ಅಮ್ಮ ನಿನ್ನ ನಾನು
ಸರಿಯಾಗಿ ನೋಡಿಕೊಂಡೆನೆ?||
ಹಿರಿಯ ಅಣ್ಣ ನಿನಗೆ ನೆಚ್ಚಿನವನೆಂದು
ಕಿರಿಯ ತಮ್ಮ ನಿನಗೆ ಮೆಚ್ಚಿನವನೆಂದು
ನನಗೆ ನಾನೇ ಅಂದುಕೊಂಡು|
ಅವರೇ ನಿನ್ನ ನೋಡಿಕೊಳ್ಳಲೆಂದು
ಮಧ್ಯಮನಾದ ನಾನು ಹೊಣೆಗೇಡಿಯಾದೆನೆ?||
ಅಮ್ಮಾ ನೀನು ನನ್ನ ಬಾಲ್ಯದಲಿ
ನಾ ಎಡವಿ ಬಿದ್ದಾಗ ಎತ್ತಿ ಸಂತೈಸಿದ ಹಾಗೆ
ನಾ ನಿನಗೆ ಸಂತೈಸಿದೆನೆ?|
ಅಮ್ಮಾ ನೀನು ನನಗೆ ಏನಾದರೂ
ಬೇಕೆನಿಸಿದ್ದಾಗ ಅಪ್ಪಗೆ ಕಾಣಿಸದೆ
ತಂದು ಕೊಟ್ಟು ನನ್ನಾಸೆಯ ಪೂರೈಸಿದಹಾಗೆ
ನಿನ್ನೊಂದು ಆಸೆಯನೇನಾದರೂ ಪೂರೈಸಿದೆನೆಯೆ?||
ಏಕೋ ಮನಸ್ಸು ಹೇಳುತಿಹುದು
ನಿನ್ನನ್ನು ನೀ ಅಕ್ಕರೆಯಿಂದ ನೋಡಿದಷ್ಟು
ನಾವ್ಯಾರು ನೋಡಿಕೊಂಡಿಲ್ಲವೆಂದು|
ಅಪ್ಪನೂ ಸಹ ಅಷ್ಟೇ, ನಿನ್ನನ್ನು
ಅಷ್ಟುಚೆನ್ನಾಗಿ ನೋಡಿಕೊಂಡಿದ್ದಿಲ್ಲ|
ಈ ಗಂಡು ಜಾತಿಯೇ ಹಾಗೆ
ಹೆಂಡತಿಯ ಕೊಂಕುಮಾತಿನ ವರಸೆಗಂಜಿ
ಇಲ್ಲವೆ ಹಿತ್ತಾಳೆ ಕಿವಿಗೊಟ್ಟು ಮುದಿ
ಹೆತ್ತತಾಯಿ ಮಾತ ನಿರ್ಲಕ್ಷಿಸಿದವರೇ ಎಲ್ಲಾ||
*****