೧
ತಲೆತಲಾಂತರದಲ್ಲಿ ನುಗ್ಗಿ
ಹರಿದು ಹಾರಿ ತೇಲಿಬರುತಿದೆ
ಹೆಸರುಹೊತ್ತು ಇದು ಗಂಡಸರ ಜಗತ್ತೆಂದು
ಗಂಡಸಾಕಾರದ ಮುಖವಾಡಗಳಿಗೆ
ನಾವೇ ಇಟ್ಟ ಮರ್‍ಯಾದೆಯ ಹೆಸರುಗಳು
ಅಜ್ಜ, ಅಪ್ಪ, ಚಿಕ್ಕಪ್ಪ, ದೊಡ್ಡಪ್ಪ, ಅಣ್ಣ, ತಮ್ಮ
ಮಾವ, ಮೈದುನ, ಗೆಳೆಯ, ಪರಿಚಿತ, ನೆರೆಯಾತ,
ಗುರು, ಹಿರಿಯ, ಸ್ವಾಮಿ, ಸಾಧು, ದೀನಬಂಧು,
ಎಲಾ ಇವರಿವರಾ…. ಛೇ…
ಇವರ ಶತಶತಮಾನದ ವೀರ್ಯಾಣುಗಳು
ಹರಿದು ನುಗ್ಗಿ ಬರುತ್ತ
ಹೆಣ್ಣಿನಾಳಕೆ ಕೊಕ್ಕೆ ಹಾಕಿ ಕೇಕೆ ಹೊಡೆದು
ಮತ್ತೆ ಧರೆಗುರುಳಿ ಮತ್ತೆ ಮತ್ತೆ ಪಾಚಿಗಟ್ಟಿ
ಗೊರಲಿಗೊಂದು ಬಿದ್ದು ಕೊಳೆತು ನಾರಿ
ತಾಯಿಸೃಷ್ಟಿಗೆರಗುವ ಕಾಮಾಂಧರು
ಪಾಚಿಗಟ್ಟಿದ ಪುರುಷಾವತಾರದ ರಾಕ್ಷಸರು.
ತರತರಹದಾ ಯುಕ್ತಿಯ
ಬರ್ಚಿಗಳು ಹಿಡಿದಿಡಿದು ದುರ್ಗೆಯರು ನಿಮ್ಮ ಮರ್‍ಮಾಂಗಕೆ
ಕತ್ತರಿ ಹಾಕಿ ಕತ್ತಿಗೆ ನೇಣು ಬಿಗಿಸಿ
ನಿಮ್ಮಂಗಾಂಗಳನ್ನು ನಾಯಿನರಿಗಳಿಗೆ ಎಸೆದು
ಸಾಬೀತು ಪಡಿಸುತ್ತಾರಿನ್ನು
ಇದು ಹೆಂಗಸರ ಜಗತ್ತೆಂದು.
೨
ಇಂಚಿಂಚಾಗಿ ಅವಳ ದೇಹ ಕತ್ತರಿಸಿ
ನೆತ್ತರು ಹರಿಸಿ ಧ್ವನಿ ಇಂಗಿಸಿ
ಎಸೆದ ಪುರುಷಾಕಾರವೇ
ಯಾವ ತಪ್ಪಿಗೆ ಅವಳಿಗೀ ಶಿಕ್ಷೆ.
ಕತ್ತಲು ಕೋಣೆಯಲಿ ಕುಳಿತ
ಅವಳ ಸೀಳಿದದೇಹದೊಳಿಂದ
ಇನ್ನೂ ಬೆಂಕಿಸ್ರಾವವಾಗುತ
ಕರಗಿ ಕ್ಷಣ ಕ್ಷಣಕೂ ಸಾಯುತಿಹಳು
ಹೃದಯ ಬಡಿತದೊಳಗೆ
ಮುಖ ನೋಡಿಕೊಳ್ಳುತ
ಬೆಳಕಿಗೆ ಮುಖತೋರುವುದೆಂತು
ಮುಖವಾಡ ಹಾಕುವುದೋ ಕಳಚುವುದೊ
ರಕ್ತಕಣ್ಣೀರು ಕಾರುತ
ಸೋತು ಸೋತು ಹೋಗುತಿರುವಳು
೩
ನಿಮ್ಮ ನೆರೆಮನೆಯದೇ ಮುಗ್ಧ ಮಗು
ಅಣ್ಣಾ ಎಂದು ರಾಖಿಕಟ್ಟಿ
ನಿನ್ನಪ್ಪನಿಗೆ ಅಪ್ಪಾ ಎಂದು
ನಿನ್ನಜ್ಜನಿಗೆ ಅಜ್ಜಾ ಎಂದು ಹೇಳಿ
ನಿನ್ನ ಸೋದರಿ ಜೊತೆ ಸೋದರಿಯಾಗಿಯೇ
ಬಂದು ಮುದ್ದಾಗಿ ಓಡಾಡಿ ಹೋಗಿತ್ತಲ್ಲ
ಪುಟ್ಟದೇವತೆಯಂತೆ
ಹಾಲುಗಲ್ಲದ ತೊದಲು ಮಾತನಾಡುವ
ಹಸುಳೆಕಂದಾ ನಿನ್ನ ಮೋಸಗೊಳಿಸಿ
ಹಾಡೇಹಗಲು ಕತ್ತಲೆಕೋಣೆಗೆ ಕರೆದು
ಪಿಶಾಚಿಗಳಾದವಲ್ಲವೆ ಅವು-
ಹೆಣ್ಣೆಂದರೇನೆಂದರಿಯದೆ
ತೊಂಡರಗೂಳಿಯಂತೆ
ಗುಲಾಬಿಗೂಡಿಗೆ ನುಗ್ಗಿ
ಚಿಲ್ಲಾಪಿಲ್ಲಿಯಾಗಿಸಿದವಲ್ಲೆ
ನಿನ್ನ ಮೈಮನದ ಪಕಳೆಗಳು.
ಗೊಡ್ಡುಬೀಳಲಿ ಅವುಗಳ ಪುರುಷತ್ವ
ನಿನ್ನ ನೋವು ದುಃಖ ಶಾಪವಾಗಲಿ
ಬಂದು ಬೀಳಲಿ ನಿನ್ನ ಕಾಲಕೆಳಗೆ
ಬಾಣಬರ್‍ಚಿಗೆ ನಿನ್ನ ಮರ್ಮಾಂಗದ ರಕ್ತ
ಹಚ್ಚಿ ಅವುಗಳ ಇಡೀ ಮೈ ಸೀಳುತ ಸೀಳುತ
ಚಾಮುಂಡಿಯಾಗು ತಾಯಿ ಚಾಮುಂಡಿಯಾಗು.
೪
‘ಕೃಷ್ಣನ ನೆನೆದರೆ ಕಷ್ಟ ಎಂತಿಷ್ಟಿಲ್ಲ
ಕೃಷ್ಣ ಎನಬಾರದೆ’-
‘ಧರ್ಮೋ ರಕ್ಷತಿ ರಕ್ಷಿತಃ’-
ಅಯ್ಯೋ’ ಎಲ್ಲಿರುವಿರಿ ದೇವರುಗಳೇ
ಎಲ್ಲಿದೆ ಧರ್ಮ ನ್ಯಾಯ ನೀತಿ
ನೀವೇ ಸೃಷ್ಟಿಸಿದ ಮುಗ್ಧಮಕ್ಕಳ ಮರ್ಮಾಂಗಕ್ಕೆ
ಹಲ್ಲೆಯಾಗುತ್ತಿದೆ. ಹೆದರಿಗುಬ್ಬಚ್ಚಿಯಾಗುತ್ತಿವೆ
ಮಾತೇ ಹೊರಡದೆ ಪಿಳಿಪಿಳಿ ಕಣ್ಣು ಬಿಡುತ
ಸುಸ್ತಾಗಿ ಸೊರಗಿಹೋಗಿವೆ.
ಅಯ್ಯಾ ದೇವರುಗಳೆ ನೀವೆಲ್ಲಿದ್ದೀರಿ
ಭಕ್ತಿ ಪ್ರೀತಿಯಿಂದ ನಿಮಗಿಟ್ಟ ಹೆಸರುಗಳು
ರಾಧೆಕೃಷ್ಣ, ಪಾರ್‍ವತಿಪತಿ, ಲಕ್ಷ್ಮೀನಾರಾಯಣ
ಜಾನಕಿವಲ್ಲಭ… ಅಲೆಲೆಲೇ…
ನಿಮ್ಮ ಸಂತಸದ ಕಾಮಕ್ರೀಡೆಯ ಫಲ
ನಿಮ್ಮದೇ ಸಂತತಿಯ ಮಕ್ಕಳ ಆಕ್ರಂದನ ನೋವು
ಕೇಳಿಸುತ್ತಿಲ್ಲವೆ ಕಾಣಿಸುತ್ತಿಲ್ಲವೆ?
ಅಯ್ಯೋ ದೇವರುಗಳೆ ನೀವೆಲ್ಲಿದ್ದೀರಿ
ಶಂಕ ಚಕ್ರ ಗಧೆ ತ್ರಿಶೂಲಗಳನೆಸೆದು
ಗುಡಿಗುಂಡಾರಗಳ ಬಿಟ್ಟು ಹೊರಬಂದು
ಉಳಿಸಿ ರಕ್ಷಿಸಿಕೊಳ್ಳಿ ನಿಮ್ಮದೇ ವಂಶವೃಕ್ಷದ
ಮಕ್ಕಳ ಮಾನ ಪ್ರಾಣ.
೫
ಕಾಡುಮೇಡಗಳಲಲೆವ ಕಾಡುಗಾತಿಯರೆ
ಮಾಯಮಾಟಗಾತಿಯರೆ
ಹೊಟ್ಟೆಗೆ ಬಿದ್ದ ಹಸಿವಿನ ಬೆಂಕಿಗೆ
ರಕ್ಕಸಿಯರಾಗಿ ಹೆದರಿಸಿ ಬಲಿ ಕೇಳಿ
ರಕ್ತ ಕುಡಿದವರೆ ಮಾಂಸ ತಿಂದವರೆ ಈಗೆಲ್ಲಿ ಇರುವಿರೇ-
ದ್ಯಾಮವ್ವ ದುರಗವ್ವ ಚೌಡಮ್ಮ ಮಾರಮ್ಮ
ಕಾಳಮ್ಮ ಮೂಕಮ್ಮ ಉಧೋ ಉಧೋ!
ಬಹುಪರಾಕಗಳ ನಡುವೆ ಹೊರಳಾಡಿ
ಮುತ್ತು ಮಾಣಿಮಾಣಿಕ್ಯಗಳ ಭಾರದಲಿ
ತೊನೆದಾಡಿ ಏನೆಲ್ಲ ಬಾಚಿ ತೋಚಿ
ಎಲ್ಲೆಲ್ಲಿ ತೇಲಿಹೋದಿರೆ ನೀವು ಎಲ್ಲೆಲ್ಲಿ ಹೋದಿರಿ-
ಊರ ಹೆಬ್ಬಾಗಿಲಲಿ ಕುಳಿತು
ಊರವರ ಕಾಯುವವರೆ
ದೆವ್ವ ಪಿಶಾಚಿಗಳ ಹೊಡೆದೋಡಿಸುವವರೆ
ಬಾಣ ಬರ್‍ಚಿಗಳ ಹಿಡಿದು
ಚಂಡಿ ಚಾಮುಂಡಿಯಾಗಿ
ಪುಂಡಪೋಕರಿಗಳ ಚಚ್ಚಿ ಕೊಲ್ಲುವವರೆ
ಈಗೆಲ್ಲಿ ಹೋಗಿರುವಿರೆ ನೀವು ಈಗೆಲ್ಲಿ ಹೋಗಿರುವಿರಿ-
ನಿಮ್ಮ ಕಣ್ಣು ತಪ್ಪಿಸಿ ತುಟಿಗೆ ತುಪ್ಪ ಸವರಿ
ಊರೊಳಗೆ ನುಗ್ಗಿವೆ ಕಾಡುದನಗಳು
ನಿಮಗೇನು ಕೊರತೆ ಕಾಡಿತ್ತೆ
ಹೊಸ ಹೊಸ ಬಟ್ಟೆಬರೆ ಉಡಿತುಂಬ ಹಣ್ಣುಕಾಯಿ
ಊರವರ ಪ್ರೀತಿ ನೈವೇದ್ಯಗಳಿರುವಾಗ
ಊರಬಿಟ್ಟು ಅಲೆಯಲು ಹೋದಿರೆಲ್ಲೆ ನೀವು ಹೋದಿರೆಲ್ಲಿ-
ಬೇಡಬೇಡಿನ್ನು ನಿಮ್ಮ ಒಡವೆ ವೈಡೂರ್ಯಗಳ
ಜರಿಪೀತಾಂಬರಗಳ ಭಾರ
ಬಂಗಾರ ಪಂಜರ ಬೆಳ್ಳಿ ಪೀಠದ ಅಲಂಕಾರ
ಅಲ್ಲೇ ಕೂತಲ್ಲಿ ಕೂತು ನಿಂತಲ್ಲಿ ನಿಂತು
ಮೈಭಾರ ಮಂಡಿನೋವು ತಲೆಬಿಸಿ
ಅದೇ ರುಚಿ ಅದೇನೋಟ
ತಪ್ಪೇನು ಸುತ್ತಾಡುವುದು
ಬಣ್ಣಬಣ್ಣದ ಜಾಗತೀಕರಣದ ಕೈಚಳಕ
ಮುಂದಾಲೋಚನೆ ಗೊತ್ತಾಗಬೇಡವೇ ನಮಗಿನ್ನು.
ಸಾಕು ಸಾಕಿನ್ನು ನಮಗೆ ಪೂಜೆ ಪುನಸ್ಕಾರ;
ನಿಮ್ಮ ದೀನ ಆರ್ತನಾದ
ನಾವಿನ್ನು ನೀವು ನೀವಿನ್ನು ನಾವು ಸೋದರಿಯರೆ
ನರಳುವಿಕೆಯ ಸಂಕಟ; ನೋವಿನ ಕಹಿ-
ಕಪ್ಪು ಕಣ್ಣೀರು; ನೀಲಿರಕ್ತದ ಹತಾಷೆಗೆ-
ರೋಷಗೊಂಡು ಕೆಕ್ಕರಿಸಿ ಈ ವರೆಗೂ
ಈಟಿ ಗುರಾಣಿ ಹಿಡಿದಿದ್ದೆವು.
ಇನ್ನು ಇನ್ನೇಕೆ ತಡ
ವ್ಯಭಿಚಾರ ಅತ್ಯಾಚಾರಿಗಳಿಗೆ
ಕೈಗೆ ಕೈ, ಕಣ್ಣಿಗೆ ಕಣ್ಣು, ಕಾಲಿಗೆ ಕಾಲು, ಮುತ್ತಿಗೆ ಮುಖ
ಯೋನಿಗೆ ಶಿಷ್ನ. ತಲೆಗೆ ತಲೆಗಳು
ಸೀಳಿ ತುಂಡರಿಸಿ ನಾಯಿನರಿಗಳಿಗೆಸೆಯಲು
ಇದ್ದ ಈಟಿ ಗುರಾಣಿ ಹರಿತಗೊಳಿಸಿ
ಜಾಗತೀಕರಣದ ಹೊಸ ಹೊಸ ಆಯುಧಗಳು
ಕೊಳ್ಳಲು ದೊಡ್ಡೂರಿನ ಪೇಟೆಗಳಿಗೆ ಹೋಗಿದ್ದೆವಷ್ಟೆ-
ಸಾಕಿನ್ನು ನಮಗೆ ಕೋಳಿ ಕುರಿಗಳ ಬಲಿ
ಬೇಕಿನ್ನು ನಮಗೆ ತಿಂದು ತೇಗಾಡಲು
ನರಹಂತಕ ಅತ್ಯಾಚಾರಿ ರಾಕ್ಷಸರ ಇಡಿ ಇಡಿಯಾದ
ಬಲಿ
* * *
ಕಾರ್‍ಯ ಸಿದ್ಧಿಗೊಳಿಸಿ ತಾಯಿಯರೆ ದೇವಿಯರೆ
ಪರಾಕು ಹೇಳೆವು ನಿಮ್ಮ ಮಾತಿಗೆ ಮರುಳಾಗಿ
ಹೇಳೇ ಹೇಳುವೆವು ಒಂದರಮೇಲೊಂದನು ನೀವು ಚೆಂಡಾಡಿ
ನಮ್ಮ ಕೊರಳಿಗೆ ರುಂಡಮಾಲೆ ಬಿದ್ದಾಗ
ನ್ಯಾಯದ ಹುಡಿ ಮುಗಿಲುಮುಟ್ಟಿದಾಗ.
*****