ಪ್ರಕೃತಿಯಲಿ ಸೌಂದರ್ಯ ಕಾಣದೆಯೆ ಕುರುಡಾಗಿ
ವಿಕೃತಿಯನೆ ನೋಡಿದೆನು ಅದು ಸತ್ಯವೆಂದು
ಸುಕೃತಿಗಳನೊಪ್ಪದೆಯೆ ಎನ್ನದೇ ಸರಿಯೆಂದು
ಆಕೃತಿಯ ದುಷ್ಕೃತಿಗೆ ಬಲಿಗೊಟ್ಟೆನಯ್ಯ.
ನಾನು ದೊಡ್ಡವನೆಂದು ಹೆಮ್ಮೆಯಲಿ ಮೆರೆಯುತ್ತ
ಮಾನಾಪಮಾನಮಂ ಲೆಕ್ಕಿಸದೆ ನಡೆದು
ಎನ್ನ ಹಿರಿತನಕಾಗಿ ಗರ್ವದಲಿ ದರ್ಪದಲಿ
ಜನರ ಹಿಂಸಿಸಿ ಮೆರೆದೆ ಸಂತೋಷದಿಂದ.
ಪರಹಿತಕೆ ಮನಗೊಡದೆ ಎನ್ನ ನುಡಿ ಎನ್ನ ನಡೆ
ಸರುವವೆಂದರಿಯುತಲಿ ತೆಗಳಿದೆನು ಜನರ
ಪರಹಿಂಸೆ ಮರೆ ಮೋಸ ಸುಳ್ಳು ಮದ ಲೋಭದಿಂ
ಪರ ಮರೆತು ಸ್ವಾರ್ಥದಿಂ ಮೆರೆದಾಯ್ತು ಇನ್ನು.
ಒಂದು ನುಡಿ ಒಂದು ನಡೆ ಒಂದು ಮನ ಒಂದು ಕ್ರಿಯೆ
ನಿಂದೆನ್ನ ಹೃದಯವನು ನಿರ್ಮಲಂಗೆಯ್ದು
ತಂದೆ ನಿನ್ನಡಿಗಳಲಿ ಮನವೂರಿ ನೆನೆವಂತೆ
ಬಂದೆನ್ನ ಕಾಪಿಡೈ ಕೈ ಬಿಡದೆ ನಿತ್ಯ.
ನಿನ್ನ ಹೊರತಿನ್ನಾರು ಗತಿಯೆನಗೆ ಜಗದಲ್ಲಿ
ಎನ್ನಂತರಂಗದಲಿ ನೆಲಸಯ್ಯ ಶ್ರೀಶ
ಹೊನ್ನು ಮಣ್ಣುಗಳಿಂದ ಭ್ರಾಂತನಾಗುತ ತೊಳಲಿ
ಅನ್ಯರಿ೦ಗಾಳಾಗಿ ಬಾಳ್ಗೆಡಿಸಿಕೊಂಡೆ.
*****