ದಲಿತರು ಸಾಬ್ರು ಹಿಂದುಳಿದೋರ್ಗೆ ಡಿಮ್ಯಾಂಡಪ್ಪೋ ಡಿಮ್ಯಾಂಡು

ದರಿದ್ರ ನಾರಾಯಣ ಸಮಾವೇಸ ಅದ್ಯಾವ ಘಳಿಗಿನಾಗ ಗೋಡ್ರು ಮಾಡಿದ್ರೋ ಎಲ್ರಿಗೂ ಸಮಾವೇಸದ ರೋಗ ಬಡ್ಕೊಂಡು ಬಾರಿಸ್ಲಿಕತ್ತದೆ. ದಿಢೀರ್ ಅಂತ ದಲಿತರು, ಸಾಬರು, ಹಿಂದುಳಿದೋರ ಮ್ಯಾಗೆ ಎಲ್ಲಾ ರಾಜಕೀಯ ಪಕ್ಷದೋರ್ಗೂ ಪ್ರೀತಿ ಉಕ್ಕಿ ಬಾಯ್ನಾಗೆ ಬೆಲ್ಲ ಸುರಿಸ್ಲಿಕತ್ತಾರೆ. ಕೋಲಾರ್ದಾಗೆ ಡೆಲಿವರಿಯಾದ ಅಹಿಂದಕ್ಕೆ ಹರೆಯ ಬಂದದ್ದು ಹುಬ್ಳಿ ಸಮಾವೇಸ್ದಾಗಲ್ಲವ್ರಾ? ಅಮ್ಯಾಗೆ ತುಮ್ಕೂರಿನಾಗೆ ಸಮಾವೇಸ ನಡೆದು ಲಕ್ಷಾಂತರ ಮಂದಿ ಜಮಾಯಿಸಿದ್ದು ಟಿವಿನಾಗೆ ನೋಡೇ ಗೋಡ್ರಿಗೆ ಲೈಟಾಗಿ ಹಾರ್ಟ್ ಎನ್‌ಲಾರ್ಜಾತು. ಸಿದ್ರಾಮುಗೆ ಮಾತ್ರ ಅಹಿಂದಗಳ ಮ್ಯಾಗೆ, ಲವ್ವಾ? ನಮಗಿಲ್ವಾ? ನಾನೂ ಇನ್ನು ಮುಂದೆ ‘ಅಹಿಂದಾರೈ’ ಸಮಾವೇಸ ಮಾಡ್ತೀನಿ. ‘ರೈ’ ಅಂದ್ರ ನನ್ನ ಉಸಿರಲ್ಲಿ ಉಸಿರಾದ ರೈತ ಮಕ್ಕಳು ಎಂದು ಬೋಳು ತಲೆ ಸವರಿಕೂಂಡ ಗೋಡ್ರು ಬೆಲ್ಲ ಸುರಿಸಿದರು. ಬಿಜೆಪಿನೋರಿಗೂ ಈಗ ಪೀಕಲಾಟ. ನಾವ್ಯಾಕೆ ಸುಮ್ಗಿದ್ದೇವು ಇಷ್ಟ್ರಾಗೆ ಹಿಂದುಳಿದೋದ್ನೆಲ್ಲಾ ಕೊಳಗೇರಿನಾಗೆ ಕಲೆ ಹಾಕಿ ನಾವೂ ಸಮಾವೇಸ ಮಾಡ್ತೀವಿ ಅಂತ ಆವೇಸದಿಂದ ತೊಡೆ ತಟ್ಲಿಕತ್ತಾರೆ. ಇಂತ ಟೈಮ್ನಾಗೇ ಬಿಜೆಪಿದಾಗ ಕಿತ್ತಾಟ ಶುರುವಾಗೇತೆ! ಭಯಬಿದ್ದ ಗೋಯಲ್ ದೆಲ್ಲಿಯಿಂದ ಬಂದು ಹರಿದ ಚಡ್ಡಿಗೆ ತೇಪೆ ಹಾಕಿದ್ದೂ ಆತು. ಈ ನಡುವೆ ಸ್ಯೆಕಲ್ ವೀರ ಸ್ವಯಂ ಘೋಷಿತ ಹಿಂದುಳಿದೋರ ನಾಯಕ ಗೋಲ್ಡ್‌ಫಾದರ್ ಗೋಳು ಬೇರೆ. ಸಮಾವೇಸ ಗಿಮಾವೇಸ ಎಲ್ಲಾ ಮನಿವೇಸ್ಟ್ ಆಂಡ್ ಟೈಮ್‌ವೇಸ್ಟ್ ಅಂತ ಇಚಾರ ಮಾಡಿ ಮುಲಾಯಂಸಿಂಗ್ ಮೂಲಕ ಗಾಯಗೊಂಡಿರುವ ಹುಲಿ ಸಿದ್ರಾಮುಗೆ ಮುಲಾಮು ಹಚ್ಚಿ ತಮ್ಮ ಸೈಕಲ್‌ಮ್ಯಾಗೆ ಡಬ್ಬಲ್ ರೈಡ್ ಮಾಡೋಕೆ ಟ್ರೈ ಮಾಡಿ ಫೇಲಾದಾಗ ಸೊಟ್ಟ ಮೂತಿ ಮತ್ತಷ್ಟು ಸೊಟ್ಟ ಮಾಡಿ ಸ್ಯೆಲೆಂಟಾದ್ದು ಸುದ್ದಿಗೇ ಬರಲಿಲ್ಲ.

ಈಗಂತೂ ಅಹಿಂದಗಳ ಎಲ್ಲಾ ನಾಯಕಮಣಿಗಳಿಗೂ ಅಗ್ದಿ ಮೋಬತ್ತು. ಕಾಂಗ್ರೆಸ್‌ನೋರು ದಾವಣಗೇರಿ, ಕೊಪ್ಪಳ್ದಾಗ ಸಮಾವೇಸ ಮಾಡಿ ನಾವೇ ಅಹಿಂದಗಳ ಅಸಲಿ
ವಾರಸುದಾರರು ದಲಿತ್ರ ಬಂಧ್ಸು, ಸಾಬರ ಫ್ರೆಂಡ್ಸು, ಹಿಂದುಳಿದೋರ ನೆಂಟ್ಸು ಆಂತ ಸ್ಲೋಗನ್ ಕೂಗ್ಲಿಕತ್ತಾರ. ಮೊನ್ನೆ ತುಮಕೂದ್ದಾಗೆ ಗೋಡ್ರು ಶೂದ್ರ ಸಮಾವೇಸ ಅಂತ್ಲೆ ಸಿದ್ರಾಮು ಸಮಾವೇಸಕ್ಕಿಂತ ಒಂದ್ಯೆವತ್ತು ಸಾವಿರ ಹೆಚ್ಚು ಮಂದಿ ಸೇರ್ಸಿದ್ದಷ್ಟೇ ಸಾರ್ಥಕ ಅನ್ನಂಗಾಗೇತೆ. ಅಲ್ಲಾ ಏನ್ ಡಿಮ್ಮಾಂಡ್ರಿ! ಜೆಡಿಸ್ ಅಹಿಂದ, ಸಿದ್ರಾಮು ಅಹಿಂದ, ಜೆಡಿಯು ಅಹಿಂದ, ಬಂಗಾರಿ ಅಹಿಂದ, ಬಿಜೆಪಿ ಅಹಿಂದ. ಅಹಿಂದ ಸುನಾಮಿ ಅಲೆ ಕರುನಾಡ ತುಂಬಾ ಹಬ್ಬೇತೆ. ಹೀಂಗೆ ಎಲ್ಲಾ ಖಾದಿಗಳೂ ಕೋಟಿಗಟ್ಟಲೆ ಖರ್ಚು ಮಾಡೋಬದ್ಲು ಬಡವರಿಗೇ ನೇರವಾಗಿ ಹೆಲ್ಪ್ ಮಾಡಬಾರ್ದೆ ಅಂಬೋದು ಬುದ್ಧಿಜೀವಿಗಳ ಹೊಯ್ದಾಟ. ಅದಕ್ಕೆ ಮುಕುಡಪ್ಪ ಮೂತಿ ತಿರುವಿ ಏನ್ ಹೇಳಿಕತ್ತಾರ ಗೊತ್ತದೇನು? ಭಾರೀ ಶಾಮಿಯಾನ ಮೈಕ್ ನೋರು ಕುರ್ಚೇರು ಜಮಾಖಾನ್ದೋರು ಲೈಟ್ ನೋರು ಹಾರತುರಾಯಿ ಶಾಲನೋರು ವೆಹಿಕಲ್ಸ್ ಬಾಡಿಗೆ ಜನಗಳ ಟ್ಯಾವೆಲ್ಸ್ ಅವರಿಗೆಲ್ಲಾ ಊಟದ ಪ್ಯಾಕೆಟ್ಸ್ ಪ್ಯಾಕಿಂಗ್ ಮಾಡೋರು ಕ್ಲೀನಿಂಗ್ ಮಾಡೋರು ಅಹಿಂದ ಜನರೇ. ಅವರಿಗೇ ಅಲ್ಲೇನ್ರಿ ನಾವು ದುಡ್ಡು ಚೆಲ್ತಾ ಇರೋದು? ಶ್ಯಾಮಿಯಾನ ಲೈಟು ವ್ಯೆಹಿಕಲ್ಲು ಹಾರತುರಾಯಿ ಸಮಾವೇಸಕ್ಕೆ ಬರೋಮಂದಿನಾ ಸಪ್ಲೈ ಕೆಲ್ಸ ಬಾಂಬ್ರು ಲಿಂಗಣ್ಣಗಳ ಬಿಸಿನೆಸ್ಸಾ? ಸೋ, ಸಮಾವೇಸ ಯಾವ ಪಕ್ಷದೋರೇ ಮಾಡ್ಲಿ ಕಾಸು ಕೈ ಸೇರೋದು ಬಡಜನರಿಗೇ ಅಂತ ಅವರ ವಾದ. ರೇಗ ಹತ್ಕಂಡ್ರೆ ತಿಂಗಳಿಗೊಂದು ಸಮಾವೇಸ ಮಾಡ್ತೀವ್ರಿ. ಪಿತ್ತ ನೇತ್ತಿಗೇರಿದ್ರೆ ದಿನಕ್ಕೊಂದು ಆದ್ರೂ ಆತೆ ಅಂತ ಇಬ್ರಾಹಿಮ್ಮು ಸಾಮು ತೆಗಿಲಿಕ್ಕಾರೆಂಬ ಬುರಿಕಬರ್ ನಂಬಲರ್ಹ ದಿಕ್ಕಿ ನಿಂದ ಬಂದೇತೆ ಇಂತದ್ದೆಲ್ಲಾ ಮಾಡೋದ್ನ ಬುಟ್ಟು ಖಾಸಗಿ ಕ್ಷೇತ್ರದಾಗೆ ಮೀಸಲಾತಿ ಹೋರಾಟ, ಸುಪ್ರೀಂಕೋರ್ಟ್ ತೀರ್ಪು ಇರೋದನ್ನ ಸಮಾವೇಸ್ದಾಗೆ ತೋರೋದು ಗಂಡಸುತನ ಅಂತಾರೆ ನಂ ಸ್ಟೂಡೆಂಟ್ಸ್ ಅವರ ಪೇರೆಂಟ್ಸು. ಇದೆಲ್ಲಾ ಬುಟ್ಟು ತಮ್ಮ ಕಾವೇರಿ ನಿವಾಸ್ದಾಗೆ ಸಿದ್ರಾಮು ಸಾಯಿತುಗೊಳು ಬುದ್ದಿಜೀವಿಗೋಳ್ನ ಕುಂಡ್ರಿಸಿಕ್ಕಂಡು ಡೈಲಿ ಟು ಟೈಮ್ಸ್ ಮೀಟಿಂಗ್ಸ್ ಅನ್ನೋ ಈಟಿಂಗ್ ಕಸರತ್ ನೆಡಿಸ್ಲಕತ್ತಾರೈ! ಬರಹಗಾರ ದ್ಯಾವನೂರ ಬರೆಯೋದ್ನೇ ಬಿಟ್ಟಿರೋ ಆರ್ ಯು ಆನಂತಮೂತ್ರಿ? ಕಹಳೆ ನಾಗಾವಾರ ಅಗ್ರಹಾರ ಪ್ರೊ.ರಾಮದಾಸು ಮಲ್ಲಿಕಾಗಂಟೆ ತರದೋರು ಕಾಂಗ್ರೆಸ್ ಸೇರಬ್ಯಾಡ ಸಿದ್ದು ಜೆಡಿ‌ಎಸ್‌ನಾಗೇ ಇದ್ಕಂಡು ಸಕುನಿ ತರಾ ಟೈಂ ನೋಡಿ ಬತ್ತಿ ಇಕ್ಕು ಅಂತ ಎಚ್ಚರಿಕೆ ಗಂಟೆ ಬಾರಿಸ್ಲಿಕತ್ತಿದ್ರೆ ಕೆಲವರು ಬ್ಯಾರೆ ಪಕ್ಷನೇ ಮಾಡೋಮಾ ಅಂತ ಅವರವರೇ ಜಗಳಕ್ಕೆ ಬಿದ್ದೋರಂತೆ. ನನ್ನ ಜಂತಾದೋಳ್ಗೆ ಅಲ್ಲಿಗಂಟ ಇರಾಕೆ ಬಿಡ್ತಾನ್ಯೆ ಗೌಡಪ್ಪ ಅಂಬೋ ಡವಟೂ ಸಿದ್ರಾಮು ತೆಲಿ ತಿನ್ನಕ್ಕತ್ತದೆ. ಇತ್ತಾ ಕಡೆ ನೋಡಿದ್ರೆ ಕಾಂಗ್ರೆಸ್ ಓಲ್ಡ್ ಮ್ಯಾನ್ ಹೋಲ್‌ಗುಳು ಸಿದ್ರಾಮು ಕಾಂಗೈ ಕೋಟೆ ಒಳ್ಗೆ ಎಂಟ್ರಿ ಆಗೋದ್ನ ಸುತ್ರಾಂ ಒಪ್ಪಂಗಿಲ್ಲ. ಆಹಿಂದ ಸಮಾವೇಸ್ನ ನೆಪದಾಗ ಸಿದ್ದು ಕಾಂಗ್ರೆಸ್ನ ಡ್ಯಾಮೇಜ್ ಮಾಡ್ಲಿಕತ್ತಾನೆ. ಅವನ್ನ ಹಿಂಗೆ ಬೆಳೆಯೋದಕ್ಕೆ ಬಿಟ್ರೆ ನಮ್ಮ ಗೋರಿ ನಾವೇ ತಕ್ಕಂಡಂಗೆ ಅಂತ ಆಂಟೋಣಿ ಎದುರ್ನಾಗೆ ಡಿಟೇಲಾಗಿ ಪುಂಗಿ ಊದುವೆ. ಸಂದಿಯಾಗೆ ಸಮಾರಾಧನೆ ಅನ್ನಂಗೆ ಕೆಲವು ತಲೆಮಾಸಿದ ಮೈಸೂರು ಮಂದಿ ‘ಒಬ್ರಾವೀ’ ಅಂಬೋ ಯಾಲಿ ಮಾಡ್ಲಿಕ್ ಡೀಲ್ ಕುದುರಿಸ್ತಾ ಅವ್ರೆ! ಒಕ್ಕಲಿಗ ಬ್ರಾಹ್ಮಣ ವೀರಸೈವರೇ ಫೌಂಡರ್ಸು. ಕಾಂಗ್ರೆಸ್ನೋರ್ಗೆ ಇದೆಲ್ಲಾ ಬಿಸಿ ತುಪ್ಪದಂತಾಗೇತೆ. ‘ಅಹಿಂದ ರೈ ಕಾ’ ಮಾಡೋ ಬಗ್ಗೆ ಸ್ಕೆಚ್ ಹಾಕ್ಲಿಕತ್ತಾರೆ. ಅಹಿಂದ ನಿಮ್ಗೆಲ್ಲಾ ಗೊತ್ತಿದೆ. ರೈ ಅಂದ್ರೆ ರೈತರು. ಕಾ ಅಂದ್ರೆ ಕಾರ್ಮಿಕರು. ಒಟ್ಟಾಗೆ ಎಲ್ಲಾ ನಮೂನಿ ದರಿದ್ರರಿಗೂ ಡಿಮ್ಯಾಂಡಪ್ಪೋ ಡಿಮ್ಯಾಂಡು.

ಸುಮ್ನೆ ಡೆಸ್ಕ್ ವರ್ಕ್ ಮಾಡಾಕಿಂತ ಒಂದಪ ಜಂತಾದಳದ ಕಚೇರಿತಾವ ವಾಕ್ ಮಾಡೋಂವಾ ಅಂತ ಹೊಂಟೆ. ಪಕ್ಷದ ಕಾರ್ಯಾಧ್ಯಕ್ಷ ಕೊಮಾರಣ್ಣ ಎದುರ್ನಾಗ್ ಬಂದ. ಸೆಲ್ಯೂಟ್ ಹೊಡ್ದೆ. ‘ಆರೋಗ್ಯವಾ ಸಾ?’ ಕೇಳ್ದೆ. ‘ಆರೋಗ್ಯಾವಾಗಿರೋದ್ಕೆ ಪಾರ್ಟಿ ಆಫೀಸಿನವರ್ಗೆ ಬಂದಿರೋದು. ಕೇಳಂಗಿದ್ರೆ ನೆಟ್ಟಗೆ ಪ್ರಶ್ನೆ ಕೇಳ್ರಿರೀ’ ದಬಾಯಿಸಿದ ಸಾಯಿಲ್ ಸನ್ನು. ‘ಅಲ್ಲಾಕಣ್ಸಾಮಿ, ನೀವು ಇನ್ನು ಹತ್ತು ವರ್ಷ ಸಿ‌ಎಂ ಆಗೋಲ್ಲ ಅಂದೀರಿ ಹಿಂಗ್ಯಾಕೆ ಚೇಂಜ್ ಆದ್ರಿ?’ ‘ಚೇಂಜೂ ಇಲ್ಲ ಛಾಲೆಂಜೂ ಇಲ. ಹಂಗೆ ಹೇಳ್ತಿರಬೇಕ್ರಿ ಸಿ‌ಎಂ ಮಾಡೋರು ಯಾರು? ಶಾಸಕರು… ಅವರು ಯಾನ ಆಯ್ಕೆ ಮಾಡ್ತಾರೋ ಅವರೇ ಸಿ‌ಎಂ ಆಗ್ತಾರೆ ಶಾಸಕರೆಲ್ಲಾ ಯಾರು ಹೇಳ್ದಂಗೆ ಕೇಳ್ತವ್ರೆ? ಅರ್ಥ ಮಾಡ್ಕೊಳ್ರಿ’ ‘ಆದ್ರೂವೆ ಹಿರೇರಾದ ಪ್ರಕಾಸು, ಸಿಂಧ್ಯ, ಜೊತೆನಾಗೆ ಗುಡ್ ಓಲ್ಡ್ ಪೊಲಿಟಿಶಿಯನ್ಸ್ ರಾಜಸೇಕರ ಮೂತ್ರಿ ಸೀನಿವಾಸಪರಸಾದು ಅದ್ಕೆ ಅಂತ್ಲೇ ಪಾಲ್ಟಿಗೆ ಜಾಯಿನ್ ಆಗ್ತಾ ಅವ್ರೆ… ಸೀನಿಯರ್ಸು ಇರೋವಾಗ ತಾವು ಸಿ‌ಎಂ ಆಗ್ಬೋದಾ?’ ‘ಖಂಡಿತಾ ಆಗಬಾರ್ದು ಯಾಕಂದ್ರೆ ನಾವು ದೊಡ್ಡ ಗೋಡ್ರ ಮಕ್ಕಳಾಗಿ ಹುಟ್ಟಿದ್ದೇ ಪಾಪ. ಅರಸು, ಬೊಮ್ಮಾಯಿ, ಗುಂಡುರಾವು, ಬಂಗಾರಿ, ಪಟೇಲ್ರು ಮಕ್ಕಳು ಪಾಲಿಟಿಕ್ಸ್‌ನಾಗಿಲ್ಲೇನ್ರಿ? ಉತ್ತರ ಭಾರತದೋರು ಎಕ್ಸಾಂಪಲ್ ಕೊಡ್ಲೇನ್ರಿ ? ರೇಗಿದರು ಕೊಮಾರಣ್ಣ. ‘ಬ್ಯಾಡಬುಡಿಸಾ. ಆದ್ರೆ ಒಂದು ಡವಟು ಸಾ.. ನೀವು ತಂದೆ ಮಗ ಇಬ್ರೂವೆ ಇಷ್ಟೆಲ್ಲಾ ಹಿಕಮತ್ ಮಾಡ್ತಿದ್ರೂ ನಿಮ್ಮ ಅಗ್ರಜ ರೇವಣ್ಣಾರು ಮಾತ್ರ ಸಾಂತವಾಗವರಲ್ಲ! ಏನ್ಸಾ ಇದರ ಗುಟ್ಟು?’ ‘ದಡ್ಡ ಕಣ್ರಿ ಅವ್ನು. ಕೊಟ್ಟಿರೋ ಎರಡು ಖಾತೆಗಳ್ನ ಹೊತ್ಕೊಂಡು ಕತ್ತೆ ತರಾ ದುಡಿತಾ ಅವ್ನೆ’ ‘ಆದ್ರೂವೆ ದುಡ್ಡು ಮಾಡೋದ್ರಾಗೆ ಅವರೇನ್ ದಡ್ಡರಲ್ಲ ಬಿಡ್ರಿ’ ಫಿಟ್ಟಿಂಗ್ ಇಟ್ಟೆ. ‘ಸರ್ಕಾರ ನೆಡೆಸೋರು ಯಾವತ್ತೂ ದಡ್ಡರಲ ಪೇಪರ್ ನಡೆಸೋ ನೀವು ದಡ್ಡರು’ ಅಂದವನೆ ಕೊಮಾರಣ್ಣ ತಟ್ಟಂತ ಕಳಿಚ್ಕೊಂಡ. ಸಡನ್ನಾಗಿ ಲೊಕೇಶನ್ ಚೇಂಜ್ ಮಾಡ್ದೆ.

ವಿಧಾನಸೌಧದಾಗೆ ನಿಧಾನವಾಗಿ ದಬರಿ ಮೇಲೆ ಧರ್ಮಸಿಂಗು ಉಲ್ಡಿಕ್ಯಂಡು ಬರ್ತಾ ಇದ್ದರು ಹೋಗಿ ಅಡ್ಡ ನಿತ್ಕಂಡೆ. ‘ಮಾ ಸ್ವಾಮಿ, ಸರ್ಕಾರ ಐದು ವರ್ಸ ಹೋದಿತಾ?’ ಕೇಳ್ದೆ. “ಓಲ್ಡ್ ಕೊಶ್ಚನ್ ಕೇಳಿಕತ್ತಿರರ್ಲಿ. ಸರ್ಕಾರದ ಐದು ವರ್ಸ ಹೋಗಾದಿಲ್ರಿ. ಇನ್ನ ಮೂರು ವರ್ಸ ಒಂಬತ್ತು ತಿಂಗ್ಳು ಹೋಗ್ತದ್ರಿ. ‘ಇಗೋರಿ ನಾವು ಸೈತ ಸಬ್ ಜಿಲ್ಲೆದಾಗ ಸಮಾವೇಸ ಮಾಡ್ತಾ ಅದೀವಿ. ಹೌದ್ರಿಲ್ಲೋ. ಮಂದಿ ಹೆಂಗ್ ಜಮಾಯಿಸ್ಲಿಕತ್ತಾರೆ ನೋಡಿರಿಲ್ಲೋ? ನೆಕ್ಸ್ಟ್ ಯಲಕ್ಷನ್ನಾಗ ಯಾರ ಮರ್ಜಿನೂ ಹಿಡಿದೆ ವಿನ್ ಆಕ್ತೀವಿ ಪವರ್ರಿಗೆ ಬತ್ತೀವಿ. ಸಂಸಯ ನಮಗಿಲ್ಲ …… ನಿಮಗದೇನು?’ ‘ಅದೆಕಣ್ಸಾ, ಸಿದ್ದು ಹೊಸ ಪಕ್ಷ ಕಟ್ಟೋಕೆ ಸ್ಕೆಚ್ ಆಕಲಿಕತ್ತಾರ ಡೇಂಜರ್ ಅಲ್ಲೇನ್ರಿ?’ ‘ಹೌದ್ರಿ. ಅವರ್ಗೇ ಡೇಂಜರ್ ಹಾಕ್ಕತೆ. ದೇವ್ರಾಜ ಅಸು ಬಂಗಾರಿ ಅಂತ ಪವರ್‌ಫುಲ್ ಹ್ಯಾಂಡೇ ಸ್ಟಾಂಡ್ ಆಗ್ಲಿಲ್ಲ. ಮೊನ್ನೆನಾಗೆ ಲಾರಿ ಹೋನರ್ ಸಂಕೇಸ್ನ ಲಾರಿ ಪಕ್ಸನೇ ಆಕ್ಸಿಡೆಂಟಾಗಿ ಗುಜರಿ ಸೇರದೆ ನಡ್‌ನಡೀರಿ’ ಅನ್ನುತ್ತಲೇ ನನ್ನನ್ನು ತಳ್ಳಿಕೊಂಡೇ ಗಜಗಾತ್ರದ ದೇಹ ಹೊತ್ಕೊಂಡು ಸಾಗಿ ಕಾರಲ್ಲಿ ದೊಪ್ಪನೆ ಕುಂತರು.
*****
( ದಿ. ೨೧-೦೯-೨೦೦೫)

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಅಲಿ ಸೂತ್ತರದಾಟಾ
Next post ಉಷೆ

ಸಣ್ಣ ಕತೆ

  • ವಿಷಚಕ್ರ

    "ಚಂದ್ರು, ಒಳಗೆ ಬಾಮ್ಮ. ಮಳೆ ಬರುತ್ತೆ." ತಾಯಿ ಕೂಗಿದುದನ್ನು ಕೇಳಿ ಚಂದ್ರು ನಕ್ಕ. ಒಳಕ್ಕೆ ಬರುವುದಿರಲಿ, ಪಕ್ಕದ ಮನೆಯ ಹುಡುಗಿ ವೇದಳೊಂದಿಗೆ ಆಡುತ್ತಿದ್ದುದನ್ನು ನಿಲ್ಲಿಸಲೂ ಇಲ್ಲ. "ನೋಡೇ-ನಾನು… Read more…

  • ಮಲ್ಲೇಶಿಯ ನಲ್ಲೆಯರು

    ಹೇಮರಡ್ಡಿ ಪ್ರಭುಗಳು ಒಂದು ಊರಿನ ದೇಸಾಯರು. ಆ ಗ್ರಾಮದ ಉತ್ಪನ್ನವು ಆರೇಳು ಸಾವಿರ ರೂಪಾಯಿ ಇರುವದಲ್ಲದೆ ದೇಸಾಯರಿಗೆ ತೋಟ ಪಟ್ಟಿ ಮನೆಯ ಒಕ್ಕಲತನಗಳಿಂದಾದರೂ ಪ್ರಾಪ್ತಿಯು ಚನ್ನಾಗಿತ್ತು. ಅವರೊಂದು… Read more…

  • ನಿರಾಳ

    ಮಂಗಳೂರಿನ ಟೌನ್‌ಹಾಲಿನ ಪಕ್ಕದಲ್ಲಿರುವ ನೆಹರೂ ಮೈದಾನಿನ ಮೂಲೆಯ ಕಲ್ಲು ಬೆಂಚಿನ ಮೇಲೆ ಕುಳಿತ ಪುರಂದರ ಹಸಿವೆಯನ್ನು ತಡೆಯಲಾರದೆ ತಳಮಳಿಸುತ್ತಿದ್ದ. ಜೇಬಿಗೆ ಕೈ ಹಾಕಿ ನೋಡಿದ. ಬರೇ ಇಪ್ಪತ್ತೇಳು… Read more…

  • ಕೆಂಪು ಲುಂಗಿ

    ಬೇಸಿಗೆಯ ರಜೆ ಬಂತೆಂದರೆ ಅಮ್ಮಂದಿರ ಗೋಳು ಬೇಡ; ಮಕ್ಕಳೆಲ್ಲಾ ಮನೆಯಲ್ಲೇ... ಟೀವಿಯ ಎದುರಿಗೆ ಇಲ್ಲವಾದರೆ ಅಂಗಳದ ಸೀಬೆಮರ ಮತ್ತು ಎತ್ತರವಾದ ಕಾಂಪೌಂಡಿನ ಗೋಡೆಗಳ ಮೇಲೆ.... ಯಾರಾದರೂ ಬಿದ್ದರೆ,… Read more…

  • ಗುಲ್ಬಾಯಿ

    ನಮ್ಮ ಪರಮಮಿತ್ರರಾದ ಗುಂಡೇರಾವ ಇವರ ನೇತ್ರರೋಗದ ಚಿಕಿತ್ಸೆ ಗಾಗಿ ನಾವು ಮೂವರು ಮಿರ್ಜಿಯಲ್ಲಿರುವ ಡಾಕ್ಟರ ವಾಲ್ನೆಸ್ ಇವರ ಔಷಧಾಲಯಕ್ಕೆ ಬಂದಿದ್ದೆವು. ಗುಂಡೇರಾಯರು ಹಗಲಿರುಳು ಔಷಧಾಲಯದಲ್ಲಿಯೇ ಇರಬೇಕಾಗಿರುವದರಿಂದ ಆ… Read more…