೧
ಶಿವನುಂಡ ನಂಜು ತಿಳಿಗೊಂಡು ಮಂಜು-
ಮಂಜಾಗಿದೆ ಈ ಸಂಜಿಗೆ.
ಇದು ಉಷಾಮಿಷದ ಪೊಸನೇಹ ಸೇರಿ ಕಳೆ
ಏರಿದೆ ಹುರಿಮಂಜಿಗೆ.
ಭೌಮಾತ್ಮಭೂತಿ ಚೈತನ್ಯದೂತಿ, ಊ-
ರ್ಜಿತದಾ ಸಿರಿವಂತಿಗೆ.
ಕಥಕ್ಕಳಿಯ ಪುತ್ಥಳಿಯೆ ! ಪೃಥಕ್ ಥತ್
ತಳಿಸಿದೆ ಜೀವಂತಿಗೆ.
ಜಡೆತುಂಬ ಕಣ್ಣು, ಇದು ಯಾವ ಹೆಣ್ಣು ? ಮಾ-
ಪ್ರಾಣದ ಸ್ಯಾವಂತಿಗೆ !
೨
ಯಾವ ಅಚ್ಚರಸಿ ? ಯಾವ ಋಷಿಯರಸಿ ?
ಯಾವ ಭಾವಸರಸಿ ?
ಯಾವ ಘಟ್ಟದಲಿ ? ಯಾವ ಪಟ್ಟದಲಿ ?
ಯಾವ ಮುಹೂರ್ತವಿರಿಸಿ ?
ಯಾವ ನಕ್ಷತ್ರ ? ಯಾವ ಸುಕ್ಷೇತ್ರ ?
ಯಾವ ಪಾತ್ರ ಧರಿಸಿ ?
ಝಂಝಣಣ ಝಣಣ, ಝಂಝುಣತ್ ಝಣಣ, ಜೀ-
ವಾಣುವೃಂದ ಮೆರೆಸಿ,
ಛಂದಛಂದ ನವಬಂಧ ಪಡೆದು ಬಂ-
ದಿಹವು ಹಳತ ಮರೆಸಿ.
೩
ಛಿಳಿಲ್ ಛಟಿಲೆಂದು ಭುಕ್ಕ್ ಭುಗಿಲೆಂದು
ತಟಿತ್ ತಟ್ಟಿತೆಂದೂ
ಕಣ್ಣ ಮುಚ್ಚಣಿಕೆ ಕಣ್ಣ ತೆರೆವಣಿಕೆ
ಕಣ್ಣ ಕಟ್ಟಿತೆಂದೂ
ನವೋನವದ ಭವಭವದ ತವದ ವೈ-
ಭವವ ಒಟ್ಟಿತಂದು
ಕುರುಡು ಬಯಲಿಗಿಗೊ ಕಣ್ಣು ಬರೆವ ಕೈ-
ವಾಡ ಚಿಗುರ್ತಿಂದು
ದುಂದುದುಂದು ದುಂದುಭಿಸುತಿಹುದು ಇಕೊ!
ಹಲವು ಮುಖದಲೊಂದು.
೪
ಬಾರೊ ಇಲ್ಲಿ ಬೈರಾಗಿ ಬಾರೊ, ಬಾ
ಇಲ್ಲಿದೆ ತಂಗುವ ಸ್ಥಲಾ-
ತಣಿವನರಿಯದೇ ದಣಿದುಹೋದೆ, ಬಾ
ಇಲ್ಲಿದೆ ಇಂಗದ ಜಲಾ-
ಏಕೆ ರೋಸಿ, ಭಯಗೊಂಡು ಹೇಸಿ, ನೀ
ಆಕ್ರೋಶಿಸುತಿಹೆ ಎಲಾ !
ಶಿವದ ಭಕ್ತಿಗವತಾರಶಕ್ತಿಗಿಗೊ
ಇದುವೇ ಇಂಗಿತವಲಾ!
ಬ್ರಹ್ಮಸ್ಫುರಣಕೆ ಮರಣವೆಂತು ? ಅದು
ಅದುವೇ ಅಮೃತದ ಬಲಾ.
೫
ಹಿಮಾಲಯದ ಒಳಬಸಿರಲೆ ಕೊರೆದಿದೆ
ಯಾವುದೊ ಬ್ರಹ್ಮಾಭಯಾ-
ಚಿತ್ರನೇತ್ರಗಳು ಉನ್ಮೀಲಿಸುತಿವೆ
ಓಹೊ ತಾರಕಾಮಯಾ !
ಸೃಷ್ಟಿಯ ಕಲೆಯಾ, ಮಾಯೆಯ ಬಲೆಯಾ
ಬೀಸಿದೆ ಉದಯದ ನಯಾ
ಅರವಿಂದ ಮಿಂದ ಅರವಿಂದ ಗಂಧ ಆರಿ-
ವಿಂದಲೆ ಬಂದಿದೆ ಜಯಾ.
ಚಿತ್ತ ಚಿತ್ತಗಳ ಪಾತ್ರ ಕುಣಿಯುತಿವೆ
ಕಟ್ಟಿದೆ ಚೈತ್ಯಾಲಯ
*****