(ಶ್ರೀಮಾನ್ ಗುಡಿಪಾಟಿ ವೆಂಕಟಾಚಲಮ್ ರವರ ಲೇಖನವೊಂದನ್ನು ಬೆಂಗಳೂರಿನ ಕನ್ನಡಿಗರೊಬ್ಬರು ಅನುವಾದಿಸಿದುದರ ಆಧಾರದಿ೦ದ ಬರೆದುದು)
ಸೀತಾ:-
ಬಾರಿಲ್ಲಿ ಶ್ರೀರಾಮ ಕಲ್ಯಾಣಮೂರ್ತಿ,
ಬಹುದಿನದಿ ಬಳಲಿಹೆನು; ನೊಂದಿಸಿರಿ, ಬೆಂದಿಹಿರಿ
ಅಗಲಿಕೆಯ ಅನುದಿನದ ಅಗ್ನಿಗಳ ಜಾಲೆಯಲಿ.
ನೀನಿಲ್ಲದಿರೆ ನನಗೆ ಜಗವೆಲ್ಲ ಬರಿದಹುದು,
ನನಗಾಗಿ ಹಳಹಳಿಸಿ ಕಳವಳಿಸಿ ಬಿಸುಸುಯ್ದು
ಹನುಮನನು ದಾಂಟಿಸಿದಿ ಅಂಬುಧಿಯನೀನಂದು
ಈರೈದುಶಿರದವನ ರುಂಡಗಳ ಚಂಡಾಡಿ
ನೀನಿಂದು ಬಂದಿರುವೆ; ಬಹುವಾಗಿಬೆಂದಿರುವೆ.
ರಾವಣನ ಹರತಾದ ಬಿರುಸಾದ ಬಾಣಗಳ
ಮಳೆಯಲ್ಲಿ ತೊಯ್ದಿಹೆವು; ನಾವಿಂದು ಕೂಡಿಹೆವು.
ತಡವೇಕೆ ಬಾಯಿನ್ನು ಕೈಚಾಚಿ ಬಿಗಿದಪ್ಪು;
ತಣ್ಪುಂಟು ಮಾಡುವೆನು ಬಲವಾಗಿ ಮುದ್ದಿಟ್ಟು.
ಪ್ರೇಮಾಬ್ದಿಯಲಿ ಬಿದ್ದು ತೇಲಾಡು; ಲೋಲಾಡು.
ರಾಮ:-
ಹಳಹಳಿಸಿ ಕಳವಳಿಸಿ ತೊಳಲಿರಲಿ ಬಳಲಿರಲಿ
ನಾನೊಲ್ಲೆ ಪ್ರೆಮವನು ತೊರೆದಿಹೆನು.
ವಿಧಿವಶದಿ ನೀನಂದು ಶತೃವಿನಕರದಿಂದ
ಅಪಹೃತಿಸಿ ರಾವಣನ ಏಕಾಂತ, ಸಟಿಯಲ್ಲ
ದಿಟವಹುದು ಹರ್ಮ್ಯಗಳವಾಸ-
ಸೀತಾ:-
ಅಲ್ಲಲ್ಲ ವನವಾಸ
ರಾಮ:-
ಇರಲಿರಲಿ ನೀನೀಗ ಅನ್ಯಸ್ಪೃಶ್ಯಳ್!
ಸೀತಾ:-
ನಾನರಿಯೆ.
ರಾಮ:-
ಮೋಹಿಸಿದ ದಶಕಂಠ ಸೀತೆಯನು
ಸೀತಾ:-
ನಾ ಪಾಪಿಯೇ?
ರಾಮ:-
ಕದ್ದೊಯ್ದ ನವನಂದು.
ಸೀತಾ:-
ತಪ್ಪಾರದು?
ರಾಮ:-
ತಪ್ಪಿಲ್ಲದಿರೆ ನಿನ್ನ ದುರದೃಷ್ಟ.
ಸೀತಾ:-
ರಾಮಚಂದ್ರ,
ಪಣದಲ್ಲಿ ನೀಗೆದೆದು, ಸೀತೆಯನ್ನು ಕೈ ಹಿಡಿದು,
ಭಾಷೆಯಂ ನೀಕೊಟ್ಟು, ಸುಖದುಃಖಗೊಳಪಟ್ಟು,
ಜಾನಕಿಯ ದಶಕಂಠನೆಳೆದೊಯ್ದು ಮೋಹಿಸಲು,
ಶ್ರೀರಾಮನಲ್ಲದಿರೆ ರಕ್ಷಿಪರು ಬೇರುಂಟೆ ?
( ರಾಮನು ಮೌನ )
ಸೀತಾ:-
ಜಾನಕಿಯ ತ್ಯಜಿಸಲಿಕ್ಕೆ, ಜ್ವಾಲೆಯಲಿ ದೂಡಲ್ಕೆ
ಘೋರಯುದ್ದವನಂದು ಪೂಡಿದುದೆ ಶ್ರೀರಾಮ?
ರಾಮ:-
ಅಲ್ಲಲ್ಲ, ಕೇಳಿಲ್ಲಿ ವಡವಾಗಿ ನೊಂದಿಸಲು;
ಶತ್ರುವನು ದಂಡಿಸಲು; ಕ್ಷಿತಿಧರ್ಮ ಪಾಲಿಸಲು
ಸೀತಾ:-
ಅಹುದಹುದು ನಾಬಲ್ಲೆ ಶ್ರೀರಾಮಧರ್ಮ.
ಮಡದಿಯಂ ಬಿಡಲಿಹುದು ಶ್ರೀರಾಮಧರ್ಮ.
ಮಹಿಳೆಯರ ತುಳಿಯುವದು ತಿಳಿದಂತೆ ಹಳಿ-
ಯುವದು ನಿಜಧರ್ಮ, ಶ್ರೀರಾಮಧರ್ಮ!
ಸೀತೆಯಂ ವರಿಸಿದುದು ಸಂಸಾರಧರ್ಮ!
ಕಾಡುಗಳನಲೆಸಿದುದು ಪ್ರಾತಿಜ್ಞಧರ್ಮ!
ಸಂಗ್ರಾಮ ಪೂಡಿದುದು ಕ್ಷಾತ್ರಧರ್ಮ!
ಸತಿಯಳನು ತ್ಯಜಿಸುವದು ರಾಜಧರ್ಮ?
ಇರಲಿರಲಿ ಶ್ರೀರಾಮ ನನಗಿರಲಿ ನನ್ನ ಧರ್ಮ.
ನನಗಾಗಿ, ಭೂಸುತೆಯ ಅನುರಾಗಕಾಗಿ
ಪ್ರೇಮಬಂಧವ ಮಾಳ್ಪ ರಾಜ್ಯವನ್ನು ಬಿಡೆಯಾ?
ರಾಮ:-
ಪ್ರಜಾಜ್ಞೆಯಿಲ್ಲದಲಾಗದಾಗದು!
ಸೀತಾ:-
ಪಟ್ಟದಲಿ ಕುಳಿತಿಲ್ಲ ಪ್ರಜೆಗಳಂ ಕೇಳ್ದಪುದೆ?
ರಾಮ:-
ಅಹುದಹುದು ಜನವಾಣಿ, ದೇವವಾಣಿ!
ಸೀತಾ:-
ಜನವಾಣಿ ದೇವವಾಣಿಯೆ ರಾಮ?
ಅಂದು ದಶರಥಪ್ರಭುವು ಕಾಡು ದೂಡಲು ನಿನ್ನ,
ಪ್ರಜರೆಲ್ಲ ಕೂಡುತಲಿ, ಕಂಬನಿಯ ಸುರಿಸುತಲಿ,
ಬೇಡೆಂದು, ಬೇಡೆಂದು ಧ್ವನಿಗೈದು ಅಳುತಿರಲು
ಎಲ್ಲಿರ್ದುದಾ ನಿನ್ನ ಪ್ರಜಾವಾತ್ಸಲ್ಯ?
“ಪಿತನವಾಕ್ಯವೆ ನನಗೆ ವೇದನುಡಿ” ಯೆಂದು
ಪ್ರಜೆಗಳನ್ನು ಲೆಕ್ಕಿಸದೆ ಕಾನನವ ಸೇರಿದಿಯೋ!
ನನ್ನೀಗ ಬಿಡಲಿರುವೆ ಜನಪ್ರೇಮಕಾಗಿ?
ಅಕಟಕಟ ಮರೆತಿರ್ದೆ ಜಾನಕಿಯು ಸ್ತ್ರೀಯೆಂದು!
ಪುರುಷರನ್ಯಾಯವನು ಕೋಪವನು, ತಾಪವನು,
ಸೈರಿಸುತ, ಸೈರಿಸುತ, ಸೈರಿಸುತ ನಾರಿಯರು,
ತುಟಿಯೆರಡು ಮಾಡದಲೆ, ವಚನವಂ ಮೀರದಲೆ
ಪಾದಪೂಜೆಯಗೈದು, ಶ್ವಾನ ಶೂಕರರಂತೆ
ಜೀವನವ ನಡಿಸಲ್ ಸುಗುಣಿಯರು ನಾರಿಯರು.
ಪುರುಷನಂತಿರದಿರಲ್ ಕುಲಟೆಯರು ನಾರಿಯರು.
ಅಡಗಿಹುದೆ, ಮಲಗಿಹುದೆ ಭಾರತದಭೂಮಿ?
ಸ್ತ್ರೀಯರನ್ನು ಪೂಜಿಸುವ ಪುಣ್ಯ ಭೂಮಿ?
ಇರಲಿರಲಿ ಪ್ರಾಣೇಶ ಅನುರಾಗ ತೋರೋ!
ರಾಮ:-
ಬಲುಮೆಯೇತಕೆ ಸೀತಾ?
ಸೀತಾ:-
ಸ್ವಾರ್ಥಪರರಾಮ, ಬಲವಾಗಿ ನೀನಿರಲಿ,
ರಾಜ್ಯವದು ಬಲಿತಿರಲಿ, ಸಂಪತ್ತು ಬೆಳೆದಿರಲಿ,
ಜಾನಕಿಯು ದಿಕ್ಕೆಟ್ಟು, ಕಂಗೆಟ್ಟು ನಾಯಾಗಿ
ಅಡವಡವಿ ಅಲೆದಲೆದು ಅಳುತಿರಲಿ ನಿನಗೇನು?
ಎಲ್ಲೆಲ್ಲು ವಿಧಿಯುಂಟು, ಹಕ್ಕುಂಟು ನಿನಗೆ.
ನಾರಿಗೆಲ್ಲಿದೆ ಪ್ರಾಣ? ಅಬಲೆಗೆಲ್ಲಿದೆ ಹೃದಯ?
ಸ್ತ್ರೀಯೆಂದರದುವೊಂದು ಮಕ್ಕಳನ್ನು ಹೆರುಯಂತ್ರ.
ಮಲಿನವಾಗುತಲೊಂದು ಮತ್ತೊಂದು ತರಲಿಹರು.
ಮತ್ತೊಂದು ಬೇಡಾಗೆ ಮುನ್ನೊಂದು ತರಲಿಹರು.
ಅಕಟಕಟ ಧೀಃಕಾರ, ಧೀಃಕಾರ ಸ್ತ್ರೀಜನ್ಮಕೆ.
ಇರಲಿರಲಿ ಶ್ರೀರಾಮ ಹೃದಯವನ್ನುವದೇನು?
ರಾಮ:-
ಪ್ರಸಕ್ತಿ ಹೃದಯದಿಂ ತೊಲಗಿಹುದು.
ಸೀತಾ:-
ವಂಚಕನೆ ರಾಮ,
ಅಣುರೂಪ ಶಂಕೆಯದು ಪುಟ್ಟುತಲಿ ಹೃದಯದಲಿ
ತೊಲಗಿದುದು ನಿನ್ನದದು ಸೀತೆಗಿಹ ಪ್ರೇಮ.
ರಾವಣನು ಮೋಹಿಸಿದ ನಿಜವಹುದು ರಾಮ.
ಕವಿವರರು ನಿಜವಾಗಿ ವರ್ಣಿಸದ ಪ್ರೇಮ.
ಸತಿಸುತರು ಹಳಿಯುತಿರೆ, ಬಂಧುಗಳು ಬೆಂದುತಿರೆ
ಮುನಿವರರು ಶಪಿಸುತಿರೆ, ಲಂಕೆಯದು ದಹಿಸುತಿರೆ
ರುಂಡಗಳು ಈರೈದು ಮುಂಡದಿಂದುರುಳುತಿರೆ
ಚಲಿಸಿದುದೆ ರಾವಣನ ದಿವ್ಯ ಪ್ರೇಮ?
ನನ್ನನ್ನ ಬಯಸಿದನು; ಪ್ರೇಮವನೆ ಕೋರಿದನು.
ಪ್ರೇಮಶೂನ್ಯನೆ ರಾಮ, ಕಲ್ಲೆದೆಯ ರಾಮ,
ನಾರಿ ನಾಯಾಗಿಹಳೆ? ತ್ಯಜಿಸಲ್ಕೆ ವಿಧಿಯುಂಟೆ?
ಇದುನೋಡು ಕುಹಕ ನಿನ್ನನ್ನೆ ತ್ಯಜಿಸುವೆನು.
(ಚಿತೆಯಲ್ಲಿ ಧುಮುಕುವಳು)
ಎಲೆಜಗವೆ, ಎಲೆಜಗವೆ ಇತ್ತೊಮ್ಮೆನೊಡು.
ನಾರಿ ನಾಯಾಗಿಹಳು ಅನ್ಯಾಯನೋಡು.
ಪುರುಷರೀ ಅನ್ಯಾಯ ಬಹುಕಾಲ ಬಾಳ್ವುದೇ?
ಅಬಲೆಯರು ಜಗದೊಳಗೆ ಅಬಲೆಯರೆ ಚಿರಕಾಲ?
ಎಲೆಜಗವೆ, ಎಲೆಜಗವೆ ಮತ್ತೊಮ್ಮೆ ನೋಡು.
ಬುದ್ದಿ ಯಿಂ ಜಾಣ್ಮೆಯಿಂ ಒರೆಹಚ್ಚಿ ನೋಡು.
ಸೀತೆಗಿಹ ಪ್ರೇಮದೊಳು ರಾಮನೋ, ರಾವಣನೋ ?
*****