟೇಷನ್ ಮಾಸ್ಟರಿಗೆ ಬರೆದಿರಿ, ಮೇಲಿನ ಸಾಹೇಬರಿಗೆ ಬರೆದಿರಿ. ಎಲ್ಲ ಕಡೆಯೂ ಪ್ರಕಟಮಾಡಿದಿರಿ! ನಿಮಗೇನು ಬೇಕಾಗಿತ್ತು? ಸ್ಕಾಲರ್ ಷಿಪ್ಪು ಕೊಡುವುದಕ್ಕೆ ಬಿಡುವುದಕ್ಕೆ ಕಮಿಟಿ ಇಲ್ಲವೇ? ಆ ಅರ್ಜಿಯನ್ನು ಆ ಕಮಿಟಿಯ ಮುಂದಾದರೂ ಇಡಬಹುದಾಗಿತ್ತಲ್ಲ. ಅಲ್ಲಿ ಆ ಕರಿಯಪ್ಪನು ಏನು ಸಮಜಾಯಿಷಿ ಹೇಳುತ್ತಿದ್ದನೋ ನೋಡಬಹುದಾಗಿತ್ತು. ಒಂದು ವೇಳೆ ಬದಲಾಯಿಸ ಬೇಕಾಗಿದ್ದಿದ್ದರೆ ಕಮಿಟಿಯವರೇ ನಿರ್ಣಯ ಮಾಡುತ್ತಿದ್ದರು.ಆ ನಿರ್ಣಯವನ್ನು ಸಾಹೇಬರಿಗೆ ಕಳಿಸಿ, ನಿಮ್ಮ ಜವಾಬ್ದಾರಿಯಿಲ್ಲದಂತೆ ಉಪಾಯ ಮಾಡಬಹುದಾಗಿತ್ತಲ್ಲ. ನೀವೇಕೆ ಹಾಗೆ ಮಾಡಲಿಲ್ಲ?’
`ಹೌದು, ನನ್ನ ಬುದ್ಧಿಗೆ ಆಗ ಹೊಳೆಯಲಿಲ್ಲ! ನೀನು ಹೇಳಿದಂತೆ ಮಾಡಬಹುದಾಗಿತ್ತು. ಆದರೆ ನೋಡು! ಮುಖಂಡ ಅನ್ನಿಸಿಕೊಂಡವನು ಸುಳ್ಳು ಸರ್ಟಿಫಿಕೇಟನ್ನು ಕೊಡಬಹುದೋ?’
`ಅದೇನು ಮಹಾ ಪ್ರಮಾದ! ಕೊಡಬಾರದು ಎಂದು ಇಟ್ಟು ಕೊಳ್ಳೋಣ. ಆದರೆ ಇವರಿಗೆಲ್ಲ ನಿಮ್ಮ ದೊಡ್ಡ ದೊಡ್ಡ ಅಧಿಕಾರಿಗಳೇ ಮೇಲ್ಪಂಕ್ತಿ ಹಾಕಿಕೊಟ್ಟಿದ್ದಾರೆ. ಬೆಂಗಳೂರಲ್ಲಿ ಎಷ್ಟೊಂದು ಜನ ದೊಡ್ಡ ಮನುಷ್ಯರು, ದೊಡ್ಡ ಅಧಿಕಾರಿಗಳು, ತಮ್ಮ ಕಣಿವೇ ಕೆಳಗಿನ ಬಂಧುಗಳಿಗೆ-ಇವರು ಮೈಸೂರಿನವರು ಎಂದು ಸುಳ್ಳು ಸರ್ಟಫಿಕೇಟಗಳನ್ನು ಕೊಟ್ಟು ಇ೦ಜನಿಯರಿಂಗ್ ಸ್ಕೂಲು ಮುಂತಾದ ಸ್ಕೂಲುಗಳಿಗೆ ಸೇರಿಸಿಲ್ಲ; ಫೀಜಿನ ರಿಯಾಯಿತಿ ಕೊಡಿಸಿಲ್ಲ; ಕಡೆಗೆ ಬಹಳ ಬಡವರು ಎಂದು ಸುಳ್ಳು ಹೇಳಿ ಸ್ಕಾಲರ್ ಷಿಪ್ಪನ್ನೂ ಕೊಡಿಸಿಲ್ಲ. ಆ ಕಣಿವೆ ಕೆಳಗಿನ ಹುಡುಗರಿಗೆ ಆಟ, ಊಟ, ಎಂದು ಎರಡು ಕನ್ನಡದ ಮಾತು ಕೂಡ ಬರುವುದಿಲ್ಲ! ವಿಶ್ವೇಶ್ವರಪುರದಲ್ಲಿ ನಮ್ಮ ಮನೆಯ ಪಕ್ಕದಲ್ಲಿಯೇ ಇರುವ ಒಬ್ಬರು ಅಯ್ಯಂಗಾರ್ ದೊಡ್ಡ ಮನುಷ್ಯರು ತಮ್ಮ ನೆಂಟನಿಗೆ ಹೀಗೆ ಸುಳ್ಳು ಸರ್ಟಿಫಿಕೇಟನ್ನು ಕೊಟ್ಟಿಲ್ಲವೇ? ಅವರನ್ನೇನು ಸರಕಾರದವರು ಡಿಸಿಮಿಸ್ ಮಾಡಿದ್ದಾರೆಯೇ? ಎಲ್ಲ ಕಡೆಯೂ ಇ೦ಥ ಮೋಸಗಳು ನಡೆಯುತ್ತವೆ. ಆ ಕರಿಯಪ್ಪನೊಬ್ಬನೇ ದೋಷಿಯೇ ? ಹಳ್ಳಿಯಲ್ಲಿ ಹುಟ್ಟಿ ಬೆಳೆದವನು! ದೊಡ್ಡವರ ಹತ್ತಿರ ಓಡಾಡಿಕೊಂಡು ಮುಖಂಡ ಎಂದು ಅನ್ನಿಸಿಕೊಂಡವನು!’
‘ನನಗೆ ತಿಳಿಯದೇ ಹೋಯಿತು! ನೀನೇಕೆ ನನಗೆ ಆ ವಿಚಾರದಲ್ಲಿ ಸಲಹೆ ಕೊಡಲಿಲ್ಲ? ಈಗ ನನಗೆ ಬುದ್ದಿ ಹೇಳುವುದಕ್ಕೆ ಮಾತ್ರ ನೀನು ಬರುತ್ತೀಯಲ್ಲ!’
‘ನನಗೆ ಆ ವಿಚಾರಗಳನ್ನು ನೀವು ಮೊದಲೇ ತಿಳಿಸಿದಿರಾ? ಕಚೇರಿಯ ವಿಷಯ ಎಂದು ಗುಟ್ಟಾಗಿಟ್ಟು ಕೊಂಡಿದ್ದಿರಿ. ಎಲ್ಲ ಆದಮೇಲೆ -ಹೀಗೆ ಮಾಡಿದೆ, ಹಾಗೆ ಮಾಡಿದೆ ಎಂದು ನನ್ನ ಹತ್ತಿರ ಜ೦ಬ ಕೊಚ್ಚಿ ಕೊಳ್ಳುತ್ತಿದ್ದಿರಿ. ನಾನಾಗಿ ನಿಮ್ಮನ್ನು ಏತಕ್ಕೆ ಕೆದಕಿ ಕೇಳ ಬೇಕು? ಮಾತಿಗೆ ಮೊದಲು ಸ್ತ್ರೀ ಬುದ್ಧಿಃ ಪ್ರಳಯಾಂತಿಕಾ ಎಂದು ಜರೆಯುತ್ತೀರಿ!’
ರಂಗಣ್ಣನಿಗೆ ಸಮಯೋಪಾಯ ಎಂದರೆ ಏನು? ಟ್ಯಾಕ್ಟ್ ಎಂದು ಮೇಲಿನವರು ಹೇಳುತ್ತಿದ್ದುದರ ಅರ್ಥವೇನು? ಎಂಬುದು ಆಗ ಸ್ಪುರಿಸಿತು. ಅನುಭವ ಹೆಚ್ಚಿದಂತೆಲ್ಲ ಸಮಯೋಪಾಯಗಳು ಹೊಳೆಯುತ್ತವೆ ಎಂಬ ತಿಳಿವಳಿಕೆಯೂ ಬಂತು. ಆಗ ಕರಿಯಪ್ಪನ ಮೇಲೆ ಅವನಿಗಿದ್ದ ದುರಭಿಪ್ರಾಯ ಕಡಮೆಯಾಯಿತು. ಜನರೊಡನೆ ವ್ಯವಹರಿಸುವುದು, ಅವರನ್ನು ಒಲಿಸಿಕೊಳ್ಳುವುದು, ಒಂದು ದೊಡ್ಡ ಕಲೆ. ಅದು ಕೇವಲ ಅಭ್ಯಾಸದಿಂದ ಬರತಕ್ಕದ್ದೂ ಅಲ್ಲ ಅದು ನೈಸರ್ಗಿಕವಾಗಿ, ಕಲಿಸದೆ ಬರುವ ವಿದ್ಯೆ, ರಂಗಣ್ಣ ತಾನು ಬಹಳ ಬುದ್ಧಿವಂತನೆಂದೂ ಸಮಯೋಪಾಯಜ್ಞನೆಂದೂ ಹೆಮ್ಮೆಪಟ್ಟು ಕೊಳ್ಳುತ್ತಿದ್ದವನು ಈಗ ಅವನಿಗೆ ತನ್ನ ಹೆಂಡತಿ ತನಗಿ೦ತ ಮೇಲೆಂದೂ ಸ್ತ್ರೀ ಜಾತಿಯನ್ನು ನಿಕೃಷ್ಟವಾಗಿ ಕಾಣಬಾರದೆಂದೂ ಬೋಧೆಯಾಯಿತು. ರ೦ಗಣ್ಣ ಮುಗುಳುನಗೆ ನಗುತ್ತಾ,
‘ಹೆಂಗಸರೂ ಸಾಹೇಬರುಗಳಾಗಬಹುದೆಂದು ನಾನು ಒಪ್ಪುತ್ತೇನೆ!’ ಎಂದು ಹೇಳಿದನು. `ಆ ಕಲ್ಲೇಗೌಡನ ವಿಚಾರದಲ್ಲಿ ಏನು ಮಾಡಬೇಕಾಗಿತ್ತು? ಅವನು ಮಹಾ ದುರಹಂಕಾರಿ, ಸ್ವಾರ್ಥಪರ, ನೀಚ! ಹೇಳು, ನೋಡೋಣ’
`ನನ್ನನ್ನು ಪರೀಕ್ಷೆ ಮಾಡುತ್ತೀರಾ?’
`ಪರೀಕ್ಷೆ ಏನೂ ಅಲ್ಲ. ನಿನ್ನ ಅಭಿಪ್ರಾಯಗಳನ್ನು ತಿಳಿದು ಕೊಳ್ಳೋಣವೆಂದು ಕೇಳುತ್ತೇನೆ. ನಾನು ಮಾಡಿದ್ದು ಸರಿ, ನನ್ನದು ತಪ್ಪಿಲ್ಲ-ಎಂದು ನಾನು ತಿಳಿದುಕೊಂಡಿದ್ದೇನೆ.’
ನಿಮ್ಮದು ತಪ್ಪಿಲ್ಲ ಎಂದು ಹೇಗೆ ಹೇಳುತ್ತೀರಿ? ನಿಮ್ಮ ಆವಲಹಳ್ಳಿಯ ಗೌಡರಿಗೂ ರಂಗನಾಥಪುರದ ಗೌಡರಿಗೂ ತಿ೦ಡಿಪಂಡಿ ಕೊಟ್ಟು ನಯವಾಗಿ ಮಾತನಾಡಿಸಿ ಅವರ ಸ್ನೇಹವನ್ನು ಸಂಪಾದಿಸಿದಿರಿ. ಆ ಕಲ್ಲೇಗೌಡ ಮಾಡಿದ ಪಾಪವೇನು? ದಿವಾನರಾದಿಯಾಗಿ ಆತನನ್ನು ಮುಖಂಡನೆಂದು ಎಲ್ಲರೂ ಗೌರವಿಸುತ್ತಾರೆ; ಆತನ ಮನೆಗೆ ಸಹ ಹೋಗುತ್ತಾರೆ. ನೀವು ಜಂಬದಿಂದ ಆತನನ್ನು ಒತ್ತರಿಸಿಬಿಟ್ಟರಿ, ಒಂದೆರಡು ದಿನ ಆತನ ಮನೆಗೂ ಹೋಗಿ, ಯೋಗಕ್ಷೇಮ ವಿಚಾರಿಸಿ, ನಿಮ್ಮ ಬೀಡಾರಕ್ಕೂ ಕರೆದುಕೊಂಡು ಬಂದಿದ್ದು ಆ ತೇಂಗೊಳಲು ಮತ್ತು ಬೇಸಿನ್ ಲಾಡುಗಳ ರುಚಿಯನ್ನು ತೋರಿಸಿದ್ದಿದ್ದರೆ ನಿಮಗೇನು ತಾನೆ ನಷ್ಟವಾಗುತ್ತಿತ್ತು? ನೀವೇನೂ ಅವನ ಮನೆಯ ಬಾಗಿಲು ಕಾಯಬೇಕಾಗಿರಲಿಲ್ಲ; ಅವನ ಮುಂದೆ ಹಲ್ಲುಗಿರಿಯ ಬೇಕಾಗಿರಲಿಲ್ಲ. ಸ್ನೇಹದ ಮಾಡಿಗೇನು ಕೊರತೆ? ನಿಮಗೆ ಆತನನ್ನು ಕಂಡರೇನೇ ಎಲ್ಲೂ ಇಲ್ಲದ ದ್ವೇಷ! ಈ ಇನ್ಸ್‌ಪೆಕ್ಟರು ನನ್ನನ್ನು ಸಡ್ಡೆಯೇ ಮಾಡುವುದಿಲ್ಲವಲ್ಲ! ಎಂದು ಆತನಿಗೆ ನಿಮ್ಮ ಮೇಲೆ ಕೋಪ! ಅದಕ್ಕೇಕೆ ಅವಕಾಶ ಕೊಟ್ಟಿರಿ?’
`ಅವನು ಹೇಳಿದ ಹಾಗೆಲ್ಲ ಮೇಷ್ಟರುಗಳ ವರ್ಗಾವರ್ಗಿ, ಬಡ್ತಿ ನಾನು ಮಾಡಬೇಕಾಗಿತ್ತೋ?’
‘ನೋಡಿದಿರಾ! ನಿಮಗೆ ಹೇಗೆ ಸಿಟ್ಟು ಏರುತ್ತದೆ! ಆತ ಯಾವಾಗಲೋ ಶಿಫಾರಸು ಮಾಡುವುದರಲ್ಲಿ ಸಮಯ ಸಂದರ್ಭ ನೋಡಿಕೊಂಡು ಹತ್ತಕ್ಕೆ ಎರಡೋ ಮೂರೋ ಮಾಡಿಕೊಟ್ಟರೆ ತಪ್ಪೇನು? ಆವಲಹಳ್ಳಿಯ ಗೌಡರು ಶಿಫಾರಸು ಮಾಡಿಯೇ ಇಲ್ಲವೇ? ಮೇಷ್ಟರುಗಳಿಗೆ ಕಷ್ಟ ನಿಷ್ಟುರಗಳಾದಾಗ ಯಾರಾದರೂ ದೊಡ್ಡ ಮನುಷ್ಯರನ್ನು ಆಶ್ರಯಿಸಿ ಸಾಹೇಬರಿಗೆ ಶಿಫಾರಸು ಹೇಳಿಸುವುದಿಲ್ಲವೇ? ಕಲ್ಲೇಗೌಡ ದೊಡ್ಡ ಮನುಷ್ಯನಲ್ಲವೇ? ಮುಖಂಡನಲ್ಲವೇ? ಆತನೂ ಶಿಫಾರಸು ಮಾಡಲಿ ನಿಮ್ಮ ಬುದ್ಧಿಯನ್ನು ನೀವು ಉಪಯೋಗಿಸಿ, ಹಾವು ಸಾಯಬಾರದು ಕೂಲು ಮುರಿಯಬಾರದು ಎಂಬಂತೆ, ನೆಂಟೂ ಉಳಿಯಬೇಕು ಗಂಟೂ ಉಳಿಯಬೇಕು ಎಂಬಂತೆ ಉಪಾಯಮಾಡಬೇಕಾಗಿತ್ತು. ನೋಡಿ! ಜನರನ್ನು ಕಳೆದು ಕೊಳ್ಳಬಾರದು, ಎದುರು ಹಾಕಿಕೊಳ್ಳಬಾರದು. ಅಷ್ಟು ನಿಮಗೆ ಗೊತ್ತಾಗಲಿಲ್ಲ.’
`ಅವನು ತನ್ನ ಕಟ್ಟಡಕ್ಕೆ ಬಾಡಿಗೆ ತೆಗೆದುಕೊಳ್ಳುತ್ತಾ ಇದ್ದ; ರಿಪೇರಿ ಮಾತ್ರ ಮಾಡಿಕೊಡಲಿಲ್ಲ. ಯಾರು ಹೇಳಿದರೂ ಲಕ್ಷವೇ ಇಲ್ಲ. ಏನಾಗಿದೆ ಆ ಕಟ್ಟಡಕ್ಕೆ? ದಿವಾನರಿಗೆ ಅಲ್ಲಿ ಅಟ್ ಹೋಂ ಕೊಟ್ಟರೆ ಕುಣೀತಾ ಬಂದು ಕುಳಿತುಕೊಳ್ಳುತ್ತಾರೆ-ಎಂದು ಲಾಘವದಿಂದ ಮಾತನಾಡಿದ. ಅವನನ್ನು ದೊಡ್ಡ ಮನುಷ್ಯನೆಂದು ಹೇಳಬಹುದೇ? ನಾನು ಮಾಡಿದ್ದಾದರೂ ಏನು? ಮರ್ಯಾದೆಯಾಗಿ ಕಾಗದವನ್ನು ಬರೆದೆ; ಜ್ಞಾಪಕ ಕೊಟ್ಟೆ. ಅಲ್ಲಿ ಪ್ಲೇಗ್ ಇಲಿ ಬಿತ್ತು; ಡಿಸಿನ್ಫೆಕ್ಷನ್ ಮಾಡಿಸುವುದಕ್ಕೆ ಆಗುವುದಿಲ್ಲ ಎಂದು ವೈಸ್ ಪ್ರೆಸಿಡೆಂಟ್ ಹೇಳಿದರು; ಪಾಠಶಾಲೆಯನ್ನು ಮಿಡಲ್ ಸ್ಕೂಲು ಕಟ್ಟಡದಲ್ಲಿ ಮಾಡಿ ಎಂದು ಸಾಹೇಬರು ಆರ್ಡರ್ ಮಾಡಿದರು. ನನ್ನ ಮೇಲೆ ವೃಥಾ ದ್ವೇಷ ಆ ಕಲ್ಲೇಗೌಡನಿಗೆ ಬೆಳೆಯಿತು.’
`ನೀವು ಆ ಕಟ್ಟಡವನ್ನು ಖಾಲಿ ಮಾಡಬೇಕು ಎಂಬುವ ಹಟದಿಂದಲ್ಲವೇ ಕಾಗದ ಗೀಗದ ಬರೆದು ರಿಕಾರ್ಡು ಇಟ್ಟು ಕೊಂಡದ್ದು! ಪ್ಲೇಗ್ ಇಲಿ ಬೀಳದೇ ಇದ್ದಿದ್ದರೆ ಏನು ಮಾಡುತ್ತಿದ್ದಿರಿ? ನಾನು ಮೊದಲೇ ಹೇಳಿದಂತೆ ಆತನನ್ನು ಸ್ನೇಹಭಾವದಿಂದ ಕಂಡು, ನಿಮ್ಮ ಯೋಗ್ಯತೆ, ವಿದ್ಯೆ, ಸಭ್ಯತೆ ಮೊದಲಾದುವು ಆತನಿಗೆ ತಿಳಿಯುವಂತೆ ವರ್ತಿಸಿದ್ದಿದ್ದರೆ ಆತನಿಗೂ ನಿಮ್ಮಲ್ಲಿ ಗೌರವ ಹುಟ್ಟುತ್ತಿತ್ತು; ನೀವು ಆಗ ಒಂದು ಮಾತನ್ನು ಹೇಳಿದ್ದರೆ ರೀಪೇರಿ ಮಾಡಿಕೊಡುತ್ತಿದ್ದ. ಒಂದು ವೇಳೆ ಮಾಡಿ ಕೊಡಲಿಲ್ಲ ಅನ್ನಿ. ನಿಮ್ಮ ಉಪಾಧ್ಯಾಯರ ಸಂಘದ ಸಭೆಗಳನ್ನು ಎಲ್ಲೆಲ್ಲೂ ಸೇರಿಸುತ್ತಿದ್ದಿರಲ್ಲ, ತಿಪ್ಪೂರಿನಲ್ಲಿ ಸೇರಿಸಿ ವಾರ್ಷಿಕೋತ್ಸವ ಮಾಡಿ ದೊಡ್ಡ ಸಾಹೇಬರನ್ನು ಅಧ್ಯಕ್ಷರನ್ನಾಗಿ ಬರಮಾಡಿಕೊಳ್ಳಬೇಕಾಗಿತ್ತು. ಕಲ್ಲೇಗೌಡರನ್ನೂ ಕರೆಸಿಕೊಂಡು, ಊರಿನ ವೈಸ್ ಪ್ರೆಸಿಡೆಂಟ್ ಮೊದಲಾದವರನ್ನೂ ಕರೆಸಿಕೊಂಡು ಸ್ಕೂಲು ಮುಂದಿನ ಚಪ್ಪರದಲ್ಲಿ ಕೂಡಿಸ ಬೇಕಾಗಿತ್ತು. ದೊಡ್ಡ ಸಾಹೇಬರೇ ನೇರಾಗಿ ಕಲ್ಲೇಗೌಡನೊಡನೆ ಮಾತನಾಡುತ್ತಿದ್ದರು. ವೈಸ್ ಪ್ರೆಸಿಡೆಂಟ್ ಮೊದಲಾದವರು ದೊಡ್ಡ ಸಾಹೇಬರಿಗೆ ತಾವೇ ಹೇಳುತ್ತಿದ್ದರು. ಆಗ ನೀವು ನಿಷ್ಠುರಕ್ಕೆ ಗುರಿಯಾಗುತ್ತಿರಲಿಲ್ಲ! ಕಲ್ಲೇಗೌಡನು ಕೂಡ ಆ ಸಂದರ್ಭದಲ್ಲಿ ಮಾನ ಉಳಿಸಿಕೊಳ್ಳುವುದಕ್ಕಾಗಿ ಕಟ್ಟಡದ ರಿಪೇರಿ ಮಾಡಿಸುತ್ತಿದ್ದನೋ ಏನೋ! ಅದೂ ಬೇಡ. ಮೇಲಕ್ಕೆ ಬರೆದು ಸರ್ಕಾರದ ಕಟ್ಟಡವನ್ನು ಯಾವಾಗಲೋ ಕಟ್ಟಿಸಬಹುದಾಗಿತ್ತಲ್ಲ! ಮುಖ್ಯವಾಗಿ ನೋಡಿ! ನಿಮಗೆ ಜ೦ಬ ಹೆಚ್ಚು! ಎಲ್ಲರೂ ನಿಮ್ಮನ್ನು ಆಶ್ರಯಿಸಬೇಕು, ಹೊಗಳಬೇಕು ಎಂಬ ಚಾಪಲ್ಯ ಇಟ್ಟು ಕೊಂಡಿದ್ದೀರಿ! ನಿಮ್ಮ ಉಡುಪು ನೋಡಿದರೇನೇ ಸಾಕು, ಮಹಾ ಜಂಬಗಾರರು ಎಂದು ಎಲ್ಲರ ಕಣ್ಣೂ ಬೀಳುತ್ತದೆ!’
ರಂಗಣ್ಣನಿಗೆ ನಗು ಬಂತು. ತನ್ನ ಉಡುಪಿನ ಮೇಲೆ ಊರ ಜನರ ಕಣ್ಣು ಬೀಳುವುದಿರಲಿ; ತನ್ನ ಹೆಂಡತಿಯ ಕಣ್ಣೂ ಬಿದ್ದಿದೆ ಎಂದು ಅವನಿಗೆ ತಿಳಿಯಿತು.
`ನೀನು ಜಂಬವನ್ನು ಮಾಡುವುದಿಲ್ಲವೋ? ಅಮಲ್ದಾರರ ಹೆಂಡತಿ, ಪೊಲೀಸ್ ಇನ್‌ಸ್ಪೆಕ್ಟರ ಹೆಂಡತಿ ಮೊದಲಾದವರಿಗಿಂತ ಠೀಕಾಗಿರಬೇಕು ಎಂದು ನೀನು ಹೊಸಹೊಸ ಸೀರೆಗಳನ್ನು ಕೊಂಡುಕೊಳ್ಳುತ್ತಾ ಇಲ್ಲವೋ? ನನ್ನ ಸರ್ಕಿಟಿನ ದಿಂಬುಗಳಿಗೆಲ್ಲ ಕಸೂತಿ ಹಾಕಿದ ಗವಸುಗಳನ್ನು ಮಾಡೆಂದು ನಾನು ಹೇಳಿದೆನೇ? ಅವುಗಳಲ್ಲಿ ನೀಲಿ ದಾರದಿಂದ ನನ್ನ ಹೆಸರನ್ನು ರಚಿಸೆಂದು ಕೇಳಿದೆನೇ? ನಿನಗೂ ನಿನ್ನ ಗಂಡ ಜಂಬಮಾಡ ಬೇಕೆಂದು ಬಯಕೆ ಇದೆ! ಹೋಗಲಿ ಬಿಡು, ಆ ಉಗ್ರಪ್ಪರನ ವಿಚಾರದಲ್ಲಿ ನೀನು ಏನು ಮಾಡುತ್ತಿದ್ದೆ? ಹೇಳು ನೋಡೋಣ.’
‘ನಾನು ಮಾಡುತ್ತಿದ್ದುದೇನು? ಅವನ ಮುಖಂಡರು ನಿಮ್ಮ ಸ್ನೇಹಿತರೆಂದು ಅವನಿಗೆ ತಿಳಿದಿದ್ದರೆ ಅವನೇಕೆ ತುಂಟಾಟ ಮಾಡುತ್ತಿದ್ದ! ಅವನೇನೋ ದುಷ್ಟ ಎಂದು ಇಟ್ಟು ಕೊಳ್ಳಿ. ಎರಡು ದಿನ ಅವನಿಗೆ ಹೆಡ್‌ಮೇಷ್ಟರ ಕೆಲಸ ಕೊಡಬೇಕಾಗಿತ್ತು! ತಮ್ಮ ಮಕ್ಕಳನ್ನು ಪಾಠ ಶಾಲೆಗೆ ಸೇರಿಸದೇ ಹೋದಾಗ ಊರಿನ ಜನ ಗಲಾಟೆ ಎಬ್ಬಿಸುತ್ತಿದ್ದರು; ಅವನ ಮೇಲೆ ಊರಿನ ಜನರೇ ದೂರು ಹೇಳುತ್ತಿದ್ದರು; ಅವನನ್ನು ಬೇಕಾದ ಹಾಗೆ ಅವರೇ ಬಯ್ಯುತ್ತಿದ್ದರು. ಆ ಕಷ್ಟಗಳನ್ನೂ, ನಿಮ್ಮ ಆರ್ಡರುಗಳ ಜೋರನ್ನೂ ಎರಡು ದಿನ ಅವನು ಅನುಭವಿಸಿದ್ದರೆ ಚೆನ್ನಾಗಿರುತ್ತಿತ್ತು! ದಂಡನೆ ಮಾಡುವುದಕ್ಕೆ ಏನು! ಸಾಹೇಬರುಗಳಿಗೆ ನೆಪಗಳು ಬೇಕಾದಷ್ಟು ಇದ್ದೇ ಇರುತ್ತವೆ. ಯಾವಾಗಲಾದರೂ ಮಾಡಬಹುದು. ಒಲ್ಲದ ಗ೦ಡನಿಗೆ ಮೊಸರಿನಲ್ಲಿ ಕಲ್ಲು ಎಂದು ಕೇಳಿಲ್ಲವೇ? ಆದರೂ ನಿಮ್ಮ ಇಲಾಖೆಯಂಥ ಕೆಟ್ಟ ಇಲಾಖೆ ಬೇರೆ ಇರಲಾರದು! ನೀವೇ ಆಗಾಗ ಹೇಳುತ್ತಿದ್ದಿರಿ; ಕಟ್ಟಡಗಳಿಲ್ಲ, ಸರಿಯಾದ ಮೇಷ್ಟರುಗಳಿಲ್ಲ, ಪಾಠೋಪಕರಣಗಳಿಲ್ಲ; ಮಕ್ಕಳನ್ನು ಕುರಿಗಳಂತೆ ತುಂಬುತ್ತಾರೆ, ಯೋಗ್ಯತೆ ಇಲ್ಲದಿದ್ದರೂ ಪಾಸು ಮಾಡಿಸುತ್ತಾರೆ; ಮೇಲಿನ ಅಧಿಕಾರಿಗಳು ಬರಿ ಜಬರ್ದಸ್ತಿನವರು. ತಮಗೆ ಕನ್ನಡ ಏನೂ ಬರದಿದ್ದರೂ ವಿಧವೆಗೆ ಕೂಡ ಜುಲ್ಮಾನೆ ಹಾಕುತ್ತಾರೆ; ಮೇಷ್ಟರುಗಳನ್ನೆಲ್ಲ ಹುಚ್ಚು ಹುಚ್ಚಾಗಿ ದಂಡಿಸುತ್ತಾರೆ. ಉಪಾಧ್ಯಾಯರ ಸಭೆಗಳಲ್ಲಿ ಭಾಷಣ ಮಾಡುವಾಗ ನೀವೆಲ್ಲ ಗುರುಗಳು, ದೇಶೋದ್ಧಾರಕರು; ಹೊಟ್ಟೆಗಿಲ್ಲದಿದ್ದರೇನು? ಸಂಬಳವೇ ಮುಖ್ಯವಲ್ಲ; ಸೇವೆಯೇ ಮುಖ್ಯ. ನಿಮಗೆ ಗೌರವದ ಕಾಣಿಕೆಯನ್ನು ದೇಶವೇ ಸಲ್ಲಿಸುತ್ತದೆ-ಎಂದು ಮುಂತಾಗಿ ಹರಟುತ್ತಾರೆ ಎಂದು ನೀವು ಹೇಳುತ್ತಿರಲ್ಲಿಲ್ಲವೆ?’
`ಇತರ ಇಲಾಖೆಗಳು ಇರುವಹಾಗೆಯೇ ನಮ್ಮ ಇಲಾಖೆಯ ಇದೆ. ಮುಂದೆ ಪ್ರಜಾ ಸರ್ಕಾರ ಬಂದಾಗ ಹೆಚ್ಚಾಗಿ ಹಣ ಒದಗಿ ದಕ್ಷ ರಾದ ಸಿಬ್ಬಂದಿ ಒದಗಿ ಎಲ್ಲವೂ ಸರಿಹೋಗುತ್ತದೆ ನಾನಂತೂ ಮೇಷ್ಟರುಗಳನ್ನು ಗೌರವದಿಂದಲೂ ವಿಶ್ವಾಸದಿಂದಲೂ ನಡೆಸಿಕೊಂಡು ಬಂದೆ. ಅವರ ಗೌರವವನ್ನೂ ವಿಶ್ವಾಸವನ್ನೂ ಸಂಪಾದಿಸಿಕೊಂಡೆ. ಅದನ್ನಾದರೂ ನೀನು ಮೆಚ್ಚುತ್ತೀಯೋ ಇಲ್ಲವೋ?’
‘ನೀವು ನಿಮ್ಮ ಸರ್ಜ್ ಸೂಟನ್ನೋ ಸಿಲ್ಕ್ ಸೂಟನ್ನೂ ಹಾಕಿಕೊಂಡು ನನ್ನ ಮುಂದೆ ಸ್ವಲ್ಪ ಇನ್‌ಸ್ಪೆಕ್ಟರ್ ಠೀವಿ ಮಾಡಿ! ಆಗ ನನ್ನ ಉತ್ತರ ದೊರೆಯುತ್ತ!’ ಎಂದು ನಗುತ್ತಾ ಆಕೆ ಎದ್ದು ಹೋದಳು. ಹಾಲಿನಲ್ಲಿ ಗಲಾಟೆ ಮಾಡುತ್ತಿದ್ದ ಮಕ್ಕಳ ಕೈಯಿಂದ ಊದುಗೊಳವೆ ಮತ್ತು ಜಾಗಟೆಗಳನ್ನು ಕಿತ್ತು ಕೊಂಡಳು. ಗಂಡನ ರುಮಾಲನ್ನು ತಂದು ನಿಲುಕಟ್ಟಿನ ಕೊಕ್ಕೆಗೆ ಹಾಕಿದಳು.
*****
ಮುಂದುವರೆಯುವುದು