ಜೀವನಪುರಿ
೧
ಪಾಪಿ ನಾ, ತಿಳಿಗೇಡಿ ಅಂದು ಅರಿಯದೆ ಹೋದೆ,
ನಾಚಿಕೆಗೆ ಮೈಮಾರಿ ಮನದಳಲಿಗೀಡಾದೆ.
ಕೈಯ ಹಿಡಿವಾನಿಯ, ಕುಲದೋಜ ನಗೆಯಲ್ಲಿ
ಮೈಯ ಹಿಡಿದಲುಗಿ ಹೇಳಿದರು “ನೋಡೇ ಇಲ್ಲಿ,
ಚೆನ್ನಾಗಿ ಕಂದೆರೆದು ನಿನ್ನವನ ಮೊಗನೋಡು!”
ಎನ್ನುತಿರೆ ನಾಚಿಕೆಯು ಕಣ್ಣ ಮಾಡಿತು ಕುರುಡು;
ತಗ್ಗಿಸಿದ ತಲೆಯ ಮೇಲೆತ್ತಗೊಡಲಿಲ್ಲ,
ಹಿಗ್ಗಿನೂಟವನೆದೆಗೆ ಉಣ್ಣಗೊಡಲಿಲ್ಲ!
೨
ನಲ್ಲನಂದಾಡಿದೊಂದೇ ಒಂದು ಮಾತಿನಾ-
ಮೆಲ್ಲುಲಿಯ ಸವಿಯೆನಿತು . .! ‘ಕನಸಿನೊಳಗಿದ್ದು ನಾ
ವೀಣೆಯಿಂಚರ ಕೇಳುತಿರುವೆನೇನೋ…!’ ಎಂದೆ,
ಗೋಣೆತ್ತಿ ನೋಡಬೇಕೆನುತೊಮ್ಮೆ ಹವಣಿಸಿದೆ;
‘ಗೋಣೆತ್ತಿ ನಾನೀಗ ನೋಡಿದರೆ ನೆರೆದವರು
‘ನಾಣಿಲಿಯು ಇವಳೆಂದು ನಗರೆ..!’ ಎನ್ನುತ ಬಗೆದೆ.
ತಗ್ಗಿಸಿದ ತಲೆಯ ಮೇಲೆತ್ತಲೇ ಇಲ್ಲ,
ಹಿಗ್ಗಿನಾ ನೋಟವನ್ನು ನೋಡಲೇ ಇಲ್ಲ!
೩
ಖೋಡಿ, ನಾಚಿಕೆಯೆ, ಕಿಡುಗೇಡಿಯೆನುತಿರುವೆ ನೀ?
ಮಾಡಿದೆಯಲಾ ಬರಿದೆ ನನ್ನ ಬಾಳಿನ ಹಾನಿ!
ಅಂದು ನೀ ನಡುವೆ ಬರದಿದ್ದರಾತನನೊಂದೆ
ಒಂದು ಸಲ ನೋಡಿ ಕೃತಕೃತ್ಯಳಾಗುತಲಿದ್ದೆ;
ನಿನ್ನ ಜೊತೆಯನು ನೀಡದಿದ್ದರೆನಗೊಬ್ಬಳಿಗೆ
ತನ್ನ ಸೃಷ್ಟಿಯೆ ಬಿದ್ದು ಹೋಗುತಿತ್ತೇ ವಿಧಿಗೆ !
ತಗ್ಗಿಸಿದ ತಲೆಯ ನೀನೆತ್ತಗೊಡಲಿಲ್ಲ,
ಹಿಗ್ಗಿನಾ ನೋಟವನ್ನು ನೋಡತೊಡಲಿಲ್ಲ!
* * * * *
ಏಸು ಜನ್ಮದ ಹಗೆಯೆ ನಾಚಿಕೆಯೆ ನೀ ನನಗೆ?
ಮೀಸಲನ್ನವ ಕಸಿದು ಬಿಸುಡಿದೆ, ಇದೆಂಥ ನಗೆ?
*****