ನನ್ನ ಜೀವಾಲಿಂಗನಾಂಗದಲ್ಲಿ ಪೂರ್‍ಣ ಪ್ರಪಂಚ
ಕೃತ್ತಿಕೆಯ ಕಿಚ್ಚಗಸ್ತ್ಯನ ತಪಃಸುಖವು.
ಜೀವಜೀವದ ರೂಪರೂಪದಲಿ ನಾ ಕಾಂಬೆ
ನನ್ನದೇ ಮೈಯ ಮತ್ತೊಂದು ಮುಖವು.
ನನ್ನ ನೋಡುವ ನೋಟ ನನ್ನದೇ ಕಣ್ಣಾಟ
ಎಲ್ಲೆದೆಯ ಮಿಡಿತ ನನ್ನೆದೆಯ ಠಾವು.
ನನ್ನ ನರದಲಿ ಹರಿಯುತಿದೆ ಜಗದ ಮಧುರ ಸೊಗ
ಅದರ ದುಃಖದ ಕೋಟಿ ನನ್ನ ನೋವು.
ಆದರೇನಾ ಕರ್‍ಮಸಂತತಿಯ ತೆರೆಗಳೊಲು
ನನ್ನ ಮೇಲ್ಮೈ ಮಾತ್ರ ನನ್ನ ತಿರುಳು.
ಮೊಳಕೆ ಮೂಡದ ಬೀಜ, ಕಾಲ ಮೀರಿದ ತೇಜ
ನಾನು ಕನ್ನಡಿ ಉಳಿದುದೆಲ್ಲ ನೆರಳು.
ನನ್ನ ಬ್ರಹ್ಮಾಂಡದಲಿ ಸಂಸಾರ ಸುಳಿ ಇತ್ತು
ಅಲ್ಲಿ ನಾ ಹುದುಗಿದ್ದೆ : ಮುನ್ನೀರ-ಎದೆ-ಮುತ್ತು!
*****