ಇದು ಆಷಾಢ ಮಾಸದ ಕಾಲ
ಕೂಗಿ ಕರೆದನು ಮಿತ್ರರ ಬಾಲು
ಓಡಿ ಬಂದರು ಕಾಳ ರಘು ಮಾಲ
ಕುಳಿತರು ಗಾಳಿಪಟವನು ಮಾಡಲು
ಹುಡುಕಿ ತಂದರು ಹಳೆಯ ಬಿದಿರು
ಕುಡುಗೋಲಿನಲ್ಲಿ ಸೀಳಿದರು
ಕಾಡಿಗೆ ಓಡಿ ಹುಡುಕಿದರು
ಬಿಲ್ವದ ಹಣ್ಣನು ತಂದರು
ಹಾಳೆಯನೊಂದನು ಹರಡಿದರು
ಅಳತೆಗೆ ಸರಿಸಮ ಕತ್ತರಿಸಿದರು
ಬಿದಿರಿಗೆ ಅಂಟನು ಸವರಿದರು
ಅಡ್ಡಡ್ಡ ಉದ್ದುದ್ದ ಹಚ್ಚಿದರು
ಹೊಸೆದರು ನೂರಡಿ ಹಗ್ಗವನು
ಕಟ್ಟಲು ಸೂತ್ರದ ದಾರವನು
ಧೋತ್ರದ ದಡಿಯಾಯ್ತು ಫರಫರಿ
ಬಾಲಂಗೋಸಿಯನು ಇಳಿಯಬಿಟ್ಟರು
ತಮ್ಮೆತ್ತರದ ಗಾಳಿಪಟವನು
ಬಯಲಲಿ ಕಾಳ ಹಿಡಿದು ನಿಂತನು
ದೂರದಿ ದಾರವ ಹಿಡಿದನು ಬಾಲನು
ರಘು ಬಾಲಂಗೋಸಿ ಹಿಡಿದು ನಿಂತನು
ಕೈಬಿಡೋ ಕಾಳ ಕೂಗಿದ ಬಾಲನು
ಮೇಲಕೆ ತೂರಿದ ಪಟವ ಕಾಳನು
ಬಾಲನು ಹಿಡಿದ ದಾರವನೆಳೆದನು
ಮೇಲಕೆ ಹಾರಿತು ಮಾಡುವ ಸದ್ದನು
ಫರಫರಿ ಮಾಡಿತು ಗುಂಯ್‌ನೋ ಸದ್ದು
ಹರಡಿತು ಊರಿನ ತುಂಬೆಲ್ಲ
ನೆರೆದರು ಮೈದಾನದಲಿ ಜನರು
ಮಕ್ಕಳ ಜಾಣ್ಮೆಯ ಹೊಗಳಿದರು
ಸಂಜೆಯ ತನಕ ಆಡಿಸಲವನು
ಬಳಲಿ ಅಸ್ತಮಿಸಿದ ಸೂರ್ಯನು
ಇಬ್ಬರು ಸೇರಿ ಎಳೆದರು ಹಗ್ಗವನು
ಒಬ್ಬನು ದುಂಡಗೆ ಸುತ್ತಿದನು
ಏರಿದ ಪಟವನು ಇಳಿಸಿಬಿಟ್ಟರು
ಚುಂಬಿಸಿ ಅದನು ಮನೆಗೆ ಒಯ್ದರು
ಕತ್ತಲು ಕವಿಯಲು ಚದುರಿದರು
ಮನೆಯಲಿ ಕಥೆಯನು ಹೇಳಿದರು
ತಿಂಗಳು ಪೂರ್ತಿ ಆಡಿದರು
ಶ್ರಾವಣ ಬರಲು ಮುದುರಿದರು
ಪಟ ದಾರಗಳನ್ನು ಜೋಪಾನದಲಿ
ಇಟ್ಟನು ಬಾಲ ಮೇಲಟ್ಟದಲಿ.
*****