ಮೋಡದೊಳಗೆ ದೇವದೇವಯಾನಿಯರ
ಮೆಲ್ಲನುಸಿರೋ ಝಲ್ಲೆನ್ನುವ ಮಾತೋ
ಸುತ್ತಾಟ ಜಗ್ಗಾಟ ಕೊಸರಾಟ
ದಿಕ್ಕು ದಿಕ್ಕಿನೆದೆಯಾಳದೊಳಗೆ ದಾಹ
ಇದು ಮದೋನ್ಮತ್ತ ದೇವಸ್ಪರ್ಷ.
ಸಳಸಳನೆ ಮಳೆಬೀಜ ಸುರಿಸಿ
ಬೆವರೊಡೆಯುವ ಘಳಿಗೆ
ನಾಭಿಯುಸಿರು ನಾಸಿಕದೆಡೆಗೆ ಸೆಳೆತ
ಜೀವಕುಡಿಯೊಡೆದು ಚಲಿಸುವ ಕ್ರಮ.
ಸುರಿಸುರಿವ ರಾಶಿಮಳೆ ಜರಡಿ ಅಲ್ಲಾಡಿಸಿ
ಸೂರ್ಯ ನಕ್ಕು ಕಾಮನಬಿಲ್ಲಾಗಿ ಮಾಯ-
ಮಳೆಬೀಜ ಮಳೆಬೀಜ ಎಲ್ಲೆಲ್ಲೂ ಮಳೆಬೀಜ
ಆಕಾಶದಿಂದುದುರಿ ಅಂಗೈಮೇಲೆ ಮೈಮೇಲೆ
ಇಡಿ ಇಡಿಯಾಗಿ ಮನದಮೇಲೆ;
ಬಿಟ್ಟರೆ ಹರಿದೋಡುವ ಮಾಯೆ.
ಗಡಿಗೆ ಮಡಿಕೆ ಬುಟ್ಟಿ ಚೀಲಗಳ ಹುಡುಕಾಟ
ತುಂಬಿಡಲು ಓಡಾಟ ಪರದಾಟ ಹರಸಾಹಸ,
ತುಂಬಿದಷ್ಟು ತುಳುಕಾಟ ಅಕ್ಷಯಪಾತ್ರೆ
ಮೌನವಹಿಸಿದ ಕ್ಷಣ ಲಗಾಮಿಲ್ಲದ ಕುದುರೆ ಓಟ
ಹಗೆ ಕಣಜ ನೆನಪಿಸಿ ತುಂಬಿಡುವ ಚಡಪಡಿಕೆ
ಊಹೂಂ! ಹಿಡಿತಕ್ಕೆ ಸಿಗದೆ
ಕೆರೆಹಳ್ಳ ಹೊಳೆ ಹೊಂಡ ತುಂಬಿ ತುಳುಕಿ;
ಧುಮ್ಮಿಕ್ಕುವ ಸಮೃದ್ಧಿ ಎಲ್ಲೆಲ್ಲೂ
ಉಕ್ಕಿ ಉಕ್ಕಿ ಸಮುದ್ರದಾಳಗಲ ಸೇರಿ ನೆಮ್ಮದಿ.
ಮುಂದಿನ ಬಿತ್ತನೆಗೆ ಮತ್ತೆ
ಕಾವಿನ ಮತ್ತೇರಿ ಆಕಾಶದ ಹೆಗಲೇರಿ
ತೊನೆದಾಡುವ ಕನಸಿನ ರೀತಿಗೆ
ಹೂವಾಗಿ ಕಾಯಾಗಿ ಚಿಮ್ಮನೆ ಚಿಮ್ಮಲು
ಮಳೆ ಬೀಜವಾಗುವ ಚಕ್ರ.
*****