ಬಿಳಿಯ ರಾತ್ರಿಗಳಲ್ಲಿ ಕರಿಯ ಮಿಂಚಾದವನು
ಹಗಲು ಹರಿದಾಡುತ್ತ ಕೆಂಪು ಹೆಗಲಾದವನು
ಬಿಳಿ ಕಸದ ಬಂಡಿಯನು ಹೊರಗೆಳೆಯುತ್ತ ಹೋಗಿ
ಜಾರ ಜೇಲಿನ ಒಳಗೆ ಒಂಟಿ ಬಯಲಾದವನು.
ಶ್ವೇತ ಸೆರೆಯಲ್ಲಿ ಸೂರ್‍ಯ ಕುರುಡಲ್ಲಿ
ಬಿಳಿಯ ಬತ್ತಿಯ ಹೊಸೆದ ಕಪ್ಪು ಕಿರಣ
ಮಗ್ಗಿ ಹೇಳುವ ಮಹಾ ಬುದ್ಧಿವಂತರೆ ಕೇಳಿ
ಮುಗ್ಗಿ ಹೋದವು ಮಾತು ಕಾಲಹರಣ.
ಮಂಡೇಲ ಮಾನವತೆ ಗುಡುಗು ಮಿಂಚಿನಮಣ್ಣು
ಸಿಡಿದ ಕಣಕಣದಲ್ಲು ಕ್ರಾಂತಿ ಕಣ್ಣು
ಕುರುಡು ಗೋಡೆಯ ನಡುವೆ ಕನಸುತ್ತ ಕೂತವನು
ಸುತ್ತ ಸರ್‍ಪದ ಕಾಡು ಬಿಳಿಯ ದರ್‍ಪ.
ನುಗ್ಗಿ ಬರುತಿದೆ ಅಲ್ಲಿ ಕನಸು ಮೌಲ್ಯದ ಮಿಡಿತ
ನನಸಿನಾಸೆಯ ಹೊತ್ತು ಕಾಡ ಕತ್ತರಿಸಿ
ಸುಗ್ಗಿ ಬಿಡುಗಡೆ ಸುಖದ ಕಪ್ಪು ಕುಣಿತ
ಕರುಳ ಕದ್ದವರೆಲ್ಲ ಬೇಗ ಉತ್ತರಿಸಿ.
*****