ಮುಗಿಲ ಮೇಲೆ ಮುಗಿಲು ತೇಲಿತು
ಚಂದ್ರ ಸೂರ್ಯರ ತೂಗಿತು
ಗಿರಿಯ ಮೇಲೆ ಗಿರಿಯು ಏರಿತು
ಹಸಿರು ಕಾನನ ಹಾಡಿತು
ಮಂದ ಮಾರುತ ತುಂಬಿ ನೀಡಲು
ಮೌನ ಎಚ್ಚರವಾಯಿತು
ಮುಗಿಲ ಧೂಳಿಯ ಗೂಳಿ ಚಿಮ್ಮಲು
ಗಾನ ಕೇಕೆಯ ಹಾಕಿತು
ಮಾತು ಮಂತ್ರಾ ಶಬ್ದ ಜಪವು
ಆತ್ಮ ಕೋಗಿಲೆ ಕೂಗಿತು
ಪಕ್ಕ ಬಿಚ್ಚಿತು ಹಣ್ಣು ಕಚ್ಚಿತು
ಗಾನ ಹೊಚ್ಚುತ ಹಾಡಿತು
ಮರಹು ಜಾರಿತು ಅರುಹು ಮೂಡಿತು
ಸ್ವರ್ಣಮಂದಿರ ಕರೆಯಿತು
ಅಂತರಂಗದ ಸಪ್ತರಂಗದ
ವರ್ಣ ಬಾಗಿಲು ತೆರೆಯಿತು
*****