ಪ್ರಜಾರಾಜ್ಯ ಬಂತು ಬಂತು, ಸಕಲಪ್ರಜಾರಾಜ್ಯ !
ಪ್ರಜೆಗಳಿಗೇ ಇಲ್ಲಗೊತ್ತು: ‘ಯಾರದು ಈ ರಾಜ್ಯ!’
೧
ಆಯ್ಕೆಯ ದಿನ ಬಂದಾಕ್ಷಣ ಸವಿಯ ಭಕ್ಷ್ಯ-ಭೋಜ್ಯ
ಪ್ರಜರ ಬಾಯ್ಗೆ ಬೀಳ್ವುದು ನಿಜ, ಅದಕೆ ಪ್ರಜಾರಾಜ್ಯ !
ಆಯ್ಕೆ ಮುಗಿದ ಮರುದಿನವೇ ಪ್ರಜೆಗಳೆಲ್ಲ ತ್ಯಾಜ್ಯ !
ಪ್ರಜರ ಬಾಳೆ ಆಳುವವರ ತೆರೆದ ಬಾಯ್ಗೆ ಭಾಜ್ಯ !
೨
ಲಂಚಮುಕ್ಕುವವರ ಉಕ್ಕು, ಪ್ರಜಾರಾಜ್ಯವೆ ?
ಕಳ್ಳಪೇಟೆಯವರ ಬೇಟೆ, ಪ್ರಜಾರಾಜ್ಯವೆ ?
ಮಾತೆ ಮಾತು, ಕೃತಿಗೆ ತೂತು ! ಸುಖವು ಸಾಧ್ಯವೆ?
ಆದರು ಇದು ಪ್ರಜಾರಾಜ್ಯ ! ಅಹಹ, ಚೋದ್ಯವೆ !
೩
ತನ್ನ ನಂಟ ಮಾಡುವ ಅನ್ಯಾಯವೆಲ್ಲ ನ್ಯಾಯ !
ಇನ್ನೆಲ್ಲರು ಬಿಡಲು ಬೇಕು ನ್ಯಾಯಕಾಗಿ ಬಾಯ !
ಆಡಳಿತದ ಆಸನಕ್ಕೆ ಬೇರೆ ಯಾರು ಕೈಯ –
ಹಚ್ಚದೆಯೇ ದುಡಿಯಬೇಕು, ಪ್ರಜಾರಾಜ್ಯಧ್ಯೆಯ !
೪
ಭರತ ಭೂಮಿಯೆಲ್ಲ ಬಾಯಿಮಾತಿನಲ್ಲಿ ಒಂದೇ !
ಕೊರೆಯುತಿಹವು ಕಿವಿಗಳನ್ನು ಪರಸ್ಪರರ ನಿಂದೆ !
ಜಾತಿಜಗಳ, ನುಡಿ-ಗಡಿಗಳ ಜಗಳಗಳೇ ಮುಂದೆ,
ಜಗದೀಶಾ ನೀನೆ ಕಾಯೊ ಪ್ರಜಾರಾಜ್ಯ ತಂದೆ !
*****