ಬಣ್ಣ ಬಣ್ಣದಾ ಚಿಟ್ಟೆ
ಸುಂದರ ಅದರ ಬಟ್ಟೆ
ಹಿಡಿಯಲು ಓಡಿಬಿಟ್ಟೆ
ಅಯ್ಯೋ ಬಿದ್ದು ಕೆಟ್ಟೆ
ಕಾಮನ ಬಿಲ್ಲಿನ ಬಣ್ಣ
ತಣಿಸಿತು ನನ್ನ ಕಣ್ಣ
ಬರೆದವರಾರು ಚಿತ್ರ
ಹೇಳು ನನ್ನ ಹತ್ರ
ಹೂವಿನ ತೋಟಕೆ ಹಾರಿ
ಹೂವಿನ ತೇರನ್ನೇರಿ
ಕುಣಿವ ನಿನ್ನ ರೆಕ್ಕೆ
ನೋಡಿ ನಾನು ನಕ್ಕೆ
ಮೆಲ್ಲಗೆ ನಡೆದು ಬಂದೆ
ಕೈಯನು ಮುಂದೆ ತಂದೆ
ಹಿಡಿದೇ ಬಿಟ್ಟೆ ಎಂದೆ
ಖಾಲಿ ಕೈಲಿ ನಿಂದೆ
ಕಂಬಳಿ ಹುಳುವೇ ನೀನು?
ಚಿಟ್ಟೆಯಾದೆ ಏನು!
ಕಂಬಳಿ ಬಟ್ಟೆ ಬಿಟ್ಟೆ
ಬಣ್ಣದ ಅಂಗಿ ತೊಟ್ಟೆ
ಎಷ್ಟೊಂದ್ ಬಣ್ಣದ ಬಟ್ಟೆ
ಕೊಂಡು ನಾನು ತೊಟ್ಟೆ
ಆಗದೇ ಹೋದೆ ಚಿಟ್ಟೆ
ಮತ್ತೊಮ್ಮೆ ಹುಟ್ಬೇಕಷ್ಟೆ.
*****