ಸತ್ತಾಗ ನಾನು ಜಗಕೆಚ್ಚರವ ಸಾರುವುದು
ಗಂಟೆಯ ವಿಷಣ್ಣ ದನಿ : “ಕೀಳುಲೋಕವಿದನ್ನು
ಬಿಟ್ಟು ಓಡಿದ ತುಚ್ಛ ಕ್ರಿಮಿಜೊತೆ ಇರಲು” ಎಂದು;
ದುಃಖಪಡಬೇಕಿಲ್ಲ ನೀನು ಈ ಸಾಲನ್ನು
ನೋಡಿದರು ಸಹ; ಇವನು ಬರೆದಿಟ್ಟ ಕೈಯನ್ನು
ನೆನೆಯಬೇಕಿಲ್ಲ ; ನೆನಪದು ನೋವ ತರುವಲ್ಲಿ
ನಿನ್ನ ಮನಸ್ಸು ನನ್ನ ಎಲ್ಲ ನೆನಪನ್ನೂ
ಮರೆಯಲೆನ್ನುವೆ, ಅಂಥ ಒಲವೆನಗೆ ನಿನ್ನಲ್ಲಿ.
ನಾ ಮಣ್ಣ ಜೊತೆ ಬೆರೆತಮೇಲೆ ನೀನೀ ಕವಿತೆ
ನೋಡದಿದರು ಏನು, ಈ ಬಡಪಾಯಿ ಹೆಸರನ್ನು
ಪಠಿಸುವುದು ಬೇಡ ತುಟಿ ತಿರುತಿರುಗಿ ; ನನ್ನ ಜೊತೆ
ಅಳಿದುಹೋಗಲು ಕಳಿಸಿಬಿಡು ನಿನ್ನ ಒಲವನ್ನು.
ಇಲ್ಲದಿರೆ ನನಗಾಗಿ ನೀ ನೋಯುತಿರುವಾಗ
ಅಣಕವಾಡುವರೆಲ್ಲ ನಾನಿಲ್ಲದಿರುವಾಗ.
*****
ಮೂಲ: ವಿಲಿಯಂ ಷೇಕ್ಸ್‌ಪಿಯರ್
Sonnet 71
No longer mourn for me when i am dead