ಬರುತಿಎಂದೆಯಲ್ಲೊ
ಬಾರದೆಹೋದೆ ಎಲ್ಲೊ|
ಮಗು ಲೋಹಿತಾಶ್ವ||
ಬಿಸಿಲ ಜಳಕೆ
ನಿನಗೆ ಬಾಯಾರಿಕೆಯಾಗಿಹುದೋ|
ನಿನ್ನ ಹಸಿವು ಬಾಧಿಸಿಹುದೋ?
ನಿನ್ನ ಜೊತೆಗಿದ್ದವರು
ನೀನು ಸಣ್ಣವನೆಂದು
ನಿನ್ನ ಕಾಡಿನಲಿ ಹಿಂದೆಬಿಟ್ಟರೇನೋ?||
ಅರಮನೆಯಲಾಡಿ ಬೆಳೆದವ ನೀನು
ಅಡವಿಯ ಪರಿಚಯವಿಲ್ಲ ನಿನಗೆ|
ಮನೆಯ ಹಾದಿಯ ಮರೆತೆಯೆನೋ
ಕಾಡ್ಗಿಚ್ಚು ನಿನ್ನ ತಡೆಯಿತೇನೋ|
ಕಾಡಮೃಗಗಳಿಗೆದರಿ
ಅಡಗಿ ಕುಳಿತಿರುವೆ ಏನೋ?||
ನನ್ನ ಬಲಗಣ್ಣು ಹಾರುತಿಹುದೆ
ಎದೆ ಬಡೆತ ಏರುತಿಹುದು|
ಹೊಟ್ಟೆಯಲೇನೊ ಸಂಕಟವಾಗುತಿಹುದು|
ನಿನ್ನ ತಂದೆ ಬಂದು
ಕಂದನೆಲ್ಲಿ ಎಂದರೆ ಏನ ಉತ್ತರ ನೀಡಲಿ?|
ಹೋಗಿ ಹುಡುಕಿ ಕರೆತರುವೆಯೆಂದರೆ
ಮನೆಯೊಡತಿ ಬಿಡುತ್ತಿಲ್ಲ ನನ್ನನು||
ಧರ್‍ಮ ಸತ್ಯಸಂದ ಶ್ರೀಹರಿಶ್ಚಂದ್ರನ
ವಂಶೋದ್ಧಾರ ಏಕಮಾತ್ರನು ನೀನು|
ನಿದ್ದೆಯಲು ಸುಳ್ಳನಾಡದವ ನೀನು|
ಕಾಶಿವಿಶ್ವನಾಥನನು ಪ್ರಾರ್‍ಥಿಸು
ನಮ್ಮ ಕುಲವನುಳಿಸೋ ಎಂದು
ಕರುಣೆ ತೋರುವನು ದೀನ ಬಂಧು|
ಸರಿರಾತ್ರಿಯಾದರೂ ಸರಿ
ಕೆಲಸ ಮುಗಿಸಿ ನಾ ಬರುವೆ ನಿನ್ನಲ್ಲಿಗೆ
ಹೆದರಿ ಕೊರಗದಿರು ನೊಂದು||
*****