ನೀನು ಗಳಿಸುತ್ತಿಲ್ಲ
ನೀನು ನಿರುದ್ಯೋಗಿ
ಅಷ್ಟೇ ಏಕೆ ಬಡವಿಯೂ ಕೂಡ,
ನಿನಗೆ ಅಬಲೆಯ ಪಟ್ಟ
ಮೇಲೆ ಕಳಸವಿಟ್ಟಂತೆ.
ದಿನಕ್ಕೆ ಹದಿನೆಂಟು ತಾಸು
ಕೆಲಸ ಮಾಡುತ್ತಿರುವೆಯಾ?
ಎದುರು ವಾದಿಸಬೇಡ ಜೋಕೆ
ಮನೆಗೆಲಸ ನಿನ್ನ ಧರ್ಮ
ಅದು ದುಡಿಮೆ ಹೇಗಾದೀತು?
ಬೆಳಿಗ್ಗೆದ್ದು ಸ್ನಾನ – ತಿಂಡಿ
ಮಕ್ಕಳಿಗೆ ಪತಿರಾಯರಿಗೆ
ಸ್ಕೂಲು, ಆಫೀಸು ಮತ್ತೆ
ಮಧ್ಯಾಹ್ನದ ಅಡಿಗೆ
ಅತಿಥಿಗಳ ಸೇವೆ ಬೇರೆ!
ಸಾಯಂಕಾಲ ಸವಾರಿ, ಬಂದಾಗ
ಅಲಂಕರಿಸಿಕೊಂಡು ನಗುನಗುತ್ತಾ
ಸ್ವಾಗತ – ಲಘು ಉಪಾಹಾರ
ಇಷ್ಟೇ ಅಲ್ಲದೇ
ಒಬ್ಬ ಪುಕ್ಕಟೆ ಸೇವಕಿಗೆ
ಅನೇಕ ಕೆಲಸಗಳು
ಅವಳಿಗೆ ಪ್ರತ್ಯೇಕ
ತನಗಾಗಿ ಸಮಯವೆಲ್ಲಿ?
ಮನೆಯ ವಸ್ತುಗಳು
ಸ್ವಲ್ಪ ಅಸ್ತವ್ಯಸ್ತ ಕಂಡರೂ
ಪತಿರಾಯರು ಕಿಡಿಕಿಡಿಯಾಗಿ
ಹೇಳುತ್ತಾರೆ “ಇಡೀ ದಿನ
ಮನೆಯಲ್ಲೇನು ಕಡಿಯುತ್ತಿ?
ಇಡೀ ದಿನ ಸತತ
ಬಿಡುವಿಲ್ಲದ ದುಡಿತ ಮೇಲೆ
ಅವಹೇಳನದ ಮಾತು ಬೇರೆ
ಇದಕ್ಕಿಂತ ದೊಡ್ಡದಾದ
ಪ್ರತಿಫಲ ಇನ್ನೇನು ಬೇಕು?
*****