ಅಡ್ಡಾಡುತ್ತಾ ದಿಕ್ತಪ್ಪಿ ಬಂದ
ತುಂಡಕರು
ಕಾಲಿಗೆ ತೊಡರುತ್ತಾ
ಮುದ್ದುಗರೆಯುವ ನಿಲುಮೆಗೆ
ಕೊಚ್ಚಿ ಹೋಗಿ…..
ಸಿಕ್ಕಸಿಕ್ಕೆಡೆ ಇಷ್ಟ ಬಂದಂತೆ
ಅಂಡಲೆಯುವ ಜೀವಾತ್ಮವ
ನಿಯತಕ್ಕೆ ಕಟ್ಟಿ ಹಾಕುವುದೂ
ಹಿಂಸೆಯೇ ಎಂದರಿವಾಗುವ
ಕಾಲಕ್ಕೆ ಮೀರುತ್ತದೆ ಕಾಲ.
‘ಇದೋ ಬಾಗಿಲು ತೆರೆದಿಟ್ಟಿದೆ
ಯಾರ ಅಂಕೆಯೂ
ಯಾವ ಶಂಕೆಯೂ ಇಲ್ಲದೇ
ಬೇಕೆಂದೆಡೆಗೆ ಹಾರು’
*
ಸ್ವಾಗತವೋ, ಬೀಳ್ಕೊಡುಗೆಯೋ!
*
ಅಕಾಲಿಕ ನಿರ್ಧಾರದ ಆ ಕ್ಷಣ
ಉಸಿರು ಅದುಮುತ್ತಿರುವ ಸಂಕಟಕ್ಕೆ
ಚಡಪಡಿಸುತಿರುವ ಜೀವ.
*
ನೀರ ಸೆಳೆತಕ್ಕೆ ಬಿದ್ದ ಮೀನು
ಅದಿನ್ನೆಷ್ಟು ಈಜಬಹುದು
ಜೀವ ಸೋಲದೇ?
ಆಡುತ್ತಾಡುತ್ತಲೇ
ಯಾರೋ ನಿರ್ದಾಕ್ಷಿಣ್ಯದಿ
ಹೊರ ತೆಗೆದೆಸೆದರೆ
ಬಾಯ್ಬಿಡುತಿಹ ಪ್ರಾಣಕ್ಕೆ
ಅನಾಯಾಸದಿ ಮುಕ್ತಿಯ
ದಡ ಸೇರಿಸುವ
ಕರುಣಾಳುವಿಗೆ
ವಿದಾಯ ಹೇಳಿ
ನಿರುಮ್ಮಳವಾಗಿ
ತೆರೆದ ಬಾಗಿಲಿನಿಂದ ಕಾಲೆಳೆಯುತ್ತಾ
ಬಟ್ಟಂಬಯಲಿಗೆ ಬಂದು ನಿಂತರೆ
ಆಗಸ ತುಂಬಿದ ನಕ್ಷತ್ರಗಳು.
*****