ಮನೆ ಸಣ್ಣದಾಗಿ ಅಕ್ಕ ಅಣ್ಣ ತಮ್ಮ ತಂಗಿ,
ಬಳಗ ದೊಡ್ಡದಾಗಿ ಸರಳವಾದ ಬಾಲ್ಯ,
ಯಾವ ಅಂಜಿಕೆಯೂ ಸುಳಿಯದ ಯೌವನ,
ಅಮ್ಮ ಅಪ್ಪನ ಬೆಚ್ಚನೆಯ ಭರವಸೆಯ ನುಡಿ,
ಕೈ ಹಿಡಿದು ನಡೆದ ದಾರಿ ತುಂಬ ಪಾರಿಜಾತಗಳು.
ಗಿಡವಾಗಿದ್ದು ಮರವಾಗಲು ತಡವಾಗಲಿಲ್ಲ.
ಬಯಲ ಗಾಳಿ ಹಸಿರು ಗದ್ದೆಯಲಿ ಪಚ್ಚೆಪೈರು
ಭರದ ಮಳೆ ಸುರಿದ ರಾತ್ರಿಗಳು, ಹೊದ್ದ
ಕಂಬಳಿ ತುಂಬ ನಡುಮನೆಯ ಹರಟೆ ನಗು,
ಅವರು ಬಿಟ್ಟು ಇವರ್ಯಾರು. ಆಟ ಮುಟ್ಟಾಟದಲಿ,
ಮನಸ್ಸು ಗಾಳಿಪಟ, ನೀಲ ಗಗನ ತುಂಬ ಚಿಕ್ಕಿಗಳು.
ಹೊಂಗನಸುಗಳ ಮೂಲೆಯ ಕೊರಳು ತುಂಬಿ
ತೇಲಿ ತೇಲಿದ ದುಂಬಿಗಳು ಹೂಗಳ ತುಂಬ.
ಹೂವು ಹಾಸಿಗೆ, ಬಾಹು ಬಂಧನ ಚುಂಬನ.
ಎಲ್ಲದರೊಳು ಒಂದಾದ ಮಂಕು ತಿಂಮ್ಮ.
ದಾರಿ ಸವೆದ ಮೈಲುಗಲ್ಲುಗಳು ಊರಿಂದ
ಊರಿಗೆ ಹಾರಿದ ಚಿಟ್ಟೆಗಳು, ಮರದ ತುಂಬ
ಇಣಚಿ, ಹಕ್ಕಿಗಳು ಹೂಗಳ ಗಂಧ ಅರಳಿ.
ಮಿಡಿಯಾಗುವ ಚೈತ್ರದ ಹಾಡುಗಳು.
ರಾಗಗಳಾಗಿ ಇಳಿದ ಸಂಜೆ ಸಂಕ್ರಮಣ.
ಹುಡುಕುವ ಶಕ್ತಿಯ ಮೌನದ ಕಣಿವೆಯಲಿ,
ಒಬ್ಬಳೇ ಅಲೆಯುತ್ತಿದ್ದೇನೆ. ನೀನು ಜೊತೆಗೆ
ಬರಲಾರೆಯಾ?
*****