ಧರ್‍ಮದ ಹೆಸರು ದೇಶದ ತುಂಬ
ಸಾವಿರ ಸಾವಿರ ಸಾವುಗಳು
ಮರೆಯುವ ಮಠಗಳ ಪೀಠದ ಕೆಳಗೆ
ನರಳುವ ಅಸಂಖ್ಯ ನೋವುಗಳು.
ಧರ್‍ಮದ ದಳ್ಳುರಿ ದವಡೆಗೆ ಸಿಕ್ಕಿ
ಜಜ್ಜಿಹೋಗಿದೆ ಮಾನವೀಯತೆ
‘ಸರ್‍ವ ಜನರಿಗೆ ಸುಖ’ ತುತ್ತೂರಿ
ಹೂತು ಹೋಗಿದೆ ಸಮಾನತೆ.
ಗೊಡ್ಡು ಧರ್‍ಮಗಳ ಬೊಜ್ಜು ಮಾತುಗಳು
ತೇಗುತ ಕೂತಿವೆ ತೂಗಡಿಸಿ
ಕೊಳೆತು ನಾರುತಿದೆ ನಾಡ ನಾಲಗೆ
ಶತಶತಮಾನವು ಪಾಠ ಒಪ್ಪಿಸಿ.
ಬಡವರ ಭ್ರಮೆಗೆ ಭೂತಗನ್ನಡಿ
ಜೊಲ್ಲು ಸುರಿಸುವ ಜಡಧರ್‍ಮ
ಎಳೆಯರ ಎದೆಗೂ ಚಪ್ಪಡಿ ಎಳೆದು
ಹೇಳುವ ತತ್ವ-‘ಇದು ಕರ್‍ಮ’.
ಸಮತೆಯ ಸೋಗಿನ ತಳಪಾಯದಲಿ
ಎದೆಯೆದೆ ನಡುವೆ ವಿಷಗೊಡೆ
ಅರಿವಿನ ಬದಲು ಅಂಧತೆ ಅಮರಿ
ತಲೆ ಬರುಡೆಗಳ ಬಟವಾಡೆ.
ಮತಧರ್ಮದ ಮರ
ಮೃಗಶಕ್ತಿಗೆ ವರ
ಆಕಾಶದ ಬೇರು, ನೆಲತುಂಬಿದ ಟಿಸಿಲು
ನೆಲದಾಳಕೆ ಬೇರಿಳಿಯುತ
ಮುಗಿಲೆತ್ತರ ಟಿಸಿಲೆತ್ತುತ
ಬಲವಾಗಲಿ ಮನುಜತೆ, ನಮ್ಮೆಲ್ಲರ ಕರುಳು.
*****