ಹಕ್ಕಿಯೊಂದು ಹಾರುತ್ತಿತ್ತು.
ಮೇಲೆ ಮೇಲೆ ಏರುತ್ತಿತ್ತು
ಇಹವ ಮರೆತು ನಲಿಯುತ್ತಿತ್ತು
ಸ್ವಚ್ಛಂದವಾಗಿ ತೇಲುತ್ತಿತ್ತು.
ಗಿಡುಗನೊಂದು ನೋಡುತ್ತಿತ್ತು
ಹಿಡಿಯಲೆಂದು ಹೊಂಚುತ್ತಿತ್ತು
ಹಿಂದೆ ಹಿಂದೆ ಅಲೆಯುತ್ತಿತ್ತು
ಮೇಲೆರಗಲು ಕಾಯುತ್ತಿತ್ತು.
ಹಕ್ಕಿಗಿಲ್ಲ ಇಹದ ಗೊಡವೆ
ಮರೆತ ಮೇಲೆ ತನ್ನ ಇರವೇ
ಏರುತ್ತಿತ್ತು ಮೇಲೆ ಮೇಲೆ
ಆಗಸದಗಲ ಅಳೆಯುತ್ತಿತ್ತು.
ಏರಿದಂತ ಮೇಲೆ ಮೇಲೆ
ಪಾಶವೊಂದು ಎಳೆಯುತ್ತಿತ್ತು.
ಬಿಟ್ಟು ಬಂದ ತನ್ನವರ
ನೆನಪು ಮನಸ ಕಾಡುತ್ತಿತ್ತು.
ಇಹದ ಪಾಶ ಎಳೆಯುತ್ತಿರಲು
ಕರುಳಬಳ್ಳಿ ಮಿಡಿಯುತ್ತಿರಲು
ಗೂಡುಸೇರುವ ತವಕ ಹೆಚ್ಚುತ್ತಿರಲು
ಕೆಳಕ್ಕಿಳಿಯಲೆಂದು ಹಕ್ಕಿ ತಿರುಗಿತ್ತು.
ಎದುರಿಗಿತ್ತು ಹೊಂಚುತ್ತಿದ್ದ ಗಿಡುಗ –
ಹೆದರಿ ಮುದುಡಿದ್ದ ಹಕ್ಕಿಯ
ಮೇಲೆರಗಲು ಕಾಯುತ್ತಿತ್ತು
ಮೃತ್ಯು ಬಾಯ್ದೆರೆದು ನಿಂತಿತ್ತು.
ಹಕ್ಕಿ ನಡುಗಿತ್ತು, ಹಕ್ಕಿ ಚೀರಿತ್ತು
ಸಹಾಯಕ್ಕಾಗಿ ಮೊರೆ ಇಟ್ಟಿತ್ತು
ಆನೆಗಿದ್ದ ಸಹಾಯ ಹಕ್ಕಿಗಿರಲಿಲ್ಲ
ಬಿಡಿಸಲಾರೂ ಬರಲಿಲ್ಲ.
ಆಗಸದಿಂದ ಇಳಿಯುತ್ತಿತ್ತು ಮೆಲ್ಲಮೆಲ್ಲ
ಮಾನಮುಚ್ಚಿದ್ದ ರೆಕ್ಕೆ ಪುಕ್ಕ ಎಲ್ಲ
ಹಕ್ಕಿ ಆಕ್ರಮಣಕ್ಕೊಳಗಾದ ಕುರುಹಾಗಿ
ಗಿಡುಗನ ಗೆಲುವಿನ ಸಂಕೇತವಾಗಿ.
*****