ನಾಗೇನಹಳ್ಳಿಯಲ್ಲಿ ಪ್ರಾರಂಭೋತ್ಸವ
ಕಲ್ಲೇಗೌಡನೂ ಕರಿಯಪ್ಪನೂ ಜನಾರ್ದನಪುರದಲ್ಲಿ ಎರಡು ದಿನಗಳಿದ್ದು ತಂತಮ್ಮ ಊರುಗಳಿಗೆ ಹಿಂದಿರುಗಿದರು. ಸಿದ್ದಪ್ಪ ತಮಗೆ ಪ್ರತಿಕಕ್ಷಿಯಾಗಿದ್ದಾನೆಂದೂ, ದಿವಾನರಿಗೆ ತಮ್ಮ ವಿಚಾರಗಳನ್ನೆಲ್ಲ ಅವನು ತಿಳಿಸಿದ್ದಾನೆಂದೂ ಅರಿವಾದ ಮೇಲೆ ಆ ಮುಖಂಡರಿಬ್ಬರ ಹುರುಪು ಬಹುಮಟ್ಟಿಗೆ ಇಳಿದು ಹೋಯಿತು. ಆದರೆ ಇನ್ ಸ್ಪೆಕ್ಟರ ವಿಚಾರದಲ್ಲಿ ಛಲವೇನೂ ಕಡಮೆಯಾಗಲಿಲ್ಲ. ಬಹಿರಂಗವಾಗಿ ಪ್ರತಾಪಗಳನ್ನು ಕೊಚ್ಚಿ ಕೊಳ್ಳುವ ಬದಲು ಅಂತರಂಗವಾಗಿ ಕೆಡುಕನ್ನು ಬಗೆಯುತ್ತ, ಉಗ್ರಪ್ಪನಿಗೆ ಸ್ವಲ್ಪ ಸಮಾಧಾನ ಹೇಳಿ ಅವರು ಹೊರಟುಹೋದರು. ಅವರು ತೋಲಗಿ ಹೋದ ಮಾರನೆಯ ದಿನ ಸಿದ್ದಪ್ಪನೂ ತಿಮ್ಮರಾಯಪ್ಪನೂ ಬೆಂಗಳೂರಿಗೆ ಹೊರಡಲು ಸಿದ್ಧರಾದರು. ಆ ಅವಧಿಯಲ್ಲಿ ಸಿದ್ದಪ್ಪ ಅಮಲ್ದಾರರನ್ನೂ ಪೊಲೀಸ್ ಇನ್ಸ್ಪೆಕ್ಟರನ್ನೂ ಭೇಟಿ ಮಾಡಿದ್ದನು. ರಂಗಣ್ಣನಿಗೆ ಮೂರು ದಿನಗಳಿಂದ ಮನೆ ತುಂಬಿದಂತೆ ಇತ್ತು; ಸ್ನೇಹಿತರೊಡನೆ ಸರಸ ಸಲ್ಲಾಪಗಳು, ತಿಂಡಿಗಳು, ಔತಣಗಳು – ಈ ಸಮಾರಂಭದಲ್ಲಿ ಬಹಳ ಸಂತೋಷವಾಗಿತ್ತು. ಅವರು ಹೊರಟುಹೋದಮೇಲೆ ಮನೆಯಲ್ಲಿ ಕಳೆಯೇ ಇರುವುದಿಲ್ಲವಲ್ಲ ಎಂದು ಚಿಂತಾಕ್ರಾಂತನಾದನು. ಕಡೆಗೆ ರೈಲ್ವೆ ಸ್ಟೇಷನ್ನಿಗೆ ಹೊರಟಿದ್ದಾಯಿತು. ರೈಲು ಬರುವ ಹೊತ್ತೂ ಆಯಿತು. ತಿಮ್ಮರಾಯಪ್ಪನು, ‘ರಂಗಣ್ಣ! ನೀನು ಬಹಳ ಎಚ್ಚರಿಕೆಯಿಂದಿರಬೇಕು. ಈಗ ನೀನು ನಿನ್ನ ಹಟವನ್ನೇನೋ ಸಾಧಿಸಿಕೊಂಡೆ! ಆದರೆ ಅವರು ಬಹಳ ದುಷ್ಟರು, ಪ್ರಬಲರು, ನೀನು ಎರಡು ತಿಂಗಳ ಕಾಲ ರಜ ತೆಗೆದುಕೊಂಡು ಬೆಂಗಳೂರಿಗೆ ಬರುವುದು ಒಳ್ಳೆಯದು. ಒಂದುವೇಳೆ ನಿನಗೆ ವರ್ಗವಾದರೆ ಮೇಲೆ ಹೋಗಿ ಜಗಳ ಕಾಯಬೇಡ; ರಾಜೀನಾಮೆ ಕೊಡುತ್ತೇನೆ ಎಂದೆಲ್ಲ ಹೇಳಬೇಡ; ದುಡುಕಿ ಏನನ್ನೂ ಮಾಡಬೇಡ? ಎಂದು ಬುದ್ಧಿವಾದ ಹೇಳಿದನು, ಸಿದ್ದಪ್ಪನು ಸಹ ಅದೇ ಅಭಿಪ್ರಾಯ ಪಟ್ಟು, ‘ಜನಾರ್ದನ ಪುರದಲ್ಲಿ ಇರುವುದು ಯಾವ ದೃಷ್ಟಿಯಿಂದಲೂ ಒಳ್ಳೆಯದಲ್ಲ ಎಂದು ಹೇಳಿದನು. ರೈಲು ಬಂತು. ರಂಗಣ್ಣನು, ‘ತಿಮ್ಮರಾಯಪ್ಪ! ನಿನ್ನ ಮತ್ತು ಸಿದ್ದಪ್ಪನವರ ಉಪಕಾರವನ್ನು ನಾನು ಮರೆಯುವ ಹಾಗಿಲ್ಲ’ ಎಂದನು. ‘ಅಯ್ಯೋ ಶಿವನೇ! ಏನು ಉಪಕಾರ! ಆ ದಿನ ನಿನಗೆ ಆನಂದಭವನದಲ್ಲಿ ತಿಂಡಿ ಕೊಡಿಸಿ ಇನ್ಸ್ಪೆಕ್ಟರ್ ಗಿರಿಯ ಹುಚ್ಚು ಹಿಡಿಸಿ ನಾನು ಮಾಡಿದ ಅಪಕಾರವನ್ನು ನಾನು ಮರೆಯುವ ಹಾಗಿಲ್ಲ!’ ಎಂದು ನಗುತ್ತ ತಿಮ್ಮರಾಯಪ್ಪನು ಹೇಳಿದನು. ರಂಗಣ್ಣ ಅವರನ್ನು ಬೀಳ್ಕೊಟ್ಟು ಹಿಂದಿರುಗಿದನು. ದೊಡ್ಡ ಬೋರೆಗೌಡರು ಮತ್ತು ಗಂಗೇಗೌಡರು ಹೆಚ್ಚಿಗೆ ಎರಡು ದಿನವಿದ್ದು ಅವರೂ ತಂತಮ್ಮ ಹಳ್ಳಿಗಳಿಗೆ ಹಿಂದಿರುಗಿದರು.
ಜನಾರ್ದನಪುರದ ವಾತಾವರಣ ಎಂದಿನಂತೆ ಶಾಂತವಾಯಿತು. ಕಾನ್ ಸ್ಟೇಬಲ್ಲುಗಳ ಕಾವಲು ನಿಂತು ಹೋಯಿತು. ಉಗ್ರಪ್ಪನಿಗೆ ಸಸ್ಪೆಂಡ್ ಆದ ವಿಚಾರದಲ್ಲಿ ಜನರ ಆಸಕ್ತಿ ಕಡಮೆಯಾಯಿತು. ಆದರೆ ಖಾಸಗಿ ಉಡುಪಿನ ಕಾನ್ ಸ್ಟೇಬಲ್ಲು ಉಗ್ರಪ್ಪನ ಓಡಾಟವನ್ನು ಗಮನಿಸುವುದು ಮಾತ್ರ ತಪ್ಪಲಿಲ್ಲ ಕ್ರಮಕ್ರಮವಾಗಿ ಉಗ್ರಪ್ಪನ ಓಡಾಟಗಳೂ ಕಡಮೆ ಯಾಗಿ ಜನಾರ್ದನಪುರದಲ್ಲಿ ಅವನು ಮುಖ ಹಾಕುವುದು ನಿಲ್ಲುತ್ತ ಬಂತು. ಎರಡು ಮೈಲಿ ದೂರದ ಅವನ ಹಳ್ಳಿಯಾಯಿತು, ಅವನಾಯಿತು, ಮೇಲ್ಪಟ್ಟ ಅಧಿಕಾರಿಗಳ ಬಳಿಗೆ ಅಪೀಲು ಹೋಗಬೇಕೆಂಬ ರೋಷವೂ ಅವನಿಗೆ ಇಳಿದು ಹೋಯಿತು. ಯಾರಾದರೂ ಮಾತನಾಡಿಸಿದರೆ ಸರಿಯಾಗಿ ಉತ್ತರ ಕೊಡುತ್ತಿರಲಿಲ್ಲ! ಜೀವನದಲ್ಲಿಯೆ ಜುಗುಪ್ಸೆಯುಂಟಾದಂತೆ ಕಾಣಿಸುತ್ತಿದ್ದನು; ಒಂದೆರಡು ಮಾತನ್ನು ಹೇಳಿ ಕಳಿಸಿಬಿಡುತ್ತಿದ್ದನು. ಈ ಮೇಲಿನ ಗಲಾಟೆಗಳ ಪ್ರಕರಣದಲ್ಲಿ ನಾಗೇನಹಳ್ಳಿಯ ಪಾಠ ಶಾಲೆಯ ಪ್ರಾರಂಭೋತ್ಸವ ಮುಂದಕ್ಕೆ ಹಾಕಲ್ಪಟ್ಟಿತ್ತು. ಅದಕ್ಕೆ ಸರಿ ಯಾದ ದಿನ ಗೊತ್ತಾದ ಮೇಲೆ ಆ ಹಳ್ಳಿಯಿಂದ ಕರಿಹೈದ ಕಮಾನು ಕಟ್ಟಿದ ತನ್ನ ಗಾಡಿಯನ್ನು ತಂದನು. ನಾಲ್ಕು ತೆಳುಕೋಲುಗಳನ್ನು ಬಗ್ಗಿಸಿ ಮುಕ್ಕಾಲು ಭಾಗಕ್ಕೆ ಮಾತ್ರ ಎರಡು ಹರಕು ಈಚಲು ಚಾಪೆಗಳನ್ನು ಮೇಲೆ ಕಟ್ಟಿ ಬಿಸಿಲು ತಾಕದಂತೆ ಮರೆಮಾಡಿದ್ದ ಕಮಾನಿನ ಆಭಾಸ! ಆದರೆ ರಂಗಣ್ಣನಿಗೆ ಕರಿಹೈದನ ಭಕ್ತಿ ವಿಶ್ವಾಸಗಳಿಂದ ಅದು ನಕ್ಷತ್ರ. ಖಚಿತವಾದ ನೀಲಿಪಟರಂಜಿತವಾದ ಗಗನದ ಕಮಾನಿನಂತೆ ಸು೦ದರವಾಗಿಯೂ ಹೃದಯಾಕರ್ಷಕವಾಗಿಯೂ ಕಂಡಿತು. ಕುಳಿತುಕೊಳ್ಳುವುದಕ್ಕೆ ಮೆತ್ತಗಿರಲೆಂದು ಕರಿಹೈದ ಒಣಹುಲ್ಲನ್ನು ಗಾಡಿಯಲ್ಲಿ ಹಾಕಿಕೊಂಡು ಬಂದಿದ್ದನು. ಗಾಡಿಯ ಜೊತೆಯಲ್ಲಿ ಹಳ್ಳಿಯಿಂದ ಆರು ಜನ ರೈತರು ಕೈ ದೊಣ್ಣೆಗಳನ್ನು ಹಿಡಿದು ಕೊಂಡು ಬಂದಿದ್ದರು! ಆ ಗಾಡಿಯನ್ನು ನೋಡಿ ರಂಗಣ್ಣನ ಮಕ್ಕಳು ತಾವು ಕೂಡ ಸರ್ಕಿಟು ಬರುವುದಾಗಿ ಹಟ ಮಾಡಿದರು. ರಂಗಣ್ಣನು ತನ್ನ ಹೆಂಡತಿಯನ್ನು ಕರೆದು, ನೋಡ! ಮಕ್ಕಳು ಹಟ ಮಾಡುತ್ತಿದ್ದಾರೆ. ಅವರನ್ನು ಕರೆದುಕೊಂಡು ಹೋಗಬೇಕೆಂದಿದ್ದೇನೆ. ನೀನೊಬ್ಬಳೇ ಇಲ್ಲಿ ಏಕಿರಬೇಕ? ನೀನೂ ಬಂದರೆ ಒಂದು ದಿನ ಸಂತೋಷವಾಗಿ ಕಾಲ ಕಳೆದು ಕೊಂಡು ಬರಬಹುದು. ಎಂತಿದ್ದರೂ ಗೋಪಾಲ ಮತ್ತು ಶಂಕರಪ್ಪ ಮುಂದಾಗಿ ಹೋಗಿದ್ದಾರೆ. ಅಡಿಗೆ ಮಾಡಿರುತ್ತಾರೆ? ಎಂದು ಹೇಳಿದನು. ಅವನ ಹೆಂಡತಿ ಒಪ್ಪಿಕೊಂಡಳು. ತರುವಾಯ ಅಲಂಕಾರ ಪ್ರಕರಣಗಳೆಲ್ಲ ಮುಗಿದುವು. ಮಕ್ಕಳು ಹಸಿವು ಎಂದು ಕೇಳಿದರೆ, ಕೈಗಾವಲಿಗಿರಲಿ ಎಂದು ಆಕೆ ತಿಂಡಿ ಪೆಟ್ಟಿಗೆಯನ್ನು ಮಾತ್ರ ತೆಗೆದುಕೊಂಡಳು; ಕಂಚಿನ ಕೂಜದಲ್ಲಿ ನೀರನ್ನು ತೆಗೆದುಕೊಂಡಳು. ಗಾಡಿಯಲ್ಲಿ ಮೆತ್ತೆಯನ್ನೂ, ಮೇಲೆ ಜಮಖಾನವನ್ನೂ, ಬೆನ್ನೊತ್ತಿಗೆಗೆ ದಿಂಬುಗಳನ್ನೂ ಅಣಿ ಮಾಡಿ, ಮನೆಯ ಕಾವಲಿಗೆ ತಕ್ಕ ಏರ್ಪಾಟು ಮಾಡಿ, ಕರಿಹೈದನ ಗಾಡಿಯಲ್ಲಿ ಎಲ್ಲರೂ ಹೊರಟರು.
ನಾಗೇನಹಳ್ಳಿ ಜನಾರ್ದನಪುರಕ್ಕೆ ಆರು ಮೈಲಿ ದೂರದಲ್ಲಿತ್ತು. ಒಂದೆರಡು ಮೈಲಿಗಳ ದೂರ ಹೋಗುವುದರೊಳಗಾಗಿ ಆ ಎತ್ತಿನ ಗಾಡಿಯ ಪ್ರಯಾಣದ ನಾವೀನ್ಯ ಮತ್ತು ಸಂತೋಷ ಕಡಮೆಯಾದುವು. ರಂಗಣ್ಣನ ಹೆಂಡತಿಗೆ ಹಳ್ಳಿಗಾಡಿನ ಒರಟು ರಸ್ತೆಗಳಲ್ಲಿ, ಆ ಒರಟು ಪ್ರಯಾಣ ಮಾಡಿ ಅಭ್ಯಾಸವಿರಲಿಲ್ಲ. ಧಡಕ್ ಭಡಕ್ ಎಂದು ಇತ್ತ ಅತ್ತ ಆಡುತ್ತ, ಒಬ್ಬರ ಮುಖಕ್ಕೆ ಮತ್ತೊಬ್ಬರ ಮುಖ ತಾಕಿಸುತ್ತ, ಮಧ್ಯೆ ಮಧ್ಯೆ ಎತ್ತಿ ಹಾಕುತ್ತ, ಹೊಟ್ಟೆಯಲ್ಲಿನ ಕರುಳುಗಳನ್ನೆಲ್ಲ ಸ್ಥಳಪಲ್ಲಟ ಮಾಡಿಸುತ್ತ ಗಾಡಿ ಮುಂದುವರಿಯುತ್ತಿತ್ತು. ‘ನಿಮ್ಮ ಸರ್ಕಿಟು ಏನೇನೂ ಸುಖವಿಲ್ಲ. ಮೈ ಕೈ ನೋವು ಮಾಡಿಕೊಂಡು ಇದೇನು ಸರ್ಕಿಟ!’ ಎಂದು ರಂಗಣ್ಣನ ಹೆಂಡತಿ ಹೇಳಿದಳು, ‘ಹೆಂಡತಿ ಮತ್ತು ಮಕ್ಕಳು ಜೊತೆಗೆ ಇದ್ದರೂ ಈ ಸರ್ಕಿಟು ಹೀಗಿದೆಯಲ್ಲ! ನಾನೊಬ್ಬನೇ ಗಾಡಿಯಲ್ಲಿ ಹೋಗುವಾಗ ನನಗೆಷ್ಟು ಕಷ್ಟವಾಗಬೇಕು, ಹೇಳು. ಶಂಕರಪ್ಪನಿಂದ ಆ ಕಷ್ಟ ಪರಿಹಾರವಾಗುತ್ತಿತ್ತು. ಅವನು ಹಲವರು ಇನ್ಸ್ಪೆಕ್ಟರುಗಳೊಡನೆ ತಿರುಗಿದವನು, ಅವರ ಕಥೆಗಳನ್ನೆಲ್ಲ ಹೇಳುತ್ತ- ಅವರ ಸರ್ಕಿಟಿನ ರೀತಿಯೇ ಬೇರೆ ತಮ್ಮ ಸರ್ಕಿಟನ ಸೊಗಸೇ ಬೇರೆ ಸ್ವಾಮಿ! — ಎಂದು ನನ್ನನ್ನು ಪ್ರಶಂಸೆಮಾಡುತ್ತ ಬೇಜಾರು ಕಳೆಯುತ್ತಿದ್ದನು. ಹೀಗೆ ಮಾತನಾಡುತ್ತ ಆಡುತ್ತ ರಂಗಣ್ಣ ತಿಂಡಿಯ ಪೆಟ್ಟಿಗೆಗೆ ಕೈ ಹಾಕಿ, ಮುಚ್ಚಳ ತೆಗೆದನು, ಮಕ್ಕಳು,-ನನಗೆ ಕೊಡಬಳೆ! ನನಗೆ ಚಕ್ಕುಲಿ! ನನಗೆ ಬೇಸಿನ್ ಲಾಡು !– ಎಂದು ಕೋಲಾಹಲವೆಬ್ಬಿಸಿದರು.
`ಪೆಟ್ಟಿಗೆಯನ್ನೆಲ್ಲ ಇಲ್ಲೇ ಖಾಲಿ ಮಾಡಿಬಿಡುತ್ತೀರಾ?’ ಎಂದು ರಂಗಣ್ಣನ ಹೆಂಡತಿ ಆಕ್ಷೇಪಿಸಿದಳು.
‘ತಿಂಡಿ ತಿನ್ನುತ್ತಾ, ಮಾತನಾಡುತ್ತಾ ಪ್ರಯಾಣ ಮಾಡಿದರೆ ಬೇಜಾರು ತೋರುವುದಿಲ್ಲ’ ಎಂದು ರಂಗಣ್ಣ ಉತ್ತರ ಕೊಟ್ಟು ಮಕ್ಕಳಿಗೂ ಹೆಂಡತಿಗೂ ತಿಂಡಿ ಹಂಚಿದನು, ಆಮೇಲೆ ಕರಿಹೈದನ ಕಡೆ ನೋಡಿ, ಆ ಭಕ್ತನನ್ನು ಅನುಗ್ರಹಿಸಬೇಕೆಂದು, `ಆ ದಿನ ನೀನು ಎಂಟಾಣೆ ಕೊಟ್ಟರೆ ತೆಗೆದುಕೊಳ್ಳಲಿಲ್ಲ. ದೇವರು ಮೆಚೊದಿಲ್ಲ ಸ್ವಾಮಿ! ಎಂದು ಹೇಳಿಬಿಟ್ಟೆ, ಇವನ್ನಾದರೂ ತೆಗೆದುಕೋ, ತಿನ್ನು’ ಎಂದು ಹೇಳಿ ಅವನ ಕೈ ಯಲ್ಲಿ ಕೋಡಬಳೆ ಚಕ್ಕುಲಿ ಮತ್ತು ಬೇಸನ್ ಲಾಡುಗಳನ್ನು ಹಾಕಿದನು. ಆದರೆ ಕರಿಹೈದ ಅವುಗಳನ್ನು ತಿನ್ನಲಿಲ್ಲ. ಬಟ್ಟೆಯಲ್ಲಿ ಗಂಟು ಕಟ್ಟಿ ಇಟ್ಟುಕೊಂಡನು ! ರಂಗಣ್ಣ ಅದನ್ನು ನೋಡಿ,
`ಅದೇಕೆ ಗಂಟು ಕಟ್ಟಿದೆ ಕರಿಹೈದ? ನೀನು ತಿನ್ನಬೇಕೆಂದು ನಾನು ಕೊಟ್ಟದ್ದು’ ಎಂದನು.
`ಹೌದು ಸೋಮಿ! ತಾವೇನೋ ನಾನು ತಿನ್ನಬೇಕೆಂದು ಕೊಟ್ರಿ ಮನೇಲಿ ಇಬ್ಬರು ಮಕ್ಕಳವ್ರೆ! ಇದೇನೋ ನಾಜೋಕ್ ರುಚಿ ಪದಾರ್ತ! ಮಕ್ಕಳು ತಿನ್ನಲಿ ಅ೦ತ ಗಂಟು ಕಟ್ಟಿ ಮಡಕ್ಕೊಂಡಿವ್ನಿ!’
‘ಚಕ್ರವರ್ತಿಗಿರುವಂತೆಯೇ ಕರಿಹೈದನಿಗೂ ಕರುಳುಂಟಲ್ಲಾ! ಮಕ್ಕಳ ಮೇಲೆ ಪ್ರೇಮವುಂಟಲ್ಲಾ! ರಂಗಣ್ಣನಿಗೂ ಅವನ ಹೆಂಡತಿಗೂ ಮನಸ್ಸು ಕರಗಿ ಹೋಯಿತು: ಪೆಟ್ಟಿಗೆಯಿಂದ ಮತ್ತಷ್ಟು ತಿಂಡಿಯನ್ನು ತೆಗೆದು ಕೈಗೆ ಕೊಟ್ಟು, ‘ಗಂಟು ಕಟ್ಟಿರುವುದು ಮಕ್ಕಳಿಗಿರಲಿ. ಇದನ್ನು ನೀನು ತಿನ್ನು’ ಎಂದು ಹೇಳಿದರು. ಕರಿಹೈದ, ಆಗಲಿ ಸೋಮಿ!’ ಎಂದು ಬಾಯಲ್ಲಿ ಹೇಳಿ ಒ೦ದು ಕ್ಷಣ ಹಾಗೆಯೇ ಹಿಡಿದುಕೊಂಡಿದ್ದನು; ತಿನ್ನಲಿಲ್ಲ. ಮತ್ತೆ ಅದನ್ನು ಗಂಟಿನೊಳಗೆ ಸೇರಿಸಿ ಬಿಟ್ಟ ನು!
‘ಎಲಾ ಕರಿಹೈದ! ಅದೇಕೋ ಇದನ್ನೂ ಕಟ್ಟಿಬಿಟ್ಟೆ? ನೀನು ತಿನ್ನಲಿಲ್ಲ! ತಿನ್ನು’ ಎಂದು ರಂಗಣ್ಣ ಹೇಳಿದನು.
`ಸೋಮಿ ! ಅಂಗೇ ಯೋಚ್ನಾ ಮಾಡಿದೆ! ಮನೇಲಿ ನನ್ನೆಂಡ್ರವಳೆ! ಅವಳನ್ನ ಬಿಟ್ಟು ತಿನ್ನೋಕೆ ಮನಸ್ಸು ಬರಾಕಿಲ್ಲ ಸೋಮಿ!
ರಂಗಣ್ಣನ ಕಣ್ಣುಗಳು ಹನಿಗೂಡಿ ಮಂಜಾದುವು! ರಂಗಣ್ಣನ ಹೆಂಡತಿ ಗಂಡನ ಕೈ ಹಿಡಿದೆಳೆದು, ‘ನೋಡಿದಿರಾ! ನಿಮಗೆ ನನ್ನ ಮೇಲೆ ಬಹಳ ಪ್ರೀತಿ ಎಂದು ಹೇಳುತ್ತಾ ಇರುತ್ತೀರಿ! ಕರಿಹೈದ ತನ್ನ ಹೆಂಡತಿಯನ್ನು ಪ್ರೀತಿಸುವಂತೆ ನೀವು ಪ್ರೀತಿಸುವುದುಂಟ?’ ಎಂದು ನಗುತ್ತಾ ಕೇಳಿದಳು. ರಂಗಣ್ಣನು,
`ಕರಿಹೈದ! ಮತ್ತೆ ಯಾರು ಇದ್ದಾರೆ ನಿನ್ನ ಮನೆಯಲ್ಲಿ?’ ಎಂದು ಕೇಳಿದನು.
`ಮತ್ತೆ ಯಾರೂ ಇಲ್ಲ ಸೋಮಿ!’
`ಹಾಗಾದರೆ, ನಿನ್ನ ಬಟ್ಟೆ ಹಿಡಿ’ ಎಂದು ಹೇಳಿ ರಂಗಣ್ಣ ಇನ್ನು ನಾಲ್ಕು ಚಕ್ಕುಲಿ, ಕೋಡಬಳೆ ಮತ್ತು ಲಾಡುಗಳನ್ನು ಕೊಟ್ಟು, ‘ನಿನ್ನ ಹೆಂಡತಿ ಮಕ್ಕಳಿಗೆ ಅವನ್ನೆಲ್ಲ ಕೊಡು, ಈಗ ನೀನು ತಿನ್ನುವುದಕ್ಕೆ ನಿನಗೆ ಬೇರೆ ಕೊಡುತ್ತೇನೆ; ತಿನ್ನು.’
`ನಾನೀಗ ತಿನ್ನೋಕಿಲ್ಲ ಸೋಮಿ! ನನ್ನ ಜೊತೆಗೆ ನನ್ನ ಹಳ್ಳಿ ರೈತರು ಬಂದವರೆ ನೋಡಿ! ಅವರು ಕಾಸ್ಟಾಪಟ್ಟು ಕೊಂಡು ತಮ್ಮ ಕಾವಲಿಗೆ ಆರು ಮೈಲಿಯಿಂದ ಬಂದವರೆ!’
ಯಾವ ವಿಶ್ವವಿದ್ಯಾನಿಲಯದಲ್ಲಿ ಕರಿಹೈದನಂತೆ ಪಾಠ ಹೇಳಿಕೊಡುತ್ತಾರೋ ತಿಳಿಯದು-ಎಂದು ರಂಗಣ್ಣ ಹೇಳಿಕೊಂಡನು.
ರಂಗಣ್ಣನ ಹೆಂಡತಿ, `ಕರಿಹೈದ! ನೀನು ಅವರ ಯೋಚನೆ ಮಾಡ ಬೇಡಪ್ಪ! ಸ್ವಲ್ಪ ಗಾಡಿ ನಿಲ್ಲಿಸು!’ ಎಂದು ಹೇಳಿದಳು. ಗಾಡಿ ನಿಂತಿತು. ಗಾಡಿಯ ಹಿಂದೆ ಮುಂದೆ ಕೈ ದೊಣ್ಣೆಗಳನ್ನು ಹಿಡಿದು ನಡೆಯುತ್ತಿದ್ದ ರೈತರನ್ನು ಆಕೆ ಕರೆದಳು. ಪೆಟ್ಟಿಗೆಯಲ್ಲಿರುವುದನ್ನೆಲ್ಲ ತೆಗೆದು ಅವರಿಗೆ ಹಂಚಿ ಖಾಲಿ ಮಾಡಿ ಬಿಟ್ಟಳು. ಕರಿಹೈದ ಅದನ್ನು ನೋಡಿ, `ನಮ್ಗೆ ಎಲ್ಲಾ ಕೊಟ್ ಬಿಟ್ಟರಲ್ಲಾ! ನಿಮಗೆಲ್ಲೈತೆ ಸೋಮಿ ತಿಂಡಿ?’ ಎಂದು ಕೇಳಿದನು, ಆಕೆ, ‘ನಮಗೂ ಇದೆಯಪ್ಪ, ಇಲ್ಲಿ ನೋಡ!’ ಎಂದು ಹೇಳಿ ಚಕ್ಕುಲಿ ಕೋಡಬಳೆಗಳನ್ನು ತೋರಿಸಿದಳು. ಕರಿಹೈದ ಸ್ವಲ್ಪ ಬಾಯಿಗೆ ಹಾಕಿಕೊಂಡು,
‘ಇದೇನು ಸೋಮಿ, ನಿಮ್ಮ ತಿ೦ಡಿ! ಹಲ್ಗೆ ಸಿಗೋಕಿಲ್ಲ! ಬಾಯೊಳಗೇ ನಿಲ್ಲೋಕಿಲ್ಲ! ಜಗ್ಸಿಆಗಿಯೋ ತಿಂಡಿ ಇರಬೇಕು ಸೋಮಿ ಹಳ್ಳಿ ಯವರಿಗೆಲ್ಲ!’ ಎಂದು ಹೇಳಿದನು.
ನಾಗೇನಹಳ್ಳಿ ಸಮಿಾಪಿಸಿತು. ಹಳ್ಳಿಯ ಮುಂದುಗಡೆ ತೋರಣ ಕಟ್ಟಿತ್ತು. ಅಲ್ಲಿ ಮರದ ಕೆಳಗೆ ಹಳ್ಳಿಯ ಜನರು ನಿರೀಕ್ಷಿಸುತ್ತ ನಿಂತಿದ್ದರು. ಗಾಡಿ ಬೆಳಗ್ಗೆ ಹತ್ತುವರೆ ಗಂಟೆಯ ಹೊತ್ತಿಗೆ ಅಲ್ಲಿಗೆ ಹೋಯಿತು. ರಂಗಣ್ಣ ಮೊದಲಾದವರು ಗಾಡಿಯಿಂದಿಳಿದರು. ಹಳ್ಳಿಯ ಓಲಗ ಪ್ರಾರಂಭವಾಯಿತು. ಜೊತೆಗೆ ತಮಟೆ ಬಾರಿಸುವವರು ಬಾರಿಸುತ್ತಿದ್ದರು; ಕೊಂಬುಗಳನ್ನು ಕೆಲವರು ಊದಿದರು. ಊರಿನ ಮುಖಂಡರು ಮೂರು ನಾಲ್ಕು ಹೂವಿನ ದೊಡ್ಡ ದೊಡ್ಡ ಹಾರಗಳನ್ನು ರಂಗಣ್ಣನ ಕೊರಳಿಗೆ ಹಾಕಿ ನಮಸ್ಕಾರ ಮಾಡಿದರು. ತಟ್ಟೆಗಳಲ್ಲಿ ತೆಂಗಿನಕಾಯಿ, ಹಣ್ಣು ಮೊದಲಾದುವನ್ನಿಟ್ಟು ಕಾಣಿಕೆ ಸಮರ್ಪಿಸಿದರು. ರಂಗಣ್ಣ ಮುಖಂಡರ ಕುಶಲ ಪ್ರಶ್ನೆಯನ್ನು ಮಾಡಿ ಅವರಿಗೆಲ್ಲ ಹಸ್ತಲಾಘವ ಕೊಟ್ಟು ಮುಗುಳು ನಗೆ ಸೂಸುತ್ತ, ‘ಅಂತೂ ನಿಮ್ಮ ಹಳ್ಳಿಗೊಂದು ಸರಕಾರಿ ಸ್ಕೂಲಾಯಿತು. ನೀವೆಲ್ಲ ಕರಿಹೈದನಿಗೆ ಕೃತಜ್ಞರಾಗಿರಬೇಕು’ ಎಂದು ಹೇಳಿದನು. ಮುಖಂಡರು,
`ಸೋಮಿ! ತಮಗೂ ನಾವು ಕೃತಜ್ಞರಾಗಿದ್ದೇವೆ. ಎಷ್ಟೋ ಜನ ಅಧಿಕಾರಿಗಳು ನಮ್ಮ ಬಂಡಿಗಳನ್ನೆಲ್ಲ ಬಿಟ್ಟಿ ಹಿಡಿದು ಉಪಯೋಗಿಸ್ತಾರೆ. ತಮ್ಮಂಗೆ ಏನೂ ಉಪಕಾರ ಮಾಡೋದಿಲ್ಲ; ಮತ್ತೆ ನಮ್ಮ ಮೇಲೇನೆ ಜೋರ್ ಮಾಡೋಕ್ಕೆ ಬರ್ತಾರೆ’ ಎಂದು ಉತ್ತರ ಕೊಟ್ಟರು.
ಮೆರೆವಣಿಗೆ ನಿಧಾನವಾಗಿ ಹೊರಟಿತು. ದಾರಿಯುದ್ದಕ್ಕೂ ಆ ಓಲಗ, ಆ ತಮ್ಮಟೆಗಳ ಬಜಾವಣೆ, ಕೊಂಬುಗಳ ಕೂಗು, ಬಹಳ ತಮಾಷೆಯಾಗಿದ್ದುವು. ಈ ತಮಾಷೆಗಳನ್ನೆಲ್ಲ ರಂಗಣ್ಣನ ಹೆಂಡತಿ ಮತ್ತು ಮಕ್ಕಳು ಹಿಂದೆ ನೋಡಿರಲಿಲ್ಲವಾದ್ದರಿಂದ ಅವರಿಗೆ ತಾವೆಲ್ಲೊ ಇಂದ್ರಲೋಕದಲ್ಲಿದ್ದಂತೆ ಕಾಣುತ್ತಿತ್ತು. ಕೊಂಬುಗಳನ್ನು ಕೂಗಿದಾಗಲೆಲ್ಲ ರಂಗಣ್ಣನ ಹುಡುಗರು ಅದನ್ನು ಅನುಕರಣ ಮಾಡುತ್ತ, ನಗು, ತಮ್ಮ ತಾಯಿಗೆ ಆ ವಿಚಿತ್ರ ವಾದ್ಯೋಪಕರಣವನ್ನು ತೋರಿಸುತ್ತ ಹೋಗುತಿದ್ದರು. ಆ ತಮ್ಮಟೆ ಬಡಿಯುವವರ ಕುಣಿತ ವಿನೋದಕರವಾಗಿತ್ತು. ಮೆರವಣಿಗೆ ಹಳ್ಳಿಯೊಳಕ್ಕೆ ಪ್ರವೇಶಿಸಿತು. ಹಳ್ಳಿಯ ಹೆಂಗಸರೆಲ್ಲ ಅಲ್ಲಲ್ಲಿ ಗುಂಪುಗುಂಪುಗಳಾಗಿ ಸೇರಿದ್ದರು. ಕೆಲವರು ತಂತಮ್ಮ ಮನೆಗಳ ಮುಂಭಾಗದಲ್ಲಿ ನಿಂತಿದ್ದರು. `ಅವರೇ `ಇನ್‌ಚ್ ಪೆಟ್ರು! ಹೆಂಡ್ತೀನ ಜೊತೆಗೆ ಕರಕೊಂಡ್ ಬಂದವ್ರೆ! ಚೆನ್ನಾಗವ್ರೇ ಕಾಣಮ್ಮ! ಮಕ್ಕಳೂ ಮುದ್ದಾಗವ್ರೆ!’ ಎಂದು ಆ ಹೆಂಗಸರು ಒಬ್ಬರಿಗೊಬ್ಬರು ತೋರಿಸುತ್ತ ಮಾತನಾಡಿಕೊಳ್ಳುತ್ತಿದ್ದರು. ಇನ್ಸ್ಪೆಕ್ಟರ ಬೀಡಾರಕ್ಕೆ ಒಂದು ಮನೆಯನ್ನು ಖಾಲಿ ಮಾಡಿಸಿದ್ದರು. ಅಲ್ಲಿಗೆ ಹೋದಮೇಲೆ ಪಂಚಾಯತಿ ಚೇರ್ಮನ್ನು `ಸ್ವಾಮಿ! ಗಾಡೀಲಿ ಬಂದು ಸುಸ್ತಾಗಿದ್ದೀರಿ. ರವಷ್ಟು ಆರಾಮಾಗಿ ಇಲ್ಲಿ ಕುಂತಕೊಳ್ಳಿ! ಅಮ್ಮಾವ್ರು ಮಕ್ಕಳೂ ದಣಿದವೆ! ಕಾಫಿ ತಿಂಡಿ ತೆಕ್ಕೊಂಡು ಮುಂದಿನ ಕೆಲಸ ಮಾಡೋಣ. ನಾನು ಮತ್ತೆ ಬಂದು ಕರೆಯುತ್ತೇನೆ’ ಎಂದು ಹೇಳಿ ಹೊರಟು ಹೋದನು. ಗುಂಪೆಲ್ಲ ಪಂಚಾಯತಿ ಹಾಲಿನ ಬಳಿ ಸೇರಿತು.
ಸುಮಾರು ಅರ್ಧ ಗಂಟೆಯ ತರುವಾಯ ಚೇರ್ಮನ್ನು ಮತ್ತು ಮೇಷ್ಟ್ರು ಬಂದರು. ಆ ಹೊತ್ತಿಗೆ ಉಪಾಹಾರವೆಲ್ಲ ಮುಗಿದಿತ್ತು. ರಂಗಣ್ಣ ಸಂಸಾರ ಸಮೇತನಾಗಿ ಪಂಚಾಯತಿ ಹಾಲಿನ ಕಡೆಗೆ ಹೊರಡಲು ಸಿದ್ಧವಾದನು. ಪುನಃ ಓಲಗ, ತಮಟೆ ಮತ್ತು ಕೊಂಬಿನ ಕೂಗುಗಳ ಸಂಭ್ರಮಗಳೊಡನೆ ಮೆರೆವಣಿಗೆಯಾಯಿತು! ಪಂಚಾಯತಿ ಹಾಲಿನ ಮುಂದುಗಡೆ ಚಪ್ಪರವನ್ನು ಹಾಕಿದ್ದರು. ಹಳ್ಳಿಯ ಮಕ್ಕಳೆಲ್ಲ ಚೆನ್ನಾಗಿ ಬಟ್ಟೆಗಳನ್ನು ಹಾಕಿ ಕೊಂಡು ಶೃಂಗಾರ ಮಾಡಿಕೊಂಡು ಬಂದಿದ್ದರು. ಹಳ್ಳಿಯ ಮುಖಂಡರೂ ರೈತರೂ ಹೆಂಗಸರೂ ಕಿಕ್ಕಿರಿದು ಕುಳಿತಿದ್ದರು. ಕೆಲವರು ಕಟ್ಟಡಕ್ಕೆ ದೂರದಲ್ಲೇ ಇದ್ದು ನೋಡುತ್ತಿದ್ದರು. ಆ ದಿನ ಪಂಚಾಯತಿ ಹಾಲನ್ನು ಅಲಂಕಾರ ಮಾಡಿದ್ದರು.
ದೇವತಾ ಪ್ರಾರ್ಥನೆ, ಸ್ವಾಗತ ಪದ್ಯಗಳು, ಸಂಗೀತ- ಇವು ಆದ ಮೇಲೆ ಶ್ಯಾನುಭೋಗನು ಒಂದು ಸಣ್ಣ ಭಾಷಣ ಮಾಡಿದನು. ಚೇರ್ಮನ್ನು ಆಗ ಮಾತನಾಡಲಿಲ್ಲ. ಶ್ಯಾನುಭೋಗನು ತನ್ನ ಭಾಷಣದಲ್ಲಿ ವಿದ್ಯೆಯ ಮಹತ್ವವನ್ನೂ, ಪೂರ್ವ ಕಾಲದಲ್ಲಿ ಭರತಖಂಡದಲ್ಲೆಲ್ಲ ವಿದ್ಯಾ ಪ್ರಚಾರವಿದ್ದುದನ್ನೂ , ಅಲ್ಲಲ್ಲಿ ಗುರುಕುಲಗಳು ಇದ್ದುದನ್ನೂ ಪ್ರಸ್ತಾಪ ಮಾಡಿದನು. ಈಗ ಸರಕಾರದವರು ತಮ್ಮ ಹಳ್ಳಿಗೆ ಸರಕಾರಿ ಸ್ಕೂಲನ್ನೇ ಕೊಟ್ಟದ್ದು ತಮಗೆಲ್ಲ ಬಹಳ ಸಂತೋಷವನ್ನುಂಟುಮಾಡಿದೆಯೆಂದೂ ಮುಖ್ಯವಾಗಿ ಇನ್ ಸ್ಪೆಕ್ಟರ್ ಸಾಹೇಬರಿಗೆ ತಾವುಗಳೆಲ್ಲ ಕೃತಜ್ಞರಾಗಿರುವುದಾಗಿಯೂ ಹೇಳಿದನು. ಬಳಿಕ ಪಾಠ ಶಾಲೆಯ ಪ್ರಾರಂಭೋತ್ಸವವನ್ನು ನೆರೆವೇರಿಸಬೇಕೆಂದು ಇನ್ಸ್ಪೆಕ್ಟರ ಕಡೆಗೆ ತಿರುಗಿಕೊಂಡು ಕೈ ಮುಗಿದು ಪ್ರಾರ್ಥಿಸಿದನು.
ಪಂಚಾಯತಿ ಹಾಲೇ ಪಾಠಶಾಲೆಯನ್ನು ಮಾಡತಕ್ಕ ಸ್ಥಳವಾಗಿತ್ತು. ಅಲ್ಲಿ ಆ ಗ್ರಾಮದಲ್ಲಿದ್ದ ಪುರೋಹಿತನೊಬ್ಬನು ಗಣಪತಿ ಮತ್ತು ಸರಸ್ವತೀ ಪಠಗಳಿಗೆ ಪೂಜೆಮಾಡಿ, ತೆಂಗಿನಕಾಯಿ ಒಡೆದು ನೈವೇದ್ಯ ಮಾಡಿ, ಮಂಗಳಾರತಿಯನ್ನು ಸಾಂಗವಾಗಿ ನೆರವೇರಿಸಿದನು.
ರಂಗಣ್ಣ ದೊಡ್ಡ ಭಾಷಣವನ್ನು ಮಾಡಲಿಲ್ಲ. ಆ ದಿನ ಶುಭ ಮುಹೂರ್ತದಲ್ಲಿ ಪಾಠಶಾಲೆಯ ಪ್ರಾರಂಭವನ್ನು ತಾನು ಮಾಡಿದುದಾಗಿ ಹೇಳಿದನು. ಮೇಷ್ಟರನ್ನು ಸ್ವಲ್ಪ ಪ್ರಶಂಸೆ ಮಾಡಿ ಅವರು ದಕ್ಷರೆಂದೂ ಶ್ರದ್ದೆಯಿಂದ ಕೆಲಸ ಮಾಡುವವರೆಂದೂ, ಅವರ ಯೋಗಕ್ಷೇಮದ ಜವಬ್ದಾರಿ ಹಳ್ಳಿ ಯವರಿಗೆ ಸೇರಿದ್ದೆಂದೂ ತಿಳಿಸಿದನು. ಪಾಠಶಾಲೆಯಲ್ಲಿ ತಿಂಗಳಿಗೊಂದಾವೃತಿ ಕಮಿಟಿ ಮೆಂಬರುಗಳು ಸಭೆ ಸೇರಿ ಮಕ್ಕಳ ವಿದ್ಯಾಭಿವೃದ್ಧಿಯನ್ನು ಪರಿಶೀಲಿಸಿ ಅವರಿಂದ ಆಟಪಾಟಗಳನ್ನು ಆಡಿಸಿ ಏನಾದರೂ ಬಹುಮಾನಗಳನ್ನೂ ತಿಂಡಿಗಳನ್ನೂ ಹಂಚಬೇಕೆಂದು ಹೇಳಿದನು. ಗ್ರಾಮಸ್ಥರು ತನ್ನ ಕೋರಿಕೆಯಂತೆ ಸ್ಲೇಟು ಪುಸ್ತಕಗಳನ್ನು ಉಚಿತವಾಗಿ ಕೊಟ್ಟಿರುವುದರಿಂದ ಅವರಿಗೆ ತಾನು ಕೃತಜ್ಞನಾಗಿರುವುದಾಗಿ ತಿಳಿಸಿದನು. ಮುಖ್ಯವಾಗಿ ಗ್ರಾಮಗಳು ಏಳಿಗೆಗೆ ಬರಬೇಕಾದರೆ ಪಾರ್ಟಿ ಗೀರ್ಟಿಗಳಿಲ್ಲದೆ ಐಕಮತ್ಯದಿಂದ ಕೆಲಸಮಾಡಬೇಕೆಂದೂ ನಾಗೇನ ಹಳ್ಳಿಯಲ್ಲಿ ಪಾರ್ಟಿಗಳಿಲ್ಲವೆಂಬುದನ್ನು ನೋಡಿ ತನಗೆ ಬಹಳ ಸಂತೋಷವಾಗಿರುವುದೆಂದೂ ಹೇಳಿದನು. ಕಡೆಯಲ್ಲಿ ತನಗೆ ತೋರಿಸಿದ ಆದರಾತಿಥ್ಯಗಳಿಗಾಗಿ ಕೃತಜ್ಞತೆಯನ್ನು ಸೂಚಿಸಿ ಆ ಪಾಠಶಾಲೆ ಉತ್ತರೋತ್ತರ ಅಭಿವೃದ್ಧಿಯನ್ನು ಪಡೆಯಲೆಂದೂ ಅಲ್ಲಿ ಒಂದು ಮಿಡಲ್ ಸ್ಕೂಲ್ ಸ್ಥಾಪಿತವಾಗಲೆಂದೂ ಹಾರೈಸಿದನು.
ಜನರಿಗೆಲ್ಲ ಬಹಳ ಸಂತೋಷವಾಯಿತು. ಚೇರ್ಮನ್ನು ವಂದನಾರ್ಪಣೆಯ ಭಾಷಣವನ್ನು ಮಾಡಿದನು: `ಸ್ವಾಮಿ! ನಾವು ಹಳ್ಳಿಯ ಜನ; ತಿಳಿವಳಿಕೆ ಕಡಮೆ, ಈಗ ಇಸ್ಕೂಲ್ ದಯಪಾಲಿಸಿದ್ದೀರಿ. ಮುಂದೆ ನಮ್ಮ ಮಕ್ಕಳು ವಿದ್ಯೆ ಚೆನ್ನಾಗಿ ಕಲಿತು ನಮಗಿ೦ತ ತಿಳಿವಳಿಕಸ್ತರಾಗಿ ಬಾಳುವುದಕ್ಕೆ ಅನುಕೂಲ ಕಲ್ಪಿಸಿದ್ದೀರಿ. ನಾವು – ನಮಗೆ ಇಸ್ಕೂಲ್ ಬೇಕು, ಎಂದು ಕೇಳೋದಕ್ಕೆ ಕೂಡ ಗೊತ್ತಿಲ್ಲದೆ ಅಜ್ಞಾನದಲ್ಲಿದ್ದಾಗ, ತಾವೇ ನಮಗೆ ಹೇಳಿ ಕಳಿಸಿ ಅರ್ಜಿ ಈಸಿಕೊಂಡು ಇಸ್ಕೂಲ್ ಮುಂಜೂರ್ ಮಾಡಿದ ಉಪಕಾರಾನ ನಾವೆಂದಿಗೂ ಮರೆಯೋದಿಲ್ಲ! ತಮ್ಮ ಕಾಲದಾಗೆ ಮೇಷ್ಟ್ರುಗಳಿಗೆಲ್ಲ ತಿಳಿವಳಿಕೆಯನ್ನು ಕೊಟ್ಟರಿ, ಗ್ರಾಮಸ್ಥರಿಗೆಲ್ಲ ತಿಳಿವಳಿಕೆಯನ್ನು ಕೊಟ್ಟಿರಿ; ವಿದ್ಯೆ ಚೆನ್ನಾಗಿ ಹರಡುವಂತೆ ಸಂಘಗಳನ್ನು ಎಲ್ಲ ಕಡೆಯೂ ನಡೆಸಿದಿರಿ. ತಮ್ಮ ಹೆಸರು ಶಾಸನ ಆಗೋಯ್ತು!’
`ಈಗ ತಾವು ನಮಗೆ ಹೇಳಿದ ಬುದ್ದಿವಾದದಂತೆ ನಡೆದುಕೊಳ್ಳಲು ಪ್ರಯತ್ನ ಪಡುತ್ತೇವೆ. ಮೇಷ್ಟರು ಬಡವರು, ಅವರನ್ನು ಆದರಿಸಬೇಕು ಎಂದು ನಮಗೆ ತಮ್ಮ ಕಚೇರಿಯಲ್ಲಿ ತಿಳಿಸಿದಿರಿ. ಇಗೋ ಸ್ವಾಮಿ! ಮನೆಗೆ ಐದು ಸೇರು ರಾಗಿಯಂತೆ ಶೇಖರಣ ಮಾಡಿ ಈ ಮೂರು ಮೂಟೆಗಳನ್ನು ಇಟ್ಟಿದ್ದೇವೆ. ತಾವೇ ಅದನ್ನು ನಮ್ಮ ಪರವಾಗಿ ಮೇಷ್ಟರಿಗೆ ದಾನ ಮಾಡಬೇಕೆಂದು ಪ್ರಾರ್ಥಿಸುತ್ತೇವೆ! ವರ್ಷವಷವೂ ಹೀಗೇನೇ ಮೇಷ್ಟರಿಗೆ ಸಹಾಯ ನಡೆಸಿಕೊಂಡು ಹೋಗಬೇಕು ಎಂದು ಸಂಕಲ್ಪ ಮಾಡಿದ್ದೇವೆ. ಇಸ್ಕೂಲಿಗೆ ಸ್ಲೇಟು ಪುಸ್ತಕ ವಗೈರೆ ದಾನ ಮಾಡಬೇಕು ಎಂದು ಅಪ್ಪಣೆ ಕೊಡಿಸಿದ್ದಿರಿ. ಎಲ್ಲವನ್ನೂ ಮೇಜಿನಮೇಲೆ ಇಟ್ಟಿದ್ದೆವ; ಪರಾಂಬರಿಸಬೇಕು. ಈ ದಿನ ತಾವು ಕುಟುಂಬ ಸಮೇತ ನಮ್ಮ ಹಳ್ಳಿಗೆ ಬಂದು ಬಡರೈತರ ಆತಿಥ್ಯ ಸ್ವೀಕಾರ ಮಾಡಿದ್ದಕ್ಕಾಗಿ ಈ ಗ್ರಾಮದ ಪರವಾಗಿ ತಮಗೆ ಕೃತಜ್ಞತೆ ಸೂಚಿಸುತ್ತೇನೆ. ತಮಗೆ ದೇವರು ಒಳ್ಳೆದು ಮಾಡಲಿ ಸ್ವಾಮಿ!’
ತರುವಾಯ ಜಯಕಾರಗಳಾದುವು. ರಂಗಣ್ಣ ರಾಗಿಯ ಮೂಟೆಗಳನ್ನು ನೋಡಿ ಬಹಳ ಸಂತೋಷಪಟ್ಟು, ಅವನ್ನು ಮೇಷ್ಟರಿಗೆ ವಹಿಸಿಕೊಟ್ಟನು. ಮೇಷ್ಟ್ರು ಆನಂದಿತನಾಗಿ, ‘ಸ್ವಾಮಿ! ಹಿಂದೆ ಯಾರೂ ಇನ್ ಸ್ಪೆಕ್ಟರು ಮೇಷ್ಟರುಗಳಿಗೆ ಇ೦ಥಾ ಉಪಕಾರ ಮಾಡಿಸಲಿಲ್ಲ! ಹಳ್ಳಿಯವರೂ ಮಾಡಿರಲಿಲ್ಲ! ನಾನು ತಮಗೂ ಗ್ರಾಮಸ್ಥರಿಗೂ ಚಿರಋಣಿಯಾಗಿದ್ದೇನೆ. ಈಗ ನನ್ನ ಮೇಲೆ ಹೆಚ್ಚಿನ ಜವಾಬ್ದಾರಿ ಬಿದ್ದಿದೆ. ನಾನು ನಿರ್ವಂಚನೆಯಿಂದ ಈ ಮಕ್ಕಳಿಗೆಲ್ಲ ವಿದ್ಯೆಯನ್ನು ಹೇಳಿಕೊಡುತ್ತೇನೆ, ಗ್ರಾಮಸ್ಥರ ಹಿತವನ್ನೇ ಬಯಸಿ ನಡೆದುಕೊಳ್ಳುತ್ತೇನೆ!’ ಎಂದು ಹೇಳಿದನು. ಮಕ್ಕಳಿಗೂ ಇತರರಿಗೂ ಬುರುಗಲು ಬತ್ತಾಸುಗಳ ವಿತರಣೆಯಾಯಿತು. ದೊಡ್ಡವರಿಗೆ ಹೂವು ಗಂಧಗಳ ಸಮರ್ಪಣೆಯಾಯಿತು. `ಕಾಯೌ ಶ್ರೀಗೌರಿ’ಯೊಡನೆ ಸಭೆ ಮುಕ್ತಾಯವಾಯಿತು.
ರಂಗಣ್ಣನ ಬಿಡಾರದಲ್ಲಿ ಚೇರ್ಮನ್ನು, ‘ಸ್ವಾಮಿ! ಪಾರ್ಟಿ ಗೀರ್ಟಿ ಇಲ್ಲದೆ ಐಕಮತ್ಯದಿಂದ ಇರ್ರಿ ಎಂದು ತಾವೇನೊ ಈ ದಿನ ನಮಗೆಲ್ಲ ಬುದ್ಧಿವಾದ ಹೇಳಿದ್ರಿ. ನಾವು ಹಳ್ಳಿ ಜ ; ವಿದ್ಯೆ ಇಲ್ಲದ ಒಕ್ಕಲ ಮಕ್ಕಳು. ಬೆಂಗಳೂರು ಮೈಸೂರು ದೊಡ್ಡ ದೊಡ್ಡ ಪಟ್ಟಣದಾಗೆಲ್ಲ ಓದಿದವರು ಪಾರ್ಟಿ ಕಟ್ಟಿಕೊಂಡು ವಾಜ್ಯ ಆಡ್ತಾರಲ್ಲ! ಒಬ್ಬರನ್ನೊಬ್ಬರು ಬೈದಾಡ್ತಾರಲ್ಲ! ಅದೇನೋ ಕಾಂಗ್ರೆಸ್ ಪಾರ್ಟಿ ಅಂತೆ, ಸೊತಂತ್ರ ಪಾರ್ಟಿ ಆ೦ತೆ, ಇನ್ನೂ ಏನೇನೋ ಹೇಳ್ತಾರೆ ಸ್ವಾಮಿ! ಚುನಾವಣೆಗಳ ಕಾಲ ಬಂತೋ ಅವರ ಕಾಟ ಹೇಳೋ ಹಾಗಿಲ್ಲ! ಗಾಂಧಿ ಪಟ ತರೋವರು! ಮಹಾರಾಜರ ಪಟ ತರೋವರು! ಬೀದೀಲೆ ಮಾರಾಮಾರಿ! ಹಳ್ಳಿ ಜನಕ್ಕೆಲ್ಲ ಏನೇನೋ ಬೋಧನೆ ಮಾಡಿ ಹಳ್ಳಿಗೆಲ್ಲ ಪಾರ್ಟಿ ತಂದು ಬಿಟ್ಟಿದ್ದಾರಲ್ಲ! ನೋಡಿ ಸ್ವಾಮಿ! ನಮ್ಮ ಹಳ್ಳಿಲಿ ಈಚೆಗೆ ನಾಲ್ಕು ಜನ ಖಾದಿ ಬಟ್ಟೆ ಹಾಕ್ಕೊಂಡು ಗಾಂಧಿ ಪಟ ಇಟ್ಗೊಂಡು ಮೆರೆವಣಿಗೆ ಆಗಾಗ್ಗೆ ಹೊರಡ್ತಾರೆ! ಅವರಿಗೆ ಪ್ರತಿಕಕ್ಷಿಯಾಗಿ ಮತ್ತೆ ಯಾರೋ ನಾಲ್ಕು ಜನ ಮಹಾರಾಜರ ಪಟ ಎತ್ತಿಕೊಂಡು ಮೆರೆವಣಿಗೆ ಹೊರಡ್ತಾರೆ! ರಪ್ರೆಜೆಂಟಿ ಸಭೆ ನೋಡಿ! ಅಲ್ಲಿ ಪಾರ್ಟಿ ಪಾರ್ಟಿ ವ್ಯಾಜ್ಯ! ಡಿಸ್ಟಿಕ್ಸ್ ಬೋರ್ಡ್ ನೋಡಿ, ಅಲ್ಲೀನೂ ಪಾರ್ಟಿ! ಜನಾರ್ದನಪುರದ ಮುನಿಸಿಪಾಲಿಟಿ ನೋಡಿ, ಅಲ್ಲೀನೂ ವ್ಯಾಜ್ಯ! ಈಗ ನಮ್ಮ ಪಂಚಾಯತಿಗೂ ಈ ಪಾರ್ಟಿ ವ್ಯಾಜ್ಯ ಬಂದುಬಿಟ್ಟಿದೆ! ಖಾದಿ ಬಟ್ಟೆ ಹಾಕಿದವರಿಗೇನೆ ಓಟು ಕೊಡ್ರಿ ಅಂತ ಹೊರಟಿದ್ದಾರೆ! ಹಳ್ಳಿ ಜನ ನಾವು. ನಾವು ಪಾರ್ಟಿ ಮಾಡಿ ವ್ಯಾಜ್ಯ ಆಡ್ತೇವೆ ಅಂತ ಸುಮ್ಮಸುಮ್ಮನೆ ನಮ್ಮನ್ನು ದೂಡ್ತಾರಲ್ಲ! ಏನು ಮಾಡೋಣ ಹೇಳಿ ಸ್ವಾಮಿ!’ ಎಂದು ಕೇಳಿದನು.
ರಂಗಣ್ಣ, `ಅದೆಲ್ಲ ರಾಜಕೀಯ ವಿಚಾರ. ನಾನು ಸರಕಾರದ ನೌಕರ. ಅದನ್ನೆಲ್ಲ ಚರ್ಚಿಸಬಾರದು. ನಿಮ್ಮ ನಿಮ್ಮಲ್ಲಿ ವಾಜ್ಯ ಆಡಿ ಕೊಂಡು ಕೋರ್ಟು ಕಚೇರಿಗಳನ್ನು ಹತ್ತ ಬೇಡಿ; ಪರಸ್ಪರ ಛಲ ವೈರ ಇಟ್ಟು ಕೊಂಡು ಕೆಟ್ಟು ಹೋಗಬೇಡಿ. ಅಷ್ಟೇ ನಾನು ಹೇಳುವುದು’ ಎಂದನು.
ಮಧ್ಯಾಹ್ನ ಭರ್ಜರಿ ಭೋಜನವಾದಮೇಲೆ ಸ್ವಲ್ಪ ವಿಶ್ರಾಂತಿಯನ್ನು ತಗೆದುಕೊಂಡು ರಂಗಣ್ಣ ಸಂಸಾರದೊಂದಿಗೆ ಸಾಯಂಕಾಲ ಜನಾರ್ದನ ಪುರಕ್ಕೆ ಹಿಂದಿರುಗಿದನು. ಚೇರ್ಮನ್ನು ಒಳ್ಳೆಯ ಕಮಾನು ಕಟ್ಟಿದ ಬೇರೆ ಗಾಡಿಯನ್ನೂ ಜೊತೆಗೆ ಆಳುಗಳನ್ನೂ ಕಳಿಸಿದನು.
*****
ಮುಂದುವರೆಯುವುದು