ಆಡಿ ಬಾರೋ ರಂಗ
ಅಂಗಾಲ ತೊಳೆದು ನಿನ್ನಾ
ಅಪ್ಪಿ ಮುದ್ದಾಡುವೆ ಅನುಗಾಲ|
ಅಕ್ಕರೆಯಿಂದಲಿ
ಚೊಕ್ಕಮಾಡುತ ನಿನ್ನ
ಸೇವೆಯಮಾಡುವೆ ನೂರು ಕಾಲ||
ಬೆಳ್ಳಿಬಟ್ಟಲ ಹಾಲು
ಹಣ್ಣು ಫಲಹಾರವ ಅಣಿ
ಮಾಡಿರುವೆ ನಿನಗಾಗಿ|
ಅದನ್ನೆಲ್ಲಾ ನೀ ಸೇವಿಸೆ
ಅಮ್ಮಾ ಸಾಕು ಎಂದೊಮ್ಮೆ
ಕರೆಸಿಕೊಳ್ಳುವ ಆಸೆ||
ಬಿಸಿ ಬಿಸಿ ನೀರಲಿ
ಜಳಕ ಮಜ್ಜನ ಮಾಡಿಸಿ
ಜರತಾರಿ ಪೀತಾಂಬರ ತೊಡಿಸಿ
ಮುದ್ದಿಸಿ ಆನಂದಿಸುವೆ ನಿನ್ನಾ|
ಯಾರ ದೃಷ್ಟಿ ತಾಗದಿರಲೆಂದು
ಕಪ್ಪು ಬೊಟ್ಟನೊಂದಿರಿಸಿ
ನೀರಿಂದ ನಿವಾಳಿಸುವೆ||
ತೂಗು ತೊಟ್ಟಿಲ ಕಟ್ಟಿ
ಚೆಂದದ ಜೋಗುಳ ಹಾಡಿ ಲಾಲಿಸುವೆ|
ನಿನ್ನ ಕೈಬೆರಳ ಬಾಯಿಂದ ತೆಗೆದು
ಪ್ರೀತಿಯ ಮುತ್ತಾನೀಡುವೆ|
ನೀನು ಎದ್ದೇಳುವುದರೊಳಗಾಗಿ
ನಿನಗೆ ಸಿಹಿ ತಿಂಡಿಗಳ ಮಾಡುತ
ನಿನ್ನಾ ಸೇವೆಯಲೇ ಈ ಜನ್ಮಕಳೆಯುವೆ||
*****