ಇಳಿ ಬಿಸಿಲಿನ ಎಲೆಯ ಮೇಲೆ ಕಿರಣಗಳು
ಮೂಡಿ ನಂದಾದೀಪ ಅರಳಿದೆ. ಕಂಬ ಬಳಸಿದ
ಬಳ್ಳಿಯ ತುಂಬ ಬಿಳಿ ಮೊಗ್ಗು ಬಿರಿದು, ಶಬ್ದಗಳು
ಹಸನಾದ ಬೀದಿಯ ತುಂಬ ಹರಡಿದೆ. ಅಲ್ಲಿ
ಕವಿಯ ಪರೀಕ್ಷೆ ನಡೆದಿದೆ. ಹೊಲದಲ್ಲಿ ಹಸಿ
ಜೋಳದ ತೆನೆಯಲಿ ಹಾಲು ಚಿಮ್ಮುತ್ತಿದೆ. ಮತ್ತೆ
ಮೌನ ಸಂಜೆಯಲಿ ಅವನ ನೆನಪುಗಳು ನೆತ್ತಿಗೆ
ಸವರಿ ಬೆಳ್ಳಕ್ಕಿಗಳು ಹಾರಿ ಹೋಗಿವೆ ತಿಳಿಸಂಜೆ.
ಪುಟ್ಟ ಹಕ್ಕಿಗಳ ಗೂಡು ಹಾಡು, ಕಡಲ
ಅಲೆ ಅಲೆಯ ಪ್ರತಿಬಿಂಬಿಸಿ, ಚಿಪ್ಪಿನಲ್ಲಿ ಅರಳಿತು ಮುತ್ತು.
ತೆಂಗಿನ ಗರಿಯ ಸಂದಿಯಿಂದ ಚೌತಿ ಚಂದ್ರಮ
ಇಣುಕಿ ಸ್ಪರ್ಶಿಸಿದೆ ಪ್ರಣಯ ಜೋಡಿಗಳ, ಹೊಸ
ವಾರ್ತೆ ನಾಳೆಗೆ ಅಚ್ಚಾಗಲು ಸಿದ್ಧವಾಗಿದೆ. ಜಾರಿದೆ
ಕಚಗುಳಿ ಇಟ್ಟ ಸೂರ್ಯ ಕಿರಣಗಳು, ರಾತ್ರಿಯ
ಕಪ್ಪು ಪರದೆಯ ತುಂಬ ಚಲನ ಚಿತ್ರಗಳ ರೀಲು.
ಆಗಸದಲ್ಲಿ ಹರಡಿವೆ ಅವನ ಕಣ್ಣುಗಳ ಮಿನುಗು.
ಹೂಗಳ ಸುವಾಸನೆ ಹೀರಿದ ಹಕ್ಕಿಗಳು ಹಾಡು
ತೊಟ್ಟಿಲು ತೂಗುತ್ತಿದ್ದಾಳೆ ತಾಯಿ. ತೊನೆ ಹಾಲು ತುಂಬಿ
ಎದೆಯ ಭಾವಕೆ ಬೇರುಗಳಲಿ ಇಳಿದ ತಂಪು ಲಾಲಿ.
ಕತ್ತಲೆಯ ರಾತ್ರಿಯಲ್ಲಿ ಹೊಸ ಬೆಳಕಿನ ಜಾಡು,
ಹಿಡಿದು ಕಾಲ ಮೈಲುಗಳು ಬಳಸಿ, ಪಯಣ
ಹೊರಟಿದೆ. ಹೆದ್ದಾರಿ ತುಂಬ ಕಪ್ಪು ನೆರಳುಗಳಾಟ.
ಜಗದ ಬೆಳಕಿಗೆ ಸೂರ್ಯ ಕಣ್ಣು ಮುಚ್ಚಿದ್ದಾನೆ.
ಪುಟ್ಟ ಮಗುವಿನ ಕೈಗಳು ಕೊರಳುಗಳ ತಬ್ಬಿವೆ.
ಏಕಾಂತ ಮೌನದಲಿ ಸುವಾಸನೆ.
*****