ಅರಿಯಬಹುದು ಕುರುಹಿಡಬಾರದು
ಭಾವಿಸಬಹುದು ಬೆರೆಸಬಾರದು
ಕಾಣಬಹುದು ಕೈಗೆ ಸಿಲುಕದು
ಅಖಂಡ ನಿರಾಳವ ಕಪಿಲಸಿದ್ಧಮಲ್ಲಿಕಾರ್ಜುನಾ
ನಿಮ್ಮ ಶರಣರು ಬಲ್ಲರು
[ನಿರಾಳ-ನೆಮ್ಮದಿ, ಖಚಿತ, ಅವ್ಯಕ್ತ, ಆಕಾಶ]
ಸಿದ್ಧರಾಮನ ವಚನ. ಕಪಿಲಸಿದ್ಧಮಲ್ಲಿಕಾರ್ಜುನ ಅಖಂಡ-ಇಡಿಯಾದವನು. ಅವನು ನಿರಾಳ, ಅವನನ್ನು ಅರಿಯಬಹುದು, ಆದರೆ ಅರಿತದದ್ದನ್ನು ಒಂದು ಕುರುಹು, ಗುರುತು ಎಂದು ಇತರರಿಗೆ ಅರ್ಥವಾಗುವ ಕುರುಹಿನ ವ್ಯವಸ್ಥೆಗೆ ಒಳಪಡಿಸಲು ಆಗದು. ಅವನನ್ನು ಭಾವಿಸಿಕೊಳ್ಳಬಹುದು. ಆದರೆ ಅವನೊಡನೆ ಬೆರೆಯುವುದು ಆಗದು. ಅವನು ಕಾಣಬಹುದು, ಆದರೆ ಕೈಗೆ ಸಿಗುವುದು ಅಸಾಧ್ಯ.
ಮಾತು ಎಂಬ ಕುರುಹಿಗೆ ದಕ್ಕದ, ಭಾವನೆ ಮಾತ್ರವಾಗಿ ಉಳಿದು ಒಂದಾಗಲು ಅಸಾಧ್ಯವಾದ, ಕಾಣುವ ಆದರೆ ಕೈಗೆ ಸಿಗದ ದೇವರನ್ನು ಕುರುಹಿಗೆ, ಒಗ್ಗೂಡಿಕೆಗೆ, ಕೈಗೆಟುಕಿಸಿಕೊಳ್ಳುವುದಕ್ಕೆ ವ್ಯರ್ಥವಾಗಿ ಹಂಬಲಿಸದೆ ದೇವರು ಇದ್ದಂತೆಯೇ ಅವನಿಗೆ ಶರಣಾಗುವವರು ಮಾತ್ರ ಅವನನ್ನು ಬಲ್ಲರು.
ನಮಗೆ ಆಗುವ ಯಾವುದೇ ಅನುಭವವಾದರೂ ಅಷ್ಟೆ. ಅದಕ್ಕೆ ಸಂಪೂರ್ಣ ಶರಣಾಗದೆ ಅದು ನಮ್ಮದಾಗದು. ದುರಂತವೆಂದರೆ ನಮಗೆ ಅನುಭವವಾಗುತ್ತಿರುವ ಕ್ಷಣದಲ್ಲೇ ಅದಕ್ಕೆ ಇತರರಿಗೆ ಅರ್ಥವಾಗಬಲ್ಲ, ನಮ್ಮ ಕೈಗೆ ವಶವಾಗಬಲ್ಲ ರೂಪ ಕೊಡುವುದರಲ್ಲಿ ತೊಡಗಿರುತ್ತೇವೆ. ಇದು ಶರಣಗುಣವಲ್ಲ, ಕಪಿಲಸಿದ್ಧಮಲ್ಲಿಕಾರ್ಜುನ ನಮ್ಮವನಾಗಲಾರ.
*****