ವನಸಿರಿ ಬೆಳೆದಾವು ಸಾಲೇ ಸಾಲು
ತಲೆದೂಗಿ ಕೈ ಬೀಸಿ ಕರಿತಾವು
ಎಂತೆಂಥಾ ಹಕ್ಕಿಗಳು ಬರತಾವು, ನಲಿತಾವು
ಗೂಡ ಕಟ್ಟತಾವು ಈ ಮಲೆನಾಡಿನೊಳಗ
ಈ ನಾಡಿನೊಳಗ ಅವುಗಳ ಸಂಗಡ
ಹಕ್ಕ್ಯಾಗಿ ಹಾಡೇನಿ ಚುಕ್ಯಾಗಿ ನಲಿದೇನಿ
ಮೆರೆದಾಡುವಾಸೆ, ಕುಣಿದಾಡುವಾಸೆ
ಮತ್ತೊಮ್ಮೆ ಈ ನೆಲದಾಗ ಹುಟ್ಟಿ ಬರುವಾಸೆ
ಪರಗಿ ಹಣ್ಣಾಗುವಾಸೆ, ಇಲ್ಲ ಮುಳ್ಹಣ್ಣಾಗುವಾಸೆ
ಇಲ್ಲ ಸಂಪಿಗೆಹಣ್ಣಾಗುವಾಸೆ
ಇಲ್ಲ ಈ ನೆಲದ ಸಿಂಗಾರವಾಗುವಾಸೆ
ಹಿಂಗಾರದಂತೆ ಜಾಗರವಾಡುವಾಸೆ
ಎನ್ನ ಬೆಳೆಸಿದ ಹಸಿರುಸಿರೇ
ನಾ ಹ್ಯಾಂಗ ಮರೆಯಲಿ ಹೇಳಿ?
ನನ್ನ ಜೀವದಾ ಜೀವ ನೀವೆ
ನಿಮ್ಮ ಕಂಗಳಲಿ ನಾನಿರುವೆ
ಓ ಸಿಂಗಾರವೇ ನಿಮ್ಮ ಹಾಗೆ ನನ್ನ ಮೆರೆಸಿರಿ
ಎನ್ನ ರಕುತದ ಪ್ರತಿ ಕಣ ಕಣದಲಿ
ಈ ನಾಡಿನ ಹೆಸರು ಬರೆಯಲೇ
ನನಗೆ ನಿಮ್ಮ ಜೀವ ತುಂಬಿದಿರಿ
ಎಲೈ ಹಸಿರು ಹಸಿರೇ ನೀವಾದಿರಿ ನನ್ನ ಉಸಿರು
ನಿಮ್ಮ ಬಿಟ್ಟು ಬಹುದೂರ ನಾ ಹೋಗಲಾರೆ
ನೀವಿಲ್ಲದೇ ನಾ ಹ್ಯಾಂಗ ಬದುಕಿರಲಿ
ನಿಮ್ಮ ಜೊತೆಯಲಿ ಸಿಂಗಾರದಂತೆ
ನಾನಿಲ್ಲಿಯೇ ಇರುವಾಸೆ
*****