ಮಗಳೆ ನಿನ್ನ ಪ್ರೀತಿಗೆಂದು ಮನೆಯನೊಂದ ಕಟ್ಟಿದೆನು
ಮಾಡು ಹಾರಿತು ಗೋಡೆ ಬಿದ್ದಿತು
ಮನೆಕಟ್ಟು ಮಾತ್ರ ಉಳಿಯಿತು
ಮಗಳೆ ನಿನ್ನ ಪ್ರೀತಿಗೆಂದು ಗೊಂಬೆಯೊಂದ ತಂದೆನು
ಬಟ್ಟೆ ಹರಿಯಿತು ಬೆರಳು ಮುರಿಯಿತು
ಚೂರು ಮಾತ್ರ ಉಳಿಯಿತು
ಮಗಳೆ ನಿನ್ನ ಪ್ರೀತಿಗೆಂದು ಹೊತ್ತಗೆಯೊಂದ ತಂದೆನು
ಪುಟ ಹೋಯಿತು ಚಿತ್ತಾಯಿತು
ತಟ್ಟಿ ಮಾತ್ರ ಉಳಿಯಿತು
ಮಗಳೆ ನಿನ್ನ ಪ್ರೀತಿಗೆಂದು ತೋಟವೊಂದ ನಿರ್ಮಿಸಿದೆನು
ಗಿಡ ಬಾಡಿತು ಹೂ ಕಮರಿತು
ಕಸವು ಮಾತ್ರ ಉಳಿಯಿತು
ಮಗಳೆ ನಿನ್ನ ಪ್ರೀತಿಗೊಂದು ಕುರುಹ ಹುಡುಕಿ ಹೊರಟೆ ನಾನು
ಮನೆಗಿಂತಲು ಮನೆಯಾಗಿ ಹೂವಿಗಿಂತಲು ಹೂವಾಗಿ
ಬೆಳೆಯುತ್ತಿರಲು ನೀನು
ಅಷ್ಟೆ ನನಗೆ ಸಾಲದೇನು
*****