‘ವಂದೇ ಮಾತರಂ’ ಸಾಂಗ್ಗೆ ನೂರು ವರ್ಸ ತುಂಬಿದ್ದೇ ನೆಪವಾಗಿ ಅದನ್ನು ಭಾರದಾದ್ಯಂತ ಸೆಪ್ಟೆಂಬರ್ ೭ ರಂದು ಕಡ್ಡಾಯವಾಗಿ ಎಲ್ಲಾ ಶಿಕ್ಷಣ ಸಂಸ್ಥೆಗಳಲ್ಲಿ ಹಾಡಬೇಕೆಂಬ ಸುತ್ತೋಲೆಯಲ್ಲಿ ಕಡ್ಡಾಯವಲ್ಲ ಎಂದರೂ ಬಿಜೆಪಿ ಭಕ್ತರು, ಅವರ ನೆರಳುಗಳಾದ ವಿ.ಹಿಂ.ಪ. ಭಂ.ದಳ, ಆರೆಸೆಸ್ಸು ಅದನ್ನೇ ಹಿಡಿದು ಮುಸ್ಲಿಂರನ್ನು ಇಕ್ಕಟ್ಟಿಗೆ ಸಿಕ್ಕಿಸುವ ಹುನ್ನಾರಕ್ಕೆನಿಂತಿತು. ‘ವಂದೇ ಮಾತರಂ’ ಹಾಗಂದ್ರೇನು? ಯಾವ ಭಾಸೆನಾಗೈತೆ? ಯಾರು ಬರ್ದೋರು? ಯಾಕೆ ಮೊದಲು ಹಾಡಿದರು? ಇದರ ಬಗ್ಗೆ ತಿಳ್ಕೊಂಬೇಕು ಅನ್ನೋ ಭಕ್ತಿ ಮಾತು ಒತ್ತಟ್ಗಿಲಿ. ಕುತೂಹಲವಾರ ಬ್ಯಾಡ್ವಾ! ಕವಿ ಬಂಕಿಮಚಂದ್ರ ಚಟರ್ಜಿ ೧೮೭೬ ರಲ್ಲೇ ಹಾಡು ಬರೆದರು. ವಾರಣಾಸಿನಾಗೆ ೧೯೦೫ ಸೆಪ್ಟಂಬರ್ ೭ ರಂದು ನಡೆದ ಕಾಂಗ್ರೆಸ್ ಸಮ್ಮೇಳನ್ದಾಗೆ ಇದನ್ನು ರಾಷ್ಟ್ರೀಯ ಹಾಡು ಅಂತ್ಹೇಳಿ ಠರಾವು ಮಾಡಿದರು. ಇದಕ್ಕೀಗ ಶತಮಾನೋತ್ಸವದ ಪಿರಿಪಿರಿ. ಹಿಂದು ಮುಸ್ಲಿಂ ಕಿರಿಸ್ತಾನರು ಸಿಖ್ ಪಾರ್ಸಿ ಎಲ್ಲಾ ಶಿಕ್ಷಣ ಸಂಸ್ಥೆನಾಗೂ ಕಡ್ಡಾಯವಾಗಿ ಹಾಡ್ಬೇಕು ಅಂದ ಕೇಂದ್ರ ಸಚಿವ ಆರ್ಜುನ್ ಸಿಂಗ ಸುಮ್ಗಿರಲಾದೆ ತಿಕವಾಗೆ ಇರವೆ ಬಿಟ್ಕಂಡ ಅನ್ನಂಗೆ ಆದೇಸ ಹೊಂಡಿಸಿದ. ಏನಾದ್ರು ಸೈ ಪ್ರಾಬ್ಲಂ ಕ್ರಿಯೇಟ್ ಮಾಡಲೆಂದೇ ಕಾದಿದ್ದ ಬಿಜೆಪಿಯ ಮುಖವಾಣಿಗಳು ಲಟ್ಟ ಹಿಡ್ಕೊಂಡು ಹೋರಾಟಕ್ಕೆ ರೆಡಿಯಾಗಿ ಬಿಟ್ವು. ತಮ್ಮ ಆಡಳಿತ ಇರೋ ರಾಜ್ಯದಲ್ಲೆಲ್ಲಾ ಸದರಿ ಹಾಡನ್ನು ಕುಲ್ಡರು ಕಿವುಡರು ಮೂಗರು ಸತ್ಕೆ ಎಲ್ಲಾರೂವೆ ಸಿಂಗ್ ಮಾಡ್ಲೇಬೇಕು. ಮೋರೋವರ್ ಮುಸ್ಲಿಮ್ಮರು ಭಾರತೀಯರಾದ್ದರಿಂದ ಅವರೂ ಸಿಂಗಿಂಗ್ ಮಾಡ್ಲೇಬೇಕು ಅಂತ ಕ್ಯಾತೆ ತೆಗೀತು. ಮುಸ್ಲಿಂ ಮೂಲಭೂತವಾದಿಗಳಾದ ಬುಖಾರಿ, ಫೈಜರ್, ರೆಹಮಾನ್ ತರದ ರಕ್ತಪಿಪಾಸುಗಳು ಧಾರ್ಮಿಕ ಪ್ರಶ್ನೆ ಮುಂದಿಕ್ಕಿ ನಮಗೆ ಅಲ್ಲಾನೇ ಎಲ್ಲಾ. ಅವನ್ನ ಬಿಟ್ಟು ಯಾಗೂ ಸಲಾಂ ಹೊಡೆಯಂಗಿಲ್ಲ. ಅಂತ ‘ಫತ್ವಾ’ ಹೊಂಡ್ಸೇ ಬಿಟ್ಟರು. ಬಿಜೆಪಿಯ ಅದಿ ದೋಸ್ತ್ ಸಿವ ಸೇನೆಗೂ ಇದೇ ಬೇಕಿತ್ತು. ‘ಹಿಂದೂಸ್ತಾನ್ ಮೆ ರೆಹ್ನಾ ಹೈ ತೋ ವಂದೇ ಮಾತರಂ ಕಹ್ನಾ ಹೋಗಾ’ ಅಂತ ಗುಲ್ಲೆಬ್ಬಿಸಿತು. ಸಾಬರ ಗಾಯಕ್ಕೆ ಮತ್ತೋಟು ಕೆರ್ದು ಹುಣ್ಣ ಮಾಡ್ತು. ಈ ಹಾಡಿನ ಎರಡು ಚರಣಗಳನ್ನಷ್ಟೇ ಹಾಡ್ರಯ್ಯ ಸಾಕು ಅಂತ ೧೯೩೭ ರಾಗೆ ಭಾರತ ರಾಷ್ಟೀಯ ಕಾಂಗ್ರಸ್ ರಾಜೀ ಮಾಡ್ಕೊಂಡಿತ್ತು. ಇಸ್ಲಾಂ ಮುಖಂಡರು ಮುನಿಸ್ಕೊಂಡು, ಭಾರತ ಮಾತೆನಾ ಹಿಂದೂ ಗಾಡ್ ತರ ವರ್ಣನೆ ಮಾಡ್ಯಾರೆ. ಆಕೆಗೆ ಪೀತಾಂಬರ ಉಡ್ಸಿ ಹಾಥ್ ನಾಗೆ ಬಾವ್ಟ ಕೊಟ್ಟಾರೆ. ನಾವು ಅಲ್ಲಾನ ಹೊರ್ತು ಪೈಗಂಬರನೂ ಕ್ಯಾರೆ ಅನ್ನಲ್ಲ. ಜಾನ್ ಕೊಟ್ಟ ಅಮ್ಮಿ ಜಾನ್ಗೆ ಸಲಾಮ್ ಹೊಡೆಯಲ್ಲ ಅಂತ ಹಠಕ್ಕೆ ಬಿದ್ದರು. ಇದು ನಮ್ಮ ತೌಹಿದ್ (ದೇವನೊಬ್ಟನೇ) ಸಿದ್ಧಾಂತ ಅಂದರು. ಎರಡು ಚರಣ ನಾರ ಹಾಡ್ರಿ ಸಾಹೇಬ್ರೆ ಅಂತ ಹೇಳಿವಲ್ಲ ಅಂತು ಸರ್ಕಾರ. ಇದ್ರಾಗೆ ತಾಯಿನಾಡು ಅಂತಿದ್ರೀ ದುರ್ಗಾ ಲಕ್ಷ್ಮಿ ಸರಸ್ವತಿ ಹೆಸರೇಳೈತೆ ‘ಎ ಸಭಿ ಔರತೌ ಕೋನ್ರೆ ಸಾಲೆ ಅರ್ಜುನ್?’ ಇವರಿಗೆಲ್ಲಾ ನಾವ್ ಸಲಾಮ್ ಹೊಡಿಬೇಕೆನೋ ದುಶ್ಮನ್? ಹಿಂದೂಗಳು ಮನೆತುಂಬಾ ದೇವರು ಪಟ ಮಾಡಿಕ್ಕೊಂಡು, ಹೊರಾಗೂ ಗುಡಿಗೋಪುರ ಕಟ್ಕೊಂಡು ಗಂಟೆ ಅಲ್ಲಾಡ್ಸಿ ಕಾಸು ಮಾಡ್ತಾರೆ…… ನಾವು ಎಂದಾರಾ ಬ್ಯಾಡ ಅಂದಿದ್ದುಂಟಾ? ಹಂಗೆ ನೋಡಿದ್ರೆ ಇದು ಸೆಕ್ಯುಲರ್ ದೇಸ ಕಣ್ರಿ. ಹಂಗಂತ ನಮ್ದು ಖುರಾನ್ ಓದ್ಲಿ ಬೈಬಲ್ ಓದ್ಲಿ, ಅಂತ ಕಡ್ಡಾಯ ಮಾಡಿದ್ರೆ ನೀವು ಬೈಬ್ಲು, ಖುರಾನು ಓತ್ತಿರಾ? ಅಂತ ಕೊಶ್ಚನ್ ಹಾಕವ್ನೆ ಫೈಜರ್ ರೆಹಮಾನ್. ಉರ್ದುನಾಗ್ಳ ಮದರ್-ಎ-ವತನ್‍ಗೆ ಸಂವಾದಿ ಪದವೇ ವಂದೇಮಾತರಂ ಕಣ್ರಿ ಸಾಯೇಬ್ರೆ ಎಂದ್ರೂ ಅರ್ಥಮಾಡಿಕ್ಯಣಂಗಿಲ್ಲ. ಅರೆಬರೆ ಹಿಂದು- ಮುಸ್ಲಿಂನಾದ ಫೇಮಸ್ ಮ್ಯೂಸಿಕ್ ಡೈಕರಕ್ಟರ್, ಎ.ಆರ್. ರೆಹಮಾನ್ ‘ವಂದೇ ಮಾತರಂ’ ಗೀತೆನಾ ಡಿಫರೆಂಟಾಗಿ ಟ್ಯೂನ್ ಮಾಡಿ ಹಾಡ್ಸಿ ದೇಸೆಂಬೋ ದೇಸಾನೆ ಕುಣಿಯೋ ಹಂಗೆ ಮಾಡ್ದ. ಅದ್ರಾಗ್ಳ ಒಂದು ವರ್ಡು ‘ಮಾ ತುಝೆ ಸಲಾಮ್’ ಕಿವಿಗೆ ಕೇಳುತ್ಲು ಎಂಥವನಿಗೂ ಮೈ ರೋಮಾಂಚನವಾಯ್ತದಲ್ಲವರಾ? ಆಗಿಲ್ಲದ ಗದ್ದಲ ಗೊಂದ್ಲ ಈಗ ಯಾಕ್ರಪಾ ಅಂತ ಶ್ರೀಸಾಮಾನ್ಯ ಹಿಂದು ಮುಸ್ಲಿಮರು ತೆಲಿಮ್ಯಾಗೆ ಟವೆಲ್ ಹಾಕ್ಕಂಡು ಕುಂತು ಬಿಟ್ಟವ್ರೆ. ಕಡ್ಡಾಯವಾಗಿ ಹಾಡಿ ಅನ್ನೋ ಆರೆಸ್ಸಿಸ್ಸಿಗರು ಮತ್ತು ‘ಫತ್ವಾ’ ಹೊರಡಿಸೋ ಸಾಬರು ಇವು ಎಲ್ಡೂ ಕೊಚ್ಚೆಗಳೆ. ಇಂಥೋರಿಂದ್ಲೆ ದೇಸಕ್ಕೆ ದುನಾತ ಬಡ್ದಿರೋದು ನೋಡ್ರಲಾ. ಇದು ರಾಷ್ಟ್ರೀಯ ಹಾಡು ಅಂತ ಸಮರ್ಥಿಸಿಕೊಳ್ದೆ ಜಾರ್ಕೊಂತಿರೋ ಕಾಂಗ್ರೆಸಿಗೆ ಸಾರಾಸಗಟು ಓಟು ಮ್ಯಾಗೇ ಕಣ್ಣು. ಸಾಬರು ಹಾಡಾಕಿಲ್ಲ ಅನ್ನೋದಗನೇ ‘ಬಿಗ್ ಇಶ್ಯೂ’ ಮಾಡಿ ಹಿಂದುಗಳ ಮನಸ್ಸು ಕೆಡ್ಸಿ ಓಟ್ಟೆಲ್ಲಾ ತಮ್ಮ ಡಬ್ಬಿಗೇ ಹಾಕಿಸಿಕೊಳ್ಳೋ ಪಿಲಾನ್ ಬಿಜೆಪಿ ಮುತ್ಯಾಗುಳ್ದು.
ತ್ವಂ ಹೀ ದುರ್ಗಾ ದಶ ಪ್ರಹಾರಣಾ ಧಾರಿಣೀ
ಕಮಲ ಕಮಲಾಳ ವಿಹಾರಿಣಿ
ವಾಣಿ ವಿದ್ಯಾದಾಯಿನಿ ನಮಾಮಿ ತ್ವಂ
ಅಂಬೋ ಸಾಲುಗಳೆಂದರೆ ಸಾಬರಿಗೆ ವಾಕರಿಕೆ. ಅದೇ ಸಾಲುಗಳೇ ಹಿಂದೂ ಕಟ್ಟರ್ ವಾದಿಗಳಿಗೆಲ್ಲಾ ಚೇತರಿಕೆ. ಇದನ್ನೆಲ್ಲಾ ನೋಡೋ ಜನ ಸಾಮಾನ್ಯರಿಗೆ ಹೆದರಿಕೆ!
‘ಧರಂ ಇನ್ನೊಂದು ಧರಂ ಕೆ ಊಪ್ಪರ್ ಸವಾರಿ ಕನಾ ನ ಮುಂಕಿನ್ ಹೈರೆ ಸಾಲೆ ಇದು ಸೆಕ್ಕುಲರ್ ಭಾರತ್ ಹೈರೆ’ ಅಂತಾರೆ ಮುಸ್ಸಿಂ ಲೀಡಸು. ದೇಸ ಮುಖ್ಯನಾ ಧರ್ಮ ಮುಖ್ಯನಾ? ಅಂಬೊ ಕೊಚ್ಚನಿಗೆ ಮಾತ್ರ ಯಾತವೂ ಉತ್ತರ ಸಿಗವಲ್ಲ ದಂಗಾಗೇತ್ ನೋಡ್ರಿ! ಒನ್ಸ್ ಅಪ್ನೆ ಟೈಂ ದೇಸ ಕಟ್ಟೋ ಸಾಂಗ್ ಆಗಿದ್ದ ವಂದೇ ಮಾತರಂ ಈವತ್ತು ದೇಸ ಒಡೆಯೋ ಸಾಂಗ್ ಆಗಿದ್ದು ಮಾತ್ರ ವೆರಿಸ್ಯಾಡ್. ನಮ್ಮಲ್ಲಿನ ಮಿಕ್ಸಚರ್ ಸರ್ಕಾರದಾಗಿರೋ ಬಿಜೆಪಿಯ ಅಧ್ಯಕ್ಷ ಡಿ.ವಿ.ಎಸ್.ಗೌಡ ವರ್ಸವೆಲ್ಲಾ ಹಾಡೋ ಹಂಗೆ ಕಡ್ಡಾಯ ಮಾಡಿಸ್ತೀನಿ ಅಂತ ಸೆಡ್ಡು ಹೊಡಲಿಕತ್ತಾನೆ ಏನು ಮಾಡೋದೋ ತಿಳಿದಂಗಾಗಿ ಕೊಮಸಾಮಿ ಹಕ್ಕಿ ಹಂಗೆ ಬಾಯಿಬಾಯಿ ಬಿಡ್ತಾ ಅವ್ನೆ. ಇಷ್ಟರಮ್ಯಾಗೆ ವಂದೇ ಮಾತರಂನ ಸಾಲುಗಳ ಅರ್ಥ ತಾತ್ಪರ್ಯ ನಮ್ಮಲ್ಲಿನ ಎಷ್ಟು ಜನಕ್ಕೆ ಗೊತ್ತೇತೇಳ್ರಿ? ಈಗಿನ ಜಾಗತೀಕರಣ ಉದಾರೀಕರಣಕ್ಕೆ ಒಳಗಾದ ಮಂದಿಗೆ, ಇಂಗ್ಲಿಷ್ ಮೀಡಿಯಂ ಪ್ರಭಾವದ ಹೈಕಳುಗಳಿಗೆ ಇಂಥ ಗೀತೆಗಳೆಲ್ಲಾ ಎಂಥ ಪ್ರಭಾವ ಬೀತಾವೋ ಭಾರತಾಂಬೆಯೇ ಬಲ್ಲಳು! ಅದೇನೆ ಇರಲಿ ರಾಜಾಸ್ತಾನ್ ಬಿಟ್ಟು ಉಳಿದ ಬಿಜೆಪಿ ರೂಲ್ನಲ್ಲಿರೋ ಮಧ್ಯಪ್ರದೇಶ. ಭತ್ತೀಸ್ಗಡ್, ಗುಜರಾತ್ ನ ಮುಸ್ಲಿಂ ಶಿಕ್ಷಣ ಸಂಸ್ಥೆಗಳಲೂ ‘ವಂದೇ ಮಾತರಂ’ ಹಾಡು ಹಾಡಿದ್ದಾರೆಂದರೆ ಎಲ್ಲಾ ಮುಸ್ಲಿಮರೂ ನಾವಂದು ಕೊಂಡಂತೆ ಪಿಸುಣರಲ್ಲ. ಕೆಲವು ಮುಸ್ಲಿಂ ಸಂಸ್ಥೆಗೆ ರಜೆ ಘೋಷಿಸಿ ಮಕ್ಕಂಬಿಟ್ವು. ಸಣ್ಣತನ ಯಾರನ್ನೂ ಬಿಟ್ಟಿಲ್ಲ ಕಣ್ರಿ.
ನಮ್ಮ ನಾಡಗೀತೆ ‘ಭಾರತ ಜನನಿಯ ತನುಜಾತೆ’ ನಲ್ಲಿ ಮಾಧ್ವನ ಹಸರೇ ಇಲ್ಲ ಅಂತ ಕ್ಯಾತೆ ತೆಗೆದ ಪೇಜಾವರಂತ ಮಾ ಮುನಿಗಳು ಎಲ್ಲಾ ಪಂಗಡದಲ್ಲೂ ಅವರೆ ಬಿಡಿ. ಬಿಜೆಪಿನೋರು ಆಗ್ಲೆ ಈ ಗೀತೆನಾ ಯಲಕ್ಷನ್ ಪರಪಸ್ಗೆ ಮಾಡ್ಕೊಳ್ಳೋ ಪ್ಲಾನ್ ಹಾಕವೆ. ದೇಸದ ತುಂಬಾ ಏನೋ ಗದ್ದಲ ಆಗೋತದೆ ಅಂತ ಕನಸು ಕಾಣ್ತಿದ್ದವರಿಗೆಲ್ಲಾ ಈಗ ಮತ್ತೆ ಹತಾಶೆ. ದೇಸ ಪ್ರೇಮದ ಮ್ಯಾಟನ ಅವರವರ ಭಾವಕ್ಕೇ ಬಿಡೋದು ಚಲೋ ಅಲ್ವೇನಿ…… .. ‘ಬೋಲೋ ಭಾರತ್ ಮಾತಾ ಕಿ ಜೈ!’
*****
( ದಿ. ೨೧-೦೯-೨೦೦೬)