ನಾನು ನನ್ನನು ತೊರೆದೆ
ಧ್ಯಾನ ಗಾನದಿ ಬೆರೆದೆ
ಭಾನವೇರಿತು ಹರಿದು ಸಕಲ ಪರದೆ
ಭಾವಭಕ್ತಿಯ ಭರದೆ
ಜೀವ ಅರ್‍ಪಿಸಿ ಕರೆದೆ
ಸಾವುನೋವಿನ ತಡೆಯನೊಡೆದು ಮೆರೆದೆ
ಆತನಾಡುವ ಲೀಲೆ
ಭಿತ್ತಿಯಿಲ್ಲದ ಶಾಲೆ
ಮಾತು ಮೌನದ ಜ್ವಾಲೆ ಬೆಳಕಿನೋಲೆ
ತಿಮಿರ ಚಕ್ರದ ಮೂಲೆ
ಸಮರ ಸಾಧನ ಶಾಲೆ
ಅಮರರಾಳಿಕೆಯಲ್ಲಿ ಅಲ್ಲಿ ಸೋಲೆ?
ಯಂತ್ರದೊಳಗಿನ ಅಸುವು
ಮಂತ್ರಮೋಡಿಯ ಹಾವು
ಅಂತರಂಗದೊಳದುವೆ ಅಮರ ಶಿಶುವು
ಎಲ್ಲರಂಜಿಪ ಸಾವು
ಒಲ್ಲದವರಿಗೆ ಬೇವು
ಬಲ್ಲವರಿಗೇನುಂಟು ಸಾವುಹೂವು
*****