ಕಾರ್ಪೊರೇಟ್ ಕಣ್ಣಿನ ಕಲ್ಪನಾ ವಿಲಾಸ

ಕಾರ್ಪೊರೇಟ್ ಕಣ್ಣಿನ ಕಲ್ಪನಾ ವಿಲಾಸ

ಮುಕ್ತ ಆರ್ಥಿಕ ನೀತಿಯನ್ನು ಪ್ರತಿಪಾದಿಸುವ ಜಾಗತೀಕರಣದ ಫಲವಾಗಿ ನಮ್ಮ ದೇಶದಲ್ಲಿ ಪ್ರಬಲ ಕಾರ್ಪೊರೇಟ್ ವಲಯ ರೂಪುಗೊಂಡಿದೆ. ಬಹುರಾಷ್ಟ್ರೀಯ ಕಂಪನಿಗಳ ಈ ಕೇಂದ್ರಶಕ್ತಿಯು ತನ್ನ ಅಭಿಮತಗಳನ್ನು ಸಮಾಜದ ಪ್ರಧಾನ ಮನೋಧರ್ಮವಾಗಿಸುತ್ತಿದೆ. ಮಿಶ್ರ ಆರ್ಥಿಕಪದ್ಧತಿ ಜಾರಿಯಲ್ಲಿದ್ದ ಸಂದರ್ಭದಲ್ಲಿ ಖಾಸಗಿ ಬಂಡವಾಳಕ್ಕಿಂತ ಸಾರ್ವಜನಿಕ ಅಥವಾ ಸರ್ಕಾರಿ ಬಂಡವಾಳದ ಶಕ್ತಿಯು ಕಡೇಪಕ್ಷ ಶೇಕಡ ಒಂದರಷ್ಟಾದರೂ ಹೆಚ್ಚಾಗಿರುತ್ತಿತ್ತು. ಇದರ ಫಲವಾಗಿ ಸರ್ಕಾರದ ನೀತಿ ನಿಲುವುಗಳು ಮೇಲುಗೈ ಪಡೆಯುತ್ತಿದ್ದವು. ಅದು ಕೈಗಾರಿಕೀಕರಣದ ಕಾಲ. ಆದರೀಗ ಚಾಲ್ತಿಯಲ್ಲಿರುವುದು ಜಾಗತೀಕರಣದ ಕಾಲ; ಸರ್ಕಾರದ ನಿಯಂತ್ರಣ ವಿಲ್ಲದೆ ಮುಕ್ತವಾಗಿ ಬಂಡವಾಳವನ್ನು ತೊಡಗಿಸುವ ಕಾಲ. ಸರ್ಕಾರದ ನಿಯಂತ್ರಣ ಇಲ್ಲ ಎಂದ ಮೇಲೆ ಸರ್ಕಾರದ ನೀತಿ-ನಿಲುವುಗಳ ನಿಯಂತ್ರಣವೂ ಇಲ್ಲ ಅಥವಾ ಖಾಸಗಿ ಬಂಡವಾಳಗಾರರ ನೀತಿ ನಿಲುವುಗಳೇ ಸರ್ಕಾರದ್ದೂ ಆಗಿವೆ ಎಂದರ್ಥ. ಸರ್ಕಾರ, ಸಂವಿಧಾನಕ್ಕೆ ಬದ್ಧವಾಗಿ ಕೆಲಸ ಮಾಡಬೇಕು. ಇದರ ಬದಲು ಖಾಸಗೀ ಬಂಡವಾಳಗಾರರ ಆಶಯಕ್ಕೆ ಬದ್ಧವಾಗಿ ಕೆಲಸ ಮಾಡಬೇಕಾದ ಅನಿವಾರ್ಯ ನಿರ್ಮಾಣಗೊಂಡಿದೆ. ಈಗ ಖಾಸಗಿ ಬಂಡವಾಳವು ಸಂವಿಧಾನವನ್ನು ಮೀರಿದ ಶಕ್ತಿಕೇಂದ್ರವಾಗಿದೆ. ಈ ಶಕ್ತಿಕೇಂದ್ರದ ಮುಖವಾಗಿರುವ ಕಾರ್ಪೊರೇಟ್ ವಲಯವು ಸರ್ಕಾರದ್ದಷ್ಟೇ ಅಲ್ಲ, ಸಮಾಜದ ನೀತಿ ನಿಲುವುಗಳನ್ನು ನಿರ್ಧರಿಸುವಷ್ಟು ಶಕ್ತಿಶಾಲಿ ಯಾಗಿ ಬೆಳೆಯುತ್ತಿದೆ. ಸಾಮಾಜಿಕ, ಶೈಕ್ಷಣಿಕ, ಸಾಂಸ್ಕೃತಿಕ – ಹೀಗೆ ವಿವಿಧ ವಲಯಗಳನ್ನು ಕಾರ್ಪೊರೇಟೀಕರಣಗೊಳಿಸುತ್ತ ಅಂತಿಮ ಸತ್ಯದ ಹರಿಕಾರನಂತೆ ವರ್ತಿಸುವ ಬೃಹತ್ ಬಂಡವಾಳಶಾಹಿಯು ಜನರ ಜೀವನ ದೃಷ್ಟಿಕೋನಕ್ಕೂ ಅನಾರೋಗ್ಯಕರ ತಿರುವು ಕೊಡುತ್ತಿದೆ.

ಉದಾಹರಣೆಗೆ ನೋಡಿ : ಕೈಗಾರೀಕರಣ ಕಾಲದಲ್ಲಿದ್ದ ಜನರ ಕನಸುಗಳೇ ಬೇರೆ. ಜಾಗತೀಕರಣ ಕಾಲದ ಕನಸುಗಳೇ ಬೇರೆ, ಈಗಲೂ ಹಿಂದಿನ ಕನಸುಗಳೇ ಇರಬೇಕೆಂದು ನಾನು ಹೇಳುತ್ತಿಲ್ಲ. ನಮಗೆ ಆರೋಗ್ಯಕರ ಮನೋಧರ್ಮವನ್ನು ಬೆಳೆಸುವ ಕನಸುಗಳು ಬೇಕು; ಆ ಕನಸುಗಳು ಸಾಕಾರಗೊಳ್ಳಬೇಕು. ಉತ್ತಮ ಶಿಕ್ಷಣ ಪಡೆಯುವುದು, ತಕ್ಕಮಟ್ಟಿನ ಉದ್ಯೋಗ ಪಡೆಯುವುದು, ಬದುಕಲಿಕ್ಕೆ ಬೇಕಿರುವಷ್ಟು ಸಂಬಳ ಪಡೆಯುವುದು, ಮನೆ ಕಟ್ಟಿಸುವುದು, ಕುಟುಂಬದಲ್ಲಿ ನೆಮ್ಮದಿ ಕಾಯ್ದುಕೊಳ್ಳುವುದು – ಈ ಕೆಲವು, ಕೈಗಾರಿಕೀಕರಣ ಕಾಲದ ಕನಸುಗಳು. ಇವು ‘ಸುಖಮುಖಿಯಾದ’ ಕನಸುಗಳು. ಆದರೆ ಜಾಗತೀಕರಣ ಹುಟ್ಟು ಹಾಕುತ್ತಿರುವುದು ‘ಭೋಗಮುಖಿಯಾದ’ ಕನಸುಗಳು. ಬದುಕಲಿಕ್ಕೆ ಮಾತ್ರ ಸಂಬಳ ಸಾಲದು, ತಿಂಗಳಿಗೆ ಲಕ್ಷ ಲಕ್ಷ ಸಂಬಳಬೇಕು. ವೈಭೋಗದ ಜೀವನಕ್ಕೆ ವಿಲಾಸದ ವಸ್ತುಗಳು ಬೇಕು. ಇದೇ ಜೀವನ ವಿಧಾನವಾಗಬೇಕು – ಹೀಗೆ ಭೋಗ ಬದುಕನ್ನು ಬಯಸುವ ಜಾಗತೀಕರಣ ಅರ್ಥಾತ್ ಖಾಸಗೀಕರಣ, ಜೀವನದ ಆದ್ಯತೆ ಮತ್ತು ಆದರ್ಶಗಳನ್ನೂ ಬದಲಿಸುತ್ತಿದೆ. ಖಾಸಗಿ ಬಂಡವಾಳಗಾರರ ಉತ್ಪನ್ನಗಳಿಗೆ ಮಾರುಕಟ್ಟೆ ನಿರ್ಮಾಣ ಮಾಡುವ ದೃಷ್ಟಿಯಿಂದಲೇ ಮನೋಧರ್ಮವನ್ನು ಬದಲಾಯಿಸಲಾಗುತ್ತಿದೆ. ಬದುಕಿನ ಬದಲಾವಣೆಯೆಂದರೆ ಮೇಲ್ಪದರದ ಬದಲಾವಣೆ ಎಂದಾಗುತಿದೆ. ‘ಮೇಲ್ಪದರ’ ಎನ್ನುವುದು ಸಾಮಾಜಿಕ ಆರ್ಥಿಕ ಮೇಲ್ಪದರವೂ ಹೌದು; ತೆಳು ಬದಲಾವಣೆಯ ಸ್ವರೂಪವೂ ಹೌದು. ಹೀಗಾಗಿ ಕೈಗಾರಿಕೀಕರಣ ಕಾಲದ ‘ವಿಕಾಸ ಜೀವನ’ವು ಖಾಸಗೀಕರಣ ಕಾಲದಲ್ಲಿ ‘ವಿಲಾಸ ಜೀವನ’ವಾಗುತ್ತಿದೆ. ಖಾಸಗೀಕರಣದ ‘ಕೆನೆಪದರ’ವಾದ ಕಾರ್ಪೊರೇಟ್ ವಲಯವು ಭೋಗವನ್ನೇ ಸುಖವೆಂದು ಬಿಂಬಿಸುತ್ತಿದೆ. ವಾಸ್ತವವಾಗಿ ಭೋಗವೇ ಬೇರೆ, ಸುಖವೇ ಬೇರೆ. ಆದರೆ ಭೋಗದ ಬೆನ್ನು ಹತ್ತಿದವರು ಸುಖಕ್ಕೆ ಬೆನ್ನು ತೋರಿಸುತ್ತಾರೆಂಬ ಸತ್ಯವನ್ನು ಕಾರ್ಪೊರೇಟ್ ವಲಯ ಹೂತು ಹಾಕುತ್ತಿದೆ.

ಕಾರ್ಪೊರೇಟ್ ವಲಯದಲ್ಲೂ ಸಾಂಸ್ಕೃತಿಕ ಸೃಜನಶೀಲರಿದ್ದಾರೆ. ಆದರೆ ಅವರು ಎಷ್ಟರ ಮಟ್ಟಿಗೆ ಕಾರ್ಪೊರೇಟ್ ಮನೋಧರ್ಮವನ್ನು ಮೀರಿ ಸೃಷ್ಟಿಶೀಲರಾಗುತ್ತಾರೆ ಎನ್ನುವುದು ಮುಖ್ಯ. ಕಾಲದೊಳಗಿದ್ದೂ ಕಾಲವನ್ನು ಮೀರುವ ಕಲೆಗಾರರು ಏಕಕಾಲಕ್ಕೆ ಸೃಜನಶೀಲರೂ ಚಲನಶೀಲರೂ ಆಗುತ್ತಾರೆ. ಹೀಗಾದಾಗ ಮಾತ್ರವೇ ಒಳಗನ್ನು ಹೊಕ್ಕು ಹೂರಣವಾಗಿ ಹೊರಬರಲು ಸಾಧ್ಯ. ಇದು ಸಾಂಸ್ಕೃತಿಕ ಕ್ಷೇತ್ರದ ನಿರಂತರ ಸವಾಲು. ಈ ಸವಾಲನ್ನು ಸಹಜವಾಗಿ ಒಳಗೊಳ್ಳದೇ ಹೋದರೆ ಮೇಲುಗೈ ಸಾಧಿಸಿದ ಮೇಲ್ಪದರಗಳ ಕೆನೆಪದರವಾಗುವ ಕಲೆಗಾರರೊ ತಲೆಗಾರರೂ ಆಗುವ ಅಪಾಯವೇ ಹೆಚ್ಚು. ಇಂಥ ಕಲೆಗಾರರು ಆಳಕ್ಕಿಳಿಯದೆ ಅಗಲವನ್ನೇ ಅಲಂಕರಿಸಿ ಅಭಿವ್ಯಕ್ತಿಸುತ್ತಾರೆ. ‘ತಲೆಗಾರರು’ ಈ ವಲಯದ ದೃಷ್ಟಿಕೋನವನ್ನೇ ಅಂತಿಮ ಸತ್ಯವೆಂದು ಸಾರುತ್ತಾರೆ; ಬೌದ್ಧಿಕ ಭೋಗದಲ್ಲಿ ಸಂಭ್ರಮಿಸುತ್ತಾರೆ. ಆಗ ಸತ್ಯದೂರವಾದ ಪರಿಕಲ್ಪನೆಗಳು ಚಾಲ್ತಿಗೆ ಬರುತ್ತವೆ. ಹೀಗೆ ಚಾಲ್ತಿಗೆ ಬಂದ ಪರಿಕಲ್ಪನೆಗಳಲ್ಲಿ ‘ಜಾಗತಿಕ ಹಳ್ಳಿ’ ಎಂಬುದೂ ಒಂದು.

ಬಹುರಾಷ್ಟ್ರೀಯ ಕಂಪನಿಗಳು ಅಭಿವೃದ್ಧಿಶೀಲ ಹಾಗೂ ಅಭಿವೃದ್ಧಿ ಹೊಂದದ ರಾಷ್ಟ್ರಗಳಿಗೆ ದಾಳಿಯಿಟ್ಟು ಆಳತೊಡಗಿದ್ದರ ಫಲವಾಗಿ ಅನೇಕ ಬದಲಾವಣೆಗಳಾಗಿವೆ; ಮಾಹಿತಿ ತಂತ್ರಜ್ಞಾನವು ಮೊದಲೇ ಇದ್ದರೂ ಈಗ ನಾಗಾಲೋಟದಲ್ಲಿ ಅಭಿವೃದ್ಧಿ ಹೊಂದಿದೆ; ಈ ದೇಶದಿಂದಲೇ ವಿದೇಶದ ಉದ್ಯೋಗವನ್ನೂ ಮಾಡುವ ಮಾದರಿಯೂ ನೆಲೆಯೂರಿದೆ. ಬಹುಮುಖ್ಯವಾಗಿ ಈಗ ಪ್ರಪಂಚದ ಯಾವ ಭಾಗವನ್ನಾದರೂ ಅತಿಶೀಘ್ರವಾಗಿ ಸಂಪರ್ಕಿಸುವಷ್ಟು ತಂತ್ರಜ್ಞಾನ ಬೆಳೆದಿದೆ. ಹೀಗಾಗಿ ಸಂವಹನ ಸಮೀಪವಾಗಿದೆ. ಈ ಅಂಶಗಳನ್ನೇ ಆಧಾರವಾಗಿಟ್ಟುಕೊಂಡು ‘ಜಾಗತಿಕಹಳ್ಳಿ’ಯ ಕಲ್ಪನೆ ಹೊರಹೊಮ್ಮಿದೆ. ಅಂದರೆ ಜಗತ್ತೇ ಒಂದು ಹಳ್ಳಿಯಂತಾಗಿದೆ ಎಂಬುದು ಇದರ ಅರ್ಥ.

ಆದರೆ ಜಗತ್ತು, ನಿಜಕ್ಕೂ ಒಂದು ಹಳ್ಳಿಯಾಗಿದೆಯೆ? ಸಂಪರ್ಕದ ಅಗಾಧ ಸಾಧ್ಯತೆಗಳು ವಿವಿಧ ದೇಶಗಳನ್ನು ಹತ್ತಿರ ತಂದಿರಬಹುದು. ಬಹುಬೇಗ ಪರಸ್ಪರ ಸಂವಾದಿಸಲು ಸಾಧ್ಯವಾಗಿರಬಹುದು. ಇದಿಷ್ಟೇ ಜಗತ್ತನ್ನು ಹಳ್ಳಿಯಾಗಿಸುವುದಿಲ್ಲ. ‘ಹಳ್ಳಿಯೇ ಒಂದು ಜಗತ್ತು’ ಎಂಬ ಸಾಂಸ್ಕೃತಿಕ ಕಲ್ಪನೆಗೆ ವಿರುದ್ಧವಾಗಿ ‘ಜಗತ್ತೆ ಒಂದು ಹಳ್ಳಿ’ ಎಂಬ ಆರ್ಥಿಕ ಕಲ್ಪನೆ ಹುಟ್ಟಿಕೊಂಡಂತೆ ಕಾಣುತ್ತದೆ. ಮುಕ್ತ ಆರ್ಥಿಕ ನೀತಿಯು ಖಾಸಗಿ ಬಂಡವಾಳಶಾಹಿಯ ಏಕರೂಪ ನೀತಿಯನ್ನು ಜಗತ್ತಿನಾದ್ಯಂತ ವಿಸ್ತರಿಸುವ ಅಪೇಕ್ಷೆಯಿಂದ ಜಗತ್ತೇ ಒಂದು ಹಳ್ಳಿಯೆಂದು ಭಾವಿಸಿರಬೇಕು. ಆದರೆ ವಾಸ್ತವ ಏನೆಂದರೆ, ಒಂದು ದೇಶವೂ ಒಂದು ಹಳ್ಳಿಯಾಗುವುದಿಲ್ಲ; ಕಡೆಗೆ ಒಂದು ರಾಜ್ಯವೂ ಒಂದು ಜಿಲ್ಲೆಯೂ ‘ಒಂದು ಹಳ್ಳಿ’ಯಾಗುವುದಿಲ್ಲ. ಯಾಕೆಂದರೆ ಜಿಲ್ಲೆಯೊಂದರಲ್ಲೇ ನಾನಾ ಮಾದರಿಯ ಹಳ್ಳಿಗಳಿರುತ್ತವೆ. ಭೌಗೋಳಿಕ ವ್ಯತ್ಯಾಸದ ಜೊತೆಗೆ ಸಾಮಾಜಿಕ, ಸಾಂಸ್ಕೃತಿಕ ವೈವಿಧ್ಯತೆಯಿಂದ ವಿಭಿನ್ನ ಒಳ ವಿಭಾಗಗಳೇ ನಿರ್ಮಾಣಗೊಂಡಿರುತ್ತವೆ. ಕರ್ನಾಟಕವನ್ನೇ ತೆಗೆದುಕೊಳ್ಳುವುದಾದರೆ ಬಯಲು ಸೀಮೆ, ಕರಾವಳಿ, ಉತ್ತರ ಕರ್ನಾಟಕ, ಹೈದರಾಬಾದ್ ಕರ್ನಾಟಕ, ಮುಂಬೈ ಕರ್ನಾಟಕ – ಎಂದು ಸೌಲಭ್ಯಕ್ಕೆ ವಿಭಾಗಿಸಿಕೊಂಡರೂ ಈ ಒಂದೊಂದು ವಿಭಾಗಗಳಲ್ಲೂ ವಿಭಿನ್ನವಾದ ಹಳ್ಳಿ ಸಂಚಯಗಳಿವೆ. ಕರ್ನಾಟಕದ ಈ ವಿಭಾಗಗಳೂ ಭೌಗೋಳಿಕ ಸತ್ಯವಾಗಬಹುದೇ ಹೊರತು ಸಾಮಾಜಿಕ ಹಾಗೂ ಸಾಂಸ್ಕೃತಿಕವಾಗಿ ಏಕರೂಪದ ವಾಸ್ತವಗಳಲ್ಲ. ಅದೆಷ್ಟು ಕಲಾ ಪ್ರಕಾರಗಳು, ಅದೆಷ್ಟು ಆಚರಣೆಗಳು, ಅದೆಷ್ಟು ಕುಲಗಳು, ಅದೆಷ್ಟು ಕಸುಬುಗಳು! ವಸ್ತುಸ್ಥಿತಿ ಹೀಗಿರುವಾಗ ‘ಜಗತ್ತೇ ಒಂದು ಹಳ್ಳಿ’ ಎಂಬ ಕಲ್ಪನೆಯನ್ನು ನೆಲೆಗೊಳಿಸುವ ಪ್ರಯತ್ನವು ಮೇಲ್ಪದರದ ಒಂದು ‘ವಿಚಾರ ವಿಲಾಸ’ವಾಗುತ್ತದೆ. ಬದುಕಿನ ವೈವಿಧ್ಯತೆಯನ್ನು ಕಂಡೂ ಕಾಣದಂತಿರುವ ಜಾಣ ಕುರುಡಾಗುತ್ತದೆ. ಸಾಮಾಜಿಕ, ಸಾಂಸ್ಕೃತಿಕ ವೈವಿಧ್ಯತೆಯನ್ನು ಮರೆಮಾಚುವ ಆರ್ಥಿಕ ಹುನ್ನಾರವಾಗುತ್ತದೆ. ಕಡೆಗೆ – ‘ಜಾಗತಿಕ ಹಳ್ಳಿ’ ಎನ್ನುವುದು ಒಂದು ಅಪವ್ಯಾಖ್ಯಾನ ಅಥವಾ ಹುಸಿ ವ್ಯಾಖ್ಯಾನವಾಗುತ್ತದೆ.

‘ಜಾಗತಿಕ ಹಳ್ಳಿ’ ಎಂಬ ಕಲ್ಪನೆಯ ಜೊತೆಗೆ, ಕೆಲವರು ‘ಹಳ್ಳಿಗಳೇ ಒಂದು ವೃದ್ಧಾಶ್ರಮ’ ಎಂಬ ಕಲ್ಪನೆಯನ್ನೂ ಹರಿಬಿಟ್ಟಿದ್ದಾರೆ. ಕೆಲವು ಲೇಖನಗಳಲ್ಲಿ ವೇದಿಕೆಗಳಲ್ಲಿ ಖಾಸಗಿ ಚರ್ಚೆಗಳಲ್ಲಿ ‘ಹಳ್ಳಿಗಳು ವೃದ್ಧಾಶ್ರಮಗಳಾಗುತ್ತಿವೆ’ ಎಂಬ ಪ್ರತಿಪಾದನೆಯು ಪ್ರಚುರಗೊಳ್ಳುತ್ತಿದೆ. ಈ ಪ್ರತಿಪಾದಕರು ತಾವು ನೋಡಿರಬಹುದಾದ ಬೆರಳೆಣಿಕೆಯ ಹಳ್ಳಿಗಳ ಆಧಾರದಲ್ಲಿ ಮಾತಾಡುತ್ತಿರಬಹುದು. ಆದರೆ ಇದೊಂದು ಸಾಮಾನ್ವಿಕರಿಸಲಾಗದ ಪ್ರತಿಪಾದನೆ; ವಾಚ್ಯಾರ್ಥದಲ್ಲಿ ಒಂದು ಕಲ್ಪನೆ.

‘ಹಳ್ಳಿಗಳು ವೃದ್ಧಾಶ್ರಮಗಳಾಗುತ್ತಿವೆ’ ಎಂದು ಹೇಳುತ್ತಿರುವವರ ತಲೆಯಲ್ಲಿರುವುದು ತಮ್ಮ ಮಕ್ಕಳನ್ನು ಉದ್ಯೋಗ ನಿಮಿತ್ತ ನಗರಗಳಿಗೆ ಅಥವಾ ವಿದೇಶಗಳಿಗೆ ಕಳಿಸಿ ಒಂಟಿತನ ಅನುಭವಿಸುತ್ತಿರುವ ತಾಯಿತಂದೆಯರು. ಅಥವಾ ತಾಯಿತಂದೆಯರನ್ನು ಬಿಟ್ಟು ದೂರದಲ್ಲಿರುವ, ಅಥವಾ ದೂರವಾಗಿರುವ ಮಕ್ಕಳು. ಒಂಟಿತನ ಅನುಭವಿಸುವ ವೃದ್ಧರ ಬಗ್ಗೆ ಇರುವ ಕಾಳಜಿ ಖಂಡಿತ ಮಾನವೀಯವಾದದ್ದು. ಆದರೆ ಹಳ್ಳಿಗಳಲ್ಲಿ ಇಂಥವರ ಸಂಖ್ಯೆ ಎಷ್ಟಿದೆ? ಅನೇಕ ಹಳ್ಳಿಗಳಲ್ಲಿ ಇಂತಹ ಒಂದು ಕುಟುಂಬವೂ ಸಿಗುವುದಿಲ್ಲ. ಇಷ್ಟಕ್ಕೂ ನಮ್ಮ ಹಳ್ಳಿಗಳಲ್ಲಿ ಯುವಕರೇ ಇಲ್ಲವೆ? ಹಳ್ಳಿಗಳ ಕುಟುಂಬಗಳು ಸಂಪೂರ್ಣವಾಗಿ ಯುವರಹಿತವಾಗಿವೆಯೆ? ಖಂಡಿತ ಇಲ್ಲ. ಅರೆಬರೆ ವಿದ್ಯಾಭ್ಯಾಸ ಮಾಡಿದ ಯುವಕ-ಯುವತಿಯರು, ನಿರುದ್ಯೋಗಿಗಳು, ನಗರದಲ್ಲಿ ಉದ್ಯೋಗ ಸಿಗದೆ ವ್ಯವಸಾಯಕ್ಕಿಳಿದ ವಿದ್ಯಾವಂತ ಯುವಕರು, ಅನಕ್ಷರಸ್ಥ ಯುವ ಜೀವಿಗಳು – ಎಷ್ಟು ಜನ ಬೇಕು? ಪ್ರತಿ ಹಳ್ಳಿಯಲ್ಲೂ ಇಂಥ ಯುವ ತಂಡ ಸಿಕ್ಕುತ್ತದೆ. ಜಾಗತೀಕರಣದ ಹೊಡೆತದಲ್ಲಿ ಕೃಷಿ ಪ್ರಧಾನ ಭಾರತವು ಉದ್ಯಮ ಪ್ರಧಾನ ಭಾರತವಾಗಿ ರೂಪಾಂತರಗೊಳ್ಳುತ್ತಿರುವ ಸ್ಥಿತ್ಯಂತರದ ಸಂಕಷ್ಟ ಹಾಗೂ ಸಂಕಟಗಳನ್ನು ಹಳ್ಳಿಗಳು ಪ್ರತಿನಿಧಿಸುತ್ತಿವೆ; ಕಷ್ಟ, ಸುಖ, ಭೋಗಗಳ ಗೊಂದಲದಲ್ಲಿ ತಲ್ಲಣಗೊಂಡಿವೆ. ಇಂದು ರಾಜಧಾನಿಯ ರಾಜಕೀಯ ಮೇಲಾಟಗಳೆಲ್ಲ ವಿಕೇಂದ್ರೀಕರಣಗೊಂಡು ಹಳ್ಳಿಯವರು ಅದರ ಭಾಗಸ್ಥರಾಗಿದ್ದಾರೆ. ವಸ್ತುಸ್ಥಿತಿ ಹೀಗಿರುವಾಗ ‘ಹಳ್ಳಿಗಳೆಲ್ಲ ವೃದ್ಧಾಶ್ರಮಗಳಾಗುತ್ತಿವೆ’ಯೆಂಬ ಪ್ರತಿಪಾದನೆಯ ಹಿಂದೆ ವೃದ್ಧರ ಬಗೆಗಿನ ಕಾಳಜಿ ಮಾತ್ರ ಇದೆಯೊ ಅಥವಾ ಜಾಗತೀಕರಣದ ಫಲವಾಗಿ ಖಾಸಗಿವಲಯವು ಹಳ್ಳಿ ಯುವಕರಿಗೆಲ್ಲ ನಗರ ಮತ್ತು ವಿದೇಶಗಳಲ್ಲಿ ಉದ್ಯೋಗ ಕಲ್ಪಿಸಿದ್ದರಿಂದ ಹಳ್ಳಿಗಳು ವೃದ್ಧಾಶ್ರಮವಾಗಿವೆಯೆಂಬ ಚಿಂತನೆ ಇದೆಯೊ ಎಂಬ ಅನುಮಾನ ಮೂಡುತ್ತದೆ. ಒಂದಷ್ಟು ಜನಕ್ಕೆ ಉದ್ಯೋಗ ಸಿಕ್ಕಿರುವುದು ಸತ್ಯವಾದರೂ ಹಳ್ಳಿಗಳಲ್ಲಿ ಯುವಕರೆಲ್ಲ ಬರಿದಾಗುವಷ್ಟು ಉದ್ಯೋಗಾವಕಾಶಗಳನ್ನು ಖಂಡಿತ ಕಲ್ಪಿಸಿಲ್ಲ. ಆದ್ದರಿಂದ ಹಳ್ಳಿಗಳು ವೃದ್ಧಾಶ್ರಮಗಳಾಗಿಲ್ಲ.

ಕಾರ್ಪೊರೇಟ್ ವಲಯದಿಂದ ಬಹು ದೊಡ್ಡ ಪ್ರಮಾಣದಲ್ಲಿ ಅಪವ್ಯಾಖ್ಯಾನಕ್ಕೆ ಈಡಾಗಿರುವುದು ‘ಅಭಿವೃದ್ಧಿಯ ಪರಿಕಲ್ಪನೆ’. ಇವತ್ತು ಎಲ್ಲ ಆಡಳಿತಗಾರರೂ ಅಭಿವೃದ್ಧಿ ಎಂಬ ಪದವನ್ನು ಒಂದು ಮಂತ್ರದಂತೆ ಉದ್ಘೋಷಿಸುತ್ತಿದ್ದಾರೆ. ಆದರೆ ಅಭಿವೃದ್ಧಿಯ ಸಮಗ್ರ ಪರಿಕಲ್ಪನೆಯ ಬದಲು ಆಂಶಿಕ ನೆಲೆಯಲ್ಲಿ ನಿರೂಪಿಸುತ್ತಿದ್ದಾರೆ. ಕಾರ್ಪೊರೇಟ್ ವಲಯಕ್ಕೆ ಪೂರಕವಾದ ಅಭಿವೃದ್ಧಿ ಕಲ್ಪನೆಯೇ ನಿಜವಾದ ಅಭಿವೃದ್ಧಿಪಥವೆಂಬ ಭಾವನೆಯನ್ನು ಬುದ್ಧಿಪೂರ್ವಕವಾಗಿ ಮೂಡಿಸಲಾಗುತ್ತಿದೆ. ನಿಜ ಅಭಿವೃದ್ಧಿಯ ಸಮಗ್ರ ಕಲ್ಪನೆಯಲ್ಲಿ ಕಾರ್ಪೊರೇಟ್ ವಲಯವೂ ಒಳಗೊಳ್ಳಬೇಕು. ಅದರ ಅಗತ್ಯಗಳನ್ನೂ ಪೂರೈಸಬೇಕು. ಆದರೆ ಅದೊಂದೇ ಅಭಿವೃದ್ಧಿಯ, ಅಳತೆಗೋಲಾಗಬಾರದು ಮತ್ತು ಅದೊಂದೇ ಆದ್ಯತೆಯಾಗಬಾರದು. ಕಾರ್ಪೊರೇಟ್ ವಲಯದ ಆರ್ಥಿಕ ಅಭಿವೃದ್ಧಿ ಕಲ್ಪನೆಯ ಜೊತೆಗೆ ಮಾನವ ಅಭಿವೃದ್ಧಿಯ ಕಲ್ಪನೆಯೂ ಇದೆಯೆಂಬುದನ್ನು ಮರೆಯಬಾರದು; ಅಷ್ಟೇ ಅಲ್ಲ, ಭಾರತದಂತಹ ದೇಶಗಳಲ್ಲಿ ಮಾನವ ಅಭಿವೃದ್ಧಿಯ ಆಧಾರದಲ್ಲೇ ಆರ್ಥಿಕ ಅಭಿವೃದ್ಧಿಯ ಪರಿಕಲ್ಪನೆಯನ್ನು ರೂಪಿಸಿಕೊಳ್ಳಬೇಕಾದ ಅಗತ್ಯವಿದೆ. ಬಹುಭಾಷೆ, ಬಹು ಸಂಸ್ಕೃತಿ, ಬಹುಜಾತಿ – ವರ್ಗಗಳ ಸಂಕೀರ್ಣ ಸಮಾಜದ ಅಭಿವೃದ್ಧಿಗೆ ಏಕಮುಖೀ ಆರ್ಥಿಕ ಪರಿಕಲ್ಪನೆಯು ಹೊಂದುವುದಿಲ್ಲ. ಜಾಗತೀಕರಣದ ಫಲವಾಗಿ ನೆಲೆಯೂರುತ್ತಿರುವುದು ಖಾಸಗಿ ವಲಯಕ್ಕೆ ಪೂರಕವಾದ ಅಭಿವೃದ್ಧಿ ಕಲ್ಪನೆ. ಇದು ಕಾರ್ಪೊರೇಟ್ ಕಣ್ಣಿನ ಕಲ್ಪನೆ. ನನ್ನದೊಂದು ಸರಳ ಪ್ರಶ್ನೆ : ನಮ್ಮ ಕಾರ್ಪೊರೇಟ್ ವಲಯಕ್ಕೆ ವಿದೇಶಿ ಮಾರುಕಟ್ಟೆ ಲಭ್ಯವಾಗಿರುವಂತೆ ನಮ್ಮ ರೈತರ ಉತ್ಪನ್ನಗಳಿಗೆ ಮಾರುಕಟ್ಟೆ ಲಭ್ಯವಾಗಿದೆಯೆ? ನಮ್ಮವರು ಉತ್ಪಾದಿಸುವ ಅನೇಕ ವಸ್ತುಗಳಿಗೆ ವಿದೇಶಗಳಲ್ಲಿ ಮಾರುಕಟ್ಟೆ ಕಲ್ಪಿಸಲಾಗಿದೆಯೆ ? ಬಹುಪಾಲು ಇಲ್ಲ. ಆದರೆ ವಿದೇಶಿ ಉತ್ಪನ್ನಗಳಿಗೆ ನಮ್ಮ ದೇಶ ಉತ್ತಮ ಮಾರುಕಟ್ಟೆ. ಅಮೇರಿಕದ ಹಿಂದಿನ ಅಧ್ಯಕ್ಷ ಬುಷ್‌ ಅವರು ನಮ್ಮ ದೇಶಕ್ಕೆ ಬಂದಾಗ ಹೇಳಿದ ಮೊದಲ ಮಾತು : ‘ಇಂಡಿಯಾದ ಮಧ್ಯಮ ವರ್ಗ ಅಮೇರಿಕಕ್ಕೆ ಉತ್ತಮ ಮಾರುಕಟ್ಟೆ’. ಹೀಗೆ ಭಾರತವನ್ನು ವಿದೇಶಿಯರಿಗೆ ಮಾರುಕಟ್ಟೆ ಮಾಡಿದ ಮನಮೋಹನ್ ಸಿಂಗ್ ಅವರ ಆರ್ಥಿಕ ನೀತಿಯಲ್ಲಿ ೧೯೯೭ ರಿಂದ ೨೦೦೫ರ ವರೆಗೆ ಒಂದೂವರೆ ಲಕ್ಷ ರೈತರು ಆತ್ಮಹತ್ಯೆ ಮಾಡಿಕೊಂಡದ್ದನ್ನು ಮರೆಯಲಾದೀತೆ? ೫೦೦೦ ಕೋಟಿಗೂ ಹೆಚ್ಚು ಸಂಪತ್ತುಳ್ಳ ನಮ್ಮ ದೇಶದ ಕೋಟ್ಯಾಧಿಪತಿಗಳ ಸಂಖ್ಯೆಯು ೧೩ ರಿಂದ ೫೫ಕ್ಕೆ ಏರಿದೆ ಎಂಬ ಅಂಶವೇ ಅಭಿವೃದ್ಧಿಯೆ? ಶೇ. ೩೫ ರಷ್ಟಿದ್ದ ಭಾರತದ ಬಡವರ ಪ್ರಮಾಣ ಶೇ. ೪೩ಕ್ಕೆ ಏರಿರುವುದೇ ಅಭಿವೃದ್ಧಿಯೆ?

ಅಭಿವೃದ್ಧಿಯ ವಿಷಯ ಬಂದಾಗಲೆಲ್ಲ ಪ್ರಸ್ತಾಪವಾಗುವ ಹೆಸರು – ನರೇಂದ್ರ ಮೋದಿ. ಮೋದಿ ಮಾದರಿಯೇ ಈಗ ಅಭಿವೃದ್ಧಿಯ ಆದರ್ಶ ಮಾದರಿ! ಯಾಕೆಂದರೆ ಅವರೀಗ ಕಾರ್ಪೊರೇಟ್ ವಲಯದ ಕಣ್ಮಣಿ. ನಿಜ; ಮೋದಿಯವರು ಗುಜರಾತ್‌ನ ಮುಖ್ಯಮಂತ್ರಿಯಾಗಿ ಆರ್ಥಿಕ ಅಭಿವೃದ್ಧಿಗೆ ಪೂರಕವಾದ ಕೆಲಸಗಳನ್ನು ಮಾಡಿದ್ದಾರೆ. ನಾನೇ ಖುದ್ದು ಗುಜರಾತ್‌ನ ಕೆಲವು ಭಾಗಗಳಲ್ಲಿ ಪ್ರವಾಸ ಮಾಡಿ ಉತ್ತಮ ರಸ್ತೆಗಳನ್ನು ಕಂಡಿದ್ದೇನೆ. ಬಹುರಾಷ್ಟ್ರೀಯ ಕಂಪನಿಗಳು ನೆಲೆಯೂರಿ ಅನೇಕರಿಗೆ ಉದ್ಯೋಗಾವಕಾಶವಾಗಿರುವುದನ್ನು ನೋಡಿದ್ದೇನೆ. ಆದರೆ ಇದಿಷ್ಟೆ ಅಭಿವೃದ್ಧಿಯೆ ? ಮೋದಿಯವರನ್ನು ಹಾಡಿ ಹೊಗಳುತ್ತಿರುವ ವಲಯ ಯಾವುದು? ರಾಷ್ಟ್ರೀಯವೆಂದು ಭ್ರಮಿಸಲಾದ ವಾಹಿನಿಗಳಲ್ಲಿ ಪ್ರಚಾರಕ್ಕೆ ಪೂರಕವಾದ ವಲಯ ಯಾವುದು ? ಅದೇ ಕಾರ್ಪೊರೇಟ್ ವಲಯ. ಈ ವಲಯದ ಒಬ್ಬ ಪ್ರತಿನಿಧಿಯಾದ ಅನಿಲ್ ಅಂಬಾನಿಯವರು ಮೋದಿಯವರನ್ನು ಮಹಾತ್ಮ ಗಾಂಧಿಯವರಿಗೆ ಹೋಲಿಸುವ ವಿಪರ್ಯಾಸಕ್ಕೆ ಎಗ್ಗಿಲ್ಲದೆ ಮುಂದಾದರು. ಅಭಿವೃದ್ಧಿಯ ಈ ‘ಹರಿಕಾರರು’ ಗುಜರಾತ್‌ನ ಇನ್ನೊಂದು ಮುಖವನ್ನು ನೋಡಿದ್ದಾರೆಯೆ? ನೋಡಿಲ್ಲ ಅಥವಾ ನೋಡಿಯೂ ನೋಡದಂತಿದ್ದಾರೆ. ಗುಜರಾತ್‌ನಲ್ಲಿ ೮೦೦೦ ಸಣ್ಣ ಕೈಗಾರಿಕೆಗಳು ಮುಚ್ಚಿಹೋಗಿ ಈ ವಿಷಯದಲ್ಲಿ ಮಲ್ಲಿಕಾ ಸಾರಾಬಾಯ್ ಅವರು ಹೋರಾಟ ನಡೆಸಿದರು. ಭರತ್‌ಸಿಂಗ್ ಜಾಲಾ ಎನ್ನುವವರು ಮಾಹಿತಿ ಹಕ್ಕಿನ ಪ್ರಕಾರ ರೈತರ ಆತ್ಮಹತ್ಯೆ ವಿವರ ಕೇಳಿದಾಗ ಗುಜರಾತ್ ಸರ್ಕಾರ ಕೊಡಲಿಲ್ಲ. ಕಡೆಗೆ ಹೈಕೋರ್ಟ್‌ಗೆ ಹೋಗಿ ಮಾಹಿತಿ ಪಡೆದರು. ಇದರ ಪ್ರಕಾರ ೨೦೦೩ರಲ್ಲಿ ೯೩, ೨೦೦೪ರಲ್ಲಿ ೯೮, ೨೦೦೫ರಲ್ಲಿ ೧೦೭, ೨೦೦೬ರಲ್ಲಿ ೧೩೨, ೨೦೦೭ರಲ್ಲಿ ೩೬ – ಒಟ್ಟು ನಾಲ್ಕು ವರ್ಷಗಳಲ್ಲಿ ೪೮೯ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಆತ್ಮಹತ್ಯೆ ಸರಣಿ ಈಗಲೂ ಮುಂದುವರೆದಿದೆ. ಇದೇ ನಾಲ್ಕು ವರ್ಷಗಳಲ್ಲಿ ೬,೦೫೫ ರೈತರು ಅಪಘಾತಗಳಲ್ಲಿ ಸತ್ತರೆಂದು ಸರ್ಕಾರದ ಮಾಹಿತಿ ತಿಳಿಸುತ್ತದೆ. ಕಾರ್ಪೊರೇಟ್ ಕಂಪನಿಗಳಿಗೆ ಸಾವಿರಾರು ಕೋಟಿ ರಿಯಾಯಿತಿ ನೀಡಿರುವ ಗುಜರಾತ್ ಸರ್ಕಾರವು ಸಮಾಜ ಕಲ್ಯಾಣ ಕಾರ್ಯಕ್ರಮಗಳಿಗೆ ಖರ್ಚು ಮಾಡಿದ ೧೮ ದೊಡ್ಡ ರಾಜ್ಯಗಳ ಪೈಕಿ ೧೭ನೇ ಸ್ಥಾನದಲ್ಲಿದೆಯೆಂದು ರಿಜರ್ವ್ ಬ್ಯಾಂಕ್ ವರದಿಯಲ್ಲಿದೆ. ಶಿಕ್ಷಣ ಕ್ಷೇತ್ರದಲ್ಲಿ ಗುಜರಾತ್‌ ೬ನೇ ಸ್ಥಾನವನ್ನೂ ಆರೋಗ್ಯದ ವಿಷಯದಲ್ಲಿ ೯ನೇ ಸ್ಥಾನವನ್ನೂ ಪಡೆದಿದೆ. ಇತ್ತೀಚಿನ ಮಾಹಿತಿ ಪ್ರಕಾರ ಗುಜರಾತ್‌ನಲ್ಲಿ ಶೇ. ೪೪ರಷ್ಟು ಮಕ್ಕಳು ಅಪೌಷ್ಟಿಕತೆ ಯಿಂದ ನರಳುತ್ತಿದ್ದಾರೆ. ೧೦೦೦ ಮಕ್ಕಳಲ್ಲಿ ೫೪ ರಷ್ಟು ಮರಣಗಳು ಸಂಭವಿಸುತ್ತಿವೆ. ಈ ಎಲ್ಲ ಅಮಾನವೀಯ ಅಂಶಗಳ ಜೊತೆಗೆ ಗುಜರಾತ್ ಸರ್ಕಾರದ ಸಾಲವು ೨೦೦೭ರ ವೇಳೆಗೇ ೯೪೦ ಬಿಲಿಯನ್ ರೂಪಾಯಿಗಳಷ್ಟು ಇತ್ತು. ಮೋದಿಯವರು ಅಧಿಕಾರಕ್ಕೆ ಬರುವುದಕ್ಕೆ ಮುಂಚೆ ಈ ಸಾಲ ೪೫೩ ಬಿಲಿಯನ್ ರೂಪಾಯಿಗಳಷ್ಟು ಇತ್ತು. ಇನ್ನೂ ಮುಖ್ಯವಾದ ಅಂಶವೆಂದರೆ ೨೦೧೧ರ ಮಾನವ ಅಭಿವೃದ್ಧಿ ವರದಿಯ ಪ್ರಕಾರ ೧೨ ರಾಜ್ಯಗಳನ್ನು ಗುರುತಿಸಲಾಗಿದ್ದು ಗುಜರಾತ್ ರಾಜ್ಯ ೧೧ನೇ ಸ್ಥಾನದಲ್ಲಿದೆ. ಇದರರ್ಥ ಏನು? ಮಾನವ ಅಭಿವೃದ್ಧಿಗೆ ಹಿನ್ನಡೆ ತಂದು, ಕಾರ್ಪೊರೇಟ್ ವಲಯಕ್ಕೆ ಪೂರಕವಾದರೆ ಮಾತ್ರ ಅಭಿವೃದ್ಧಿ ಎನ್ನಲಾದೀತೆ? ಕಡೇ ಪಕ್ಷ ಒಂದು ಸಮತೋಲನ ಬೇಡವೆ?

ಗುಜರಾತ್ ಬಿಡಿ, ಕೇಂದ್ರ ಸರ್ಕಾರವೇ ನೇಮಿಸಿದ ಅಟರ್ಜುನ್ ಸೇನ್ ಗುಪ್ತ ಆಯೋಗವು ೨೦೦೭ರಲ್ಲಿ ಕೊಟ್ಟ ವರದಿಯ ಪ್ರಕಾರ ಈ ದೇಶದ ಶೇ. ೭೭.೫ರಷ್ಟು ಜನರ ದೈನಂದಿನ ತಲಾ ಆದಾಯ ಸರಾಸರಿ ೨೦ ರೂಪಾಯಿ ಮತ್ತು ೪೫ ಕೋಟಿ ಜನರು ಒಪ್ಪೋತ್ತಿನ ಊಟವನ್ನು ಮಾತ್ರ ಮಾಡುತ್ತಾರೆ. ಇದು ಡಾ. ಮನಮೋಹನ ಸಿಂಗ್ ಸರ್ಕಾರವು ಕೊಟ್ಟ ಕಾರ್ಪೊರೇಟ್ ಕೊಡುಗೆ! ಆರ್ಥಿಕ ನೀತಿ ವಿಷಯದಲ್ಲಿ ಮನಮೋಹನ ಸಿಂಗ್ ಅವರ ಆಶಯಗಳನ್ನು ಕಾಂಗ್ರೆಸ್‌ನವರಿಗಿಂತ ಸಮರ್ಥವಾಗಿ ಅನುಷ್ಠಾನಗೊಳಿಸಿದವರು ಮೋದಿ! ‘ಮೋದಿ ಮನಮೋಹನ ಸಿಂಗ್’ ಮಾದರಿಯ ಕಾರ್ಪೊರೇಟ್ ಕಲ್ಪನಾ ವಿಲಾಸದಲ್ಲಿ ಅಭಿವೃದ್ಧಿಯ ಅಪವ್ಯಾಖ್ಯಾನ ಮುಂದುವರೆದಿದೆ. ಅಪವ್ಯಾಖ್ಯಾನವೇ ಅಭಿವೃದ್ಧಿಯ ಆದರ್ಶ ವಾಗಿದೆ. ಸಮತೋಲನ ಸೊರಗಿಹೋಗಿದೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಶಾಸ್ತ್ರಿಗಳ ಮಗ
Next post ಸ್ವಾಗತವೋ ಬೀಳ್ಕೊಡುಗೆಯೋ!

ಸಣ್ಣ ಕತೆ

  • ಲೋಕೋಪಕಾರ!

    ಸಾಥಿ ಶಿವರಾವ ಅವರಿಗೆ ಬಹು ದೊಡ್ಡ ಚಿಂತೆ! ಅವರು ಅನೇಕ ಪ್ರಶ್ನೆಗಳನ್ನು ಬಹು-ಸರಳವಾಗಿ ಬಿಡಿಸುತ್ತಿದ್ದರು. ಪರೀಕ್ಷೆಯಲ್ಲಿ ಅನೇಕ ಪ್ರಶ್ನೆಗಳಿಗೆ ಉತ್ತರ ಬರೆದಿದ್ದಾರು. ಆದರೆ ಎಂತಹ ದೊಡ್ಡ ಪ್ರಶ್ನೆ… Read more…

  • ಅವನ ಹೆಸರಲ್ಲಿ

    ಎಂದಿನಂತೆ ಬೆಳಿಗ್ಗೆ ಮಾಮೂಲಿ ಸಮಯಕ್ಕೆ ಎಚ್ಚರವಾದರೂ, ಎಂದಿನ ಉಲ್ಲಾಸ ನನ್ನಲ್ಲಿರಲಿಲ್ಲ. ತಿರುಗುತ್ತಿರುವ ಫ್ಯಾನಿನತ್ತ ದೃಷ್ಟಿ ಇಟ್ಟು ಮಲಗಿಕೊಂಡೇ ಆಲೋಚನೆ ಮಾಡುತ್ತಿದ್ದೆ. ನಿನ್ನೆ ತಾನೇ ಸರಕಾರಿ ಕೆಲಸದಿಂದ ನಿವೃತ್ತಿಯಾಗಿ… Read more…

  • ಏಡಿರಾಜ

    ಚಲೋ ವಂದು ಅರಸು ಮನಿ, ಗಂಡ-ಹೆಂಡ್ತಿ ದೊಡ್ಡ ಮನ್ತಾನದಲ್ ಆಳ್ಕತಿದ್ರು. ಆವಾಗೆ ಆ ಅರಸೂಗೆ ಗಂಡ್ ಹುಡ್ಗರಿಲ್ಲ. ಸಂತತ್ಯಲ್ಲ, ಇದ್ರದು ನಿಚ್ಚಾ ಕೆಲ್ಸಯೇನಪ್ಪ ಅರಸು ಹಿಂಡ್ತಿದು, ಮನಿ… Read more…

  • ಸಾವಿಗೊಂದು ಸ್ಮಾರಕ

    ಶಾಲೆಯ ಮಾಸ್ತರ್ ಆಗಿ ಗಜರಾಜ ಸಿಂಗ್ ಅವರು ಪ್ರೈಮರಿ ಶಾಲೆಯ ಮಕ್ಕಳಿಗೆ ಹೇಳಿಕೊಡುತ್ತಿದ್ದ ಮೊದಲ ಪಾಠವೆಂದರೆ "ತಂದೆ ತಾಯಿಯನ್ನು ಗೌರವಿಸಿ, ಅವರೇ ನಿಮ್ಮ ಪಾಲಿನ ದೈವ" ಎಂದು.… Read more…

  • ಕೂನನ ಮಗಳು ಕೆಂಚಿಯೂ….

    ಬೊಮ್ಮನಹಳ್ಳಿ ಸಂತೆಯಿಂದ ದಲ್ಲಾಳಿಗೆ ಸಂಚಾಗಾರ ಎಂದು ನೂರು ರೂಪಾಯಿ ಸೇರಿ ಒಂದು ಸಾವಿರದ ಒಂದುನೂರು ಕೊಟ್ಟು ತಂದ ’ಚೆನ್ನಿ’ಕರುಹಾಕಿ ಮೂರು ತಿಂಗಳಲ್ಲಿ ಕೊಟ್ಟಿಗೆಯೊಳಗೆ ಕಾಲು ಜಾರಿ ಬಿದ್ದದ್ದೆ… Read more…