ಬಾಹ್ಯಾಕಾಶಕ್ಕೆ ತೆರಳುವ ವಿಜ್ಞಾನಿಗಳು ವಾರ ಎರಡು ವಾರ ತಿಂಗಳುಗಟ್ಟಲೆ ಹೇಗೆ ಜೀವಿಸುವರೆಂಬುದೇ ನಿಗೂಢ ಪವಾಡ, ಇದೊಂದು ಸಾಹಸದ ಕತೆ.
ಅಲ್ಲಿ- ಬಾಹ್ಯಾಕಾಶದಲ್ಲಿ ವಿಜ್ಞಾನಿಗಳು ಪ್ಯಾಕೆಟ್ ಮಾಡಲಾದ ಆಹಾರ ಇಲ್ಲವೇ ಮಾತ್ರೆಗಳು ತಿಂದು ಮೂತ್ರ ಕುಡಿದು ಸಂಶೋಧನೆ ಮಾಡುವರು.
ಈಗೀಗ ಅಮೆರಿಕದ ನಾಸಾದ ಪ್ರಯೋಗ ಸಿದ್ಧಿಸಿದೆ. ಅಲ್ಲಿ ತರಕಾರಿ ಬೆಳೆಯುವ ಹಚ್ಚನೆ ತರಕಾರಿ ತಿನ್ನಬಹುದು. ಬಿಸಿಬಿಸಿ ಅಡಿಗೆ ತಯಾರಿಸಬಹುದೆಂದು ಈಗಾಗಲೇ ವಿಜ್ಞಾನಿಗಳು ಘೋಷಿಸಿದ್ದಾರೆ.
ಹೌದು! ಅಲ್ಲಿ ಗುರುತ್ವವೇ ಇಲ್ಲದೆ ಆ ಜಾಗದಲ್ಲಿ ಮಣ್ಣಲ್ಲಿ ಬೀಜಗಳೇ ನಿಲ್ಲುವುದಿಲ್ಲ ಹೇಗೋ ನಿಲ್ಲಿಸಿದರೂ ಬೀಜಕ್ಕೆ ಯಾವ ದಿಕ್ಕಿಗೆ ಮೊಳಕೆಯಾಗಬೇಕೋ ತಿಳಿಯಲಾರದ ಸ್ಥಳದಲ್ಲಿ ತರಕಾರಿ ಬೆಳೆಯುವುದು ಭಗೀರಥ ಪ್ರಯತ್ನವೆಂದು ನಾಸಾದ ಐಯಾನ್ ಕ್ರಾಫೋರ್ಡ್ ಎಂಬ ವಿಜ್ಞಾನಿ ತಿಳಿಸಿದ್ದಾರೆ.
ಬಾಹ್ಯಾಕಾಶದಲ್ಲೇ ಆಹಾರ ಬೆಳೆಯುವ ನಾಸಾದ ಯೋಜನೆಯ ಹೆಸರು ವೆಜ್-೦೧ ಎಂದು! ಇದಕ್ಕೆಂದೇ ಕಳೆದ ತಿಂಗಳು ಜುಲೈ ೨೦೧೫ರಲ್ಲಿ ಸ್ಪೇಸ್‌ಎಕ್ಸ್ ಎನ್ನುವ ಖಾಸಗಿ ಉಪಗ್ರಹವನ್ನು ಕಳುಹಿಸಿ ಸ್ಪೇಸ್ ಸ್ಟೇಷನ್‌ಗೆ ಜೋಡಿಸಲಾಗಿದೆ. ಇದರಲ್ಲಿ ವಿಜ್ಞಾನಿಗಳಿಗೆ ಬೇಕಾದ ಆಹಾರ ಪದಾರ್ಥಗಳ ಜತೆಗೆ ಇದರೊಳಗೆ ತರಕಾರಿ ತೋಟವನ್ನೇ ಬೆಳೆಸಲು ಬೇಕಾದ ವ್ಯವಸ್ಥೆ ರೂಪಿಸಲಾಗಿದೆಯೆಂದು ನಾಸಾದ ವಿಜ್ಞಾನಿಗಳು ಅರುಹಿದ್ದಾರೆ.
ಈಗೀಗ ಇಂಟರ್‌ನ್ಯಾಷನಲ್ ಸ್ಟೇಸ್ ಸ್ಟೇಷನ್‌ನಲ್ಲಿ ಫ್ರೆಶ್ ತರಕಾರಿ ಬೆಳೆದಿರುವರು. ಇದರ ಹೆಸರು- ಲೆಟ್ಯೂಸ್. ಇದು ಒಂದು ರೀತಿಯ ಎಲೆಕೋಸನ್ನು ಹೋಲುವ ಒಂದು ತರಕಾರಿ ಎಂದು ನಾಸಾದ ವಿಜ್ಞಾನಿಗಳು ಖಚಿತ ಪಡಿಸಿರುವರು.
ಈಗಾಗಲೇ ೩೩ ದಿನಗಳ ಕಾಲ ಸ್ಪೇಸ್ ಸ್ಟೇಷನ್‌ನಲ್ಲಿರುವ ಲ್ಯಾಬ್‌ನಲ್ಲಿ ಬೆಳೆಯಲಾಗಿರುವ ಈ ತರಕಾರಿಯನ್ನು ಆಗಸ್ಟ್ ೨೦೧೫ರ ಸೋಮವಾರ ಮೊದಲ ವಾರದಂದು ಕಟಾವು ಮಾಡಿರುವರು. ಇದನ್ನು ಅಲ್ಲಿದ್ದ ಆರು ಜನ ವಿಜ್ಞಾನಿಗಳು ಪ್ರೀತಿಯಿಂದ ಖುಷಿಖುಷಿಯಲಿ ಸೇವಿಸಿದ್ದಾರೆ! ಇದು ಮೊತ್ತ ಮೊದಲಾಗಿದೆ!
ಅಲ್ಲಿ ಸಿಟ್ರಿಕ್ ಆಮ್ಲದಿಂದ ಸ್ವಚ್ಛಗೊಳಿಸಿ ಲೆಟ್ಯೂಸ್‌ನ್ನು ನಾಸಾ ವಿಜ್ಞಾನಿಗಳು ಬಳಸಿರುವರು. ಇವರು ಅರ್ಧ ತಿಂದು ಉಳಿದರ್ಧವನ್ನು ಪ್ಯಾಕ್ ಮಾಡಿ ಫ್ರೀಜರ್‌ನಲ್ಲಿಟ್ಟು ಭೂಮಿಗೆ ವಾಪಾಸ್ಸು ತಂದಿರುವರು! ಇಲ್ಲಿ ಅದನ್ನು ವೈಜ್ಞಾನಿಕ ವಿಶ್ಲೇಷಣೆಗೆ ಒಳಪಡಿಸಲಾಗುವುದೆಂದು ವಿಜ್ಞಾನಿಗಳು ಖಚಿತ ಪಡಿಸಿರುವರು.
– ಹೀಗೆ ನಾಸಾದ ವಿಜ್ಞಾನಿಗಳು ಬಾಹ್ಯಾಕಾಶದಲ್ಲಿ ಮಾಡಿರುವ ಸಾಧನೆಯನ್ನು ಎಲ್ಲರ ಅರಿವಿಗೆ ತಂದಿದ್ದು ಇನ್ನೂ ಹೆಚ್ಚಿನ ಸಂಶೋಧನೆಗಿಲ್ಲಿ ವಿಫುಲವಾದ ಅವಕಾಶವಿದೆ. ಇನ್ನು ಏನೇನು ಹೊಸಹೊಸ ಸಂಶೋಧನೆಗಳು ಜರುಗುತ್ತವೆಂಬುದನ್ನು ಕಾದು ನೋಡೋಣವಲ್ಲವೇ??
*****